ಗಡೀಪಾರಾದ ಭಾರತೀಯರ ಕೈ-ಕಾಲುಗಳಿಗೆ ಯುಎಸ್ ಕೋಳ

ಆಕ್ಷೇಪ ವ್ಯಕ್ತಡಿಸದ ಮೋದಿ ಸರಕಾರದ ಅಂಜುಬುರುಕ ನಿಲುವು: ಸಿಪಿಐ(ಎಂ) ಪೊಲಿಟ್‌ಬ್ಯುರೊ

Migrants wearing face masks and shackles on their hands and feet sit on a military aircraft at Fort Bliss in El Paso, Tx., Thursday, Jan. 30, 2025, awaiting their deportation to Guatemala. (AP Photo/Christian Chavez)(AP)

ಅಮೆರಿಕ ಸಂಯುಕ್ತ ಸಂಸ್ಥಾನಗಳ ಟ್ರಂಪ್‌ ಸರಕಾರ ತಮ್ಮ ದೇಶಕ್ಕೆ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ಗಡಿಪಾರು ಮಾಡಿದ ಭಾರತೀಯ ಪ್ರಜೆಗಳ ಮೊದಲ ಕಂತಿನಲ್ಲಿ 104 ಮಂದಿ ಭಾರತಕ್ಕೆ ಬಂದಿಳಿದ ನಂತರ ಅವರನ್ನು ಈ ಪ್ರಯಾಣದಲ್ಲಿ ಅತ್ಯಂತ ಅಮಾನವೀಯವಾಗಿ ನಡೆಸಿಕೊಂಡ ಸುದ್ದಿಗಳು ವರದಿಯಾಗಿವೆ. ಅಲ್ಲದೆ ಅಮೆರಿಕಾದ ಮಿಲಿಟರಿ ವಿಮಾನದೊಳಕ್ಕೆ ಅವರ ಕೈಗಳಿಗೆ ಕೋಳ ಮತ್ತು ಕಾಲುಗಳಿಗೆ ಹಗ್ಗ ಕಟ್ಟಿ ಒಯ್ಯುವ ವೀಡಿಯೋವನ್ನು ಸ್ವತಃ ಅಲ್ಲಿನ ಗಡಿರಕ್ಷಣಾ ಪಡೆಯೇ ಪ್ರಕಟಿಸಿದೆ. ತಾವು “ಕಾನೂನುಬಾಹಿರ ಪರಕೀಯರನ್ನು ಯಶಸ್ವಿಯಾಗಿ ಭಾರತಕ್ಕೆ ಹಿಂದಿರುಗಿಸಿದ್ದೇವೆ, ಮಿಲಿಟಿರಿ ಸಾಗಾಟವನ್ನು ಬಳಸಿದ ಇದುವರೆಗಿನ ಅತೀ ದೂರದ ಗಡಿಪಾರು ಹಾರಾಟವಿದು” ಎಂಬ ಹಗ್ಗಳಿಕೆ ಗಟ್ಟಿಯಾದ ಮತ್ತು ಅಶುಭಕಾರೀ  ಸಂಗೀತದ  ಹಿನ್ನೆಲೆಯಲ್ಲಿ ಈ ವೀಡಿಯೋದಲ್ಲಿ ಕೇಳಬಂದಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಸಂಸತ್ತಿನಲ್ಲಿ ಪ್ರತಿಪಕ್ಷಗಳು ಪ್ರಶ್ನಿಸಿದಾಗ ವಿದೇಶಾಂಗ ಮಂತ್ರಿಗಳು ಹೇಳಿಕೆ ನೀಡಿ ಯುಎಸ್‌ಸಿಬ್ಬಂದಿ ಅಕ್ರಮ ವಲಸಿಗರನ್ನು ಹಿಂದಕ್ಕೆ ಕಳಿಸುವುದಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಅನುಸರಿಸುವ ವಿಧಾನಗಳನ್ನು ಅನುಸರಿಸಿದ್ದಾರೆ, ಊಟ-ತಿಂಡಿಯ ವೇಳೆಯಲ್ಲಿ ಮತ್ತು ಶೌಚಾಲಯಕ್ಕೆ ಹೋಗುವ ಸಂದರ್ಭದಲ್ಲಿ ಬೇಡಿಗಳನ್ನು ತೆಗೆಯುತ್ತಾರೆ ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲೆ ‘ನಿರ್ಬಂಧ’ಗಳು ಇರುವುದಿಲ್ಲ ಎಂದು ಟ್ರAಪ್‌ ಸರಕಾರದ ನಡೆಯನ್ನು ಸಮರ್ಥಿಸಿಕೊಳ್ಳುವ ದನಿಯ ಹೇಳಿಕೆ ನೀಡಿದಾಗ ಪ್ರತಿಪಕ್ಷಗಳ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಾಸ್ತವವಾಗಿ, ಊಟ-ತಿಂಡಿ ಮತ್ತು ಶೌಚಾಲಯಕ್ಕೆ ಹೋಗುವಾಗಲೂ ಕೋಳಗಳನ್ನು ತೆಗೆಯಲಿಲ್ಲ, ಮತ್ತು ಮಹಿಳೆಯರು ಮತ್ತು ಮಕ್ಕಳಿಗೂ ಕೋಳಗಳಿಂದ ವಿನಾಯ್ತಿ ನೀಡಿರಲಿಲ್ಲ ಎಂದು ಅಮೃತಸರದಲ್ಲಿ ಬಂದಿಳಿದು ತಂತಮ್ಮ ಊರುಗಳಿಗೆ ಮರಳಿದವರಲ್ಲಿ  ಹಲವರು ತಾವು ಪಟ್ಟ ಪಾಡನ್ನು ಹೇಳುತ್ತ ತಿಳಿಸಿದ್ದಾರೆ ಎಂಬ ವರದಿಗಳು ಪ್ರಕಟವಾಗಿವೆ.

