ಮಹಾದಾಯಿ: ಬಿಜೆಪಿಯ ಅರ್ಥಹೀನ ಗಿಮಿಕ್

ಮಹದಾಯಿ ವಿವಾದವನ್ನು ನ್ಯಾಯಮಂಡಳಿ ಹೊರಗೆ, ಸರ್ವಸಮ್ಮತ ಒಪ್ಪಿಗೆ ಮೂಲಕ ಬಗೆಹರಿಸಿಕೊಳ್ಳಲು ಗೋವಾ ಸರ್ಕಾರ ಸಿದ್ಧವಿದೆ’ ಎಂದು ಅಲ್ಲಿನ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪತ್ರ ಬರೆದಿದ್ದಾರೆ. ಡಿಸೆಂಬರ್ 21ರಂದು ಹುಬ್ಬಳ್ಳಿಯಲ್ಲಿನ ಬಿಜೆಪಿ ಪರಿವರ್ತನಾ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಯಡಿಯೂರಪ್ಪ ಅವರು ಪರಿಕ್ಕರ್ ಪತ್ರವನ್ನು ಓದಿ ಹೇಳಿದರು. ‘ಬರಪೀಡಿತ ಪ್ರದೇಶಗಳ ಕುಡಿಯುವ ನೀರಿನ ಅವಶ್ಯಕತೆಗೆ ಅನುಗುಣವಾಗಿ ನ್ಯಾಯೋಚಿತವಾಗಿ ದೊರೆಯಬೇಕಿರುವ ನೀರು ಪಡೆದುಕೊಳ್ಳಲು ನಮ್ಮ ತಕರಾರಿಲ್ಲ. ಮಹದಾಯಿ ನ್ಯಾಯಮಂಡಳಿ ಸಲಹೆ ಪ್ರಕಾರ ದ್ವಿಪಕ್ಷೀಯ ಮಾತುಕತೆ ಮೂಲಕ ವಿವಾದ ಬಗೆಹರಿಯಬೇಕು ಎಂದು ಪರಿಕ್ಕರ್ ಪತ್ರದಲ್ಲಿ ತಿಳಿಸಿದ್ದಾರೆ’ ಎಂದು ಯಡಿಯೂರಪ್ಪ ತಿಳಿಸಿದರು. ‘ಈ ಬಗ್ಗೆ ಯಾರೂ ಸಂಶಯ ಇಟ್ಟುಕೊಳ್ಳಬೇಡಿ. ಚಿಂತೆ ಮಾಡಬೇಡಿ. ಗೋವಾ ರಾಜ್ಯದ ಮುಖ್ಯಮಂತ್ರಿಗಳೇ ಲಿಖಿತ ಪತ್ರವನ್ನು ಕಳಿಸಿದ್ದಾರೆ. ಹಾಗಾಗಿ, ಯೋಜನೆ ಕಾರ್ಯಗತದ ಬಗ್ಗೆ ಅನುಮಾನ ಬೇಡ. ಮಹದಾಯಿ ನೀರನ್ನು ಹರಿಸುವುದು ನನ್ನ, ಜಗದೀಶ ಶೆಟ್ಟರ್ ಹಾಗೂ ಪ್ರಹ್ಲಾದ ಜೋಶಿ ಅವರ ಜವಾಬ್ದಾರಿ.’ ಎಂದೂ ಹೇಳಿದರು.

