ಮೋದಿ ನೇತೃತ್ವದ ಬಿಜೆಪಿ-ಎನ್‌ಡಿಎ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನವನ್ನು ವಿರೋಧಿಸಿ, ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ಅಖಿಲ ಭಾರತ ವಲಯವಾರು ಒಕ್ಕೂಟಗಳ ಜಂಟಿ ವೇದಿಕೆ ಕರೆ ನೀಡಿರುವ ಮೇ 20, 2025ರ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಸಿಪಿಐ(ಎಂ)ನ 24 ನೇ ಮಹಾಧಿವೇಶನ ತನ್ನ ಸಂಪೂರ್ಣ ಮತ್ತು ಸಕ್ರಿಯ ಬೆಂಬಲವನ್ನು ನೀಡಲು ನಿರ್ಧರಿಸಿದೆ. ಈ ಕುರಿತು ಮಹಾಧಿವೇಶನದ ಮೊದಲ ದಿನಂದಂದು ಒಂದು ನಿರ್ಣಯವನ್ನು ಅದು ಅಂಗೀಕರಿಸಿತು.
‘ಕಾರ್ಮಿಕ ಕಾನೂನು ಸುಧಾರಣೆಗಳು’ ಎಂದು ಹೇಳಿಕೊಂಡು ಅಸ್ತಿತ್ವದಲ್ಲಿರುವ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಅವನ್ನು ನಾಲ್ಕು ಕಾರ್ಮಿಕ ಸಂಹಿತೆಗಳು ಒಳಗೊಂಡಿರುತ್ತವೆ ಎಂದು ಹೇಳಲಾಗಿದೆ. ಇದು ಮೋದಿ ಸರ್ಕಾರವು ಆಕ್ರಮಣಕಾರಿಯಾಗಿ ಅನುಸರಿಸುತ್ತಿರುವ ನವ ಉದಾರವಾದಿ ಕಾರ್ಯಸೂಚಿಯ ಒಂದು ಭಾಗವಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಮಹಾಧಿವೇಶನ, ಇವುಗಳನ್ನು ಕಾರ್ಮಿಕ ವರ್ಗ ಶ್ರಮಪಟ್ಟು ಗೆದ್ದುಕೊಂಡಿರುವ ಕೆಲಸದ ಅವಧಿ, ಕನಿಷ್ಠ ವೇತನ, ಸಾಮಾಜಿಕ ಭದ್ರತೆಗೆ ಸಂಬಂದಪಟ್ಟು ಮೂಲಭೂತ ಹಕ್ಕುಗಳನ್ನು, ಮುಖ್ಯವಾಗಿ ಕಾರ್ಮಿಕರ ಸಂಘಟನೆಯ ಹಕ್ಕು ಮತ್ತು ಮುಷ್ಕರ ಮಾಡುವ ಹಕ್ಕು ಸೇರಿದಂತೆ ಸಾಮೂಹಿಕ ಕಾರ್ಯಾಚರಣೆಯ ಹಕ್ಕನ್ನು ತೀವ್ರವಾಗಿ ಮೊಟಕುಗೊಳಿಸುವುದಕ್ಕಾಗಿಯೇ ತರಲಾಗುತ್ತಿದೆ ಎಂದು ಹೇಳಿದೆ.
