“ಎಡ ಮತ್ತು ಪ್ರಜಾಪ್ರಭುತ್ವವಾದಿ ಕಾರ್ಯಕ್ರಮದ ಸುತ್ತ ಚಳುವಳಿಗಳು ಮತ್ತು ಹೋರಾಟಗಳ ಮೂಲಕ
ಒಂದು ನಿಜವಾದ ಪರ್ಯಾಯ ಮೂಡಿ ಬರುತ್ತದೆ”
ಸಿಪಿಐ(ಎಂ)ನ 22ನೇ ಮಹಾಧಿವೇಶನದ ಕರಡು ರಾಜಕೀಯ ನಿರ್ಣಯವನ್ನು ಫೆಬ್ರುವರಿ 12ರಂದು ಬಿಡುಗಡೆ ಮಾಡಲಾಗಿದೆ. ಜನವರಿ 19ರಿಂದ 21ರ ವರೆಗೆ ಕೊಲ್ಕತಾದಲ್ಲಿ ಸಭೆ ಸೇರಿದ ಪಕ್ಷದ ಕೇಂದ್ರ ಸಮಿತಿ ಅಂಗೀಕರಿಸಿದ ಕರಡನ್ನು ಮಹಾಧಿವೇಶನದ ಮೊದಲು ಪಕ್ಷದ ಎಲ್ಲ ಹಂತಗಳಲ್ಲಿ ಚರ್ಚಿಸಲಾಗುವುದು.
ಕರಡು ನಿರ್ಣಯ ಪ್ರಸಕ್ತ ಅಂತರ್ರಾಷ್ಟ್ರೀಯ ಮತ್ತು ರಾಷ್ಟ್ರೀಯ ಸನ್ನಿವೇಶವನ್ನು ಸಮಗ್ರವಾಗಿ ಪರಿಶೀಲಿಸಿ ಪಕ್ಷ ಸಂದರ್ಭದಲ್ಲಿ ಅನುಸರಿಸಬೇಕಾದ ರಾಜಕೀಯ ಮತ್ತು ಕಾರ್ಯತಂತ್ರದ ನಿಲುವನ್ನು ಮತ್ತು ನೆರವೇರಿಸಬೇಕಾದ ಕರ್ತವ್ಯಗಳನ್ನು ನಿರೂಪಿಸಿದೆ.
ರಾಷ್ಟ್ರೀಯ ಸನ್ನಿವೇಶವನ್ನು ವಿಶ್ಲೇಷಿಸುತ್ತ ಕರಡು ನಿರ್ಣಯ ಮೋದಿ ಸರಕಾರದ ಸುಮಾರು ನಾಲ್ಕು ವರ್ಷಗಳು ಒಂದು ಬಲಪಂಥೀಯ ಸರ್ವಾಧಿಕಾರಶಾಹಿ-ಕೋಮುವಾದಿ ಆಡಳಿತವನ್ನು ಆರಂಭಿಸಿದೆ ಎಂದು ಅಭಿಪ್ರಾಯ ಪಟ್ಟಿದೆ. ಈ ಆಡಳಿತದ ಮುಖ್ಯ ಲಕ್ಷಣಗಳೆಂದರೆ, ನವ-ಉದಾರವಾದಿ ಧೋರಣೆಗಳನ್ನು ಇನ್ನೂ ಹೆಚ್ಚು ತೀವ್ರತೆಯಿಂದ ಅನುಸರಿಸುವುದು, ಅದರ ಫಲಿತಾಂಶವಾಗಿ ದುಡಿಯುವ ಜನಗಳ ಮೇಲೆ ಸರ್ವತೋಮುಖ ಪ್ರಹಾರಗಳು, ಪ್ರಭುತ್ವದ ಜಾತ್ಯತೀತ ಪ್ರಜಾಸತ್ತಾತ್ಮಕ ಚೌಕಟ್ಟಿಗೆ ಬೆದರಿಕೆಯೊಡ್ಡುವ ಆರೆಸ್ಸೆಸ್‍ನ ಹಿಂದುತ್ವ ಅಜೆಂಡಾದ ಜಾರಿಗೆ ಎಡೆಬಿಡದ ಪ್ರಯತ್ನ, ಜತೆಗೆ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ದಾಳಿಗಳು, ಅಮೆರಿಕಾದೊಂದಿಗೆ ವ್ಯೂಹಾತ್ಮಕ ಮೈತ್ರಿಯನ್ನು ಗಟ್ಟಿಗೊಳಿಸುವುದು ಮತ್ತು ಒಂದು ಅಡಿಯಾಳು ಮಿತ್ರನ ಪಾತ್ರ ವಹಿಸುವುದು, ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ಹತ್ತಿಕ್ಕಿ, ಸಂವಿಧಾನಿಕ ಸಂಸ್ಥೆಗಳನ್ನು ಹಾಗೂ ಪ್ರಜಾಪ್ರಭುತ್ವ ಹಕ್ಕುಗಳನ್ನು ಬುಡಮೇಲು ಮಾಡಿ ಸರ್ವಾಧಿಕಾರಶಾಹಿ ವಿನ್ಯಾಸವನ್ನು ಕಟ್ಟುವುದು ಎಂದು ಅದು ವರ್ಣಿಸಿದೆ.
