ಮೂಲಭೂತ ಅಗತ್ಯಗಳನ್ನು ಮೂಲಭೂತ ಹಕ್ಕುಗಳೆಂದು ಗುರುತಿಸಲು ನಿರ್ಣಯ

ಆಹಾರ, ವಸತಿ, ಉದ್ಯೋಗ, ಪಿಂಚಣಿ, ಶಿಕ್ಷಣ ಮತ್ತು ಆರೋಗ್ಯ ಪಾಲನೆಯಂತಹ ಅಗತ್ಯ ಸಾರ್ವಜನಿಕ ಸರಕುಗಳು ಮತ್ತು ಸೇವೆಗಳನ್ನು ಒದಗಿಸುವ ಕಲ್ಯಾಣ ಯೋಜನೆಗಳು ಔದಾರ್ಯದ ಕ್ರಮಗಳಲ್ಲ, ಬದಲಾಗಿ ಪ್ರತೀ ನಾಗರಿಕರ ಮೂಲಭೂತ ಹಕ್ಕುಗಳಾಗಿವೆ ಎಂದು ತಾನು ನಂಬುವುದಾಗಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ 24 ನೇ ಮಹಾಧಿವೇಶನ ಹೇಳಿದೆ. ನಮ್ಮ ಸಂವಿಧಾನದ  ಪ್ರಭುತ್ವ ನೀತಿಯ ನಿರ್ದೇಶಕ ತತ್ವಗಳು, ಸರ್ಕಾರವು ಜಾತಿ, ಧರ್ಮ ಅಥವಾ ಇತರ ವ್ಯತ್ಯಾಸಗಳನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಒಂದು ಘನತೆಯ ಜೀವನವನ್ನು ಖಚಿತಪಡಿಸಬೇಕು ಎಂದು ಆದೇಶಿಸುತ್ತದೆ. ದುರದೃಷ್ಟವಶಾತ್, ಇವನ್ನು ಕಾನೂನಾತ್ಮಕವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ, ಆದ್ದರಿಂದ ಅವುಗಳನ್ನು ನ್ಯಾಯಾಲಯದ ಪರಿಶೀಲನೆಗೆ ಒಳಪಡುವ  ಸಾಂವಿಧಾನಿಕ ನಾಗರಿಕರ ಹಕ್ಕುಗಳಾಗಿ ಪರಿವರ್ತಿಸುವ ಅವಶ್ಯಕತೆಯಿದೆ ಎಂದು ಮಹಾಧಿವೇಶನ ಅಂಗೀಕರಿಸಿರುವ ಒಂದು ನಿರ್ಣಯ ಹೇಳಿದೆ.

ನ್ಯಾಯ ಮತ್ತು ಸಮಾನತೆಯ ಆಡಿಗಲ್ಲಾಗಿರುವ ಈ ಅತ್ಯಗತ್ಯ ಅವಶ್ಯಕತೆಗಳನ್ನು ಪಡೆಯುವ ಹಕ್ಕು ಪ್ರತೀ ನಾಗರಿಕರಿಗೂ ಇದೆ. ಆರ್ಥಿಕ ಹಕ್ಕುಗಳು ಸಾಮಾಜಿಕ ಪ್ರಗತಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಮತ್ತು ಕಲ್ಯಾಣ ಕಾರ್ಯಕ್ರಮಗಳು ಮಾನವ ಬಂಡವಾಳದಲ್ಲಿ ಹೂಡಿಕೆಗಳಾಗಿ ಕಾರ್ಯನಿರ್ವಹಿಸುತ್ತವೆ. ಇವು  ಹೆಚ್ಚು ಉತ್ಪಾದಕ ಶ್ರಮ ಬಲವನ್ನು ಸೃಷ್ಟಿಸುತ್ತವೆ ಮತ್ತು ದೀರ್ಘಕಾಲೀನ ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುತ್ತವೆ ಎಂದು ಈ ನಿರ್ಣಯ ಹೇಳಿದೆ.

