ಕೇರಳದ ಎಡ ಪ್ರಜಾಸತ್ತಾತ್ಮಕ ರಂಗ ಸರ್ಕಾರವನ್ನು ರಕ್ಷಿಸಲು ಶಕ್ತಿಶಾಲಿಯಾಗಿ ಅಣಿನೆರೆಯಬೇಕು

ಹಿಂದುತ್ವ ಸಿದ್ಧಾಂತವನ್ನು ವಿರೋಧಿಸುವುದು ಮತ್ತು ಜಾತ್ಯತೀತತೆಯನ್ನು ಎತ್ತಿಹಿಡಿಯುವುದು ಹಾಗೂ ಅದೇ ಸಮಯದಲ್ಲಿ ಕೇಂದ್ರ ಸರ್ಕಾರದ ನವ ಉದಾರವಾದಿ ನೀತಿಗಳಿಗೆ ಪರ್ಯಾಯವನ್ನು ಒದಗಿಸುವುದು ಎಡ ಪ್ರಜಾಪ್ರಭುತ್ವವಾದಿ ರಂಗ (ಎಲ್‌ಡಿಎಫ್) ನೇತೃತ್ವದ ಕೇರಳ ರಾಜ್ಯ ಸರ್ಕಾರದ ವಿಶಿಷ್ಟ ಲಕ್ಷಣ ಎಂದು ಪುನರುಚ್ಚರಿಸುತ್ತ, ಸಿಪಿಐ(ಎಂ)ನ 24ನೇ ಮಹಾಧಿವೇಶನವು, ಕೇಂದ್ರದಲ್ಲಿರುವ ಬಿಜೆಪಿ-ಎನ್‌ಡಿಎ ಸರ್ಕಾರವು ರಾಜ್ಯದ ವಿರುದ್ಧ ವಾಸ್ತವಿಕವಾಗಿ ಆರ್ಥಿಕ ದಿಗ್ಬಂಧನವನ್ನೇ ವಿಧಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಹೇಳಿದೆ. ದುರದೃಷ್ಟವಶಾತ್, ಕಾಂಗ್ರೆಸ್ ವಿರೋಧವೂ ಈ ಅಸ್ಥಿರಗೊಳಿಸುವ ಕಸರತ್ತುಗಳಲ್ಲಿ ಸೇರಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೇರಳದ ಎಲ್‌ಡಿಎಫ್ ಸರ್ಕಾರವನ್ನು ರಕ್ಷಿಸಲು ಅಣಿನೆರೆಯಬೇಕು ಎಂದು ಎಲ್ಲಾ ಪ್ರಜಾಪ್ರಭುತ್ವವಾದಿ ವಿಭಾಗಗಳಿಗೆ ಮನವಿ ಮಾಡುವ ಒಂದು ನಿರ್ಣಯವನ್ನು ಎಪ್ರಿಲ್ 3ರಂದು ಮಹಾಧಿವೇಶನವು ಅಂಗೀಕರಿಸಿದೆ.

ಕೇರಳದಲ್ಲಿ ಅಧಿಕಾರಕ್ಕೆ ಬಂದ ಎಡ ಸರ್ಕಾರಗಳು ಸತತವಾಗಿ ಅನುಸರಿಸುತ್ತ ಬಂದಿರುವ ಪರ್ಯಾಯ ಅಭಿವೃದ್ಧಿ ನೀತಿಗಳು ಎಲ್ಲರನ್ನು ಒಳಗೊಳ್ಳುವ ಅಭಿವೃದ್ಧಿಗೆ ಪುನರ್ವಿತರಣೆಯ ಕಾರ್ಯತಂತ್ರದ ಮೇಲೆ ಗಮನ ಕೇಂದ್ರೀಕರಿಸಿವೆ. ಭೂ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಕಾರ್ಮಿಕ ಸಂಘಗಳು ಮತ್ತು ಕನಿಷ್ಠ ವೇತನ ಕಾನೂನುಗಳು ಅತ್ಯಧಿಕ ವೇತನವನ್ನು ಖಚಿತಪಡಿಸಿವೆ. ಸರ್ಕಾರದ ನೀತಿಗಳು ಸಾರ್ವತ್ರಿಕ ಶಿಕ್ಷಣ, ಆರೋಗ್ಯಪಾಲನೆ ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಿವೆ. 2025-26ರಲ್ಲಿ ಸಂಪೂರ್ಣ ಬಡತನವನ್ನು ನಿರ್ಮೂಲನೆ ಮಾಡಲಾಗುವುದು. ಕೇರಳವು ತನ್ನ ಸಾಮಾನ್ಯ ನಾಗರಿಕರಿಗೆ ಘನತೆಯ ಮತ್ತು ಉತ್ತಮ ಜೀವನವನ್ನು ಖಚಿತಪಡಿಸಿದೆ.