ಕಾರ್ಮಿಕ ಕಾನೂನುಗಳನ್ನು ಸರಳೀಕರಿಸಲು ಮತ್ತು ಅವುಗಳ ವ್ಯಾಪ್ತಿಯನ್ನು ಸಾರ್ವತ್ರಿಕಗೊಳಿಸಲು ಇವನ್ನು ತರಲಾಗುತ್ತಿದೆ ಎಂಬ ಮೋದಿ ಸರ್ಕಾರದ ದಾವೆಗಳಿಗೆ ತದ್ವಿರುದ್ಧವಾಗಿ, ವಾಸ್ತವವಾಗಿ ಈ ಕಾರ್ಮಿಕ ಸಂಹಿತೆಗಳು ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ರಕ್ಷಣಾ ಕ್ರಮಗಳನ್ನು ಹೊಂದಿರುವ ಸಂಘಟಿತ ವಲಯದಲ್ಲಿರುವ ಕಾರ್ಮಿಕರೂ ಸೇರಿದಂತೆ ಕಾರ್ಮಿಕರ ಬಹುದೊಡ್ಡ ವಿಭಾಗಗಳನ್ನು ಇಂತಹ ರಕ್ಷಣಾ ಕ್ರಮಗಳಿಂದ ಹೊರಗಿಡಲಾಗುತ್ತಿದೆ. ಸಾಮಾಜಿಕ ಭದ್ರತಾ ಸಂಹಿತೆಯು ನೌಕರರ ಭವಿಷ್ಯ ನಿಧಿ(ಇಪಿಎಫ್) ಮತ್ತು ಇಎಸ್‍ಐ ನಂತಹ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಕೈಯಾಡಿಸಲು, ಅವನ್ನು ದುರ್ಬಲಗೊಳಿಸಲು ಮತ್ತು ಸಂಬಂಧಿತ ಕಾಯ್ದೆಗಳಿಗೆ ಯಾವುದೇ ಸಂಸತ್ತಿನ ತಿದ್ದುಪಡಿಯ ಅಗತ್ಯವಿಲ್ಲದೆಯೇ ಮಾಲಿಕರು ಈ ಯೋಜನೆಗಳಿಂದ ಹೊರಬರಲು ಅವಕಾಶ ನೀಡುತ್ತದೆ. ದಲಿತರು, ಆದಿವಾಸಿಗಳು ಮತ್ತು ಒಬಿಸಿ ಕಾರ್ಮಿಕರೇ ಹೆಚ್ಚಾಗಿ ದುಡಿಯುತ್ತಿರುವ ಬೀಡಿ, ಕಬ್ಬಿಣದ ಅದಿರು, ಮೈಕಾ, ಸುಣ್ಣದಕಲ್ಲು, ಡಾಲಮೈಟ್ ಗಣಿಗಳಂತಹ ಕೈಗಾರಿಕೆಗಳಲ್ಲಿ ಲಕ್ಷಾಂತರ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಆಯಾಯ ವಲಯಗಳ ನಿರ್ದಿಷ್ಟ ಕಾಯ್ದೆಗಳಿವೆ. ಈಗ ಸರ್ಕಾರವು ಅವುಗಳಿಗೆ ಸಂಬಂಧಪಟ್ಟ ಉಪಕರ(ಸೆಸ್)ಗಳ ಸಂಗ್ರಹಕ್ಕಾಗಿ ಸಂಬಂಧಿಸಿದ ಎಲ್ಲಾ ನಿಬಂಧನೆಗಳನ್ನು ರದ್ದುಗೊಳಿಸಿರುವುದರಿಂದ ಈ ಭದ್ರತಾ ಕ್ರಮಗಳೆಲ್ಲ ಈಗ ಅನಿಶ್ಚಿತತೆಗೆ ಸಿಲುಕುತ್ತವೆ.
ಇದಲ್ಲದೆ, ಮೋದಿ ಸರ್ಕಾರವು ಯುಎಪಿಎ, ಪಿಎಂಎಲ್‍ಎ ಮತ್ತು ಬಿಎನ್‍ಎಸ್ ನಂತಹ ಕಾಯಿದೆಗಳ ಅಡಿಯಲ್ಲಿನ ನಿಬಂಧನೆಗಳನ್ನು ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ನಿಗ್ರಹಿಸಲು ಬಳಸುತ್ತಿದೆ. ದೂರು ದಾಖಲಿಸುವುದು ಅಥವಾ ಕಾರ್ಮಿಕ ಇಲಾಖೆಗೆ ಪ್ರಾತಿನಿಧಿಕ ಮನವಿಗಳನ್ನು ನೀಡುವಂತಹ ಸಾಮೂಹಿಕ ಕಾರ್ಯಾಚರಣೆಗಳನ್ನು ಬಿಎನ್‍ಎಸ್ ನ ಸೆಕ್ಷನ್ 111 ರ ಅಡಿಯಲ್ಲಿ ‘ಸಂಘಟಿತ ಅಪರಾಧ’ ಎಂದು ವ್ಯಾಖ್ಯಾನಿಸಲಾಗುತ್ತದೆ ಮತ್ತು ಕಾರ್ಮಿಕ ಸಂಘಗಳ ನಾಯಕರನ್ನು ಜಾಮೀನು ಇಲ್ಲದೆ ಜೈಲಿಗೆ ಹಾಕಲಾಗುತ್ತದೆ. ಅದೇ ಸಮಯದಲ್ಲಿ, ಜನ ವಿಶ್ವಾಸ್ ಕಾಯ್ದೆಯ ಮೂಲಕ, ಸರ್ಕಾರವು 41 ಶಾಸನಗಳ ಅಡಿಯಲ್ಲಿ 180 ಅಪರಾಧಗಳನ್ನು ನಿರಪರಾಧೀಕರಣ(ಡಿಕ್ರಿಮಿನಲೈಸ್)ಗೊಳಿಸಿದೆ, ಉಲ್ಲಂಘನೆಗಳಿಗೆ ಮಾಲಿಕರಿಗೆ ವಿಧಿಸುವ ಜೈಲು ಶಿಕ್ಷೆಯ ನಿಬಂಧನೆಯನ್ನು ಹಿಂತೆಗೆದುಕೊಂಡಿದೆ ಮತ್ತುಅವರಿಗೆ ಶಿಕ್ಷೆಯನ್ನು ದಂಡಕ್ಕೆ ಸೀಮಿತಗೊಳಿಸಿದೆ. ಕಳೆದ ಕೇಂದ್ರ ಬಜೆಟ್‌ನಲ್ಲಿ 100ಕ್ಕೂ ಹೆಚ್ಚು ನಿಬಂಧನೆಗಳನ್ನು ಇನ್ನು ಮುಂದೆ ಅಪರಾಧಗಳಾಗಿ ಪರಿಗಣಿಸುವುದಿಲ್ಲ ಎಂದು ಸೂಚಿಸಿದೆ.
