ತಮಿಳುನಾಡಿನ ಮದುರೈನಲ್ಲಿ ನಡೆಯುತ್ತಿರುವ ಸಿಪಿಐ(ಎಂ)ನ 24 ನೇ ಮಹಾಧಿವೇಶನದ ಪ್ರತಿನಿಧಿ ಅಧಿವೇಶನವು ಏಪ್ರಿಲ್ 2, 2025ರಂದು ಮಧ್ಯಾಹ್ನ ಪ್ರಾರಂಭವಾಯಿತು. 729 ಪ್ರತಿನಿಧಿಗಳು ಮತ್ತು 79 ವೀಕ್ಷಕರು ಮಹಾಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ. ಕೇಂದ್ರ ಸಮಿತಿಯ ಪರವಾಗಿ, ಪೊಲಿಟ್ ಬ್ಯೂರೋದ ಸಂಯೋಜಕರಾದ ಪ್ರಕಾಶ್ ಕಾರಟ್ ಅವರು ಏಪ್ರಿಲ್ 2, 2025ರಂದು ಮಧ್ಯಾಹ್ನದ ಅಧಿವೇಶನದಲ್ಲಿ 24ನೇ ಮಹಾಧಿವೇಶನದ ಕರಡು ರಾಜಕೀಯ ನಿರ್ಣಯ ಮತ್ತು ರಾಜಕೀಯ ವಿಮರ್ಶೆಯನ್ನು ಮಂಡಿಸಿದರು ಎಂದು ಎಪ್ರಿಲ್ 3ರಂದು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಮಹಾಧಿವೇಶನದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕರಡು ರಾಜಕೀಯ ನಿರ್ಣಯದ ಮುಖ್ಯ ಒತ್ತು ಹಿಂದುತ್ವ ಶಕ್ತಿಗಳ ಹೆಚ್ಚುತ್ತಿರುವ ಬೆದರಿಕೆಗೆ ಎದುರಾಗಿ ಹೋರಾಡುವ ಮಾರ್ಗಗಳ ಮೇಲೆ ಇದೆ. ಕಾರ್ಪೊರೇಟ್ ಗಳೊಂದಿಗೆ ನಂಟು ಹೊಂದಿರುವ ಕೋಮುವಾದಿ ಶಕ್ತಿಗಳು ತಮ್ಮ ವಿಭಜಕ ಸಿದ್ಧಾಂತವನ್ನು ಹರಡುತ್ತಿವೆ. ಬಿಜೆಪಿ ನೇತೃತ್ವದ ಸರ್ಕಾರವು ಕೇಂದ್ರದಲ್ಲಿ ಸತತ ಮೂರು ಅವಧಿಗೆ ಅಧಿಕಾರದಲ್ಲಿರುವುದರಿಂದ, ಆರ್‌ಎಸ್‌ಎಸ್ ಮತ್ತು ಸಂಘಪರಿವಾರವು ಪ್ರಭುತ್ವ ಅಧಿಕಾರ ಲಭ್ಯಗೊಂಡಿರುವುದನ್ನು ಪ್ರಭುತ್ವದ ಎಲ್ಲಾ ಅಂಗಗಳೊಳಗೆ ನುಸುಳಿ ಇಡೀ ಸಮಾಜವನ್ನು ಕೋಮುವಾದೀಕರಿಸಲು ಬಳಸುತ್ತಿದೆ. ಹಿಂದುತ್ವದ ಬೆದರಿಕೆಯನ್ನು ಸಮಗ್ರವಾಗಿ ಮುಖಾಮುಖಿಯಾಗಿ ಎದುರಿಸಲು, ಚುನಾವಣಾ ರಂಗದಲ್ಲಿ ಹೋರಾಡುವುದರ ಜೊತೆಗೆ ಆರ್ಥಿಕ, ಸಾಮಾಜಿಕ, ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿಯೂ ಹೋರಾಡಬೇಕು ಎಂದು ಕರಡು ನಿರ್ಣಯ ವಿಶ್ಲೇಷಿಸುತ್ತದೆ.
