ವೈಜ್ಞಾನಿಕ ದತ್ತಾಂಶಗಳ ನೆಲೆಯಲ್ಲಿ ನೀತಿ ನಿರ್ಧಾರಕ್ಕೆ ಮತ್ತು ಸಾಮಾಜಿಕ ನ್ಯಾಯಕ್ಕೆ ಜಾತಿ ಜನಗಣತಿ ಸೇರಿದಂತೆ ಸಾಮಾನ್ಯ ಜನಗಣತಿಯನ್ನು ತಕ್ಷಣ ನಡೆಸಬೇಕು.
2021 ರಲ್ಲಿ ನಡೆಯಬೇಕಿದ್ದ ದಶಕದ ಜನಗಣತಿಯನ್ನು ಇಲ್ಲಿಯವರೆಗೆ ನಡೆಸದಿರುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸುತ್ತ ಸಿಪಿಐ(ಎಂ) ಮಹಾಧಿವೇಶನ, ಆಡಳಿತಾತ್ಮಕ ಗಡಿಗಳನ್ನು ಸ್ತಂಭನಗೊಳಿಸಲು ನೀಡಿದ ಜೂನ್ 2024ರ ಗಡುವನ್ನು ಒಕ್ಕೂಟ ಸರಕಾರ ವಿಸ್ತರಿಸಿಯೂ ಇಲ್ಲ. ಜಿಲ್ಲೆಗಳು, ತಾಲ್ಲೂಕು, ಬ್ಲಾಕ್ ಅಥವಾ ಗ್ರಾಮ ಮಟ್ಟಗಳಂತಹ ಆಡಳಿತಾತ್ಮಕ ಗಡಿಗಳ ಪ್ರಕಾರ ಜನಗಣತಿಯನ್ನು ನಡೆಸಲು ಇದು ಅಗತ್ಯ.
2020 ರಲ್ಲಿ ಪ್ರಾರಂಭವಾಗಬೇಕಿದ್ದ 2021 ರ ಜನಗಣತಿಯು ಅನಿರ್ದಿಷ್ಟವಾಗಿ ವಿಳಂಬಗೊಂಡಿದೆ. ಕೋವಿಡ್ ನಂತರ ಮಾತ್ರ ಜನಗಣತಿ ಕಾರ್ಯಾಚರಣೆಗಳನ್ನು ನಡೆಸಬಹುದು ಎಂದು ಸರ್ಕಾರ ಆಗ ಹೇಳಿತ್ತು, ಆದರೆ ನಾಲ್ಕು ವರ್ಷಗಳ ನಂತರವೂ ಜನಗಣತಿ ನಡೆಯುವ ಯಾವುದೇ ಲಕ್ಷಣಗಳಿಲ್ಲ. ಜನಗಣತಿಯಿಂದ ಒದಗಿಸಲಾದ ದತ್ತಾಂಶವು ನೀತಿ ಯೋಜಕರು ಮತ್ತು ನಿರ್ವಾಹಕರು ವಿವಿಧ ವಿಭಾಗಗಳ ಜನರಿಗೆ ಅನುಗುಣವಾಗಿ ನೀತಿಗಳನ್ನು ರೂಪಿಸಲು ಅನುವು ಮಾಡಿಕೊಡುತ್ತದೆ.
