ಕಾಮ್ರೇಡ್ ಮೊಹಮ್ಮದ್ ಅಮೀನ್, ದೇಶದ ಹಿರಿಯ ಕಾರ್ಮಿಕ ಮುಖಂಡರು, ಸಿಐಟಿಯುನ ಮಾಜಿ ಪ್ರಧಾನ ಕಾರ್ಯದರ್ಶಿ ಫೆಬ್ರುವರಿ 12ರಂದು ಕೊಲ್ಕತಾದಲ್ಲಿ ನಿಧನರಾಗಿದ್ದಾರೆ. ಈ ಹಿಂದೆ ಸಿಪಿಐ(ಎಂ)ನ ಪೊಲಿಟ್ಬ್ಯುರೊದ ಸದಸ್ಯರೂ, ರಾಜ್ಯಸಭಾ ಸದಸ್ಯರೂ ಮತ್ತು ಪಶ್ಚಿಮ ಬಂಗಾಲದ ಸಂಯುಕ್ತ ರಂಗ ಮತ್ತು ಜ್ಯೋತಿಬಸು ನೇತೃತ್ವದ ಎಡರಂಗ ಸರಕಾರಗಳಲ್ಲಿ ಮಂತ್ರಿಯೂ ಆಗಿ ಅವರು ಸೇವೆ ಸಲ್ಲಿದ್ದಾರೆ. ಅವರಿಗೆ 90 ವರ್ಷವಾಗಿತ್ತು.
ಸಿಪಿಐ(ಎಂ) ಪೊಲಿಟ್ಬ್ಯರೊ ಅವರ ಸೇವೇಗಳನ್ನು ಸ್ಮರಿಸಿಕೊಂಡು ಶ್ರದ್ಧಾಂಜಲಿ ಅರ್ಪಿಸುತ್ತ ಅವರ ನಿಧನ ದೇಶದ ಕಮ್ಯುನಿಸ್ಟ್ ಆಂದೋಲನಕ್ಕೆ ಒಂದು ದೊಡ್ಡ ನಷ್ಟ ಎಂದು ಹೇಳಿದೆ.
ಮೊಹಮ್ಮದ್ ಅಮೀನ್ ಉತ್ತರಪ್ರದೇಶದ ವಾರಣಾಸಿಯಿಂದ ಕೊಲ್ಕತಾಕ್ಕೆ ವಲಸೆ ಬಂದ ಒಂದು ಬಡ ಕುಟುಂಬದಲ್ಲಿ ಜನಿಸಿದರು. ಔಪಚಾರಿಕ ಶಿಕ್ಷಣದ ಅಭಾವ ಮತ್ತು ಬಡತನದಿಂದಾಗಿ 14ನೇ ವರ್ಷದಲ್ಲಿಯೇ ಅವರು ಸಣಬು ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ದುಡಿಯಲಾರಂಭಿಸಿದರು.
ಬೇಗನೇ ಅವರು ಕಾರ್ಮಿಕ ಆಂದೋಲನ ಸೇರಿದರು, ಬಂಗಾಲ ಜೂಟ್ ಮಿಲ್ ಮಜದೂರ್ ಯೂನಿಯನ್ ಸದಸ್ಯರಾದರು. ಎರಡನೇ ಮಹಾಯುದ್ಧದದ ಅಂತ್ಯದ ವೇಳೆಗೆ ಅವರು ಕಮ್ಯುನಿಸಂನತ್ತ ಆಕರ್ಷಿತರಾಗಿ 1946ರಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಸೇರಿದರು. ದೇಶದ ವಿಭಜನೆಯಾದ ಆರಂಭದ ದಿನಗಳಲ್ಲಿ ಅವರು ಪಕ್ಷದದ ಸೂಚನೆಯ ಮೇರೆಗೆ ಪೂರ್ವ ಪಾಕಿಸ್ತಾನಕ್ಕೆ ಹೋದರು. ಅಲ್ಲಿ ಆಂದೋಲನಗಳಿಗೆ ನೇತೃತ್ವ ನೀಡಿದ್ದಕ್ಕೆ ಜೈಲು ಶಿಕ್ಷೆಗೊಳಗಾದರು. ಜೈಲಿನಿಂದ ಬಿಡುಗಡೆಯಾದ ನಂತರ ಪಶ್ಚಿಮ ಬಂಗಾಲಕ್ಕೆ ಮರಳಿದರು.
ಒಬ್ಬ ಉತ್ತಮ ಸಂಘಟಕರಾಗಿದ್ದ ಅವರು ಬ್ಯಾರಕ್ಪುರ್ ಕೈಗಾರಿಕಾ ಪಟ್ಟಿಯಲ್ಲಿ ಸಣಬು, ಬೀಡಿ ಮತ್ತಿತರ ಕಾರ್ಮಿಕರನ್ನು ಸಂಘಟಿಸಿದರು. ತಮ್ಮ ಜೀವಮಾನವಿಡೀ ಅವರು ಕಾರ್ಮಿಕ ವರ್ಗದ ಹಿತಗಳನ್ನು ಪ್ರತಿಪಾದಿಸಿದವರು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ನೆನಪಿಸಿಕೊಂಡಿದೆ.