ಮಹದಾಯಿ ನದಿ ಮತ್ತು ಅದರ ಉಪನದಿಗಳಾದ ಕಳಸಾ, ಬಂಡೂರಿ, ಹಳತಾರ ಹೀಗೆ ಹಲವಾರು ಹಳ್ಳಗಳು ಪಶ್ಚಿಮ ಘಟ್ಟದಲ್ಲಿ ಕರ್ನಾಟಕದ ಖಾನಾಪೂರದಲ್ಲಿ ಉಗಮವಾಗಿವೆ. ಪಶ್ಚಿಮಾಭಿಮುಖವಾಗಿ 29 ಕಿ.ಮಿ. ನಷ್ಟು ಕರ್ನಾಟಕದಲ್ಲಿ ಹಾಗೂ ಸುಮಾರು 50 ಕಿ.ಮಿ. ನಷ್ಟು ಗೋವಾ ರಾಜ್ಯದಲ್ಲಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತವೆ. ಮಹದಾಯಿ ನದಿ ಒಟ್ಟು ಜಲಾನಯನ ಪ್ರದೇಶ 2032 ಚ.ಕಿ.ಮಿ. ಅದರಲ್ಲಿ ಕರ್ನಾಟಕದ ಪಾಲು 375 ಚ.ಕಿ.ಮಿ. 77 ಚ.ಕಿ.ಮಿ. ಮಹಾರಾಷ್ಟ್ರ ರಾಜ್ಯದಲ್ಲಿದೆ. ಉಳಿದದ್ದು ಗೋವಾ ರಾಜ್ಯದಲ್ಲಿದೆ. ಕೇಂದ್ರ ಜಲ ಆಯೋಗದ(ಸಿಡಬ್ಲೂಸಿ) ಸಮೀಕ್ಷೆಯ ಪ್ರಕಾರ 200 ರಿಂದ 210 ಟಿಎಮ್ಸಿ ನೀರಿನ ಲಭ್ಯತೆ ಇದೆ. ಇದರಲ್ಲಿ ಕರ್ನಾಟಕದ ಪಾಲು 45 ಟಿಎಂಸಿ ಅಷ್ಟು. ಈ ನದಿಗೆ ಗೋವಾದಲ್ಲಿ ಯಾವುದೇ ಯೋಜನೆಯನ್ನು ಹಾಕಿಕೊಂಡಿಲ್ಲ.

ಈ ಪಾಲಿನಲ್ಲಿ ಕಳಸಾ-ಬಂಡೂರಿ ನಾಲೆಗಳಿಂದ ವಾರ್ಷಿಕ 7.56 ಟಿಎಂಸಿ ಅಡಿ ನೀರನ್ನು ಮಲಪ್ರಭಾ ನದಿಗೆ ಹರಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಈಗಾಗಲೇ ಆರಂಭಿಸಿದೆ. ಯೋಜನೆಗೆ ಅಡ್ಡಿಪಡಿಸಿರುವ ಗೋವಾ, ಸಂಧಾನದ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಮಹದಾಯಿ ಜಲವಿವಾದ ನ್ಯಾಯಮಂಡಳಿ ನೀಡಿರುವ ಸಲಹೆಯನ್ನೂ ತಿರಸ್ಕರಿಸಿದೆ. ಮುಂಬೈ ಕರ್ನಾಟಕ ಭಾಗದ ಧಾರವಾಡ, ಗದಗ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಜನರು ಎದುರಿಸುತ್ತಿರುವ ಕುಡಿಯುವ ನೀರಿನ ಬವಣೆಯನ್ನು ನೀಗಿಸುವ ನಿಟ್ಟಿನಲ್ಲಿ ಯೋಜನೆಗೆ ಗೋವಾ ಸರ್ಕಾರದ ಒಪ್ಪಿಗೆ ಅಗತ್ಯವಾಗಿದೆ. ಇದು ಸಮಸ್ಯೆಯ ಮೂಲ.

