ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು – ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹ
ಜಾರ್ಖಂಡ್ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮತ್ತು ಗೃಹ ಸಚಿವರ ನೇತೃತ್ವದಲ್ಲಿ ಬಿಜೆಪಿ ನಾಯಕರು ಮಾಡುತ್ತಿರುವ ಸಂಪೂರ್ಣ ಕೋಮುವಾದಿ ಭಾಷಣಗಳು ಮಾದರಿ ನೀತಿ ಸಂಹಿತೆ ಮತ್ತು ಎಲ್ಲಾ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಹೊರಡಿಸಿದ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ಪ್ರಧಾನಮಂತ್ರಿಯವರು ತಮ್ಮ ಭಾಷಣಗಳಲ್ಲಿ ನೇರವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಸಮುದಾಯದ ಸದಸ್ಯರನ್ನು “ಘುಸ್‍ಪೈಟಿಯಾ”ಗಳು (ನುಸುಳುಕೋರರು) ಎಂದು ನಿಂದಿಸಿದ್ದಾರೆ. ಅವರು ತಮ್ಮ ಕೋಮುವಾದಿ ಮತ್ತು ದ್ವೇಷ ತುಂಬಿದ ಭಾಷಣಗಳಲ್ಲಿ “ಆ ಜನರು ನಿಮ್ಮ (ಆದಿವಾಸಿಗಳ) ರೊಟ್ಟಿ ಮತ್ತು ನಿಮ್ಮ ಹೆಣ್ಣುಮಕ್ಕಳನ್ನು ಕಸಿದುಕೊಳ್ಳುತ್ತಿದ್ದಾರೆ” ಎಂಬ ಆರೋಪವನ್ನು ಮಾಡಿದ್ದಾರೆ. ಸಮುದಾಯಗಳ ನಡುವೆ ಬಿರುಕು ಮೂಡಿಸುವ ಮತ್ತು ಮತಗಳನ್ನು ಸೆಳೆಯುವ ಸ್ಪಷ್ಟ ಪ್ರಯತ್ನ ಕಾಣುತ್ತಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಆತಂಕ ವ್ಯಕ್ತಪಡಿಸಿದೆ.
ಇಂತಹ ಭಾಷಣಗಳ ಬಗ್ಗೆ ಚುನಾವಣಾ ಆಯೋಗವು ಸ್ವಯಂಪ್ರೇರಿತವಾಗಿ ಗಮನ ಹರಿಸದಿರುವುದು ಖಂಡನೀಯ ಎಂದಿರುವ ಕೇಂದ್ರ ಸಮಿತಿ ಇಂತಹ ಭಾಷಣಗಳನ್ನು ಮಾಡುವ ಪ್ರಧಾನಿ ಹಾಗೂ ಗೃಹ ಸಚಿವರು ಕಾನೂನನ್ನು ಮೀರಿದವರಿರಬಹುದೇ ಎಂದನಿಸುವಂತಿದೆ ಎನ್ನುತ್ತ ಕೋಮುವಾದಿ ಭಾಷಣ ಮಾಡುವ ಪ್ರಧಾನಿ, ಗೃಹ ಸಚಿವರು ಹಾಗೂ ಇತರ ಬಿಜೆಪಿ ನಾಯಕರಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಆಗ್ರಹಿಸಿದೆ.
ಇವರಲ್ಲಿ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕೇಂದ್ರ ಸಚಿವ ಶಿವರಾಜ್ ಚೌಹಾಣ್ ಸೇರಿದ್ದಾರೆ ಎಂದು ನವದೆಹಲಿಯಲ್ಲಿ ನವಂಬರ್ 3ರಿಂದ 5 ರ ವಗೆ ಸಭೆ ನಡೆಸಿದ ನಂತರ ನೀಡಿರುವ ಹೇಳಿಕೆಯಲ್ಲಿ ತಿಳಿಸುತ್ತದೆ.
ಸಿಪಿಐ(ಎಂ) ಕೇಂದ್ರ ಸಮಿತಿ ಡಿಜಿಟಲೀಕರಣದ ಹೆಸರಿನಲ್ಲಿ, ಗ್ರಾಮೀಣ ಬಡವರ ಹಕ್ಕುಗಳ ಮೇಲೆ ಸಂಪೂರ್ಣ ದಾಳಿ ನಡೆಯುತ್ತಿದೆ, ಇದು ಮನರೇಗ ಕಾರ್ಮಿಕರ ಘೋರ ಅವಸ್ಥೆಯಲ್ಲಿ ಕಾಣಬರುತ್ತಿದೆ ಎಂದೂ ಹೇಳಿದೆ.
ಅನಿಯಂತ್ರಣದಿಂದಾಗಿ ರಸಗೊಬ್ಬರಗಳ ಬೆಲೆಯ ಮೇಲಿನ ನಿಯಂತ್ರಣಗಳನ್ನು ತೆಗೆದಿರುವುದರಿಂದ ಅವುಗಳ ಬೆಲೆಗಳಲ್ಲಿ ಏರಿಕೆಯಾಗಿದ್ದು ರೈತರಿಗೆ ರಸಗೊಬ್ಬರಗಳ ದೊಡ್ಡ ಕೊರತೆ ಮತ್ತು ಬಿಕ್ಕಟ್ಟನ್ನು ಸೃಷ್ಟಿಸಿದೆ ಎಂದು ಸಿಪಿಐ(ಎಂ) ಖೇದ ವ್ಯಕ್ತಪಡಿಸಿದೆ.
ಈ ಬಗ್ಗೆ ಅದರ ಕೇಂದ್ರ ಸಮಿತಿಯ ಹೇಳಿಕೆಯ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ.
ಮನರೇಗ ಕಾರ್ಮಿಕರ ಹಕ್ಕುಗಳ ಮೇಲೆ ದಾಳಿ
ಡಿಜಿಟಲೀಕರಣದ ಹೆಸರಿನಲ್ಲಿ, ಗ್ರಾಮೀಣ ಬಡವರ ಹಕ್ಕುಗಳ ಮೇಲೆ ಸಂಪೂರ್ಣ ದಾಳಿ ನಡೆಯುತ್ತಿದೆ. ಇದು ಮನರೇಗ ಕಾರ್ಮಿಕರ ಘೋರ ಅವಸ್ಥೆಯಲ್ಲಿ ಕಾಣಬರುತ್ತಿದೆ. ಇತ್ತೀಚಿನ ಒಂದು ವಿಸ್ತೃತ ಅಧ್ಯಯನವು ಕಳೆದ ಎರಡು ವರ್ಷಗಳಲ್ಲಿ ಈ ಯೋಜನೆಯ ಸುಮಾರು ಎಂಟು ಕೋಟಿಯಷ್ಟು ನೋಂದಾಯಿತ ಕಾರ್ಮಿಕರ ನೋಂದಣಿಯನ್ನು ರದ್ದುಪಡಿಸಲಾಗಿದೆ ಮತ್ತು ಕೆಲಸದ ಪ್ರಯೋಜನಗಳನ್ನು ನಿರಾಕರಿಸಲಾಗಿದೆ ಎಂದು ತೋರಿಸಿದೆ. ಇದು ೀ ಕಾನೂನಿನ ಉಲ್ಲಂಘನೆಯಾಗಿದೆ. ಈ ವರ್ಷದ ಬಜೆಟ್ ಹಂಚಿಕೆಗಳಲ್ಲಿ, ಮನರೇಗಕ್ಕಾಗಿ ಹಂಚಿಕೆ ಜಿಡಿಪಿಯಯ ಶೇಕಡಾವಾರು ಪ್ರಮಾಣದಲ್ಲಿ ತೀವ್ರವಾಗಿ ಕಡಿತಗೊಂಡಿದೆ. ಬಜೆಟ್ ಹಂಚಿಕೆಗಳಲ್ಲಿನ ಕಡಿತದೊಂದಿಗೆ ಈ ತಂತ್ರಜ್ಞಾನ-ಕೇಂದ್ರಿತ ನಿಲುವು ಸೇರಿಕೊಂಡಿರುವುದು ಗ್ರಾಮೀಣ ಬಡ ಕುಟುಂಬಗಳಿಗೆ ವರ್ಷಕ್ಕೆ 100 ದಿನಗಳ ಕೆಲಸದ ಖಾತರಿಯ ಕಾನೂನು ಹಕ್ಕುಗಳ ಮೇಲಿನ ಆಕ್ರಮಣವಲ್ಲದೆ ಬೇರೇನೂ ಅಲ್ಲ. ಈ ವರ್ಷದ ಆರಂಭದಲ್ಲಿ ಸಂಸತ್ತಿನ ಸ್ಥಾಯಿ ಸಮಿತಿಯು ಕೆಲಸದ ದಿನಗಳನ್ನು ವರ್ಷಕ್ಕೆ ಕನಿಷ್ಠ 150 ದಿನಗಳಿಗೆ ಹೆಚ್ಚಿಸಲು ಮತ್ತು ಬಜೆಟ್ ಹಂಚಿಕೆಗಳಲ್ಲಿ ಹೆಚ್ಚಳವನ್ನು ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರ ಈ ಶಿಫಾರಸುಗಳನ್ನು ಜಾರಿಗೊಳಿಸಬೇಕು.