ಮೊಹಮ್ಮದ್ ಅಮೀನ್ 1955ರಲ್ಲಿ ಕಮ್ಯುನಿಸ್ಟ್ ಪಕ್ಷದ 24 ಪರಗಣ ಜಿಲ್ಲಾ ಸಮಿತಿಗೆ ಆಯ್ಕೆಯಾದರು, 1971ರಲ್ಲಿ ಪಶ್ಚಿಮ ಬಂಗಾಲ ರಾಜ್ಯ ಸಮಿತಿಗೆ ಆಯ್ಕೆಗೊಂಡರು, ಮತ್ತು 1985ರಲ್ಲಿ 12ನೇ ಸಿಪಿಐ(ಎಂ) ಮಹಾಧಿವೇಶನದಲ್ಲಿ ಕೇಂದ್ರ ಸಮಿತಿಗೆ ಆಯ್ಕೆಯಾದರು. 2008ರಲ್ಲಿ ಅವರು ಸಿಪಿಐ(ಎಂ) ಪೊಲಿಟ್ಬ್ಯುರೊಗೆ ಆರಿಸಲ್ಪಟ್ಟರು. 2012ರಲ್ಲಿ ಸಿಪಿಐ(ಎಂ)ನ 20ನೇ ಮಹಾಧಿವೇಶನದಲ್ಲಿ ಅವರನ್ನು ಕೇಂದ್ರಸಮಿತಿಯ ಒಬ್ಬ ವಿಶೇಷ ಆಹ್ವಾನಿತರಾಗಿ ಮಾಡಲಾಯಿತು.
ಸಿಐಟಿಯುನ 12ನೇ ಸಮ್ಮೇಳನದಲ್ಲಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿಸಲಾಯಿತು. ನಂತರ ಅವರು ಅದರ ಒಬ್ಬ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.
1969ರಲ್ಲಿ ಮೊಹಮ್ಮದ್ ಅಮೀನ್ ಪಶ್ಚಿಮ ಬಂಗಾಲದ ಟಿಟಾಘರ್ ಕ್ಷೇತ್ರದಿಂದ ವಿಧಾನಸಭೆಗೆ ಆರಿಸಲ್ಪಟ್ಟರು. 1970ರಲ್ಲಿ ಅಜೊಯ್ ಮುಖರ್ಜಿ ನೇತೃತ್ವದ ಸಂಯುಕ್ತ ರಂಗ ಸರಕಾರದಲ್ಲಿ ಸಾರಿಗೆ ಮಂತ್ರಿಯಾದರು. 1971ರಲ್ಲಿ ಅರೆ-ಫ್ಯಾಸಿಸ್ಟ್ ಭಯೋತ್ಪಾದನೆಯನ್ನು ಎದುರಿಸಿ ಅವರು ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. 1977ರ ವಿಧಾನಸಭಾ ಚುನಾವಣೆಗಳಲ್ಲಿ ಅವರು ಪುನರಾಯ್ಕೆಗೊಂಡು ಮೊದಲ ಎಡರಂಗ ಸರಕಾರದಲ್ಲಿ ಸಾರಿಗೆ ಮಂತ್ರಿಗಳಾದರು. ನಂತರ ಅವರು 1996ರಿಂದ 2006ರ ನಡುವೆ ಅಲ್ಪಸಂಖ್ಯಾತ ಇಲಾಖೆಯ ಮಂತ್ರಿಯಾಗಿ ಮತ್ತು ಕಾರ್ಮಿಕ ಮಂತ್ರಿಯಾಗಿ ಸೇವೆ ಸಲ್ಲಿಸಿದರು. 1988 ರಿಂದ 1994 ರವರೆಗೆ ಅವರು ಒಂದು ಅವಧಿಗೆ ಅವರು ರಾಜ್ಯಸಭಾಕ್ಕೂ ಆಯ್ಕೆಯಾಗಿದ್ದರು.
ತಮ್ಮ ರಾಜಕೀಯ ಜೀವನದಲ್ಲಿ ಮೊಹಮ್ಮದ್ ಅಮೀನ್ ಒಟ್ಟು ಎರಡು ವರ್ಷಗಳ ಕಾಲ ಜೈಲಿನಲ್ಲಿ ಕಳೆದರು, ಅಷ್ಟೇ ಅವಧಿಯ ಭೂಗತ ಜೀವನವನ್ನೂ ನಡೆಸಿದರು.
ಮೊಹಮ್ಮದ್ ಅಮೀನ್ ಪತ್ರಕರ್ತರೂ, ಕವಿಯೂ ಕೂಡ. ಪಶ್ಚಿಮ ಬಂಗಾಲ ಸಿಪಿಐ(ಎಂ)ನ ಉರ್ದು ಪತ್ರಿಕೆ ‘ಕಿಸಾನ್ ಮಜ್ದೂರ್’ ಸಂಪಾದಕರಾಗಿ ಕೆಲಸ ಮಾಡಿದರು. ಅವರ ಕವನಗಳ ಹಲವು ಸಂಗ್ರಹಗಳು ಪ್ರಕಟವಾಗಿವೆ.
ಅವರು ಅತ್ಯಂತ ಸರಳ ಜೀವನ ನಡೆಸಿದವರು, ಅವರ ಆವಶ್ಯಕತೆಗಳು ಬಹಳ ಕಡಿಮೆ. ಸ್ನೇಹಜೀವಿಯಾಗಿದ್ದ ಅವರದ್ದು ನೇರ ನಡೆ, ಸದಾ ಬಡವರು ಮತ್ತು ದಮನಕ್ಕೆ ಒಳಗಾದವರ ಪರಿಸ್ಥಿತಿಗಳ ಬಗ್ಗೆ ಆತಂಕಿತರಾಗಿದ್ದರು ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯರೊ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತ ಅವರ ಮೂವರು ಮಕ್ಕಳಿಗೆ ಹಾರ್ದಿಕ ಸಂತಾಪ ವ್ಯಕ್ತಡಿಸಿದೆ.