ಮೋದಿ ಸರಕಾರದ ಆರ್ಥಿಕ ಧೋರಣೆಗಳು ದೇಶಕ್ಕೆ ವಿನಾಶಕಾರಿಯೆಂದು ಸಾಬೀತಾಗುತ್ತಿದೆ. ಇನ್ನೊಂದೆಡೆಯಲ್ಲಿ ಈ ಧೋರಣೆಗಳ ವಿರುದ್ಧ ಪ್ರತಿರೋಧಗಳು ಮತ್ತು ಹೋರಾಟಗಳು ಹೆಚ್ಚುತ್ತಿವೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ. ಸಪ್ಟಂಬರ್ 6 ಮತ್ತು 7ರಂದು ನಡೆದ ಸಿಪಿಐ(ಎಂ) ಪೊಲಿಟ್ಬ್ಯುರೊ ಸಭೆಯ ನಂತರ ಈ ಕೆಳಗಿನ ಹೇಳಿಕೆಯನ್ನು ನೀಡಿದೆ:
ಆರ್ಥಿಕ ರಂಗದಲ್ಲಿ ಮಬ್ಬು ಕವಿದಿದೆ
ಇತ್ತೀಚಿಗೆ ದೊರೆತಿರುವ ಮಾಹಿತಿಗಳೆಲ್ಲ ನೋಟುರದ್ಧತಿಯ ನಂತರ ಆರ್ಥಿಕ ನಿಧಾನಗತಿ ತೀಕ್ಷ್ಣಗೊಂಡಿರುವುದನ್ನು ತೋರಿಸುತ್ತಿವೆ ಮತ್ತು ಆರ್ಥಿಕ ಹಿಂಜರಿತದ ಕಾರ್ಮೋಡಗಳು ಕಾಣುತ್ತಿವೆ. ಅಂದಾಜು ಜಿಡಿಪಿ ಬೆಳವಣಿಗೆ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಅಂದರೆ ಎಪ್ರಿಲ್-ಜೂನ್ ಅವಧಿಯಲ್ಲಿ ೫.೭%ಕ್ಕೆ ಇಳಿದಿದೆ. ಜಿಡಿಪಿ ಬೆಳವಣಿಗೆ ದರ ಸತತವಾಗಿ ನಾಲ್ಕು ತ್ರೈಮಾಸಿಕಗಳಲ್ಲಿ ಇಳಿದಿದೆ. ಈ ತ್ರೈಮಾಸಿಕದಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕ(ಐಐಪಿ) ಕೇವಲ ೧.೮%. ರಫ್ತು ಪ್ರಮಾಣ ಸ್ಥಗಿತಗೊಂಡಿದೆ. ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಕಾರ್ಯನಿರ್ವಹಿಸದ ಆಸ್ತಿಗಳ(ಅಂದರೆ ಸುಸ್ತಿಸಾಲಗಳ) ಮೊತ್ತ ಜೂನ್ ೨೦೧೭ರ ಅಂತ್ಯದ ವೇಳೆಗೆ ೮.೨೬ಲಕ್ಷ ರೂ.(ಬಡ್ಡಿ ಬಿಟ್ಟು) ಗೆ ಏರಿದೆ.
ಕೃಷಿ ಸಂಕಟ ಆಳಗೊಳ್ಳುತ್ತಲೇ ಇದೆ. ಆರ್ಥಿಕದ ಎಲ್ಲ ವಲಯಗಳಲ್ಲೂ ನಿರುದ್ಯೋಗ ಮೇಲೇರುತ್ತಿದೆ. ಸೇವಾವಲಯದಲ್ಲಿ ಆರ್ಥಿಕ ಚಟುವಟಿಕೆ ಕುಂಠಿತಗೊಂಡಿದೆ ಎಂಬುದನ್ನು ಇತ್ತೀಚಿನ ಮಾಹಿತಿ ತೋರಿಸುತ್ತಿದೆ. ಮೋದಿ ಸರಕಾರದ ಆರ್ಥಿಕ ಧೋರಣೆಗಳು ದೇಶಕ್ಕೆ ವಿನಾಶಕಾರಿಯಾಗುತ್ತಿವೆ.