ಕೇರಳವು ಸಾಮಾಜಿಕ ಮತ್ತು ಕಲ್ಯಾಣ ಸಾಧನೆಗಳಲ್ಲಿ ಭಾರತದಲ್ಲಿ ಅಗ್ರಣಿಯಾಗಿದೆ ಮತ್ತು ಕಳೆದ ಮೂರು ದಶಕಗಳಲ್ಲಿ ಅದರ ಜಿಡಿಪಿ ಬೆಳವಣಿಗೆಯು ದೇಶದ ಜಿಡಿಪಿ ಬೆಳವಣಿಗೆಗಿಂತ ಹೆಚ್ಚಾಗಿದೆ. ಪ್ರಸ್ತುತ ಅದು ವಿದ್ಯಾವಂತರಲ್ಲಿ ನಿರುದ್ಯೋಗದ ಸವಾಲನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಅರ್ಥವ್ಯವಸ್ಥೆಯ ತಾಂತ್ರಿಕ ನೆಲೆಯನ್ನು ಮುಂದುವರಿದ ವೈಜ್ಞಾನಿಕ ಜ್ಞಾನ ಮತ್ತು ಹೆಚ್ಚಿನ ಉತ್ಪಾದಕತೆಯ ಆಧಾರದ ಮೇಲೆ ಪರಿವರ್ತಿಸುವ ಅಗತ್ಯವಿದೆ. ಅದನ್ನು ಸಾಧಿಸಲು, ಕೇರಳದ ಜ್ಞಾನ ಮತ್ತು ಕೌಶಲ್ಯವನ್ನು ತೀವ್ರವಾಗಿ ಆಧರಿಸಿರುವ ಉದ್ದಿಮೆಗಳು ಆಕರ್ಷಕ ಹೂಡಿಕೆ ತಾಣವಾಗಬೇಕು. ಹೊಸ ಪೀಳಿಗೆಯ ನವೋದ್ಯಮಗಳು(ಸ್ಟಾರ್ಟ್-ಅಪ್) ವ್ಯಾಪಕ ಪ್ರಮಾಣದಲ್ಲಿ ಹುಟ್ಟಿಕೊಳ್ಳಬೇಕು. ಕೇರಳವು ಒಂದು ಜ್ಞಾನಾಧರಿತ ಅರ್ಥವ್ಯವಸ್ಥೆಯಾಗಬೇಕು.

ಪ್ರಸ್ತುತ ಎಲ್‌ಡಿಎಫ್ ಸರ್ಕಾರದ ಅಡಿಯಲ್ಲಿ ರಾಜ್ಯವು ಅಂತಹ ಪರಿವರ್ತನೆಗೆ ಇರುವ ಪ್ರಮುಖ ಅಡೆತಡೆಗಳನ್ನು ನಿವಾರಿಸಲು ಈ ಕೆಳಗಿನ ಉಪಕ್ರಮಗಳ ಮೂಲಕ ಪ್ರಮುಖ ಹೆಜ್ಜೆಗಳನ್ನು ಇಡುತ್ತಿದೆ:

(1) ಕೇರಳವನ್ನು ಒಂದು ಆಕರ್ಷಕ ಹೂಡಿಕೆ ತಾಣವನ್ನಾಗಿ ಮಾಡುವುದು.

(2) ವಿಶೇಷ ಎಸ್‌ಪಿವಿ(ವಿಶೇಷೋದ್ದೇಶ ವಾಹಕ)ಗಳಿಂದ ಬಜೆಟ್‌ನ ಆಚೆ ಸಂಪನ್ಮೂಲ ಕ್ರೋಢೀಕರಣದ ಮೂಲಕ ಮೂಲಸೌಕರ್ಯ ಕೊರತೆಯನ್ನು ನಿವಾರಿಸುವುದು.

(3) ಉನ್ನತ ಶಿಕ್ಷಣ ವಲಯವನ್ನು ಆಮೂಲಾಗ್ರವಾಗಿ ಉತ್ತಮಗೊಳಿಸುವುದು.

(4) ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳಿಗೆ ಕೌಶಲ್ಯ ನೀಡಲು ಜ್ಞಾನ ಕೇರಳ ಜನತಾ ಅಭಿಯಾನವನ್ನು ಪ್ರಾರಂಭಿಸುವುದು.