ಹಿಂದುತ್ವ ಶಕ್ತಿಗಳ ಎದುರಾಗಿ ಹೋರಾಡಲು, ಪಕ್ಷದ ಸ್ವತಂತ್ರ ಶಕ್ತಿಯನ್ನು ಕಟ್ಟುವುದು ಅತ್ಯಗತ್ಯ ಎಂದು ಕರಡು ನಿರ್ಣಯವು ಹೇಳುತ್ತದೆ. ಇದಕ್ಕಾಗಿ, ಪಕ್ಷವು ವರ್ಗ ಮತ್ತು ಸಾಮೂಹಿಕ ಹೋರಾಟಗಳನ್ನು ಬಲಪಡಿಸಬೇಕೆಂದು ಅದು ಕರೆ ನೀಡುತ್ತದೆ.
ಎಡ ಐಕ್ಯತೆಯನ್ನು ಬಲಪಡಿಸುವ ಮತ್ತು ಆರ್‌ಎಸ್‌ಎಸ್-ಬಿಜೆಪಿಯ ಹಿಂದುತ್ವ ಕೋಮುವಾದಿ ನೀತಿಗಳ ವಿರುದ್ಧದ ಹೋರಾಟಕ್ಕೆ ಸೇರಲು ಸಿದ್ಧವಾಗಿರುವ ಎಲ್ಲಾ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳನ್ನು, ಶಕ್ತಿಗಳನ್ನು ಅಣಿನೆರೆಸುವ ಅಗತ್ಯವನ್ನು ಕರಡು ನಿರ್ಣಯವು ಒತ್ತಿಹೇಳುತ್ತದೆ.
ಪಕ್ಷದ ಎಲ್ಲಾ ಹಂತಗಳಲ್ಲಿ ಚರ್ಚೆಗಾಗಿ ಮಹಾಧಿವೇಶನದ ಎರಡು ತಿಂಗಳ ಮೊದಲು ಬಿಡುಗಡೆಯಾದ ಕರಡು ರಾಜಕೀಯ ನಿರ್ಣಯದ ಮೇಲೆ ಬಂದ ತಿದ್ದುಪಡಿಗಳ ಕುರಿತ ವರದಿಯನ್ನು ಮಹಾಧಿವೇಶನದಲ್ಲಿ ಮಂಡಿಸಲಾಯಿತು. 3,424 ತಿದ್ದುಪಡಿಗಳು ಮತ್ತು 84 ಸಲಹೆಗಳು ಬಂದವು. ಇವುಗಳಲ್ಲಿ 133 ತಿದ್ದುಪಡಿಗಳನ್ನು ಅಂಗೀಕರಿಸಲಾಗಿದೆ ಎಂದು ಮಹಾಧಿವೇಶನಕ್ಕೆ ತಿಳಿಸಲಾಯಿತು.
ಕರಡು ರಾಜಕೀಯ ನಿರ್ಣಯದ ಕುರಿತು ಚರ್ಚೆ
ಕರಡು ನಿರ್ಣಯದ ಕುರಿತು ಚರ್ಚೆ ಮಹಾಧಿವೇಶನದ ಎರಡನೇ ದಿನ (ಏಪ್ರಿಲ್ 3, 2025) ಬೆಳಿಗ್ಗೆಯಿಂದ ಪ್ರಾರಂಭವಾಗಿದ್ದು, ಏಪ್ರಿಲ್ 4ರ ವರೆಗೆ ಮುಂದುವರಿಯಿತು. ಎಪ್ರಿಲ್ 3ರ ಪತ್ರಿಕಾ ಪ್ರಕಟಣೆಯನ್ನು ನೀಡುವ ವೇಳೆಗೆ ಚರ್ಚೆಯಲ್ಲಿ ಕೇರಳ, ಪಶ್ಚಿಮ ಬಂಗಾಳ, ತ್ರಿಪುರಾ, ತಮಿಳುನಾಡು, ಅಸ್ಸಾಂ, ಕರ್ನಾಟಕ, ಒಡಿಶಾ, ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಉತ್ತರಾಖಂಡ, ಆಂಧ್ರ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಹಿಮಾಚಲ ಪ್ರದೇಶದ 18 ಪ್ರತಿನಿಧಿಗಳು ಭಾಗವಹಿಸಿದ್ದರು. ಕರ್ನಾಟಕದಿಂದ ಕಾಂ. ಮೀನಾಕ್ಷಿಸುಂದರಂ ಚರ್ಚೆಯಲ್ಲಿ ಭಾಗವಹಿಸಿದರು.
ಎರಡುನಿರ್ಣಯಗಳು
ಪ್ರತಿನಿಧಿ ಅಧಿವೇಶನದಲ್ಲಿ, ಎರಡು ನಿರ್ಣಯಗಳನ್ನು ಮಂಡಿಸಲಾಯಿತು ಮತ್ತು ಅಂಗೀಕರಿಸಲಾಯಿತು.
