ಜೆರುಸಲೇಂ ನಗರಕ್ಕೆ ಇಸ್ರೇಲಿನ ರಾಜಧಾನಿಯೆಂಬ ಮಾನ್ಯತೆ ನೀಡಲು ಮತ್ತು ಅಮೆರಿಕನ್ ರಾಯಭಾರಿ ಕಚೇರಿಯನ್ನು ಟೆಲ್ಅವಿವ್ನಿಂದ ಅಲ್ಲಿಗೆ ವರ್ಗಾಯಿಸಲು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿರುವುದನ್ನು ಸಿಪಿಐ(ಎಂ) ಬಲವಾಗಿ ಖಂಡಿಸಿದೆ.
ಇದು ಪೂರ್ವ ಜೆರುಸಲೇಂ 1967ರಿಂದ ಇಸ್ರೇಲ್ ಆಕ್ರಮಿತ ಪ್ರದೇಶ ಎಂಬ ವಿಶ್ವಸಂಸ್ಥೆಯ ಮತ್ತು ಅಂತರ್ರಾಷ್ಟ್ರೀಯ ಸಮುದಾಯದ ನಿಲುವಿಗೆ ವಿರುದ್ಧವಾದ ಕ್ರಮ. ಪೂರ್ವ ಜೆರುಸಲೇಂ ರಾಜಧಾನಿಯಾಗುಳ್ಳ ಒಂದು ಸ್ವತಂತ್ರ ಪೆಲೆಸ್ತೈನ್ ಪ್ರಭುತ್ವ ಎಂಬುದು ಅಂತರ್ರಾಷ್ಟ್ರೀಯವಾಗಿ ಒಪ್ಪಿಕೊಂಡಿರುವ ನಿಲುವು. ಈ ಕ್ರಮದಿಂದ ಪೆಲೆಸ್ತೈನ್ ಪ್ರದೇಶಗಳ ಕಾನೂನುಬಾಹಿರ ಇಸ್ರೇಲಿ ಆಕ್ರಮಣವನ್ನು ಕಾನೂನಬದ್ಧಗೊಳಿಸುವ ಒಂದು ಔಪಚಾರಿಕ ಹೆಜ್ಜೆಯನ್ನು ಅಮೆರಿಕಾ ಇಟ್ಟಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಜಗತ್ತಿನ ಬೇರೆ ಯಾವ ದೇಶವೂ ಜೆರುಸಲೇಂಗೆ ಇಸ್ರೇಲಿನ ರಾಜಧಾನಿಯಾಗಿ ಮಾನ್ಯತೆ ನೀಡಿಲ್ಲ ಎಂಬ ಸಂಗತಿಯತ್ತ ಗಮನ ಸೆಳೆದಿದೆ.
ಇಸ್ರೇಲ್ ಮತ್ತು ಪೆಲಸ್ತೈನ್ ನಡುವೆ ಯಾವುದೇ ಶಾಂತಿ ಮಾತುಕತೆಗಳು ನಡೆಯದಂತೆ ತಪ್ಪಿಸುವುದಕ್ಕೂ ಅಮೆರಿಕಾವೇ ಹೊಣೆಯಾಗಿದೆ. ಡೊನಾಲ್ಡ್ ಟ್ರಂಪ್ ಅವರ ಈ ನಿರ್ಧಾರ ಈ ಪ್ರದೇಶವನ್ನು ಇನ್ನಷ್ಟು ಉದ್ವಿಗ್ನಗೊಳಿಸುತ್ತದೆ, ಅದು ಜಾಗತಿಕವಾಗಿಯೂ ಪರಿಣಾಮ ಬೀರುತ್ತದೆ ಎಂದು ಸಿಪಿಐ(ಎಂ) ಹೇಳಿದೆ.
ಈ ಕ್ರಮಕ್ಕೆ ಜಗತ್ತಿನಾದ್ಯಂತ ವಿರೋಧ ವ್ಯಕ್ತವಾಗಿದ್ದರೂ, ನಮ್ಮ ವಿದೇಶಾಂಗ ವ್ಯವಹಾರಗಳ ಮಂತ್ರಾಲಯದ ಅಧಿಕೃತ ವಕ್ತಾರರು ಅಮರಿಕಾದ ನಿರ್ಣಯವನ್ನು ಖಂಡಿಸಲು ಅಳುಕಿನಿಂದ ನಿರಾಕರಿಸಿದ್ದಾರೆ. ಇದು ಮೋದಿ ಸರಕಾರ ಅಮರಿಕಾ ಸಂಯುಕ್ತ ಸಂಸ್ಥಾನಗಳಿಗೆ ಎಷ್ಟರ ಮಟ್ಟಿಗೆ ದಾಸನಾಗಿದೆ ಎಂಬುದನ್ನು ತೋರಿಸುತ್ತದೆ ಎಂದೂ ಸಿಪಿಐ(ಎಂ) ಖಂಡಿಸಿದೆ.
ಇದು ಪೆಲಸ್ತೈನ್ ವಿಮೋಚನೆಗೆ ಭಾರತದ ದೀರ್ಘಕಾಲದ ಬದ್ಧತೆಗೆ ವಿರುದ್ಧವಾದ್ದರಿಂದ ಮೋದಿ ಸರಕಾರ ಅಮೆರಿಕಾದ ಈ ಕ್ರಮಕ್ಕೆ ಬಲವಾದ ಅಸಮ್ಮತಿಯನ್ನು ವ್ಯಕ್ತಪಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ.