ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು 28 ಪ್ರವಾಸಿಗರನ್ನು ಬರ್ಬರವಾಗಿ ಕೊಂದಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರ ಕುಟುಂಬಗಳಿಗೆ ಸಿಪಿಐ(ಎಂ) ಆಳವಾದ ಸಂತಾಪ ಸೂಚಿಸಿದೆ. ದಾಳಿಯಲ್ಲಿ ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರೆಲ್ಲರೂ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದೆ
ಈ ಭಯಾನಕ ಅಪರಾಧ ಎಸಗಿದವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು. ಪೊಲೀಸರು ಮತ್ತು ಭದ್ರತಾ ಪಡೆಗಳು ಕೇಂದ್ರ ಸರ್ಕಾರದ ಅಡಿಯಲ್ಲಿವೆ. ಈ ಭೀಕರ ದಾಳಿಗೆ ಕಾರಣರಾದ ಪಡೆಗಳನ್ನು ನ್ಯಾಯದ ಕಟಕಟೆಗೆ ತರುವಲ್ಲಿ ಕೇಂದ್ರ ಸರ್ಕಾರ ಯಾವುದೇ ಅವಕಾಶವನ್ನು ಬಿಡಬಾರದು. ಅಪರಾಧ ಎಸಗಿದವರು ದೇಶದ ಶತ್ರುಗಳು, ವಿಶೇಷವಾಗಿ ಕಾಶ್ಮೀರದ ಜನರ ಶತ್ರುಗಳು. ಜನನಿಬಿಡ ಪ್ರವಾಸಿ ತಾಣಗಳಲ್ಲಿ ಭದ್ರತೆಯ ಕೊರತೆ ಸೇರಿದಂತೆ ದಾಳಿಯ ಎಲ್ಲಾ ಕೋನಗಳನ್ನು ತನಿಖೆ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದಿರುವ ಪೊಲಿಟ್‍ಬ್ಯುರೊ, ಈ ದುರಂತದ ಸಮಯದಲ್ಲಿ ಉಗ್ರಗಾಮಿ ಮೂಲಭೂತವಾದಿ ಶಕ್ತಿಗಳ ವಿರುದ್ಧ ಸಿಪಿಐ(ಎಂ) ಭಾರತದ ಜನತೆಯೊಂದಿಗೆ ಒಟ್ಟಾಗಿ ನಿಲ್ಲುತ್ತದೆ ಎಂದು ಹೇಳಿದೆ.