ಈ ಮೇಲಿನ ಒಟ್ಟು ಚೌಕಟ್ಟಿನ ಪಲ್ಲಟದ ಅರ್ಥ ರಾಜ್ಯವು ತನ್ನ ಅಭಿವೃದ್ಧಿಯ ಪುನರ್ವಿತರಣಾ ಕಾರ್ಯತಂತ್ರದಿಂದ ದೂರ ಸರಿಯುತ್ತದೆ ಎಂದೇನೂ ಅಲ್ಲ. ಸಾರ್ವಜನಿಕ ವಲಯದ ಘಟಕಗಳು, ಸಾರ್ವಜನಿಕ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯವನ್ನು ಬಲಪಡಿಸಲಾಗುವುದು. ಪ್ರಜಾಸತ್ತಾತ್ಮಕ ಹಕ್ಕುಗಳು ಅಥವಾ ಕಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸಲಾಗುವುದಿಲ್ಲ. ಮುಂದೆಯೂ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ಮತ್ತು ಭಾಗವಹಿಸುವಿಕೆಯು ಸಾಮಾಜಿಕ ಮತ್ತು ಸಣ್ಣ ಪ್ರಮಾಣದ ವಲಯಗಳಲ್ಲಿ ನಮ್ಮ ಮಧ್ಯಪ್ರವೇಶದ ಮುಖ್ಯ ಲಕ್ಷಣವಾಗಿರುತ್ತದೆ. ಎಲ್ಲಾ ರೀತಿಯ ಜಾತಿ ಮತ್ತು ಲಿಂಗ ತಾರತಮ್ಯಗಳ ವಿರುದ್ಧ ಮತ್ತು ಜಾತ್ಯತೀತ ಮತ್ತು ವೈಜ್ಞಾನಿಕ ಮೌಲ್ಯಗಳಿಗಾಗಿ ಹೋರಾಟ ಮುಂದುವರಿಯುತ್ತದೆ.

ಇಂತಹ ಒಂದು ಫಲಿತಾಂಶ ಬರದಂತೆ ತಡೆಯಬೇಕು ಎಂದೇ ಕೇಂದ್ರದಲ್ಲಿರುವ ಬಿಜೆಪಿ-ಎನ್‌ಡಿಎ ಆಳ್ವಿಕೆಯು ನಿಖರವಾಗಿ ಬಯಸುತ್ತಿರುವುದು. ಆಡಳಿತಾತ್ಮಕ ಕೈಚಳಕಗಳನ್ನು ನಡೆಸಲು ರಾಜ್ಯಪಾಲರ ಹುದ್ದೆಯನ್ನು ನಿಯೋಜಿಸುವುದಲ್ಲದೆ, ಮಸೂದೆಗಳಿಗೆ ಒಪ್ಪಿಗೆಯನ್ನು ತಡೆಹಿಡಿಯುವ ಮೂಲಕ ರಾಜ್ಯದ ಶಾಸಕಾಂಗದ ಅಧಿಕಾರವನ್ನು ದುರ್ಬಲಗೊಳಿಸುವುದರ ಮೂಲಕ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಹಣಕಾಸು ಅವಕಾಶಗಳನ್ನು ವ್ಯವಸ್ಥಿತವಾಗಿ ಹಿಂಡುತ್ತಿದೆ.

ಕೇರಳಕ್ಕೆ ಹಣಕಾಸು ಆಯೋಗ ನೀಡಿದ ತೆರಿಗೆಯ ಪಾಲು 10ನೇ ಯುಎಫ್‌ಸಿ ಅವಧಿಯಲ್ಲಿ ಶೇ. 3.9 ಇದ್ದದ್ದು, ಪ್ರಸ್ತುತ 15ನೇ ಯುಎಫ್‌ಸಿಯಲ್ಲಿ ಶೇ.1.9ಕ್ಕೆ ಇಳಿದಿದೆ. ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ರಾಜ್ಯದ ಪಾಲು ಕೇವಲ ಶೇಕಡಾ 1.6ರಷ್ಟಿದೆ. ಬಂಡವಾಳ ವೆಚ್ಚ(ಕೇಪೆಕ್ಸ್)ದಲ್ಲಿ ಪಾಲು  ಶೇ. 1.1 ಮಾತ್ರ. ವಿವಿಧ ರಾಜ್ಯಗಳಿಗೆ ಘೋಷಿಸಲಾದ ವಿಶೇಷ ಪ್ಯಾಕೇಜ್‌ಗಳಿಂದ ಕೇರಳ ಸುಮಾರಾಗಿ ಏನನ್ನೂ ಪಡೆದಿಲ್ಲ. 2024-25ರಲ್ಲಿ ಕೇಂದ್ರ ಸರ್ಕಾರವು ಭಾರತದ ಎಲ್ಲಾ ರಾಜ್ಯ ಸರ್ಕಾರಗಳಿಗೆ ಮಾಡಿದ ಒಟ್ಟು ವರ್ಗಾವಣೆ ರೂ. 25 ಲಕ್ಷ ಕೋಟಿ. ಜನಸಂಖ್ಯೆಯ ಶೇ. 2.8 ರಷ್ಟಿರುವ ಕೇರಳ ಪ್ರಮಾಣಾನುಗುಣವಾಗಿ 70,000 ಕೋಟಿ ರೂ.ಗಳನ್ನು ಪಡೆಯಬೇಕಿತ್ತು. ವಾಸ್ತವವಾಗಿ, ರಾಜ್ಯಗಳಿಗೆ ವರ್ಗಾವಣೆ ಕೇವಲ 35,000 ಕೋಟಿ ರೂ.ಗಳಾಗಿದ್ದು, ಇದು ರಾಜ್ಯಕ್ಕೆ ಸಿಗಬೇಕಾಗಿದ್ದ ಮೊತ್ತದ ಅರ್ಧದಷ್ಟು ಮಾತ್ರ.

