ಸಂಸತ್ತಿನಲ್ಲಿ ಯಾವುದೇ ರಾಜ್ಯದ ಪ್ರಾತಿನಿಧ್ಯದ ಅನುಪಾತದ ಪಾಲನ್ನು ಇಳಿಸುವ ಅಥವಾ ಕಡಿಮೆ ಮಾಡುವ ಯಾವುದೇ ಕ್ಷೇತ್ರ ಮರುವಿಂಗಡಣಾ ಪ್ರಕ್ರಿಯೆಯನ್ನು ದೃಢವಾಗಿ ವಿರೋಧಿಸುವುದಾಗಿ ಎಪ್ರಿಲ್ 4ರಂದು ಸಿಪಿಐ(ಎಂ)ನ 24ನೇ ಮಹಾಧಿವೇಶನ ಅಂಗೀಕರಿಸಿರುವ ನಿರ್ಣಯ ಹೇಳಿದೆ. ಈ ಬಹುಮಹತ್ವದ ವಿಷಯದ ಬಗ್ಗೆ ಒಂದು ವಿಶಾಲ ಒಮ್ಮತವನ್ನು ಕಟ್ಟಲು ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳೊಂದಿಗೆ ವಿಸ್ತೃತ ಸಮಾಲೋಚನೆಗಳಲ್ಲಿ ತೊಡಗಬೇಕು ಎಂದು ಈ ನಿರ್ಣಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಸಂಸತ್ತು ಮತ್ತು ಶಾಸಕಾಂಗ ಸಭೆಗಳಲ್ಲಿನ ಸ್ಥಾನಗಳ ಸಂಖ್ಯೆಯನ್ನು ಸ್ತಂಭನಗೊಳಿಸಿರುವ ಅವಧಿ ಮುಂದಿನ ವರ್ಷ ಕೊನೆಗೊಳ್ಳಲಿರುವ ಕಾರಣ, 2026 ರ ನಂತರ ನಡೆಸುವ ಮೊದಲ ಜನಗಣತಿಯ ನಂತರ ಹೊಸ ಸುತ್ತಿನ ಕ್ಷೇತ್ರ ಮರುವಿಂಗಡಣೆಯ ಅಗತ್ಯವಾಗುತ್ತದೆ. 1976ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಜಾರಿಗೆ ತರಲಾದ 42 ನೇ ಸಂವಿಧಾನ ತಿದ್ದುಪಡಿಯು ಆರಂಭದಲ್ಲಿ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಉತ್ತೇಜಿಸಲು ಸೀಟು ಹಂಚಿಕೆಯನ್ನು ಆಗಿದ್ದ ಮಟ್ಟದಲ್ಲಿ ಸ್ತಂಭನಗೊಳಿಸಿತು. ಈ ಸ್ತಂಭನವನ್ನು ನಂತರ ವಾಜಪೇಯಿ ಸರ್ಕಾರವು 2026 ರವರೆಗೆ ವಿಸ್ತರಿಸಿತು.
ಚಾರಿತ್ರಿಕವಾಗಿ, 1952, 1963 ಮತ್ತು 1973 ರಲ್ಲಿ ಕ್ಷೇತ್ರ ಮರುವಿಂಗಡಣೆಯ ಅಭ್ಯಾಸವನ್ನು ನಡೆಸಲಾಯಿತು. ಆದರೆ, 1976ರ ಸ್ತಂಭನದ ನಂತರ, ಜನಸಂಖ್ಯೆ ಆಧಾರಿತ ಪುನರ್ವಿತರಣೆಯ ಕುರಿತಾದ ಕಳವಳಗಳನ್ನು ಪರಿಹರಿಸಲು ನಂತರದ ಹೊಂದಾಣಿಕೆಗಳನ್ನು ಮುಂದೂಡಲಾಯಿತು. 2001 ರ ಜನಗಣತಿಯ ಹೊರತಾಗಿಯೂ, ದಕ್ಷಿಣ ರಾಜ್ಯಗಳ ಬಲವಾದ ವಿರೋಧದಿಂದಾಗಿ ಸ್ತಂಭನವು ಜಾರಿಯಲ್ಲಿತ್ತು, ಅವರ ಪ್ರಾತಿನಿಧ್ಯದಲ್ಲಿ ನ್ಯಾಯಯುತವಲ್ಲದ ಕಡಿತವನ್ನು ಉಂಟುಮಾಡಬಹುದು ಎಂಬ ಭಯದಿಂದ ಅವು ವಿರೋಧಿಸಿದವು.
ಸ್ತಂಭನದ ಅವಧಿ ಮುಗಿಯುತ್ತಿದ್ದಂತೆ, ಹೊಸ ಕ್ಷೇತ್ರ ಮರುವಿಂಗಡಣೆಯ ಪ್ರಕ್ರಿಯೆಯು ರಾಜಕೀಯ ಪ್ರಾತಿನಿಧ್ಯವನ್ನು ಗಮನಾರ್ಹವಾಗಿ ಮರುರೂಪಿಸಬಹುದು. ಇದು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಒಡಿಶಾ, ಪಶ್ಚಿಮ ಬಂಗಾಳ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳ ಮೇಲೆ ಹಾಳಿತ ಮೀರಿದ ಪರಿಣಾಮ ಬೀರುತ್ತದೆ. ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುವ ಈ ರಾಜ್ಯಗಳಲ್ಲಿ ಹಲವು ಪ್ರಾತಿನಿಧ್ಯವನ್ನು ಕಳೆದುಕೊಳ್ಳುವ ಅಪಾಯವನ್ನು ಹೊಂದಿವೆ. ಆದರೆ ಹೆಚ್ಚಿನ ಜನಸಂಖ್ಯಾ ಬೆಳವಣಿಗೆಯ ದರಗಳನ್ನು ಹೊಂದಿರುವ ರಾಜ್ಯಗಳು ಇದರ ಅನರ್ಹ ಪ್ರಯೋಜನವನ್ನು ಪಡೆಯಬಹುದು. ಒಟ್ಟಾರೆ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿದರೂ ಸಹ, ಸಂಪೂರ್ಣವಾಗಿ ಜನಸಂಖ್ಯೆ ಆಧಾರಿತ ವಿಧಾನವು ಉತ್ತರ ಪ್ರದೇಶದಂತಹ ರಾಜ್ಯಗಳಿಗೆ ಅಗತ್ಯಕ್ಕಿಂತ ಹೆಚ್ಚು ಅನುಕೂಲಕರವಾದ ಹಂಚಿಕೆಗಳಿಗೆ ಕಾರಣವಾಗುತ್ತದೆ.