ಸರ್ಕಾರಗಳು ಸಾಮಾಜಿಕ ವಲಯದಿಂದ ಹಿಂದೆ ಸರಿಯಬೇಕು ಮತ್ತು ಆರೋಗ್ಯ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಕಾರ್ಪೊರೇಟ್‌ಗಳ ಹಿತಾಸಕ್ತಿಗಾಗಿ ಖಾಸಗೀಕರಣಗೊಳಿಸಬೇಕು ಎಂಬುದು ನವ ಉದಾರವಾದಿ ನೀತಿಗಳ ಮೂಲ ಪ್ರಮೇಯವಾಗಿದೆ. ಆದ್ದರಿಂದ ನವ-ಉದಾರವಾದಿ ನೀತಿಗಳ ಆರಂಭದಿಂದ ಸಾಮಾಜಿಕ ವಲಯದ ಮೇಲೆ ಸೈದ್ಧಾಂತಿಕ ಮತ್ತು ವಿನಾಶಕಾರಿ ದಾಳಿಗಳು ಕಾಣ ಬಂದಿವೆ.

ಬಿಜೆಪಿ ನೇತೃತ್ವದ ಮೋದಿ ಸರ್ಕಾರವು ಈ ಕಾರ್ಯಕ್ರಮಗಳನ್ನು ಕೆಡವಿ ಬಿಡುವ ಮತ್ತು ಸಬ್ಸಿಡಿಗಳನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಪ್ರಧಾನಿ ಮೋದಿ ಅಂತಹ ಸಾಮಾಜಿಕ ಕಲ್ಯಾಣದ ಉಪಕ್ರಮಗಳನ್ನು ‘ರೆವ್ಡಿ’ (ಪುಕ್ಕಟೆ ಸಿಹಿತಿಂಡಿ) ಎಂದು ಪಟ್ಟಿ ಹಚ್ಚುವ ಮೂಲಕ ಅವನ್ನು ಅವಹೇಳನ ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಅವು ದೇಶದ ಅಭಿವೃದ್ಧಿಗೆ ಹಾನಿ ಮಾಡುತ್ತವೆ ಎಂದು ಸುಳ್ಳು ದಾವೆ ಮುಂದಿಡುತ್ತಾರೆ. ಈ ಕಥನವು ಬಿಜೆಪಿ ಕೇಂದ್ರ ಸರ್ಕಾರವು ಅನುಸರಿಸುತ್ತಿರುವ ಮಾರುಕಟ್ಟೆ-ಚಾಲಿತ, ನವ-ಉದಾರವಾದಿ ನೀತಿಗಳ ಪ್ರತಿಕೂಲ ಪರಿಣಾಮಗಳಿಂದ ದುರ್ಬಲ ವಿಭಾಗಗಳನ್ನು ರಕ್ಷಿಸುವಲ್ಲಿ ಸಾಮಾಜಿಕ ಕಲ್ಯಾಣದ ನಿರ್ಣಾಯಕ ಪಾತ್ರವನ್ನು ತಳ್ಳಿಹಾಕುತ್ತದೆ.

ಸಬ್ಸಿಡಿ ಆಧಾರಿತ ಯೋಜನೆಗಳ ಬದಲಿಗೆ ಮೋದಿ ಸರ್ಕಾರವು ತಂದಿರುವ ಕೆಲವು ನಗದು ವರ್ಗಾವಣೆ ಯೋಜನೆಗಳು ಅಂತಿಮವಾಗಿ ಅಗತ್ಯ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ದುರ್ಬಲಗೊಳಿಸಲು ಮತ್ತು ನಂತರ ಕಳಚಿಹಾಕಲು ದಾರಿ ಮಾಡಿಕೊಡುತ್ತವೆ. ಇದು ಸಮಾಜದ ಅತ್ಯಂತ ದುರ್ಬಲ ವರ್ಗಗಳನ್ನು ಎಂದಿಗಿಂತಲೂ ಹೆಚ್ಚು ಅಸಹಾಯಕರನ್ನಾಗಿ ಮಾಡುತ್ತದೆ. ಈ ವಿಧಾನವು ಸಂವಿಧಾನದ ಭಾಗವಾಗಿರುವ ಪ್ರಭುತ್ವ ನೀತಿಯ ನಿರ್ದೇಶಕ ತತ್ವಗಳ ಉಲ್ಲಂಘನೆಯಾಗಿದೆ. ಇದು ಸರ್ಕಾರವು ಜಾತಿ, ಧರ್ಮ ಅಥವಾ ಇತರ ವ್ಯತ್ಯಾಸಗಳನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಒಂದು ಘನತೆಯ ಜೀವನವನ್ನು ಖಚಿತಪಡಿಸಬೇಕು ಎಂದು ಆದೇಶಿಸುತ್ತದೆ. ದುರದೃಷ್ಟವಶಾತ್, ಇವನ್ನು ಕಾನೂನಾತ್ಮಕವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಅವುಗಳನ್ನು ನ್ಯಾಯಾಲಯ ಪರಿಶೀಲನೆಗೆ ಒಳಪಡುವ  ಸಾಂವಿಧಾನಿಕ ನಾಗರಿಕರ ಹಕ್ಕುಗಳಾಗಿ ಪರಿವರ್ತಿಸುವ ಅವಶ್ಯಕತೆಯಿದೆ.