ಬ್ರಿಟಿಷ್ ಆಳ್ವಿಕೆಯ ಕಾಲದಿಂದ, ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿಯನ್ನು ತಪ್ಪದೆ ನಡೆಸಲಾಗುತ್ತಿದೆ. 1941 ರಲ್ಲಿ, ಎರಡನೇ ಮಹಾಯುದ್ಧದ ಸಮಯದಲ್ಲಿಯೂ ಸಹ, ಜನಗಣತಿಯನ್ನು ಮೊಟಕುಗೊಳಿಸಿ ನಡೆಸಲಾಯಿತು. ಜನಗಣತಿಯು ಜನಸಂಖ್ಯಾ ಎಣಿಕೆಯನ್ನು ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿನ ಕುಟುಂಬಗಳ ದತ್ತಾಂಶ, ಸಾಗುವಳಿ ವರ್ಗಗಳು ಮತ್ತು ಕೃಷಿ ಕಾರ್ಮಿಕರನ್ನು ಒಳಗೊಂಡಂತೆ ಸಮಗ್ರ ದತ್ತಾಂಶವನ್ನು ಸಹ ಒದಗಿಸುತ್ತದೆ. ಇದು ನಗರ-ಗ್ರಾಮೀಣ ಜನಸಂಖ್ಯೆ, ಭಾಷಿಕ ಗುಂಪುಗಳು ಮತ್ತು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಬಗ್ಗೆ ದತ್ತಾಂಶವನ್ನು ಸಹ ಒದಗಿಸುತ್ತದೆ.
ಸಾಮಾನ್ಯ ಜನಗಣತಿಯಲ್ಲಿ ಎಣಿಸಲಾದ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ, ಇತರ ಹಿಂದುಳಿದ ವರ್ಗಗಳ ಬಗ್ಗೆ ಯಾವುದೇ ದತ್ತಾಂಶವಿಲ್ಲ. ಇತರ ಹಿಂದುಳಿದ ವರ್ಗಗಳ ವಿವಿಧ ವಿಭಾಗಗಳ ನಿಖರವಾದ ಎಣಿಕೆಯನ್ನು ಹೊಂದಿರುವುದು ಅವಶ್ಯಕ. ಆದ್ದರಿಂದ, ಜಾತಿ ಜನಗಣತಿಯ ಬೇಡಿಕೆಯನ್ನು ಬೆಂಬಲಿಸುವುದಾಗಿ ಮಹಾಧಿವೇಶನ ಹೇಳಿದೆ.
ಜಾತಿ ಜನಗಣತಿಯು ಜಾತಿ ಮತ್ತು ಸಾಮಾಜಿಕ-ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಯ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಆಳುವ ವರ್ಗದ ನೀತಿಗಳು ಮತ್ತು ಮೀಸಲಾತಿಗಳ ಪರಿಣಾಮವನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ. ಸಂಪನ್ಮೂಲಗಳು ಮತ್ತು ಅವಕಾಶಗಳನ್ನು ಇನ್ನೂ ನಿರಾಕರಿಸಲಾಗುತ್ತಿರುವ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ (ಒಬಿಸಿ) ಜಾತಿ ಗುಂಪುಗಳ ವಾಸ್ತವವು ಜಾತಿ ಜನಗಣತಿಯ ಮೂಲಕ ಹೊರಬರುತ್ತದೆ. ಇದರಿಂದ ಆಳುವ ವರ್ಗಗಳ ದಿವಾಳಿಕೋರ ನೀತಿಗಳು ಮತ್ತು ಸಾಮಾಜಿಕ ನ್ಯಾಯವನ್ನು ಈಡೇರಿಸುವಲ್ಲಿ ಅವರ ವೈಫಲ್ಯ ಬಹಿರಂಗಕ್ಕೆ ಬರುತ್ತದೆ.
ಜನಗಣತಿಯನ್ನು ನಡೆಸದಿರುವ ಮೂಲಕ, ಸಂವಿಧಾನ ತಿದ್ದುಪಡಿಯಿಂದ ಒದಗಿಸಲಾದ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ದೂರ ಭವಿಷ್ಯಕ್ಕೆ ತಳ್ಳಲಾಗಿದೆ (ಕನಿಷ್ಠ ಪಕ್ಷ 2029ರಲ್ಲೂ ಇಲ್ಲ).