ಇಂತಹ ಸಂದರ್ಭದಲ್ಲಿ ಪಕ್ಷ ಅನುಸರಿಸಬೇಕಾದ ರಾಜಕೀಯ ಹಾದಿಯನ್ನು ಕರಡು ರಾಜಕೀಯ ನಿರ್ಣಯ ಈ ರೀತಿ ನಿರೂಪಿಸಿದೆ:
- ಮೋದಿ ಸರಕಾರದ ಸುಮಾರು ನಾಲ್ಕು ವರ್ಷಗಳ ಆಳ್ವಿಕೆಯ ಅನುಭವದ ಹಿನ್ನೆಲೆಯಲ್ಲಿ ಹಿಂದುತ್ವ ಕೋಮುವಾದಿ ಪಡೆಗಳನ್ನು ಏಕಾಂಗಿಯಾಗಿಸಲು ಮತ್ತು ಜನ-ವಿರೋಧಿ ಆರ್ಥಿಕ ಧೋರಣೆಗಳನ್ನು ಹಿಮ್ಮೆಟ್ಟಿಸಲು ಬಿಜೆಪಿಯನ್ನು ಸೋಲಿಸುವುದು ಅತ್ಯಗತ್ಯ.
- ಆದ್ದರಿಂದ ಎಲ್ಲ ಜಾತ್ಯತೀತ ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಅಣಿನೆರೆಸಿ ಬಿಜೆಪಿ ಮತ್ತು ಅದರ ಮಿತ್ರರನ್ನು ಸೋಲಿಸುವುದು ಮುಖ್ಯ ಕರ್ತವ್ಯ ವಾಗುತ್ತದೆ. ಆದರೆ ಇದನ್ನು ಕಾಂಗ್ರೆಸ್ ಪಕ್ಷದೊಂದಿಗೆ ಒಂದು ಹೊಂದಿಕೆ ಅಥವ ಚುನಾವಣಾ ಮೈತ್ರಿಯಿಲ್ಲದೆ ಮಾಡಬೇಕಾಗಿದೆ.
- ಪಕ್ಷ ಕೇಂದ್ರದಲ್ಲಿನ ಬಿಜೆಪಿ ಸರಕಾರ ಮತ್ತು ಪ್ರಾದೇಶಿಕ ಪಕ್ಷಗಳು ನಡೆಸುವ ರಾಜ್ಯಸರಕಾರಗಳು ಸೇರಿದಂತೆ ವಿವಿಧ ರಾಜ್ಯ ಸರಕಾರಗಳು ಅನುಸರಿಸುತ್ತಿರುವ ನವ-ಉದಾರವಾದಿ ಧೋರಣೆಗಳ ವಿರುದ್ಧ ಹೋರಾಡುತ್ತದೆ. ಜನಗಳ ಜೀವನಾಧಾರಗಳ ಪ್ರಶ್ನೆಗಳ ಮೇಲೆ ಮತ್ತು ಆರ್ಥಿಕ ಧೋರಣೆಗಳ ಪ್ರಹಾರಗಳ ವಿರುದ್ಧ ಕಾರ್ಯಾಚರಣೆಗಳನ್ನು ಬೆಳೆಸಲು ಶ್ರಮಿಸುತ್ತದೆ.
- ಎಲ್ಲ ಹಂತಗಳಲ್ಲಿ ಸಾಮೂಹಿಕ ಚಳುವಳಿಗಳಿಗೆ ಮತ್ತು ಐಕ್ಯ ಹೋರಾಟಗಳಿಗೆ ಜಂಟಿ ವೇದಿಕೆಗಳನ್ನು ಕಟ್ಟಬೇಕು. ಜನ-ವಿರೋಧಿ ಧೋರಣೆಗಳ ವಿರುದ್ಧ ಪ್ರತಿರೋಧವನ್ನು ತೀವ್ರಗೊಳಿಸಬೇಕು. ವರ್ಗ ಮತ್ತು ಸಾಮೂಹಿಕ ಸಂಘಟನೆಗಳ ಐಕ್ಯ ಕಾರ್ಯಾಚರಣೆಗಳು ಬಂಡವಾಳಶಾಹಿ ಪಕ್ಷಗಳನ್ನು ಹಿಂಬಾಲಿಸುವ ಜನಸಮೂಹಗಳನ್ನು ಸೆಳೆದುಕೊಳ್ಳಲು ಪ್ರಯತ್ನಿಸಬೇಕು.
- ಸರಕಾರದ ಒಳಗೂ ಮತ್ತು ಹೊರಗೂ ಇರುವ ಹಿಂದುತ್ವ ಶಕ್ತಿಗಳು ಗಂಭೀರ ಬೆದರಿಕೆಯನ್ನು ಒಡ್ಡಿರುವ ಸಂದರ್ಭದಲ್ಲಿ ಎಲ್ಲ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳ ಸಾಧ್ಯವಾದಷ್ಟು ವಿಶಾಲವಾದ ವೇದಿಕೆಗಳನ್ನು ಕಟ್ಟುವುದು ಅಗತ್ಯವಾಗಿದೆ. ಬುಡಮಟ್ದದಲ್ಲಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಜನಗಳ ಐಕ್ಯತೆಯನ್ನು ಕಟ್ಟಲು ಒತ್ತು ನೀಡಬೇಕು. ಇವನ್ನು ರಾಜಕೀಯ ಅಥವ ಚುನಾವಣಾ ಮೈತ್ರಿಗಳಾಗಿ ಕಾಣಬಾರದು. ಇದೇ ರೀತಿಯಲ್ಲಿ ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ಸರ್ವಾಧಿಕಾರಶಾಹಿ ದಾಳಿಗಳ ವಿರುದ್ಧ ವಿಶಾಲ ಐಕ್ಯತೆಯನ್ನು ಬೆಸೆಯಬೇಕು.
- ಪಕ್ಷದ ಸ್ವತಂತ್ರ ಶಕ್ತಿಯನ್ನು ಬೆಳೆಸಲು ಮತ್ತು ಕಟ್ಟಲು ಪಕ್ಷವು ಆದ್ಯತೆಯನ್ನು ಕೊಡುತ್ತದೆ. ಅದು ಎಡ ಐಕ್ಯತೆಯನ್ನು ವಿಶಾಲಗೊಳಿಸಲು ಮತ್ತು ಬಲಪಡಿಸಲು ಕೆಲಸ ಮಾಡುತ್ತದೆ.
- ಐಕ್ಯ ಹೋರಾಟಗಳು ಮತ್ತು ಜಂಟಿ ಚಳುವಳಿಗಳ ಮೂಲಕ ಎಲ್ಲ ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಒಂದು ಮೂರ್ತ ಕಾರ್ಯಕ್ರಮದ ಮೇಲೆ ಒಟ್ಟಿಗೆ ತರಬೇಕು. ಇದರ ಮೂಲಕ ಎಡ ಮತ್ತು ಪ್ರಜಾಪ್ರಭುತ್ವ ರಂಗ ಮೂಡಿ ಬರಬೇಕು. ರಾಜ್ಯಗಳಲ್ಲಿ ಒಂದು ಮೂರ್ತ ಕಾರ್ಯಕ್ರಮದ ಸುತ್ತ ಒಂದು ವೇದಿಕೆಯನ್ನು ರಚಿಸಲು ವಿವಿಧ ಎಡ ಮತ್ತು ಪ್ರಜಾಪ್ರಭುತ್ವ ಶಕ್ತಿಗಳನ್ನು ಅಣಿನೆರೆಸಬೇಕು. ರಾಷ್ಟ್ರೀಯ ಮಟ್ಟದಲ್ಲಿ, ನಮ್ಮ ಪ್ರಚಾರಾಂದೋಲನಗಳಲ್ಲಿ ಎಡ ಮತ್ತು ಪ್ರಜಾಪ್ರಭುತ್ವವಾದಿ ಪರ್ಯಾಯವನ್ನು ಮುಂದಿಡಬೇಕು ಹಾಗು ಎಡ ಮತ್ತು ಪ್ರಜಾಪ್ರಭುತ್ವವ ರಂಗದಲ್ಲಿ ಒಂದು ಸ್ಥಾನ ಪಡೆಯಬಹುದಾದ ಶಕ್ತಿಗಳನ್ನೆಲ್ಲ ಅಣಿನೆರೆಸಬೇಕು.
- ಪಕ್ಷದ ಮೇಲೆ ಹೇಳಿದ ರಾಜಕೀಯ ನಿಲುವಿನ ಆಧಾರದಲ್ಲಿ ಬಿಜೆಪಿ-ವಿರೋಧಿ ಮತಗಳು ಗರಿಷ್ಟ ಪ್ರಮಾಣದಲ್ಲಿ ಬರಲು ಸೂಕ್ತವಾದ ಚುನಾವಣಾ ತಂತ್ರಗಳನ್ನು ಅಂಗೀಕರಿಸಬೇಕು.
