“ಆಳುವ ಪಕ್ಷದ ಮುಖಂಡರ ಭ್ರಷ್ಟಾಚಾರಗಳನ್ನೂ ನಿಷ್ಪಕ್ಷಪಾತ ತನಿಖೆಗೆ ಗುರಿಮಾಡಿ”
ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನ ಮಂತ್ರಿಗಳು ಭ್ರಷ್ಟಾಚಾರದೊಂದಿಗೆ ಯಾವುದೇ ರಾಜಿ ಇಲ್ಲ, ಅದಕ್ಕೆ ಯಾವುದೇ ರೀತಿಯ ಮೆದು ನಿಲುವು ತೋರುವುದಿಲ್ಲ ಎಂದು ಗುಡುಗಿದ್ದಾರೆ. ಆದರೆ ಇದು ಕೇವಲ ಬೂಟಾಟಿಕೆಯಷ್ಟೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಟೀಕಿಸಿದೆ.
ಪ್ರಧಾನಿಗಳ ಮತ್ತು ಬಿಜೆಪಿಯ ಈ ಬೂಟಾಟಿಕೆ ಇರುವುದು ಪ್ರತಿಪಕ್ಷಗಳ ಮುಖಂಡರ ವಿರುದ್ಧ ಇರುವ ಭ್ರಷ್ಟಾಚಾರದ ಕೇಸುಗಳನ್ನು ಮಾತ್ರ ಎತ್ತಿಕೊಳ್ಳುವಲ್ಲಿ. ಮೂರುವರ್ಷಗಳು ಕಳೆದು ಹೋದರೂ ಲೋಕಪಾಲ ವ್ಯವಸ್ಥೆಯನ್ನು ಸ್ಥಾಪಿಸಲು ಸಂಸತ್ತು ತಂದಿರುವ ಕಾಯ್ದೆಯ ಅನುಷ್ಠಾನದ ಗೋಜಿಗೂ ಅವರ ಸರಕಾರ ಹೋಗಿಲ್ಲ ಎಂಬ ಸಂಗತಿಯತ್ತ ಪೊಲಿಟ್ಬ್ಯುರೊ ಗಮನ ಸೆಳೆದಿದೆ.
ಹೆಚ್ಚುತ್ತಿರುವ ರಾಜಕೀಯ ಭ್ರಷ್ಟಾಚಾರದ ವಿರುದ್ಧ ಹೋರಾಟ ಕುರಿತಂತೆ ಸಿಪಿಐ(ಎಂ)ನ ನಿಲುವು, ಅದನ್ನು ಹೇಗೆ ನಡೆಸಬೇಕು ಮತ್ತು ಈ ಪಿಡುಗನ್ನು ನಿವಾರಿಸಲು ಅದರ ಮೂರ್ತ ಪ್ರಸ್ತಾವಗಳೇನು ಎಂಬುದು ಚಿರಪರಿಚಿತ.
ಪ್ರತಿಪಕ್ಷಗಳ ಮುಖಂಡರ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಭಾರೀ ಮುತುವರ್ಜಿ ವಹಿಸುವ ಈ ಸರಕಾರ ಬಿಜೆಪಿ ಮುಖಂಡರುಗಳ ಭ್ರಷ್ಟಾಚಾರದ ಹಗರಣಗಳ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಮಧ್ಯಪ್ರದೇಶದ ವ್ಯಾಪಂ; ಬಿಹಾರದ ಶ್ರಿಜನ್ ವಸತಿ ಹಗರಣ; ಬಿರ್ಲಾ-ಸಹಾರಾ ಡೈರಿಗಳು; ಲಲಿತ್ ಮೋದಿ ಹಗರಣ; ಬಿಜೆಪಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಾಗಿ ಬಂದ ಕರ್ನಾಟಕದ ಗಣಿ ಹಗರಣ; ಮಹಾರಾಷ್ಟ್ರ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಮುಖಂಡರುಗಳ ಭೂಗ್ರಹಣ ಕೇಸುಗಳು; ಛತ್ತಿಸ್ಗಡದ ಪಡಿತರ ಹಗರಣ; ಗುಜರಾತ್ ರಾಜ್ಯ ಪೆಟ್ರೊಲಿಯಂ ಕಾರ್ಪೊರೇಷನ್ ಹಗರಣ ಇತ್ಯಾದಿ ಇತ್ಯಾದಿ. ಬಿಜೆಪಿ ಆಳ್ವಿಕೆಯ ರಾಜ್ಯಗಳ ಭ್ರಷ್ಟಾಚಾರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಇವುಗಳಲ್ಲಿ ಯಾವೊಂದರಲ್ಲಿಯೂ ತನಿಖೆ ನಡೆದಿಲ್ಲ.
ಪ್ರಧಾನ ಮಂತ್ರಿಗಳ ಉದ್ಗಾರಗಳು ಭ್ರಷ್ಟಾಚಾರದ ವಿರುದ್ಧ ಹೋರಾಟದ ಹೆಸರಿನಲ್ಲಿ ರಾಜಕೀಯ ವಿರೋಧಿಗಳ ವಿರುದ್ಧದ ಕೇಸುಗಳನ್ನು ತನಗೆ ಬೇಕಾದಂತೆ ಆರಿಸಿಕೊಳ್ಳುತ್ತಲೇ ಆಮೂಲಕ ಅವನ್ನು ಉನ್ನತ ಸ್ಥಾನಗಳಲ್ಲಿ ಅಗಾಧ ಭ್ರಷ್ಟಾಚಾರಗಳಲ್ಲಿ ತೊಡಗಿರುವ ತನ್ನ ಸ್ವಂತ ಪಕ್ಷ ಮತ್ತು ಸರಕಾರಗಳನ್ನು ರಕ್ಷಿಸಿಕೊಳ್ಳಲು, ಅವನ್ನು ಮುಚ್ಚಿ ಹಾಕಲು ಬಳಸಿಕೊಳ್ಳುವುದಕ್ಕಾಗಿಯೇ ಎಂಬುದು ಸ್ಪಷ್ಟ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಈ ಎಲ್ಲ ಆಪಾದನೆಗಳನ್ನು ಒಂದು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.