ರಸಗೊಬ್ಬರ ಕೊರತೆ
ಹಿಂಗಾರು ಋತುವಿಗೆ ಡಿಎಪಿಯ ಸಾಕಷ್ಟು ಆರಂಭಿಕ ದಾಸ್ತಾನುಗಳನ್ನು ಹೊಂದಿರುವಂತೆ ಮಾಡುವ ಯೋಜನೆಯಲ್ಲಿನ ಸಂಪೂರ್ಣ ವೈಫಲ್ಯವು ರೈತರಿಗೆ ೊಂದು ಬೃಹತ್ ಕೊರತೆ ಮತ್ತು ಬಿಕ್ಕಟ್ಟನ್ನು ಸೃಷ್ಟಿಸಿದೆ. 2023ರಲ್ಲಿ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 34.5 ಲಕ್ಷ ಟನ್‌ಗಳಷ್ಟು ಆಮದು ಮಾಡಿಕೊಂಡಿದ್ದರೆ, ಈ ವರ್ಷ ಅದೇ ಅವಧಿಯಲ್ಲಿ ಕೇವಲ 19.7 ಲಕ್ಷ ಟನ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ದೇಶೀಯ ಉತ್ಪಾದನೆಯಲ್ಲೂ ಕುಸಿತ ಕಂಡುಬಂದಿದೆ. ಅಕ್ಟೋಬರ್ 1, 2024 ರಂದು ಶಿಫಾರಸು ಮಾಡಲಾದ 27-30 ಲಕ್ಷ ಟನ್‌ಗಳಿಗೆ ಪ್ರತಿಯಾಗಿ ಕೇವಲ 15-16 ಲಕ್ಷ ಟನ್‌ಗಳು ದಾಸ್ತಾನು ಇದ್ದವು; ಆದರೆ ಅಕ್ಟೋಬರ್ ಮಧ್ಯದಿಂದ ಡಿಸೆಂಬರ್ ಮಧ್ಯದವರೆಗೆ ಬೇಡಿಕೆ 60 ಲಕ್ಷ ಟನ್‌ಗಳಷ್ಟು ಎಂದು ಅಂದಾಜು ಮಾಡಲಾಗಿದೆ.
ರೈತರು ಡಿಎಪಿ ಮತ್ತು ಯೂರಿಯಾ, ಎಂಒಪಿ ಇತ್ಯಾದಿಗಳ ಕೊರತೆಯಿಂದಲೂ ಬಳಲುತ್ತಿದ್ದಾರೆ ಮತ್ತು ಅವರು ಡಿಎಪಿಯ ಸರ್ಕಾರ ನಿಗದಿಪಡಿಸಿದ ಎಂಆರ್‌ಪಿಗಿಂತ ಸುಮಾರು ರೂ.300- ರೂ.400 ಹೆಚ್ಚು ಅಂದರೆ 50 ಕೆಜಿ ಚೀಲಕ್ಕೆ ರೂ.1,350 ಪಾವತಿಸಬೇಕಾಗುತ್ತದೆ ಎಂದು ವರದಿಯಾಗಿದೆ. ಈ ವೈಫಲ್ಯವನ್ನು ಒಪ್ಪಿಕೊಳ್ಳುವ ಮತ್ತು ತುರ್ತು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವ ಬದಲು, ಸರ್ಕಾರವು ಇಂತಹ ಸಮಸ್ಯೆಯೇ ಇಲ್ಲ ಎಂಬ ನಿರಾಕರಣೆ ನಿಲುವಿನಲ್ಲಿದೆ ಮತ್ತು ನ್ಯಾನೊ-ಯೂರಿಯಾ ಮತ್ತು ನ್ಯಾನೊ-ಡಿಎಪಿ ಕುರಿತು ಪ್ರಚಾರದಲ್ಲಿ ತೊಡಗಿದೆ, ಆದರೆ ನಿಜವಾಗಿಯೂ ಅದು ಎಷ್ಟು ಪರಿಣಾಮಕಾರಿ ಎಂಬುದು ಪ್ರಶ್ನಾರ್ಹವಾಗಿದೆ.
