ದೇಶದ ವಿವಿಧ ಭಾಗಗಳಲ್ಲಿ ಆರ್ಎಸ್ಎಸ್–ಬಿಜೆಪಿ ಮತ್ತು ಸಂಘ ಪರಿವಾರ ನಡೆಸುತ್ತಿರುವ ಕೋಮುವಾದಿ ದಾಳಿಗಳ ಸರಣಿ ತೀವ್ರಗೊಂಡಿದೆ ಎಂದಿರುವ ಸಿಪಿಐ(ಎಂ)ನ 24ನೇ ಮಹಾಧಿವೇಶನ, ಅದನ್ನು ಖಂಡಿಸುತ್ತ, ಇವು ಕೋಮುವಾದಿ ದ್ವೇಷದ ಆಧಾರದ ಮೇಲೆ ಸಮಾಜವನ್ನು ಧ್ರುವೀಕರಿಸುವ ಅದರ ಅವಿರತ ಅಭಿಯಾನದ ಭಾಗ ಎಂದು ಹೇಳಿದೆ.ಬಹುಸಂಖ್ಯಾಕ ಸಮುದಾಯದಲ್ಲಿ ತನ್ನ ಹಿಂದುತ್ವ ಕಾರ್ಯಸೂಚಿಗೆ ಬೆಂಬಲವನ್ನು ಕಾಯ್ದುಕೊಳ್ಳಲು ಮತ್ತು ಬಲಪಡಿಸಲು ಮತ್ತು ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲೂ ಇರುವ ಬಿಜೆಪಿ ಸರ್ಕಾರಗಳ ವೈಫಲ್ಯಗಳು ಹೊತ್ತಿಸುತ್ತಿರುವ ಹೆಚ್ಚೆಚ್ಚು ಅಸಮಾಧಾನವನ್ನು ನಿವಾರಿಸಲು ಇದೊಂದೇ ಮಾರ್ಗ ಎಂದೇ ಸಂಘ ಪರಿವಾರ ತಿಳಿದುಕೊಂಡಿದೆ ಎಂದು 24ನೇ ಮಹಾಧಿವೇಶನ ಎಪ್ರಿಲ್ 3ರಂದು ಅಂಗೀಕರಿಸಿರುವ ನಿರ್ಣಯ ಹೇಳುತ್ತದೆ.
ಆದ್ದರಿಂದ, ಈ ಹಿಂದೆ ಬಳಸಲಾಗಿದ್ದ ಪ್ರಶ್ನೆಗಳ ಜೊತೆಗೆ ಹೊಸ ಪ್ರಶ್ನೆಗಳನ್ನು ಎತ್ತುವ ಧ್ರುವೀಕರಣದ ಕೋಮುವಾದಿ ಅಭಿಯಾನಗಳ ರಭಸವನ್ನು ನಾವು ನೋಡುತ್ತಿದ್ದೇವೆ ಎಂದಿರುವ ನಿರ್ಣಯ ಮುಂದುವರೆದು ಹೀಗೆ ಹೇಳಿದೆ:
ರಾಮನವಮಿ ಮತ್ತು ಹನುಮಾನ್ ಜಯಂತಿಯಂತಹ ಹಿಂದೂ ಹಬ್ಬಗಳನ್ನು ಬಳಸಿಕೊಂಡು, ಮುಸ್ಲಿಮರ ಮೇಲೆ ಅವರ ಪ್ರದೇಶಗಳಲ್ಲಿ ಮತ್ತು ಮಸೀದಿಗಳ ಬಳಿ ದಾಳಿಗಳು ಹೆಚ್ಚಾಗುತ್ತಿವೆ. ರಂಜಾನ್ ತಿಂಗಳ ಒಂದು ಶುಕ್ರವಾರದಂದು ಬಂದಿರುವ ಹೋಳಿ ಹಬ್ಬದಂದು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಬೆದರಿಕೆಗಳು ಮತ್ತು ದಂಡನಾತ್ಮಕ ಕ್ರಮಗಳು ಒಮ್ಮಿಂದೊಮ್ಮೆಲೇ ಹೆಚ್ಚಿರುವುದು ಕಂಡು ಬಂತು.
ಮಕ್ಕಳನ್ನು ಸಹ ಬಿಡಲಾಗುತ್ತಿಲ್ಲ ಎಂಬುದು ಇತ್ತೀಚಿನ ದಾಳಿಗಳ ಒಂದು ಅತ್ಯಂತ ಕಳವಳಕಾರಿ ಲಕ್ಷಣ. ಇತ್ತೀಚೆಗೆ ರಾಜಸ್ಥಾನದ ಅಲ್ವಾರ್ನಲ್ಲಿಒಂದು ತಿಂಗಳ ಹೆಣ್ಣು ಮಗುವನ್ನು ಪೊಲೀಸರು ತುಳಿದು ಕೊಂದರು ಮತ್ತು ಮಹಾರಾಷ್ಟ್ರದ ಮಾಲ್ವಾನ್ನಲ್ಲಿ 15 ವರ್ಷದ ಬಾಲಕನನ್ನು ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದಾನೆ ಎಂಬ ದಾರಿತಪ್ಪಿಸುವ, ಸಾಬೀತಾಗದ ಆರೋಪದ ಮೇಲೆ ಜೈಲಿಗೆ ಹಾಕಲಾಯಿತು.