ಸಂಧಾನ ಸೂತ್ರದ ಮೂಲಕ ಮಹದಾಯಿ ಜಲವಿವಾದ ಬಗೆಹರಿಸುವ ನಿಟ್ಟಿನಲ್ಲಿ ಗೋವಾ ಸರ್ಕಾರದ ಮನವೊಲಿಸುವಂತೆ ಬಿಜೆಪಿ ರಾಜ್ಯ ಘಟಕವು ಪಕ್ಷದ ವರಿಷ್ಠರ ನೇತೃತ್ವದಲ್ಲಿ ದೆಹಲಿಯಲ್ಲಿ ಡಿಸೆಂಬರ್ 20ರಂದು ನಡೆದ ಸಭೆಯಲ್ಲಿ ಚರ್ಚಿಸಿತ್ತು.  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಸಹ ಹಾಜರಿದ್ದರು. ಪರಿಕ್ಕರ್ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿದ ಅಮಿತ್ ಷಾ, ‘ಪಕ್ಷವು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಆಶಾಭಾವ ಹೊಂದಿದೆ. ಕುಡಿಯುವ ನೀರಿನ ಮಹತ್ವದ ಈ ಬೇಡಿಕೆಗೆ ಒಪ್ಪಿಗೆ ಸೂಚಿಸಿದಲ್ಲಿ ಪಕ್ಷಕ್ಕೆ ಬೆಂಬಲ ಸಿಗಲಿದೆ’ ಎಂದು ಮನವರಿಕೆ ಮಾಡಿದ ನಂತರ ಗೋವಾ ಮುಖ್ಯಮಂತ್ರಿ ಈ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಆದರೆ ಬಿಜೆಪಿಯ ಈ ಚುನಾವಣಾ-ಪೂರ್ವ ಸರ್ಕಸ್ಸಿಗೆ ಇತರ ಪಕ್ಷಗಳಿಂದ ಮತ್ತು ಆ ಪ್ರದೇಶದ ರೈತರು ಹಾಗೂ ಜನತೆಯಿಂದ ತೀಕ್ಷ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲನೆಯದಾಗಿ ಬಿಜೆಪಿ ಈ ಸರ್ಕಸ್ಸನ್ನೂ ಸ್ವಯಂ-ಸ್ಫೂರ್ತವಾಗಿ ಮಾಡಿಲ್ಲ. ಅದಕ್ಕೂ ರೈತರ ಆಕ್ರೋಶವೇ  ಕಾರಣವಾಗಿತ್ತು.  ಹುಬ್ಬಳ್ಳಿಯಲ್ಲಿ  ಬಿಜೆಪಿ ಪರಿವರ್ತನಾ ಯಾತ್ರೆ ಆರಂಭಕ್ಕೂ ಮುನ್ನ ಮಹದಾಯಿ ಕುರಿತು ಯಡಿಯೂರಪ್ಪ ಅವರು ಸ್ಪಷ್ಟ ನಿರ್ಧಾರವನ್ನು ತಿಳಿಸಬೇಕು ಎಂದು ಪ್ರತಿಭಾಟನಾಕಾರರು ಒತ್ತಾಯಿಸಿದ್ದರು. ಬಿಜೆಪಿ ಪರಿವರ್ತನಾ ಯಾತ್ರೆ ವಿರೋಧಿಸಿ ಪ್ರತಿಭಟನೆ ಮಾಡಿದ ನವಲಗುಂದ ಮತ್ತು ಹುಬ್ಬಳ್ಳಿಯ 50ಕ್ಕೂ ಹೆಚ್ಚು ರೈತ ಹೋರಾಟಗಾರರನ್ನು ಪೋಲಿಸರು ಬಂಧಿಸಿದ್ದರು. ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಚುನಾವಣಾ ಗಿಮಿಕ್ ಕೇಳಲು ನಾವೇನು ಗುಜರಾತಿಗಳಲ್ಲ.

ಈ ಹೊತ್ತಿನಲ್ಲಿ ಅವರು ಕೊಡುವ ಭರವಸೆಗಳನ್ನು ಕೇಳಲು ನಾವು ಸಿದ್ಧರಿಲ್ಲ’ ಎಂದು ಕಳಸಾ-ಬಂಡೂರಿ ಪಕ್ಷಾತೀತ ರೈತ ಹೋರಾಟ ಸಮಿತಿಯ ಅಧ್ಯಕ್ಷ ಲೋಕನಾಥ ಕಿಡಿಕಾರಿದ್ದಾರೆ. ‘ರೈತರ ನಿರಂತರ ಹೋರಾಟವನ್ನು ಇದುವರೆಗೆ ನಿರ್ಲಕ್ಷಿಸುತ್ತಲೇ ಬಂದ ಬಿಜೆಪಿಯವರಿಗೆ ಈಗ ಮಹದಾಯಿ ವಿಚಾರ ನೆನಪಿಗೆ ಬಂದಿದೆ. ಎರಡೂವರೆ ವರ್ಷ ಹೋರಾಟ ಮಾಡಿದ್ದೇವೆ. ಬೂಟಿನೇಟು ತಿಂದಿದ್ದೇವೆ. ಜೈಲು ಕಂಡು ಬಂದಿದ್ದೇವೆ. ಕಣ್ಣೀರಿನಿಂದ ಕೈತೊಳೆಯುವಾಗ ಕರುಣೆ ತೋರದ ಅವರು, ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆಯೇ ಸಭೆ ಕರೆದು ನಮ್ಮನ್ನು ಹುಚ್ಚರನ್ನಾಗಿ ಮಾಡಲು ಹೊರಟಿದ್ದಾರೆ. ಇವರ ಮಾತಿಗೆ ಬಗ್ಗುವುದಿಲ್ಲ’ ಎಂದರು. ಡಿಸೆಂಬರ್ 15ರ ಒಳಗಾಗಿ ಸಮಸ್ಯೆ ಬಗೆಹರಿಸಿ ಈ ಭಾಗಕ್ಕೆ ಕಾಲು ಇಡುವುದಾಗಿ ಮಾತು ಕೊಟ್ಟಿದ್ದ ಯಡಿಯೂರಪ್ಪ ವಚನಭ್ರಷ್ಟರಾಗಿದ್ದಾರೆ. ಇದೀಗ, ಕಾಟಾಚಾರಕ್ಕೆ ಎಂಬಂತೆ ಅಮಿತ್ ಷಾ ದೆಹಲಿಯಲ್ಲಿ ಸಭೆ ಕರೆದು ಚರ್ಚಿಸಿದ್ದಾರೆ ಎಂದು ಟೀಕಿಸಿದ್ದಾರೆ..

“ಮಹದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಬಳಿ ಕರೆದುಕೊಂಡು ಹೋಗಿದ್ದೆ. ಆ ವೇಳೆಯಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಲು ನಿರಾಕರಿಸಿದ್ದರು. ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ನಾಯಕರು ಮಾತನಾಡಿರಲಿಲ್ಲ. ಈಗ ಚುನಾವಣೆ ಹತ್ತಿರವಾದ ಸಂದರ್ಭದಲ್ಲಿ ಸಭೆ ನಡೆಸಿದ್ದಾರೆ”. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.  ‘ಮೂರು ರಾಜ್ಯಗಳಿಗೆ ಸಂಬಂಧಿಸಿದ ವಿವಾದ ಇದು. ಗೋವಾ ಸರ್ಕಾರದಿಂದ ನಮಗೆ ಪತ್ರ ಬರೆಯಬೇಕು. ನ್ಯಾಯಮಂಡಳಿ ಮುಂದೆ ಪ್ರಮಾಣಪತ್ರ ಸಲ್ಲಿಸಬೇಕು. ಯಡಿಯೂರಪ್ಪ ಅವರು ಚುನಾಣೆಗಾಗಿ ಹೇಳಿಕೆ ನೀಡುವುದರಿಂದ ಪ್ರಯೋಜನ ಆಗುವುದಿಲ್ಲ’ ಎಂದು ಸಿಎಂ ಟೀಕಿಸಿದ್ದಾರೆ.

ಮನೋಹರ್ ಪರಿಕ್ಕರ್ ಪತ್ರಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ‘ಚುನಾವಣೆ ಸಂದರ್ಭದಲ್ಲಿ ಈ ಪತ್ರವನ್ನು ಬರೆಯುವ ಮೂಲಕ ಬಿಜೆಪಿ ಕರ್ನಾಟಕದ ಜನತೆಗೆ ಟೋಪಿ ಹಾಕಲು ಹೊರಟಿದೆ. ಇದಕ್ಕೆ ಜನತೆ ಮನ್ನಣೆ ನೀಡುವುದಿಲ್ಲ. ಪತ್ರವನ್ನು ರಾಜ್ಯದ ಮುಖ್ಯಮಂತ್ರಿ ಅಥವಾ ಜಲ ಸಂಪನ್ಮೂಲ ಸಚಿವರಿಗೆ ಬರೆಯಬೇಕೆ ಹೊರತು ಬಿಜೆಪಿ ರಾಜ್ಯ ಅಧ್ಯಕ್ಷರಿಗೆ ಅಲ್ಲ’ ಎಂದಿದ್ದಾರೆ.

