ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ

ಡಬಲ್ ಎಂಜಿನ್ ಸರ್ಕಾರದ ದಿವಾಳಿತನವನ್ನು ಎತ್ತಿ ತೋರಿಸುತ್ತದೆ

ಎರಡು ವರ್ಷಗಳಿಂದ ಹಿಂಸಾಚಾರಗಳಿಂದ ಅಲ್ಲೋಲಕಲ್ಲೋಲಗೊಂಡಿರುವ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯು ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಸಂಪೂರ್ಣ ದಿವಾಳಿತನವನ್ನು ಎತ್ತಿ ತೋರಿಸುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.  ರಾಷ್ಟ್ರಪತಿ ಆಳ್ವಿಕೆಯನ್ನು ಮಣಿಪುರದ ಹಿತಾಸಕ್ತಿಗಾಗಿ ಅಲ್ಲ, ಬದಲಾಗಿ ಆಳುವ ಕೂಟದ ಒಳಗಿನ ಆಂತರಿಕ ಸಂಘರ್ಷಗಳನ್ನು ಪರಿಹರಿಸಲು ಸಮಯ ಪಡೆಯಲು ವಿಧಿಸಲಾಗಿದೆ ಎಂದಿರುವ ಅದು, ಪ್ರಮುಖ ಅಪರಾಧಿಯಾಗಿರುವ ಬಿಜೆಪಿ-ಆರ್‌ಎಸ್‌ಎಸ್‌ ನಿಂದ ಬೆಂಬಲಿತರಾಗಿದ್ದ ಮುಖ್ಯಮಂತ್ರಿಯವರ ಪಕ್ಷಪಾತದ ಪಾತ್ರವನ್ನು ನ್ಯಾಯಾಲಯವು ಪರಿಶೀಲಿಸುತ್ತಿದ್ದ ಕಾರಣ ರಾಜೀನಾಮೆ ನೀಡಬೇಕಾಯಿತು. ಅಲ್ಲಿ ಅವರ ಪಕ್ಷಪಾತದ ಪಾತ್ರದ ಪುರಾವೆಗಳನ್ನು ಪ್ರಸ್ತುತಪಡಿಸಲಾಯಿತು, ಇದರಿಂದಾಗಿ ಅವರಿಗೆ ರಾಜೀನಾಮೆ ನೀಡುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲಎಂದು ಹೇಳಿದೆ.

ಈ ಎಲ್ಲಾ ಬೆಳವಣಿಗೆಗಳಲ್ಲಿ, ಆಳುವ ಪಕ್ಷದ ಕೇಂದ್ರ ನಾಯಕತ್ವ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರ ಮೇಲೆ ಹೇರಿದ ಆಳವಾದ ಸಂಕಟವನ್ನುನಿವಾರಿಸಲು ಅಗತ್ಯವಾದ ಕ್ರಮ ತೆಗೆದುಕೊಳ್ಳಲು ನಿರಾಕರಿಸಿತು. ತೊಂದರೆಗೊಳಗಾದ ಈ ರಾಜ್ಯಕ್ಕೆ ಭೇಟಿ ನೀಡಲು ಸಹ ಪ್ರಧಾನಿಯವರು ನಿರ್ದಯವಾಗಿ ನಿರಾಕರಿಸಿರುವುದು ಇದರ ಪ್ರತೀಕ. ಇದು ರಾಜ್ಯ ಮತ್ತು ಅದರ ಜನರ ಹಿತಾಸಕ್ತಿಗಳಿಗಿಂತ ತನ್ನ ಸ್ವಂತ ರಾಜಕೀಯ ಹಿತಾಸಕ್ತಿಗಳನ್ನು ಮೇಲಿರಿಸಿಕೊಳ್ಳುವ ಆಳುವ ಪಕ್ಷ ಮತ್ತದರ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಂಕುಚಿತ ನಿಲುವನ್ನು ಬಯಲಿಗೆಳೆಯುತ್ತದೆ ಎಂದು ಸಿಪಿಐ(ಎಂ) ಖಂಡಿಸಿದೆ.

ರಾಷ್ಟ್ರಪತಿ ಆಳ್ವಿಕೆಯು ಯಾವುದೇ ಪರಿಹಾರವಲ್ಲ. ಆದಾಗ್ಯೂ, ಈಗ ಕೇಂದ್ರ ಸರ್ಕಾರವು ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಿವಿಧ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುವ ಮೂಲಕ ಆಳವಾದ ವಿಭಜನೆಗಳನ್ನು ಸರಿಪಡಿಸಲು ಕ್ರಮಗಳನ್ನು ತಕ್ಷಣವೇ ಪ್ರಾರಂಭಿಸಬೇಕು, ಎಲ್ಲಾ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಗಳನ್ನು ಒಂದು ಸಮಯದ ಚೌಕಟ್ಟಿನೊಳಗೆ ನಡೆಸುವುದೂ ಸೇರಿದಂತೆ, ರಾಜ್ಯದ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ, ಮಣಿಪುರದಲ್ಲಿ ಸಾಮಾನ್ಯ ಸ್ಥಿತಿಯನ್ನು ಸ್ಥಾಪಿಸಲು, ಅಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲು ನ್ಯಾಯಯುತ ಪರಿಹಾರಗಳನ್ನು ತಲುಪಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಕರೆನೀಡಿದೆ.

Leave a Reply

Your email address will not be published. Required fields are marked *