ಇತಿಹಾಸವನ್ನು ವಿರೂಪಗೊಳಿಸಲು ಮತ್ತು ಮುಸ್ಲಿಂ ವಿರೋಧಿ ಪೂರ್ವಾಗ್ರಹ ಮತ್ತು ದ್ವೇಷವನ್ನು ಉಲ್ಬಣಗೊಳಿಸಲೆಂದು ವಿನ್ಯಾಸಗೊಳಿಸಲಾದ ಚಲನಚಿತ್ರಗಳನ್ನು ಬಿಜೆಪಿ ಸರ್ಕಾರಗಳು ಪ್ರಾಯೋಜಿಸುತ್ತಿವೆ. ಇದರಲ್ಲಿ ತೀರಾ ಇತ್ತೀಚಿನದು “ಛಾವಾ”, ಇದು ಔರಂಗಜೇಬನನ್ನು ಮತ್ತು ಆ ಮೂಲಕ ಆತನ ಸಮುದಾಯಕ್ಕೆ ಸೇರಿದ ಎಲ್ಲಾ ಸದಸ್ಯರನ್ನು ರಕ್ಕಸರೆಂಬಂತೆ ಚಿತ್ರಿಸುತ್ತದೆ. ಮಹಾರಾಷ್ಟ್ರದ ಬಿಜೆಪಿ ಸಚಿವರು ಇದನ್ನು ಬಳಸಿಕೊಂಡು ಯಾವಾಗಲೂ ಎಲ್ಲರನ್ನೂ ಒಳಗೊಳ್ಳುತ್ತ ಬಂದಿರುವ ಜಾತ್ರೆಗಳು ಮತ್ತು ಯಾತ್ರೆಗಳಿಂದ ಮುಸ್ಲಿಮರನ್ನು ಹೊರಗಿಡುವಂತೆ ಪ್ರೋತ್ಸಾಹಿಸಿದ್ದಾರೆ. ನಾಗಪುರದಲ್ಲಿ ನಡೆದ ಘರ್ಷಣೆಗಳು ಈ ಅಭಿಯಾನದ ಫಲಿತಾಂಶವಾಗಿದೆ, ಇದರಲ್ಲಿ ಅನೇಕ ಮುಸ್ಲಿಮರ ಬಂಧನಗಳು ನಡೆದವು ಮತ್ತು ಒಬ್ಬ ಮುಸ್ಲಿಂ ನಾಯಕನ ಮನೆಯ ಮೇಲೆ ಬುಲ್ಡೋಜರ್ ಹರಿಯ ಬಿಡಲಾಯಿತು.
ಇತ್ತೀಚಿನ ಅವಧಿಯಲ್ಲಿ ಆರ್ಎಸ್ಎಸ್ ಸದಸ್ಯರು ಮತ್ತು ಅವರ ಅನುಯಾಯಿಗಳು ಮಸೀದಿಗಳ ಮೇಲೆ, ಅವುಗಳನ್ನು ದೇವಾಲಯಗಳನ್ನು ಕೆಡವಿ ನಿರ್ಮಿಸಲಾಗಿದೆ ಎಂದು ದಾಳಿ ಮಾಡುವ ಪ್ರಯತ್ನಗಳನ್ನು ಬೆಂಬಲಿಸುವಂತೆ ನ್ಯಾಯಾಲಯಗಳನ್ನು ಮುಂದೊತ್ತಲು ಪದೇ ಪದೇ ಪ್ರಯತ್ನಿಸಿರುವುದು ಕಂಡು ಬಂದಿದೆ. ಅತ್ಯಂತ ದುರದೃಷ್ಟದ ಸಂಗತಿಯೆಂದರೆ, ಅನೇಕ ಕೆಳ ನ್ಯಾಯಾಲಯಗಳು ಮತ್ತು ಭಾರತದ ಮಾಜಿ ಮುಖ್ಯ ನ್ಯಾಯಾಧೀಶರು ಡಿ.ವೈ. ಚಂದ್ರಚೂಡ್ ರವರ ಟಿಪ್ಪಣಿಗಳು ಮತ್ತು ಆದೇಶಗಳು ಕೂಡ ಬೆಂಕಿಗೆ ತುಪ್ಪ ಸುರಿದವು. ಇದು ಅನೇಕ ಸ್ಥಳಗಳಲ್ಲಿ ಕೋಮು ಧ್ರುವೀಕರಣಕ್ಕೆ ಮತ್ತು ಐದು ಯುವ ಮುಸ್ಲಿಮರನ್ನು ಗುಂಡಿಕ್ಕಿ ಕೊಂದ ಸಂಭಲ್ನ ದುರಂತ ಘಟನೆಗಳಿಗೆ ಕಾರಣವಾಗಿದೆ. ಈಗ ಸಂಭಲ್ನಲ್ಲಿ ಲಕ್ಷಾಂತರ ಜನರು, ಮುಸ್ಲಿಮರಿಗಿಂತ ಹೆಚ್ಚಾಗಿ ಹಿಂದೂಗಳು ಶತಮಾನಗಳಿಂದ ಭಾಗವಹಿಸುತ್ತಿದ್ದ ಜಾತ್ರೆಯನ್ನು ಸಹ ರಾಷ್ಟ್ರವಿರೋಧಿ ವ್ಯಕ್ತಿಯ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂಬ ಹೆಸರಿನಲ್ಲಿ ನಿಷೇಧಿಸಲಾಗಿದೆ. ಇದು ಅನೇಕ ಸಮುದಾಯಗಳನ್ನು ಒಟ್ಟುಗೂಡಿಸಿದ ಸಮ್ಮಿಶ್ರ ಆಚರಣೆಗಳ ಮೇಲಿನ ಒಂದು ಗಮನಾರ್ಹ ದಾಳಿಯಾಗಿದೆ.
ಉತ್ತರಾಖಂಡದ ಯುಸಿಸಿಯಂತಹ ಹೊಸ ಕಾನೂನುಗಳು ಮಹಿಳೆಯರು ಮತ್ತು ಯುವ ದಂಪತಿಗಳ ಹಕ್ಕುಗಳ ಮೇಲೆ ದಾಳಿ ಮಾಡುತ್ತಲೇ, ಮುಸ್ಲಿಂ ವೈಯಕ್ತಿಕ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿವೆ, ಮತ್ತು ಮಹಿಳೆ ಒಬ್ಬ ಹಿಂದೂ ಆಗಿದ್ದು, ಪುರುಷ ಮುಸ್ಲಿಂ ಆಗಿರುವ ಅಂತರ್-ಧರ್ಮೀಯ ವಿವಾಹಗಳ ಮೇಲೆ ದಾಳಿ ಮಾಡುವ ಹೆಚ್ಚು ಕಠಿಣವಾದ ಮತಾಂತರ ವಿರೋಧಿ ಕಾನೂನುಗಳನ್ನು ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ ಇತ್ಯಾದಿ ಸರ್ಕಾರಗಳು ಅಂಗೀಕರಿಸಿವೆ. ಅಂತಹ ವಿವಾಹಗಳಲ್ಲಿ ತೊಡಗುವ ಪುರುಷರಿಗೆ ಮರಣದಂಡನೆ ವಿಧಿಸಬೇಕೆಂದು ಸಹ ಪ್ರಸ್ತಾಪಿಸಲಾಗುತ್ತಿದೆ.
ಸಿಪಿಐ(ಎಂ)ನ 24ನೇ ಮಹಾಧಿವೇಶನವು ಸಂಘ ಪರಿವಾರದ ಕೋಮು ಧ್ರುವೀಕರಣದ ದುಷ್ಟ ಪ್ರಯತ್ನದ ವಿರುದ್ಧ ಮತ್ತು ಆರೆಸ್ಸೆಸ್ನ ನಿಜವಾದ ಹಿಂದುತ್ವವಾದಿ ಕಾರ್ಯಸೂಚಿಯನ್ನು ಬಯಲಿಗೆಳೆಯಲು, ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದಾಳಿಗಳ ವಿರುದ್ಧ ಪರಿಣಾಮಕಾರಿ ಅಭಿಯಾನಗಳನ್ನು ಆಯೋಜಿಸಲು ಪಕ್ಷದ ಎಲ್ಲ ಘಟಕಗಳಿಗೆ ಕರೆ ನೀಡಿದೆ. ಈ ದಾಳಿಗಳನ್ನು ಬಲವಾಗಿ ಎದುರಿಸಲು ವ್ಯಾಪಕ ವಿಶಾಲ ಜನವಿಭಾಗಗಳನ್ನು ಮತ್ತು ಜಾತ್ಯತೀತ, ಪ್ರಜಾಪ್ರಭುತ್ವ ಸಂಘಟನೆಗಳನ್ನು ಅಭಿಯಾನಗಳಲ್ಲಿ ತೊಡಗಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ಮಹಾಧಿವೇಶನ ಪಕ್ಷಕ್ಕೆ ಕರೆ ನೀಡಿದೆ.