ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಗಿಣಿಗೆರೆ ಭಾಗದ ಕೈಗಾರಿಕಾ ಪ್ರದೇಶದಲ್ಲಿನ ಬಹುತೇಕ ಎಲ್ಲ ಕೈಗಾರಿಕೆಗಳು ವಿಪರೀತ ಕಲುಷಿತ ಹೊಗೆ ಬಿಡುತ್ತಿವೆ. ಜೊತೆಗೆ ಅವುಗಳು ಎಬ್ಬಿಸುವ ಕೆಂಧೂಳು ಪರಿಸರದ ಮೇಲೆ, ಜನಜೀವನ ಹಾಗು ಕೃಷಿಯ ಮೇಲೆ ತೀವ್ರ ಸ್ವರೂಪದ ಕೆಟ್ಟ ಪರಿಣಾಮ ಬೀರುತ್ತಿವೆ. ಇದೂ ಅಲ್ಲದೆ, ಹೆದ್ದಾರಿ ರಸ್ತೆ ನಿರ್ಮಾಣದ ವಿಪರೀತ ಧೂಳು ಈ ಭಾಗದ ಜನತೆಯ ಜೀವನವು ತೀವ್ರ ಸಂಕಷ್ಟಕ್ಕೆ ತುತ್ತಾಗುವಂತೆ ಮಾಡಿದೆ. ಇದರಿಂದಾಗಿ ಕೃಷಿ ಉತ್ಪಾದನೆಗೆ ಮತ್ತು ಜಾನುವಾರುಗಳ ಆರೋಗ್ಯಕ್ಕೆ ತೀವ್ರ ಧಕ್ಕೆ ಉಂಟಾಗುತ್ತಿದೆ. ಮಾಲಿನ್ಯ ತಡೆಯದ ಸರಕಾರದ ದುರ್ನಡೆಯು ಖಂಡನೀಯ.
ಕಲುಷಿತ ವಾತಾವರಣಕ್ಕೆ ಕಾರಣರಾದ ಕೈಗಾರಿಕಾ ಮಾಲೀಕರ ಹಾಗು ರಸ್ತೆ ನಿರ್ಮಾಣದ ಗುತ್ತಿಗೆದಾರರ ವಿರುದ್ಧ ಮತ್ತು ಪರಿಸರ ಸಂರಕ್ಷಣೆಗೆ ಅಗತ್ಯ ಕಾನೂನಿನ ಕ್ರಮ ಕೈಗೊಳ್ಳದೆ, ಕೈಗಾರಿಕಾ ಮಾಲೀಕರ ಜೊತೆ ಶಾಮೀಲಾಗಿರುವ ಕೆಐಏಡಿಬಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾ ಆಡಳಿತದ ಅಧಿಕಾರಿ ವರ್ಗ, ಶಾಸಕರು ಮತ್ತು ರಾಜ್ಯ ಸರಕಾರದ ನಡೆ ಸರಿಯಾದುದಲ್ಲ. ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಕೈಗಾರಿಕೆಗಳ ಮೇಲೆ ಕಠಿಣ ಕಾನೂನು ಕ್ರಮ ವಹಿಸಬೇಕು. ಪರಿಸರ ಸಂರಕ್ಷಣೆಯ ಸುರಕ್ಷಾ ಕ್ರಮ ವಹಿಸುವವರೆಗೆ ಅವುಗಳನ್ನು ಬಂದ್ ಮಾಡಲು ಮತ್ತು ನಿರ್ಲಕ್ಷ್ಯ ವಹಿಸಿದ ಎಲ್ಲಾ ಜವಾಬ್ದಾರಿಹೀನ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು ಕಠಿಣ ಕಾನೂನು ಕ್ರಮವಹಿಸಬೇಕು, ಈ ಭಾಗದ ಜನತೆಗಾದ ಎಲ್ಲ ರೀತಿಯ ಹಾನಿಯನ್ನು ತುಂಬಿಕೊಡಲು ಅಗತ್ಯ ಪರಿಹಾರ ಕ್ರಮವಹಿಸಬೇಕು ಎಂದು ರಾಜ್ಯ ಸರಕಾರವನ್ನು ಸಿಪಿಐ(ಎಂ) ಒತ್ತಾಯಿಸುತ್ತದೆ.