ಪ್ರತಿರೋಧ ಮತ್ತು ಹೋರಾಟಗಳು ಹೆಚ್ಚುತ್ತಿವೆ
ನವ-ಉದಾರವಾದಿ ಧೋರಣೆಗಳಿಗೆ ಮತ್ತು ದೇಶದ ಪ್ರಜಾಪ್ರಭುತ್ವ ಮತ್ತು ರಾಜಕೀಯ ವ್ಯವಸ್ಥೆಗೆ ಕೋಮುವಾದಿ ಶಕ್ತಿಗಳ ಅಪಾಯದ ವಿರುದ್ಧ ಪ್ರತಿರೋಧ ಹೆಚ್ಚುತ್ತಿರುವ ವರದಿಗಳನ್ನು ಪೊಲಿಟ್ಬ್ಯುರೊ ಆಲಿಸಿತು.
ಸಪ್ಟಂಬರ್ ೧೮ರಂದು ಸಾಮೂಹಿಕ ಸಂಘಟನೆಗಳು ಮತ್ತು ವರ್ಗ ಸಂಘಟನೆಗಳ ಅಖಿಲ ಭಾರತ ಸಮಾವೇಶ, ಜನ ಏಕತಾ ಜನ ಅಧಿಕಾರ್ ಆಂದೋಲನ್, ಸಪ್ಟಂಬರ್ ೨೮ರಂದು ನಿರುದ್ಯೋಗದ ವಿರುದ್ಧ ಯುವ ಜನರ ಅಣಿನೆರಿಕೆ ಮತ್ತು ನವಂಬರ್ ೯ರಿಂದ ೧೧ರ ವರೆಗೆ ಸಂಸತ್ತಿನ ಎದುರು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಒಕ್ಕೂಟಗಳ ಮೂರು ದಿನಗಳ ಮಹಾಧರಣಿ ಇವಕ್ಕೆ ಬೆಂಬಲ ಮತ್ತು ಸೌಹಾರ್ದ ವ್ಯಕ್ತಪಡಿಸಲು ಪೊಲಿಟ್ಬ್ಯುರೊ ನಿರ್ಧರಿಸಿದೆ.
ರೊಹಿಂಗ್ಯ ಪ್ರಶ್ನೆ: ಮಾನವೀಯ ಬಿಕ್ಕಟ್ಟು
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮ್ಯಾನ್ಮರ್ ರಾಜಧಾನಿಗೆ ಭೇಟಿ ನೀಡಿದಾಗ ಅವರು ರೊಹಿಂಗ್ಯಗಳ ಪ್ರಶ್ನೆಗಳನ್ನು ಎತ್ತಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಅದು ಸುಳ್ಳಾಗಿದೆ. ದುರದೃಷ್ಟವಶಾತ್, ತಮ್ಮದೇ ದೇಶದಲ್ಲಿ ವ್ಯಾಪಕ ಹಲ್ಲೆಗಳಿಗೆ ಒಳಗಾಗಿರುವ ಲಕ್ಷಾಂತರ ಮಂದಿ ನೆರೆಯ ಬಾಂಗ್ಲಾದೇಶ ಮತ್ತು ಭಾರತಕ್ಕೆ ಸಾವಿರ-ಸಾವಿರ ಸಂಖ್ಯೆಯಲ್ಲಿ ಓಡಿಹೋಗುತ್ತಿರುವಾಗ ಅದು ಭಾರತೀಯ ಪ್ರಧಾನ ಮಂತ್ರಿಗಳು ಮತ್ತು ಮ್ಯಾನ್ಮರ್ ಮುಖಂಡರ ನಡುವಿನ ಮಾತುಕತೆಗಳಲ್ಲಿ ಜಾಗ ಪಡೆದಿಲ್ಲ.
