24ನೇ ಮಹಾಧಿವೇಶನದ ಕರಡು ರಾಜಕೀಯ ನಿರ್ಣಯವನ್ನು 04.04.2025 ರಂದು ಸಂಜೆ ಅಧಿವೇಶನದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಏಪ್ರಿಲ್ 3ರಂದು ಪ್ರಾರಂಭವಾಗಿ ಎಪ್ರಿಲ್ 4ರ ಮಧ್ಯಾಹ್ನ ಮುಕ್ತಾಯಗೊಂಡ ರಾಜಕೀಯ ನಿರ್ಣಯದ ಮೇಲಿನ ಚರ್ಚೆಗಳಲ್ಲಿ 53 ಪ್ರತಿನಿಧಿಗಳು ಭಾಗವಹಿಸಿದ್ದರು. ಪೊಲಿಟ್ ಬ್ಯೂರೋದ ಸಂಯೋಜಕರಾದ ಪ್ರಕಾಶ್ ಕಾರಟ್ ಅವರು ಚರ್ಚೆಗಳಿಗೆ ಮತ್ತು ಪ್ರತಿನಿಧಿಗಳು ಮಂಡಿಸಿದ ತಿದ್ದುಪಡಿಗಳಿಗೆ ಉತ್ತರಿಸಿದರು. ಪ್ರತಿನಿಧಿಗಳಿಂದ 174 ತಿದ್ದುಪಡಿಗಳನ್ನು ಸ್ವೀಕರಿಸಲಾಯಿತು.
ಎಪ್ರಿಲ್ 4ರ ಸಂಜೆ ಅಧಿವೇಶನದಲ್ಲಿ ಪೊಲಿಟ್ ಬ್ಯೂರೋ ಸದಸ್ಯರಾದ ಬಿ.ವಿ.ರಾಘವುಲು ಕರಡು ಸಂಘಟನಾ ವರದಿಯನ್ನು ಮಂಡಿಸಿದರು.
ಈ ಕರಡು ವರದಿಯ ಮುಖ್ಯಾಂಶಗಳು ಹೀಗಿವೆ :
- ಕಾರ್ಮಿಕ ವರ್ಗದ ಹಕ್ಕುಗಳ ಮೇಲಿನ ದಾಳಿಯ ವಿರುದ್ಧ ಕೇಂದ್ರ ಕಾರ್ಮಿಕ ಸಂಘಗಳು ನಡೆಸಿದ ಹೋರಾಟಗಳನ್ನು ಮತ್ತು ರೈತರ ಸಮಸ್ಯೆಗಳ ಕುರಿತು ಎಸ್‌ಕೆಎಂ ನೇತೃತ್ವದ ಹೋರಾಟಗಳನ್ನು ಪಕ್ಷವು ಸಕ್ರಿಯವಾಗಿ ಬೆಂಬಲಿಸಿತು. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ, ರಾಜಸ್ಥಾನ ಮತ್ತು ಇತರ ರಾಜ್ಯಗಳಲ್ಲಿ ಭೂಮಿ, ಮನೆ ನಿವೇಶನಗಳು ಮತ್ತು ಜೀವನೋಪಾಯಕ್ಕಾಗಿ ಮೂಲ ವರ್ಗಗಳ ಪ್ರಶ್ನೆಗಳ ಮೇಲೆ ಪಕ್ಷ ಕೆಲವು ಪ್ರಮುಖ ಹೋರಾಟಗಳನ್ನು ಮುನ್ನಡೆಸಿತು.
- ಕೇರಳದಲ್ಲಿ, ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಬೃಹತ್ ಅಭಿಯಾನಗಳನ್ನು ನಡೆಸಲಾಯಿತು. ಪಶ್ಚಿಮ ಬಂಗಾಳದಲ್ಲಿ, ಯುವಕರು ನಿರುದ್ಯೋಗದ ವಿರುದ್ಧ ವ್ಯಾಪಕ ಅಭಿಯಾನವನ್ನು ನಡೆಸಿದರು. ತ್ರಿಪುರಾದಲ್ಲಿ, ಬಿಜೆಪಿ ದಾಳಿಗಳು ಮತ್ತು ಅದರ ಜನವಿರೋಧಿ ನೀತಿಗಳ ವಿರುದ್ಧ ಅಭಿಯಾನಗಳನ್ನು ನಡೆಸಲಾಯಿತು.
- ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧದ ಪ್ರತಿಭಟನೆಗಳಲ್ಲಿ ಪಕ್ಷವು ಸಕ್ರಿಯ ಪಾತ್ರ ವಹಿಸಿದೆ.
- ಪಕ್ಷದ ಸದಸ್ಯತ್ವವು ಕಳೆದ ಮಹಾಧಿವೇಶನದ 9,85,757 (2021) ರಿಂದ 10,19,009(2024) ಆಗಿದೆ.
- ಪಕ್ಷದಲ್ಲಿ ಮಹಿಳಾ ಸದಸ್ಯರ ಶೇಕಡಾವಾರು ಪ್ರಮಾಣವು 2024 ರಲ್ಲಿ ಶೇಕಡಾ 18.2 ರಿಂದ 20.2 ಕ್ಕೆ ಏರಿದೆ.
- ಪಕ್ಷದಲ್ಲಿ ಯುವಕರ ಶೇಕಡಾವಾರು ಪ್ರಮಾಣವು 2021 ರಲ್ಲಿ ಶೇಕಡಾ 19.5 ರಿಂದ 2024ರಲ್ಲಿ ಶೇಕಡಾ 22.6ಕ್ಕೆ ಏರಿದೆ.
- ಪಕ್ಷವು ಆರೋಗ್ಯಕರ ವರ್ಗ ಸಂಯೋಜನೆಯನ್ನು ಹೊಂದಿದೆ – ಶೇಕಡಾ 48.25 ರಷ್ಟು ಕಾರ್ಮಿಕ ವರ್ಗಕ್ಕೆ ಸೇರಿದವರು, ಶೇಕಡಾ 17.79 ರಷ್ಟು ಕೃಷಿ ಕಾರ್ಮಿಕರು ಮತ್ತು ಶೇಕಡಾ 9.93 ರಷ್ಟು ಬಡ ರೈತರು. ಹೀಗೆ, ಶೇಕಡಾ 75.97 ರಷ್ಟು ಸದಸ್ಯರು ಮೂಲ ವರ್ಗಗಳಿಂದ ಬಂದವರು.
- ಕಳೆದ ಮಹಾಧೀವೇಶನದಿಂದ
ಸಾಮೂಹಿಕ ಸಂಘಟನೆಗಳ ಸದಸ್ಯತ್ವ 64 ಲಕ್ಷ ಹೆಚ್ಚಾಗಿದೆ.
ರಾಜಕೀಯ ನಿರ್ಣಯದಲ್ಲಿ ಅಂಗೀಕರಿಸಿದ ಕಾರ್ಯಭಾರಗಳ ಅನುಷ್ಠಾನಕ್ಕೆ ತೆಗೆದುಕೊಳ್ಳಬೇಕಾದ ಸಂಘಟನಾ ಕ್ರಮಗಳ ಬಗ್ಗೆಯೂ ಕರಡು ವರದಿಯು ಹೇಳುತ್ತದೆ. ಎಪ್ರಿಲ್ 5ರಂದು ಈ ಪತ್ರಿಕಾ ಹೇಳಿಕೆ ಬಿಡುಗಡೆಯಾಗುವ ವೇಳೆಗೆ 18 ಪ್ರತಿನಿಧಿಗಳು ಕರಡು ಸಂಘಟನಾ ವರದಿಯ ಮೇಲಿನ ಚರ್ಚೆಗಳಲ್ಲಿ ಭಾಗವಹಿಸಿದ್ದರು. ಕರ್ನಾಟಕದಿಂದ ಕಾಂ.ಕೆ.ಪ್ರಕಾಶ್ ಚರ್ಚೆಯಲ್ಲಿ ಭಾಗವಹಿಸಿದರು
ನಿರ್ಣಯಗಳು
ಈ ಅಧಿವೇಶನದಲ್ಲಿ 13 ನಿರ್ಣಯಗಳನ್ನು ಅಂಗೀಕರಿಸಲಾಯಿತು. ಅವುಗಳು:
- “ವಿಭಜನಕಾರಿ ಮತ್ತು ಅನ್ಯಾಯದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುವುದು” ಇದನ್ನು ಕೇಂದ್ರ ಸಮಿತಿಯ ಸದಸ್ಯ ಎಳಮಾರಂ ಕರೀಮ್ ಮಂಡಿಸಿದರು ಮತ್ತು ಕೇಂದ್ರ ಸಮಿತಿಯ ಸದಸ್ಯ ಅಂಜು ಕರ್ ಅನುಮೋದಿಸಿದರು.