‘ಸುಗಮ ವ್ಯಾಪಾರ’ದ ಹೆಸರಿನಲ್ಲಿ ಜಾರಿಗೆ ತರಲಾಗುತ್ತಿರುವ ಕಾರ್ಮಿಕ ಸಂಹಿತೆಗಳು ಮತ್ತು ಇತರ ಎಲ್ಲಾ ಕ್ರಮಗಳು ಕಾರ್ಮಿಕ ವರ್ಗದ ಸಂಘಟಿತ ಶಕ್ತಿಯಾದ ಕಾರ್ಮಿಕ ಸಂಘಗಳನ್ನು ದುರ್ಬಲಗೊಳಿಸುವ ಮತ್ತು ಕಾರ್ಮಿಕರ ಮೇಲೆ ವಾಸ್ತವವಾಗಿ ಗುಲಾಮಗಿರಿಯ ಪರಿಸ್ಥಿತಿಗಳನ್ನೇ ಹೇರುವ ಮೂಲಕ ದೇಶೀ ಮತ್ತು ವಿದೇಶಿ ದೊಡ್ಡ ಕಾರ್ಪೊರೇಟ್‌ಗಳಿಂದ ಲಂಗುಲಗಾಮಿಲ್ಲದ ಶೋಷಣೆಗೆ ಅನುವು ಮಾಡಿಕೊಡುವ ಪ್ರಯತ್ನಗಳಲ್ಲದೆ ಬೇರೇನೂ ಅಲ್ಲಎಂದು ಸಿಪಿಐ(ಎಂ) ಮಹಾಧಿವೇಶನ ಹೇಳಿದೆ.
ನವ ಉದಾರವಾದ ಆರಂಭವಾದಂದಿನಿಂದಲೂ ಬಂಡವಾಳಶಾಹಿ ವರ್ಗದ ಪರವಾಗಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವ ಪ್ರಯತ್ನಗಳು ತೀವ್ರಗೊಂಡಿವೆ. 2019ರಲ್ಲಿಅಧಿಕಾರಕ್ಕೆ ಮರಳಿದ ಕೂಡಲೇ ಮೋದಿ ಸರ್ಕಾರವು ಕಾನೂನುಗಳನ್ನು ಸಂಹಿತೆಗಳಾಗಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಮತ್ತು 2019-20 ರಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಅಂಗೀಕರಿಸಿದೆ. ಆದರೆ ಇಲ್ಲಿಯವರೆಗೆ ಅದಕ್ಕೆ ಈ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ, ಇದಕ್ಕೆ ಪ್ರಮುಖ ಕಾರಣವೆಂದರೆ ಕಾರ್ಮಿಕ ವರ್ಗದ ಐಕ್ಯ ಚಳುವಳಿಯ ತೀವ್ರ ಪ್ರತಿರೋಧ.
ಈ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸುವ ಕಾರ್ಮಿಕ ವರ್ಗದ ಐಕ್ಯ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ನಿರ್ಧರಿಸಿರುವ ಸಿಪಿಐ(ಎಂ)ನ 24ನೇ ಮಹಾಧಿವೇಶನವು, ಮೇ 20, 2025ರಂದು ನಡೆಯಲಿರುವ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರವನ್ನು ಸಕ್ರಿಯವಾಗಿ ಬೆಂಬಲಿಸುವಂತೆ ತನ್ನ ಎಲ್ಲಾ ಸಮಿತಿಗಳು ಮತ್ತು ಶಾಖೆಗಳಿಗೆ ಕರೆ ನೀಡಿದೆ.