ಇದೇ ಕಾರಣದಿಂದ, ಈ ಭಾಗದಲ್ಲಿ ಕೈಗಾರಿಕೆಗಳೇ ಬೇಡವೆಂಬ ಅಭಿಪ್ರಾಯ ರೂಪುಗೊಳ್ಳಲು ಕಾರಣವಾಗುತ್ತಿದೆ. ರಾಜ್ಯ ಸರಕಾರ ಈ ಕುರಿತ ಜನತೆಯ ಭಾವನೆಗಳನ್ನು ಗೌರವಿಸಿ ಅಗತ್ಯ ಕ್ರಮವಹಿಸದೆ, ಕಠಿಣ ಕ್ರಮವಹಿಸದೆ ಜನತೆಯ ಬೆಂಬಲ ಗಳಿಸಲು ಸಾದ್ಯವಿಲ್ಲವೆಂಬುದನ್ನು ಮುಖ್ಯಮಂತ್ರಿಗಳು ಗಮನಿಸಬೇಕಾಗಿದೆ.
ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮುಖಂಡರ ಕೈಗಾರಿಕಾ ವಿರೋಧಿ ನಿಲುಮೆ
ಒಂದೆಡೆ, ಬಿಜೆಪಿ ಹಾಗು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸರಕಾರದ ನೇತೃತ್ವ ವಹಿಸಿ, ಕೈಗಾರಿಕಾ ನಿರ್ಮಾಣಕ್ಕೆ ಬಂಡವಾಳ ಹೂಡಿಕೆದಾರರ ಸಮಾವೇಶಗಳನ್ನು ಅದ್ಧೂರಿಯಾಗಿ ಸಂಘಟಿಸುತ್ತಿದ್ದರೆ, ಕೊಪ್ಪಳ ಜಿಲ್ಲೆಯ ಈ ಪಕ್ಷಗಳ ಮುಖಂಡರು ಕೈಗಾರಿಕೆಗಳೇ ಬೇಡ ಎಂದು ಪ್ರತಿಭಟನೆ ಸಂಘಟಿಸಲು ತೊಡಗಿರುವುದು ಕಂಡು ಬಂದಿದೆ. ಇದು ಈ ಪಕ್ಷಗಳ ನಾಯಕರು ಜನತೆಯನ್ನು ತಮ್ಮ ಅಧಿಕಾರದಾಹದಿಂದ ತಪ್ಪುದಾರಿಗೆ ಎಳೆಯುತ್ತಿರುವುದನ್ನು ವಿರೋಧಿಸುತ್ತೇವೆ. ಪರಿಸರ ಮಾಲಿನ್ಯದ ಭಯವಿದ್ದರೆ, ಅಂತಹ ಪ್ರಶ್ನೆಯ ನಿವಾರಣೆಗೆ ಕ್ರಮಗಳಾಗಬೇಕು ಮತ್ತು ಜನವಸತಿಯಿಂದ ದೂರದಲ್ಲಿ ಅತ್ಯಂತ ಸುರಕ್ಷತೆಯಲ್ಲಿ ನಿರ್ಮಿಸುವಂತೆ ಒತ್ತಾಯಿಸಬಹುದೇ ಹೊರತು, ಕೈಗಾರಿಕೆ ನಿರ್ಮಾಣಕ್ಕೆ ಅಡ್ಡಿಪಡಿಸುವುದನ್ನು ಒಪ್ಪುವುದಿಲ್ಲ.