- “ಜಮ್ಮು ಮತ್ತು ಕಾಶ್ಮೀರದ ತ್ವರಿತ ಅಭಿವೃದ್ಧಿಯನ್ನು ಖಚಿತಪಡಿಸಲು ಅದಕ್ಕೆ ಪೂರ್ಣ ರಾಜ್ಯದ ದರ್ಜೆಯನ್ನು ಮತ್ತು ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಬೇಕು” ಈ ನಿರ್ಣಯವನ್ನು ಕೇಂದ್ರ ಸಮಿತಿಯ ಸದಸ್ಯ ಯೂಸುಫ್ ತಾರಿಗಾಮಿ ಮಂಡಿಸಿದರು ಮತ್ತು ಕೇಂದ್ರ ಸಮಿತಿಯ ಸದಸ್ಯ ಉದಯ್ ನಾರ್ಕರ್ ಅನುಮೋದಿಸಿದರು.
- “ಕ್ಯೂಬಾದೊಂದಿಗೆ ಸೌಹಾರ್ದ ಮತ್ತು ಯುಎಸ್ ವಿಧಿಸಿರುವ ಅಮಾನವೀಯ ಆರ್ಥಿಕ ದಿಗ್ಬಂಧನವನ್ನು ಖಂಡಿಸುವುದು” ಇದನ್ನು ಅರುಣ್ ಕುಮಾರ್ ಮಂಡಿಸಿದರು ಮತ್ತು ಮಯೂಖ್ ಬಿಸ್ವಾಸ್ ಅನುಮೋದಿಸಿದರು.
- “ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ನೀತಿ ಚೌಕಟ್ಟನ್ನು ಹಿಂತೆಗೆದುಕೊಳ್ಳಬೇಕು” ಇದನ್ನು ಕೃಷ್ಣ ಪ್ರಸಾದ್ ಮಂಡಿಸಿದರು ಮತ್ತು ಕೇಂದ್ರ ಸಮಿತಿಯ ಸದಸ್ಯ ಕರುಮಲೈಯನ್ ಅನುಮೋದಿಸಿದರು.
- “ಮೂಲಭೂತ ಅಗತ್ಯಗಳನ್ನು ಮೂಲಭೂತ ಹಕ್ಕುಗಳೆಂದು ಮಾನ್ಯಮಾಡಬೇಕು” ಇದನ್ನು ಪೊಲಿಟ್ ಬ್ಯೂರೋ ಸದಸ್ಯ ಬಿ.ವಿ. ರಾಘವುಲು ಮಂಡಿಸಿದರು ಮತ್ತು ಕೇಂದ್ರ ಸಮಿತಿಯ ಸದಸ್ಯ ಎ.ಆರ್. ಸಿಂಧು ಅನುಮೋದಿಸಿದರು.
- ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲಾತಿಯನ್ನು ಖಾಸಗಿ ವಲಯಕ್ಕೂ ವಿಸ್ತರಿಸಬೇಕೆಂದು ಒತ್ತಾಯಿಸುವುದು.-ಇದನ್ನು ಪೊಲಿಟ್ ಬ್ಯೂರೋ ಸದಸ್ಯ ರಾಮಚಂದ್ರ ಡೋಮ್ ಮಂಡಿಸಿದರು ಮತ್ತು ಕೇಂದ್ರ ಸಮಿತಿಯ ಸದಸ್ಯ ಇಷ್ಫಾಖುರ್ ರೆಹಮಾನ್ ಅನುಮೋದಿಸಿದರು.