ನವ-ಉದಾರವಾದಿ ಕಾರ್ಯಸೂಚಿಗಳನ್ನು ಅನುಸರಿಸುವ ಸರ್ಕಾರಗಳು ಹಣಕಾಸಿನ ನಿರ್ಬಂಧಗಳಿಂದಾಗಿ ಈ ಹಕ್ಕುಗಳನ್ನು ಖಾತರಿಪಡಿಸಲಾಗುವುದಿಲ್ಲ ಎಂದು ವಾದಿಸುತ್ತವೆ. ಇದೊಂದು ಕಪಟ ತರ್ಕ. ಏಕೆಂದರೆ, ಕಾರ್ಪೊರೇಟ್ ತೆರಿಗೆಗಳನ್ನು ನಿರಂತರವಾಗಿ ಕಡಿತ ಮಾಡಿಕೊಂಡು ಬಂದಿರುವುದು, ಜತೆಗೆ ಕಾರ್ಪೊರೇಟ್‌ಗಳಿಂದ ಕಾನೂನುಬದ್ಧವಾಗಿ ಬರಬೇಕಾದ ತೆರಿಗೆಗಳನ್ನು ಸಂಗ್ರಹಿಸಲು ನಿರಾಕರಿಸುವುದು ಅವರ ಹಣಕಾಸು ನೀತಿಯ ಪ್ರಮುಖ ಭಾಗವಾಗಿದೆ. ಬಿಜೆಪಿ ಸರ್ಕಾರವು ತನ್ನ ಅಸ್ತಿತ್ವದ ಪ್ರತಿ ವರ್ಷವೂ ಈ ತೆರಿಗೆಗಳನ್ನು ಕಡಿಮೆ ಮಾಡಿದೆ. ಒಂದು ತರ್ಕಬದ್ಧ ತೆರಿಗೆ ಸಂರಚನೆಯ ಮೂಲಕ ಎಲ್ಲಾ ನಾಗರಿಕರಿಗೆ ಎಲ್ಲಾ ಅಗತ್ಯ ಸೇವೆಗಳನ್ನು ಖಚಿತವಾಗಿ ಒದಗಿಸಲು ಸಾಧ್ಯವಿದೆ ಎಂದು ಮಹಾಧಿವೇಶನ ತನ್ನ ನಿರ್ಣಯದಲ್ಲಿ ಹೇಳಿದೆ.

ಅಸ್ತಿತ್ವದಲ್ಲಿರುವ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳನ್ನು ದೃಢಭಾವದಿಂದ ವಿರೋಧಿಸುತ್ತಲೇ , ಆಹಾರ, ವಸತಿ, ಉದ್ಯೋಗ, ಪಿಂಚಣಿ, ಶಿಕ್ಷಣ ಮತ್ತು ಆರೋಗ್ಯ ಪಾಲನೆಯ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳುವ ಹೋರಾಟಕ್ಕೆ ಒಗ್ಗೂಡಿ ಸಜ್ಜುಗೊಳ್ಳುವಂತೆ ಸಿಪಿಐ(ಎಂ)ನ 24ನೇ ಮಹಾಧಿವೇಶನವು ದೇಶದ ಜನರಿಗೆ ಕರೆ ನೀಡಿದೆ.

Leave a Reply

Your email address will not be published. Required fields are marked *