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಂತೆಯೇ ಇರುವ ಎಸ್‌ಪಿವಿ(ವಿಶೇಷ ಉದ್ದೇಶದ ವಾಹಕ)ಯಾದ ಕೆಐಐಎಫ್‌ಬಿ ತಂದ ಬಂಡವಾಳ ಸಾಲವು ರಾಜ್ಯ ಸರಕಾರದ ಪರೋಕ್ಷ ಸಾಲವೇ ಆಗಿರುತ್ತದೆ ಎಂಬ ನೆಪವೊಡ್ಡಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಸಾಮಾನ್ಯ ಸಾಲಪ್ರಮಾಣವನ್ನು ತನ್ನ ಮನಬಂದಂತೆ ಕಡಿಮೆ ಮಾಡಿದೆ. ಇನ್ನೂ ಕೆಟ್ಟ ಸಂಗತಿಯೆಂದರೆ, ರಾಜ್ಯವು ಬಜೆಟ್ನ ಆಚೆ ಸಾಲ ಪಡೆಯುವ ಕುರಿತಾದ ತನ್ನ ಹೊಸ ನಿಯಮವನ್ನು ಪೂರ್ವಾನ್ವಯವಾಗುವಂತೆ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಪರಿಣಾಮವಾಗಿ, ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಮಾರುಕಟ್ಟೆ ಸಾಲಗಳಿಂದ 10,000 ಕೋಟಿ ರೂ.ಗಳಿಗೂ ಹೆಚ್ಚು ಕಡಿತವಾಗಿದೆ. ಇವೆಲ್ಲವೂ ರಾಜ್ಯ ಸರ್ಕಾರದ ಹಣಕಾಸನ್ನು ಒಂದು ಬಿಕ್ಕಟ್ಟಿಗೆ ತಳ್ಳಿದೆ.

ತನ್ನ ತಾರತಮ್ಯವನ್ನು ಮುಚ್ಚಿಕೊಳ್ಳಲು, ಕೇಂದ್ರ ಸರ್ಕಾರ ಮತ್ತು ಅದರ ಅನುಯಾಯಿಗಳು ರಾಜ್ಯ ಸರ್ಕಾರದ ವಿರುದ್ಧ ಸಂಪೂರ್ಣವಾಗಿ ಸುಳ್ಳು, ಆಧಾರ ರಹಿತ ಮತ್ತು ದುರುದ್ದೇಶಪೂರಿತ ಪ್ರಚಾರವನ್ನು ನಡೆಸುತ್ತಿದ್ದಾರೆ ಎಂದಿರುವ ಸಿಪಿಐ(ಎಂ)ನ 24ನೇ ಮಹಾಧಿವೇಶನವು ತನ್ನ ಎಲ್ಲಾ ಘಟಕಗಳು, ಸದಸ್ಯರು, ಹಿತೈಷಿಗಳು ಮತ್ತು ಇತರ ಎಲ್ಲ ಪ್ರಜಾಪ್ರಭುತ್ವವಾದಿ ಜನ ವಿಭಾಗಗಳಿಗೆ ಒಕ್ಕೂಟ ಸರಕಾರವನ್ನು ಬಯಲಿಗೆಳೆಯಲು, ಕೇರಳದ ಪ್ರಜಾಸತ್ತಾತ್ಮಕ ಸಾಧನೆಗಳನ್ನು ಹರಡಲು ಮತ್ತು ಕೇರಳದಲ್ಲಿ ಎಲ್‌ಡಿಎಫ್ ಸರ್ಕಾರವನ್ನು ರಕ್ಷಿಸಲು ಶಕ್ತಿಶಾಲಿಯಾಗಿ ಅಣಿನೆರೆಯಬೇಕು ಎಂದು ಕರೆ ನೀಡಿದೆ.

 

Leave a Reply

Your email address will not be published. Required fields are marked *