ಮಹಾದಾಯಿ ಬಗ್ಗೆ ಯೆಡಿಯೂರಪ್ಪ ಘೋಷಣೆ ಬರಿಯ ಚುನಾವಣಾ ರಾಜಕೀಯ ಗಿಮಿಕ್ ಎಂಬುದು ಸ್ಪಷ್ಟ. ಬಿಜೆಪಿ ಮತ್ತು ಅವರು ನಡೆದುಕೊಳ್ಳುತ್ತಿರುವ ರೀತಿ ಅದರ ಜಾರಿಯ ಪ್ರಾಮಾಣಿಕತೆಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟು ಹಾಕುತ್ತದೆ. ನಿಜವಾಗಿಯೂ ಚುನಾವಣಾ-ಪೂರ್ವ ರಾಜಕೀಯ ಕೊಡುಗೆ ಎಂದಾಗಿದ್ದರೆ, ಪ್ರಧಾನಿಯೇ ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸಭೆ ಸೇರಿಸಿ ಈ ಬಗ್ಗೆ ಒಂದು ಒಪ್ಪಂದಕ್ಕೆ ಬಂದು ನ್ಯಾಯಮಂಡಳಿ ಮುಂದೆ ಪ್ರಮಾಣಪತ್ರ ಸಲ್ಲಿಸಬೇಕಿತ್ತು. ಈ  ನಿಟ್ಟಿನಲ್ಲಿ ಮುಂದುವರೆಯದೆ ಈ ವಿವಾದ ಬಿಜೆಪಿ ಪಕ್ಷದ ಆಂತರಿಕ ವಿಷಯವೋ ಎಂಬಂತೆ ವರ್ತಿಸಿದ್ದು ಖಂಡನೀಯ. ಮಾತ್ರವಲ್ಲ, ಸಂವಿಧಾನೇತರ ಶಕ್ತಿ ಕೇಂದ್ರಗಳು ಕೇಂದ್ರ-ರಾಜ್ಯ ಹಾಗು ರಾಜ್ಯ-ರಾಜ್ಯಗಳ ನಡುವಿನ ವಿವಾದಗಳ ಪರಿಹಾರಕ್ಕೆ ಮಾಡಿರುವ ಸಂವಿಧಾನಾತ್ಮಕ ವ್ಯವಸ್ಥೆಯ ಉಲ್ಲಂಘನೆ.

ಗೋವಾ ಸರ್ಕಾರದ ಒಪ್ಪಿಗೆ ಪಡೆಯಲು ಹಿಂದೆ ಕರ್ನಾಟಕ ಸರಕಾರದಿಂದ ಹಲವು ಪ್ರಯತ್ನಗಳು ಆಗಿವೆ. ಕುಡಿಯುವ ನೀರಿಗೆ ಮಧ್ಯಂತರ ತೀರ್ಪಿಗೆ (2015) ಪ್ರಯತ್ನಿಸಿದಾಗ ಅದನ್ನು ತಿರಸ್ಕರಿಸಿ  (ಜುಲೈ 2016) ನ್ಯಾಯಮಂಡಳಿ ಅದನ್ನು ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಬಹುದು ಎಂದು ಸೂಚಿಸಿತ್ತು. ಆಗ ಗೋವಾ ಮುಖ್ಯಮಂತ್ರಿಗೆ (ಸೆಪ್ಟೆಂಬರ್ 2016) ಸಿದ್ಧರಾಮಯ್ಯ ಪತ್ರ ಬರೆದಿದ್ದರು. ಅಕ್ಟೋಬರ್ 2016ರಲ್ಲಿ ನಿಗದಿತವಾಗಿದ್ದ ಮುಖ್ಯಮಂತ್ರಿಗಳ ಸಭೆ ಗೋವಾ ಮುಖ್ಯಮಂತ್ರಿಗಳ ಅನುಪಸ್ಥಿತಿಯಿಂದ ಆಗಿರಲಿಲ್ಲ. ಮೇ 2017ರಲ್ಲಿ ಸಿದ್ಧರಾಮಯ್ಯ ಮತ್ತೆ ಪರಿಕ್ಕರ್ ಅವರಿಗೆ ಪತ್ರ ಬರೆದಿದ್ದರು. ಜುಲೈ 2017ರಲ್ಲಿ ಗೋವಾ ಸರಕಾರ ಕರ್ನಾಟಕದ ಜತೆ ಯಾವುದೇ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿಕೆ ನೀಡಿತ್ತು. ಇಷ್ಟು ಹಟಮಾರಿತನ ತೋರಿದ ಪರಿಕ್ಕರ್ ಯೆಡಿಯೂರಪ್ಪ ಅವರಿಗೆ ಪತ್ರ ಬರೆಯುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ ಎಂಬುದು ನಂಬಲರ್ಹವಲ್ಲ.