ವೈಜ್ಞಾನಿಕ ಆಧಾರದ ಮೇಲೆ ನಡೆಸಲಾದ ಅಂಕಿ-ಅಂಶಗಳ ಸಮೀಕ್ಷೆಗಳ ಬಗ್ಗೆ ಸರಕಾರ ಸಾಮಾನ್ಯವಾಗಿ ತಿರಸ್ಕಾರವನ್ನೇ ಹೊಂದಿರುವುದರಿಂದಾಗಿ ಅದು ಜನಗಣತಿಯನ್ನು ನಡೆಸಲು ಯಾವುದೇ ಒಲವು ತೋರಿಸುತ್ತಿಲ್ಲ. ವಿವಿಧ ಸಮೀಕ್ಷೆಗಳನ್ನು ನಿಗ್ರಹಿಸಲಾಗಿದೆ ಅಥವಾ ಸಮೀಕ್ಷೆಯನ್ನು ವಿರೂಪಗೊಳಿಸಲಿಕ್ಕಾಗಿ ಅವುಗಳ ಸಂಖ್ಯಾ ಶಾಸ್ತ್ರೀಯ ಪರಿಮಿತಿಗಳನ್ನು ಬದಲಾಯಿಸಲಾಗಿದೆ. ಜನಗಣತಿಯು ಬಿಜೆಪಿ ಮತ್ತು ಹಿಂದುತ್ವ ಶಕ್ತಿಗಳ ವೈಜ್ಞಾನಿಕ-ವಿರೋಧಿ ದೃಷ್ಟಿಕೋನಕ್ಕೆ ಬಲಿಯಾಗಿದೆ. ಜಾತಿ ಜನಗಣತಿಯಲ್ಲಿ ಸಂಗ್ರಹಿಸಲಾದ ದತ್ತಾಂಶವು ಜಾತಿ ವ್ಯವಸ್ಥೆಯಲ್ಲಿನ ಅಸಮಾನತೆಗಳನ್ನು ಬಹಿರಂಗಪಡಿಸುತ್ತದೆ ಮತ್ತು ಸಂಘಪರಿವಾರದ ಎಲ್ಲವನ್ನೂ ನುಂಗಿಹಾಕುವ ಧಾರ್ಮಿಕ ಗುರುತಿನ ದಾವೆ ಅದರಿಂದ ಠುಸ್ಸಾಗುತ್ತದೆ.
ವೈಜ್ಞಾನಿಕ ದತ್ತಾಂಶಗಳ ನೆಲೆಯಲ್ಲಿ ನೀತಿ ನಿರ್ಧಾರವಾಗಬೇಕು ಎಂದು ಖಚಿತಪಡಿಸಿಕೊಳ್ಳಲು ಮತ್ತು ಸಮಾಜದ ಎಲ್ಲಾ ದಮನಿತ ವರ್ಗಗಳಿಗೆ ನ್ಯಾಯವನ್ನು ಖಚಿತಪಡಿಸಿಕೊಳ್ಳಲು, ಹೆಚ್ಚು ಬಹು ವಿಳಂಬಿತ 2021 ರ ಜನಗಣತಿಯನ್ನು, ಜಾತಿ ಜನಗಣತಿಯ ಜೊತೆಗೆ ತಕ್ಷಣವೇ ನಡೆಸಬೇಕೆಂದು ಒತ್ತಾಯಿಸಲೇಬೇಕಾಗಿದೆ.
ಆದ್ದರಿಂದ ಒಕ್ಕೂಟ ಸರ್ಕಾರವು ತಕ್ಷಣವೇ ಸಾಮಾನ್ಯ ಜನಗಣತಿಯನ್ನು ನಡೆಸಬೇಕು ಮತ್ತು ಅದರೊಂದಿಗೆ ಜಾತಿ ಜನಗಣತಿಯನ್ನು ನಡೆಸಬೇಕೆಂದು ಮಹಾಧಿವೇಶನ ಒತ್ತಾಯಿಸಿದೆ. ಈ ಆಗ್ರಹವನ್ನು ಬೆಂಬಲಿಸಬೇಕು ಮತ್ತು ಒತ್ತಾಯಿಸಬೇಕು ಎಂದು ದೇಶದ ಎಲ್ಲಾ ಪ್ರಜಾಪ್ರಭುತ್ವವಾದಿ ವಿಭಾಗಗಳಿಗೆ ಮಹಾಧಿವೇಶನ ಮನವಿ ಮಾಡಿದೆ.