ಇನ್ನೂ ಗಮನಾರ್ಹ ಸಂಗತಿಯೆಂದರೆ ಬ್ರೆಝಿಲ್, ಕೊಲಂಬಿಯಾ ಮತ್ತು ಮೆಕ್ಸಿಕೊ ತಮ್ಮ ಪ್ರಜೆಗಳನ್ನು ಈ ರೀತಿ ಮಿಲಿಟರಿ ವಿಮಾನದಲ್ಲಿ ಕಳಿಸುವುದನ್ನು ಪ್ರತಿಭಟಿಸಿದ್ದಾರೆ ಎಂಬ ಸುದ್ದಿಗಳೂ ಬಂದಿವೆ. ಇನ್ನೊಂದು ವರದಿಯ ಪ್ರಕಾರ ಕಳೆದ ಎರಡು ವಾರಗಳಲ್ಲಿ ಗಡೀಪಾರಾದ ವಿದೇಶಿ ಪ್ರಜೆಗಳನ್ನು ವಾಪಾಸು ಕಳಿಸಲು ಮಿಲಿಟರಿ ವಿಮಾನಗಳನ್ನು ಬಳಸಿದ್ದು ಆರು ಬಾರಿ ಮಾತ್ರ. ಅವನ್ನು ಕಳಿಸಿದ್ದು ಹೊಂಡುರಾಸ್, ಗ್ವಾಟೆಮಾಲ, ಇಕ್ವೆಡೋರ್‌ ಮತ್ತು ಪೆರು ದೇಶಗಳಿಗೆ. ಪೆರು ಕೂಡ ಇದನ್ನು ಸ್ವೀಕರಿಸುವ ಮೊದಲು ಇದು ಒಂದು ‘ಅಪವಾದದ ಪ್ರಕರಣ’ ಎಂದು ಹೇಳಿತು. ಅಂದರೆ ವಿಶ್ವಗುರು ಎಂದು ಹೇಳಿಕೊಳ್ಳುವ ಭಾರತ ಈಗ ಈ ವಿಷಯದಲ್ಲಿ ಸಣ್ಣ ದೇಶಗಳ ಸಾಲಿಗೆ ಸೇರಿದಂತಾಗಿದೆ ಎಂದು ಸಂಸತ್ತಿನಲ್ಲಿ ಪ್ರತಿಪಕ್ಷಗಳು ಭಾರತ ಸರಕಾರದ ನಡೆಯನ್ನು ಖಂಡಿಸಿವೆ.

ನಮ್ಮ ಪ್ರಧಾನಿಗಳು ಯುಎಸ್‌ ಅಧ್ಯಕ್ಷರೊಡನೆ ಕಳೆದ ವಾರ ಟೆಲಿಫೋನ್ ಸಂವಾದ ನಡೆಸಿದಾಗ ಎರಡೂ ಕಡೆಗಳ ಕಲ್ಯಾಣವನ್ನು ಚರ್ಚಿಸಬೇಕು ಎಂದಿದ್ದರು ಮತ್ತು ಫೆಬ್ರುವರಿ 12ರಂದು ಅಮೆರಿಕಾ ಭೇಟಿ ನೀಡುವವರಿದ್ದಾರೆ. ಆದರೆ ಈ ನಡುವೆಯೇ ಭಾರತದ ಅಕ್ರಮ ವಲಸಿಗರು ಎಂಬುವರನ್ನು ವಾಪಾಸು ಕಳಿಸಿದ್ದೇಕೆ ಎಂಬ ಪ್ರಶ್ನೆಗೆ ಭಾರತೀಯ ಅಧಿಕಾರಿಗಳು ಉತ್ತರಿಸಲು ನಿರಾಕರಿಸಿದರು ಎಂದೂ ವರದಿಯಾಗಿದೆ.

Leave a Reply

Your email address will not be published. Required fields are marked *