ಭಾರತ ಸರಕಾರ ಇದನ್ನು ಒಂದು ಮಾನವೀಯತೆಯ ಪ್ರಶ್ನೆಯಾಗಿ ಕಾಣಬೇಕು ಮತ್ತು ಇದನ್ನು ಪರಿಹರಿಸಲು ತಕ್ಷಣವೇ ಮ್ಯಾನ್ಮರ್ ಮತ್ತು ಬಾಂಗ್ಲಾದೇಶದ ಸರಕಾರಗಳೊಂದಿಗೆ ಎತ್ತಿಕೊಳ್ಳಬೇಕು. ಭಾರತದೊಳಕ್ಕೆ ಬಂದಿರುವ ರೊಹಿಂಗ್ಯಗಳನ್ನು ನಿರಾಶ್ರಿತರೆಂದು ಪರಿಗಣಿಸಬೇಕು, ಅವರನ್ನು ಹಿಂದಕ್ಕೆ ತಳ್ಳಬಾರದು ಅಥವ ಸಾಗ ಹಾಕಬಾರದು. ಈ ವಿಷಯವನ್ನು ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಆಯೋಗ ಮತ್ತು ಅಂರ್ರಾಷ್ಟಿçÃಯ ರೆಡ್ ಕ್ರಾಸ್ ಮತ್ತು ಇತರ ಅಂರ್ರಾಷ್ಟಿçÃಯ ವೇದಿಕೆಗಳಲ್ಲೂ ಎತ್ತಬೇಕು.
ಎನ್ಇಇಟಿ ಪರೀಕ್ಷೆ
ತಮಿಳುನಾಡು ಮತ್ತು ಇತರೆಡೆಗಳಲ್ಲಿ ಎನ್ಇಇಟಿ ಪರೀಕ್ಷೆಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ತಮಿಳುನಾಡಿನಲ್ಲಿ ವೈದ್ಯಕೀಯ ಶಿಕ್ಷಣಾಕಾಂಕ್ಷಿ ಅನಿತಾಳ ದುರದೃಷ್ಟಕರ ಸಾವಿನ ನಂತರ ಪ್ರತಿಭಟನೆಗಳು ರಾಜ್ಯಾದ್ಯಂತ ಹರಡುತ್ತಿವೆ. ಪ್ರವೇಶ ಪರೀಕ್ಷೆ ಈ ವಿಧಾನಕ್ಕೆ ಹಲವು ರಾಜ್ಯಗಳಲ್ಲಿ ವಿರೋಧ ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಎಲ್ಲ ರಾಜ್ಯ ಸರಕಾರಗಳನ್ನು ವಿಶ್ವಾಸಕ್ಕೆ ತಗೊಂಡು ಈ ಪರೀಕ್ಷೆಗಳ ಬಗ್ಗೆ ಒಮ್ಮತವನ್ನು ವಿಕಾಸಗೊಳಿಸಬೇಕು.
ಪಕ್ಷದ 22ನೇ ಮಹಾಧಿವೇಶನ
ಪಕ್ಷದ ೨೨ನೇ ಮಹಾಧಿವೇಶನವನ್ನು ಹೈದರಾಬಾದಿನಲ್ಲಿ ಎಪ್ರಿಲ್ ೧೮ರಿಂದ ೨೨ರ ವರೆಗೆ ನಡೆಸಬೇಕು ಎಂದು ಮುಂದಿನ ಕೇಂದ್ರ ಸಮಿತಿ ಸಭೆಯ ಮುಂದೆ ಪೊಲಿಟ್ಬ್ಯುರೊ ಪ್ರಸ್ತಾವ ಇಡುತ್ತದೆ. ಈ ಮಹಾಧಿವೇಶನದಲ್ಲಿ ಪರಿಶೀಲಿಸಬೇಕಾದ ದಸ್ತಾವೇಜುಗಳು ಮತ್ತು ಅಜೆಂಡಾದ ಸಿದ್ಧತೆ ಆರಂಭವಾಗಿದೆ.