ಕಾರ್ಮಿಕ ಸಂಹಿತೆಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಗಗಳು ಯೋಜಿಸಿರುವ ‘ಮೇ 20, 2025 ರ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿ‘ ಎಂದು ಮೊದಲ ನಿರ್ಣಯ ಕರೆನೀಡಿದೆ. ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕಾರ್ಮಿಕ ವರ್ಗದ ಐಕ್ಯ ಹೋರಾಟಕ್ಕೆ ಮಹಾಧಿವೇಶನ ತನ್ನ ಸಂಪೂರ್ಣ ಬೆಂಬಲವನ್ನು ನೀಡಿತು ಮತ್ತು ಸಾರ್ವತ್ರಿಕ ಮುಷ್ಕರವನ್ನು ಸಕ್ರಿಯವಾಗಿ ಬೆಂಬಲಿಸುವಂತೆ ತನ್ನ ಎಲ್ಲಾ ಘಟಕಗಳಿಗೆ ಕರೆ ನೀಡಿತು.
ಈ ನಿರ್ಣಯವನ್ನು ಕೇಂದ್ರ ಸಮಿತಿಯ ಸದಸ್ಯರಾದ ಕೆ. ಹೇಮಲತಾ ಮಂಡಿಸಿದರು ಮತ್ತು ಕೇಂದ್ರ ಸಮಿತಿಯ ಸದಸ್ಯರಾದ ಅಮಿಯಾ ಪಾತ್ರ ಅನುಮೋದಿಸಿದರು.
ಎರಡನೇ ನಿರ್ಣಯವು, ‘ಆರ್‌ಎಸ್‌ಎಸ್-ಬಿಜೆಪಿ ಮತ್ತು ಸಂಘಪರಿವಾರದ ದುಷ್ಟಕೋಮುವಾದಿ ದಾಳಿಗಳನ್ನು ಎದುರಿಸುವ ಕುರಿತಾದ್ದು. ಇದನ್ನು ಕೇಂದ್ರ ಸಮಿತಿಯ ಸದಸ್ಯರಾದ ಪಿ.ರಾಜೀವ್ ಮಂಡಿಸಿದರು ಮತ್ತು ಮಧು ಗರ್ಗ್ ಅವರು ಅನುಮೋದಿಸಿದರು.
ಮಹಾಧಿವೇಶನಕ್ಕೆ ಚೀನಾ, ವಿಯೆಟ್ನಾಂ. ಉತ್ತರ ಕೊರಿಯ, ಲಾವೊಸ್, ರಷ್ಯ, ಕ್ಯೂಬಾ, ಆಸ್ಟ್ರೇಲಿಯ, ಬಾಂಗ್ಲಾದೇಶ(2), ಬೆಲ್ಜಿಯಂ, ಬ್ರೆಝಿಲ್, ಬರ್ಮಾ, ಕ್ಯಾಟಲೊನಿಯ, ಚೆಕೊಸ್ಲೊವಾಕಿಯಾ, ಚಿಲಿ, ಸೈಪ್ರಸ್, ಫ್ರಾನ್ಸ್, ಗ್ಯಾಲಿಷಿಯಾ, ಜರ್ಮನಿ(2), ಗ್ರೀಸ್, ಇರಾನ್, ಐರ್ಲೆಂಡ್, ಇಟಲಿ, ಜಪಾನ್, ಕೀನ್ಯ, ನೇಪಾಳ, ಪಾಕಿಸ್ತಾನ(2) ಪ್ಯಾಲಸ್ತೀನ್, ಪೊರ್ಚುಗಲ್, ಶ್ರೀಲಂಕ(2), ದಕ್ಷಿಣ ಆಪ್ರಿಕ, ತುರ್ಕಿಯೆ, ಯುಎಸ್‍ಎ ಮತ್ತು ವೆನೆಜುವೆಲದ ಒಟ್ಟು 38 ಕಮ್ಯುನಿಸ್ಟ್ ಮತ್ತು ಕಾರ್ಮಿಕ ಪಕ್ಷಗಳಿಂದ ಶುಭಾಶಯ ಸಂದೇಶಗಳು ಬಂದಿವೆ ಎಂದು ಈ ಪತ್ರಿಕಾ ಹೇಳಿಕೆ ತಿಳಿಸಿದೆ.