ಸಾಲದ್ದಕ್ಕೆ ಈಗ ಗೋವಾ ಬಿಜೆಪಿ ಸರಕಾರದಲ್ಲಿ ಮೈತ್ರಿಕೂಟದಲ್ಲಿರುವ ಗೋವಾ ಫಾರ್ವರ್ಡ್ ಪಾರ್ಟಿ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.  ಆ ಪಕ್ಷವನ್ನು ಪ್ರತಿನಿಧಿಸುವ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ, ಪರಿಕ್ಕರ ನಿಲುವಿಗೆ ವಿರೋಧ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ‘ಮಹದಾಯಿ ನದಿ ನೀರಿನಲ್ಲಿ ಒಂದು ಹನಿಯನ್ನೂ ಬಿಡುವುದಿಲ್ಲ. ಎಂದಿದ್ದಾರೆ. ಇದರಿಂದ ಬಿಜೆಪಿಯ ರಾಜಕೀಯ ಗಿಮಿಕ್ ನ ವಿಶ್ವಾಸಾರ್ಕತೆ ಇನ್ನಷ್ಟು ಕಡಿಮೆಯಾಗಿದೆ.

ಈ ಅರ್ಥಹೀನ ರಾಜಕಿಯ ಗಿಮಿಕ್ಕನ್ನು ಮೆಚ್ಚಿ ಬಿಜೆಪಿಯನ್ನು ಬೆಂಬಲಿಸಲು ಕರ್ನಾಟಕದ ಜನ ಮೂರ್ಖರಲ್ಲ. ಅದನ್ನು ಚುನಾವಣೆಯ ಮೊದಲೂ ಚುನಾವಣೆಯಲ್ಲೂ ಸಿದ್ಧ ಪಡಿಸಬೇಕಾಗಿದೆ. ಪ್ರಧಾನಿಯೇ ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸಭೆ ಸೇರಿಸಿ ಈ ಬಗ್ಗೆ ಒಂದು ಒಪ್ಪಂದಕ್ಕೆ ಬಂದು ನ್ಯಾಯಮಂಡಳಿ ಮುಂದೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಒತ್ತಾಯಿಸಬೇಕಾಗಿದೆ.

ಇದೇ ಸಮಯದಲ್ಲಿ ಇತರ ಹಲವು ಅಂತರ-ರಾಜ್ಯ ವಿವಾದಗಳಂತೆ ಮಹಾದಾಯಿ ವಿವಾದ, ಅಧಿಕಾರದಾಹಕ್ಕಾಗಿ ರಾಜ್ಯಗಳ ನಡುವೆ ತಗಾದೆ ತಂದಿಡುವ, ಕೇಂದ್ರದಲ್ಲೊಂದು ರಾಜ್ಯದಲ್ಲೊಂದು, ಚುನಾವಣಾ ಸಮಯದಲ್ಲೊಂದು ಆ ಮೇಲೊಂದು ಮಾತನಾಡುವ ಕಾಂಗ್ರೆಸ್-ಬಿಜೆಪಿಗಳ ಚಿಲ್ಲರೆ ರಾಜಕಾರಣದ ಫಲ. ಈಗ ಎರಡೂ ಪಕ್ಷಗಳು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿವೆ. ಈ ಎರಡೂ ಪಕ್ಷಗಳು ಇದಕ್ಕೆ ಸಮಾನವಾಗಿ ಜವಾಬ್ದಾರರು. ಕಾಂಗ್ರೆಸ್-ಬಿಜೆಪಿಗಳಂತಹ ಬೂಜ್ರ್ವಾ-ಭೂಮಾಲಕ ಪಕ್ಷಗಳು ಪಾಲಿಸುತ್ತಿರುವ ನವ-ಉದಾರವಾದಿ ನೀತಿಗಳ ಭಾಗವಾದ (ನದಿ ನೀರು ಸೇರಿದಂತೆ) ಪ್ರಾಕೃತಿಕ ಸಂಪನ್ಮೂಲಗಳ ಬಗೆಗಿನ ನೀತಿ ಅದನ್ನು ಖಾಸಗೀಕರಿಸುವತ್ತ ಗಮನ ಹರಿಸಿವೆಯೇ ವಿನಹ, ಕುಡಿಯುವ ಅಥವಾ ಕೃಷಿಗಾಗಿ ನೀರಿನಲ್ಲಿ ಹೂಡಿಕೆ ಮಾಡುವ ಉದ್ದೇಶ ಹೊಂದಿಲ್ಲವೆಂದೂ ಅರ್ಥಮಾಡಿಕೊಳ್ಳಬೇಕು.

Leave a Reply

Your email address will not be published. Required fields are marked *