ರಾಷ್ಟ್ರೀಯ ಐಕ್ಯತೆ ಮತ್ತು ಸಾಮರಸ್ಯವನ್ನು ಕಾಯ್ದುಕೊಳ್ಳುತ್ತಲೇ ಎಲ್ಲಾ ರಾಜ್ಯಗಳ ಹಕ್ಕುಗಳನ್ನು ಗೌರವಿಸುವ ಒಂದು ಸಮತ್ವಪೂರ್ಣ ಮತ್ತು ನ್ಯಾಯಯುತವಾದ ಒಕ್ಕೂಟದ ಚೌಕಟ್ಟಿಗೆ ಬದ್ಧವಾಗಿದ್ದು, ಸಿಪಿಐ(ಎಂ)ನ 24ನೇ ಮಹಾಧಿವೇಶನವು ಈ ಕೆಳಗಿನ ನಿರ್ಣಯಗಳನ್ನು ಮಾಡುವುದಾಗಿ ಹೇಳಿದೆ:
- ಯಾವುದೇ ಕ್ಷೇತ್ರ ಮರುವಿಂಗಡಣೆಯ ಚೌಕಟ್ಟು ಯಾವುದೇ ನಿರ್ದಿಷ್ಟ ಪ್ರದೇಶ ಅಥವಾ ರಾಜ್ಯಕ್ಕೆ ಪ್ರಮಾಣದ ಪ್ರಮಾಣ ಮೀರಿದ ಪ್ರಯೋಜನವನ್ನು ಕೊಡದಂತೆ ತಡೆಯಬೇಕು ಮತ್ತು ಜನಸಂಖ್ಯಾ ಬೆಳವಣಿಗೆಯನ್ನು ಯಶಸ್ವಿಯಾಗಿ ನಿಯಂತ್ರಿಸಿರುವ ರಾಜ್ಯಗಳ ಹಿತಾಸಕ್ತಿಗಳನ್ನು ರಕ್ಷಿಸಬೇಕು.
- ಸಂಸದೀಯ ಪ್ರಾತಿನಿಧ್ಯವನ್ನು ವಿಸ್ತರಿಸಲು ರಾಜ್ಯಗಳ ನಡುವೆ ಅಸ್ತಿತ್ವದಲ್ಲಿರುವ ಪ್ರಮಾಣಾತ್ಮಕ ಸೀಟು ಹಂಚಿಕೆಯನ್ನು ಕಾಯ್ದುಕೊಳ್ಳುತ್ತಾ, ನ್ಯಾಯಯುತ ಮತ್ತು ಸಮತೋಲನದ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಒಂದು ಪ್ರಮಾಣಾತ್ಮಕ ಸೀಟು ಹೆಚ್ಚಳವನ್ನು ಅಳವಡಿಸಿಕೊಳ್ಳಬೇಕು.
- ಪ್ರಸ್ತುತ ವಿವಿಧ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗಳು/ ಪರಿಶಿಷ್ಟ ಬುಡಕಟ್ಟು ಸ್ಥಾನಗಳ ಅನುಪಾತವನ್ನು ಕಾಯ್ದುಕೊಳ್ಳಬೇಕು.
- ಕ್ಷೇತ್ರ ಮರುವಿಂಗಡಣೆಯ ಪ್ರಕ್ರಿಯೆಯು ಸಮತ್ವ, ಒಕ್ಕೂಟ ವ್ಯವಸ್ಥೆ, ಜಾತ್ಯತೀತತೆ ಮತ್ತು ರಾಷ್ಟ್ರೀಯ ಐಕ್ಯತೆಯ ತತ್ವಗಳನ್ನು ಎತ್ತಿಹಿಡಿಯುವಂತೆ ಭಾರತ ಸರ್ಕಾರವು ಎಲ್ಲಾ ರಾಜ್ಯಗಳೊಂದಿಗೆ ಸಮಗ್ರ ಸಮಾಲೋಚನೆಗಳನ್ನು ನಡೆಸಬೇಕು.
- ಕ್ಷೇತ್ರ ಮರುವಿಂಗಡಣೆಯ ಪ್ರಕ್ರಿಯೆಯ ಬಗ್ಗೆ ಒಂದು ವಿಶಾಲ ಒಮ್ಮತವಿಲ್ಲದಿದ್ದಲ್ಲಿ, ಒಕ್ಕೂಟದ ಸಮಗ್ರತೆಯನ್ನು ಕಾಪಾಡಲು ಸೀಟು ಹಂಚಿಕೆಯ ಮೇಲಿನ ಸ್ತಂಭನವನ್ನು ಮತ್ತಷ್ಟು ವಿಸ್ತರಿಸಬೇಕು.