ಕೈಗಾರಿಕೆ ಸ್ಥಾಪನೆಗೆ ಬೆಂಬಲ
ಕೈಗಾರಿಕೆ ನಿರ್ಮಾಣವನ್ನು ಸಿಪಿಐ(ಎಂ) ಖಂಡಿತಾ ವಿರೋಧಿಸುವುದಿಲ್ಲ ಮತ್ತು ಅದನ್ನು ಸ್ವಾಗತಿಸುತ್ತದೆ. ಕೈಗಾರಿಕಾ ನಿರ್ಮಾಣವು ಈ ಭಾಗದ ಹಿಂದುಳಿದಿರುವಿಕೆಯ ನಿವಾರಣೆಗೆ, ಉದ್ಯೋಗ ಸೃಷ್ಟಿಗೆ ಅಗತ್ಯವಾಗಿದೆ. ಆದರೆ, ಅದರಿಂದ ಜನಜೀವನಕ್ಕೆ ಯಾವುದೇ ಧಕ್ಕೆ ಬಾರದಂತೆ, ಸುರಕ್ಷತಾ ಕ್ರಮ ವಹಿಸುವ ಖಾತರಿ ಭರವಸೆಯನ್ನು ನೀಡುವಂತೆ ಮತ್ತು ಜನತೆಯ ವಿಶ್ವಾಸದೊಂದಿಗೆ, ಜನವಸತಿಯಿಂದ ದೂರದಲ್ಲಿ ನಿರ್ಮಿಸಲು ಕ್ರಮವಹಿಸುವಂತೆ ಸರಕಾರಗಳನ್ನು ಒತ್ತಾಯಿಸುತ್ತದೆ.
ಭೂ ಸ್ವಾಧೀನ ಕಾಯ್ದೆ – 2013 ರಂತೆ, ಕೈಗಾರಿಕಾ ಸ್ಥಾಪನೆಗೆ ಮುಂಚೆ, ಕೈಗಾರಿಕಾ ಸ್ಥಾಪನೆಯಿಂದ ಪರಿಸರ ಹಾಗು ಜನಜೀವನದ ಮೇಲಾಗುವ ಪರಿಣಾಮಗಳನ್ನು ತಜ್ಞರ ಸಮಿತಿಯ ಮೂಲಕ ಅಧ್ಯಯನ ನಡೆಸಬೇಕು. ಹಾಗೂ ನಾಗರೀಕ ಒಪ್ಪಿಗೆ ಪಡೆಯಬೇಕು ಮತ್ತು ಫಲವತ್ತಾದ ಕೃಷಿ ಭೂಮಿಗಳನ್ನು ಕೈಗಾರಿಕಾ ನಿರ್ಮಾಣಕ್ಕೆ ಬಳಸದೆ ಇರುವುದು, ಕೃಷಿ ಯೋಗ್ಯವಲ್ಲದ ಹಾಗು ಮಳೆಯಾಧಾರಿತ ಜಮೀನುಗಳ ಶೇ. 75 ರೈತರ ಒಪ್ಪಿಗೆ ಮೇರೆಗೆ ಮತ್ತು ಮಾರುಕಟ್ಟೆ ದರದ ಮೂಲಕ ಭೂ ಸ್ವಾಧೀನಕ್ಕೆ ಕ್ರಮವಹಿಸಬೇಕು. ಭೂಮಿ, ವಸತಿ, ಉದ್ಯೋಗ ಕಳೆದುಕೊಂಡವರಿಗೆ ಖಾಯಂ ಉದ್ಯೋಗ ಸಹಿತ ಪುನರ್ವಸತಿ, ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಖಾತರಿ ಪಡಿಸುವುದು ಮುಂತಾದ ಜನಪರ ಕ್ರಮಗಳ ಮೂಲಕ, ಕೈಗಾರಿಕೆ ನಿರ್ಮಾಣಕ್ಕೆ ಸರಕಾರ ಅಗತ್ಯ ಕ್ರಮ ವಹಿಸುವಂತೆ ಸಿಪಿಐ(ಎಂ) ಆಗ್ರಹಿಸುತ್ತದೆ.