ಭಾರತಕ್ಕೆ ಯೂರಿಯಾ ಮತ್ತು ಡಿಎಪಿಯ ದೇಶೀಯ ಉತ್ಪಾದನೆಯ ವಿಸ್ತರಣೆಯ ಅಗತ್ಯವಿದೆ. ಮುಖ್ಯ ಸಮಸ್ಯೆ ಎಂದರೆ ನಿಯಂತ್ರಣಗಳನ್ನು ತೆಗೆದಿರುವುದರಿಂದಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗಿದ್ದು, ಲಾಗುವಾಡುಗಳ ಬೆಲೆಗಳನ್ನು ನಿರ್ವಹಿಸುವುದು ನಿರ್ಣಾಯಕವಾಗಿದೆ. ಪ್ರಸ್ತುತ ಯೂರಿಯಾ ಬೆಲೆಗಳನ್ನು ಮಾತ್ರ ನಿರ್ವಹಿಸಲಾಗುತ್ತಿದೆ , ಇದರಿಂದಾಗಿ ಇತರ ರಸಗೊಬ್ಬರಗಳಿಗೆ ಹೋಲಿಸಿದರೆ ಯೂರಿಯಾದ ಬಳಕೆ ಬಹಳ ಹೆಚ್ಚುವಂತಾಗಿದೆ.
ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ
ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆಯಲ್ಲಿ ಮಹಾರಾಷ್ಟ್ರ ಮತ್ತು ಜಾರ್ಖಂಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಬಗ್ಗೆಯೂ ಚರ್ಚಿಸಲಾಯಿತು.
ಮಹಾರಾಷ್ಟ್ರದಲ್ಲಿ, ಮಹಾ ವಿಕಾಸ್ ಅಘಾಡಿಯೊಂದಿಗೆ ಸೀಟು ಹಂಚಿಕೆಯ ಭಾಗವಾಗಿ ಸಿಪಿಐ(ಎಂ) ಎರಡು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇವೆರಡೂ ಬುಡಕಟ್ಟು ಸ್ಥಾನಗಳು: ಥಾಣೆ-ಪಾಲ್ಘರ್ ಜಿಲ್ಲೆಯ ದಹಾಣು (ಎಸ್‌ಟಿ)ನಲ್ಲಿ ಪ್ರಸ್ತುತ ಶಾಸಕ ವಿನೋದ್ ನಿಕೋಲ್ ಅಭ್ಯರ್ಥಿ. ಎರಡನೇ ಸ್ಥಾನವು ನಾಸಿಕ್ ಜಿಲ್ಲೆಯ ಕಲ್ವಾನ್ (ಎಸ್‍ಟಿ), ಅಲ್ಲಿ ಅಭ್ಯರ್ಥಿ ಐದು ಬಾರಿ ಶಾಸಕರಾಗಿದ್ದ,ಮತ್ತು ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಜೆ.ಪಿ.ಗವಿತ್ ಆಗಿದ್ದಾರೆ. ಇದರ ಜೊತೆಗೆ, ಮೂರನೆಯದಾಗಿ, ಸೌಹಾರ್ದ ಸ್ಪರ್ಧೆಯ ನೆಲೆಯಲ್ಲಿ ಲ್ಲಿ ಸಿಪಿಐ(ಎಂ) ಕಣದಲ್ಲಿದೆ, ಇಲ್ಲಿ ಅಭ್ಯರ್ಥಿ ಹಿರಿಯ ನಾಯಕ ಮತ್ತು ಮೂರು ಬಾರಿ ಶಾಸಕರಾಗಿದ್ದ ನರಸಯ್ಯ ಆದಂ.
ಜಾರ್ಖಂಡ್‌ನಲ್ಲಿ, ಇಂಡಿಯ ಬಣವನ್ನು ಮುನ್ನಡೆಸುತ್ತಿರುವ ಜೆಎಂಎಂನಿಂದ ಸಿಪಿಐ(ಎಂ) ಜೊತೆಗೆ ಮಾತುಕತೆಗೆ ಯಾವುದೇ ಉಪಕ್ರಮ ವಿಲ್ಲದ್ದರಿಂದ, ಐದು ಎಸ್‌ಟಿ ಸ್ಥಾನಗಳು ಮತ್ತು ಒಂದು ಎಸ್‌ಸಿ ಸ್ಥಾನವನ್ನು ಒಳಗೊಂಡಂತೆ ರಾಜ್ಯದಲ್ಲಿ ಒಂಬತ್ತು ಸ್ಥಾನಗಳಲ್ಲಿ ಹೋರಾಡಲು ಪಕ್ಷವು ನಿರ್ಧರಿಸಿದೆ. ಇತರ ಸ್ಥಾನಗಳಲ್ಲಿ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಸೋಲಿಸುವಲ್ಲಿ ಉತ್ತಮ ಸ್ಥಾನದಲ್ಲಿರುವ ಅಭ್ಯರ್ಥಿಯನ್ನು ಪಕ್ಷವು ಬೆಂಬಲಿಸುವುದಾಗಿ ಕೇಂದ್ರ ಸಮಿತಿ ನಿರ್ಧರಿಸಿದೆ.