- ಸಾರ್ವಜನಿಕ ವಿದ್ಯುತ್ ಕ್ಷೇತ್ರದ ಮೇಲಿನ ಖಾಸಗೀಕರಣದ ದಾಳಿಯನ್ನು ವಿರೋಧಿಸಿ–ಇದನ್ನು ಸುದೀಪ್ ದತ್ತ ಮಂಡಿಸಿದರು ಮತ್ತು ಪ್ರಮೋದ್ ಪ್ರಧಾನ್ ಅನುಮೋದಿಸಿದರು.
- ಆಳ ಸಮುದ್ರ ಗಣಿಗಾರಿಕೆಯ ವಿರುದ್ಧ.-ಇದನ್ನು ಕೇಂದ್ರ ಸಮಿತಿಯ ಸದಸ್ಯ ಥಾಮಸ್ ಐಸಾಕ್ ಪರಿಚಯಿಸಿದರು ಮತ್ತು ಕೇಂದ್ರ ಸಮಿತಿಯ ಸದಸ್ಯ ಅಲಿ ಕಿಶೋರ್ ಪಟ್ನಾಯಕ್ ಅನುಮೋದಿಸಿದರು.
- ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಹಿಂಸಾಚಾರದ ವಿರುದ್ಧ.-ಇದನ್ನು ಕೇಂದ್ರ ಸಮಿತಿಯ ಸದಸ್ಯೆ ಮರಿಯಮ್ ಧವಳೆಮಂಡಿಸಿದರುಮತ್ತು ಕೇಂದ್ರ ಸಮಿತಿಯ ಸದಸ್ಯ ಸುರೇಂದರ್ ಮಲ್ಲಿಕ್ ಅನುಮೋದಿಸಿದರು.
- ಯುವಕರಲ್ಲಿ ಮಾದಕ ದ್ರವ್ಯಗಳವ್ಯಸನವನ್ನು ಎದುರಿಸಬೇಕು-ಇದನ್ನು ಕೇಂದ್ರ ಸಮಿತಿಯ ಸದಸ್ಯ ಸುಖ್ವಿಂದರ್ ಸಿಂಗ್ ಶೇಖೋನ್ ಮಂಡಿಸಿದರು ಮತ್ತು ಕೇಂದ್ರ ಸಮಿತಿಯ ಸದಸ್ಯ ಅರುಣ್ ಮೆಹ್ತಾ ಅನುಮೋದಿಸಿದರು.
- LGBTQ+ ವ್ಯಕ್ತಿಗಳಿಗೆ ಸಮಾನ ಹಕ್ಕುಗಳು ಮತ್ತು ಘನತೆಯನ್ನು ಖಚಿತಪಡಿಸಬೇಕು-. ಇದನ್ನು ಕೇಂದ್ರ ಸಮಿತಿಯ ಸದಸ್ಯರಾದ ಯು ವಾಸುಕಿ ಮಂಡಿಸಿದರು ಮತ್ತು ಕೆ ನೀಲಾ ಅನುಮೋದಿಸಿದರು.
- ಅಂಗವಿಕಲರಿಗೆ ಘನತೆ ಮತ್ತು ನ್ಯಾಯವನ್ನು ಖಚಿತಪಡಿಸಬೇಕು. – ಇದನ್ನು ಝಾನ್ಸಿ ರಾಣಿ ಮಂಡಿಸಿದರು ಮತ್ತು ಸಾಮ್ಯಾ ಗಂಗೂಲಿ ಅನುಮೋದಿಸಿದರು.
- UGC ಕರಡು ನಿಯಮಗಳನ್ನು ವಿರೋಧಿಸಬೇಕು– ಇದನ್ನು ರಾಜೀವ್ ಕುನ್ವರ್ ಮಂಡಿಸಿದರು ಮತ್ತು ವಿ.ಪಿ. ಸಾನು ಅನುಮೋದಿಸಿದರು.