ಪ್ರಸಕ್ತ ಸನ್ನಿವೇಶದಲ್ಲಿ ಪಕ್ಷ ನೆರವೇರಿಸಬೇಕಾದ ಕಾರ್ಯಭಾರಗಳನ್ನು ಈ ಕರಡು ರಾಜಕೀಯ ನಿರ್ಣಯ ಹೀಗೆ ನಿರೂಪಿಸಿದೆ:
- ಮೋದಿ ಸರಕಾರದ ಆರ್ಥಿಕ ಧೋರಣೆಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸಬೇಕು. ನವ-ಉದಾರವಾದಿ ಧೋರಣೆಗಳ ದಾಳಿಗಳಿಗೆ ಮತ್ತು ಶೋಷಣೆಗೆ ಒಳಗಾಗಿರುವ ಎಲ್ಲ ದುಡಿಯುವ ಜನವಿಭಾಗಗಳನ್ನು ಅಣಿನೆರೆಸಬೇಕು ಮತ್ತು ಉದ್ಯೋಗಳು, ಭೂಮಿ, ಕೂಲಿಗಳು ಮತ್ತು ಜೀವನಾಧಾರಗಳಿಗಾಗಿ ಹೋರಾಡಲು ಸಂಘಟಿಸಬೇಕು. ಬೆಳೆದು ಬರುವ ಎಲ್ಲ ಸ್ವಯಂಸ್ಫೂರ್ತ ಹೋರಾಟಗಳಲ್ಲಿ ಪಕ್ಷ ಮಧ್ಯಪ್ರವೇಶಿಸಿ ಅವನ್ನು ಮುಂದಕ್ಕೆ ಒಯ್ಯಬೇಕು.
- ಪಕ್ಷ ಮತ್ತು ಸಾಮೂಹಿಕ ಸಂಘಟನೆಗಳು ಹಿಂದುತ್ವ ಕೋಮುವಾದದ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರಬೇಕು. ಈ ಹೋರಾಟವನ್ನು ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಸೈದ್ಧಾಂತಿಕ ವಲಯಗಳಲ್ಲಿ ನಡೆಸಬೇಕಾಗಿದೆ. ಕೋಮುವಾದಿ ಶಕ್ತಿಗಳ ಚಟುವಟಿಕೆಗಳನ್ನು ಎದುರಿಸಲು ಜಾತ್ಯತೀತ ಪ್ರಜಾಪ್ರಭುತ್ವವಾದಿ ಶಕ್ತಿಗಳ ಒಂದು ವಿಶಾಲ ವೇದಿಕೆಯನ್ನು ಬೆಸೆಯಬೇಕು.
- ಪಕ್ಷ ಸಾಮಾಜಿಕವಾಗಿ ದಮನಕ್ಕೆ ಒಳಗಾಗಿರುವ ವಿಭಾಗಗಳ ಹಿತಾಸಕ್ತಿಗಳನ್ನು ಪ್ರತಿಪಾದಿಸುವ ಪ್ರಯತ್ನಗಳನ್ನು ಹೆಚ್ಚಿಸಬೇಕು. ಪಕ್ಷ ಮಹಿಳೆಯರ ಹಕ್ಕುಗಳನ್ನು ಪ್ರತಿಪಾದಿಸಬೇಕು ಮತ್ತು ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರವನ್ನು ಎದುರಿಸಬೇಕು. ಎಡ ಮತ್ತು ದಲಿತ ಐಕ್ಯ ವೇದಿಕೆಗಳನ್ನು ಮುಂದಕ್ಕೆ ಒಯ್ಯಬೇಕು. ಪಕ್ಷ ಎಲ್ಲ ವಲಯಗಳಲ್ಲಿ ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸಬೇಕು. ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ವಿಶಾಲ ಐಕ್ಯತೆಯನ್ನು ಬೆಸೆಯಬೇಕು.
- ಪಕ್ಷ ರಾಷ್ಟ್ರೀಯ ಸಾರ್ವಭೌಮತೆಯ ರಕ್ಷಣೆಯಲ್ಲಿ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳೊಂದಿಗೆ ವ್ಯೂಹಾತ್ಮಕ ಮೈತ್ರಿಯಿಂದ ದೇಶದಲ್ಲಿ ಹೆಚ್ಚುತ್ತಿರುವ ಸಾಮ್ರಾಜ್ಯಶಾಹಿ ಪ್ರಭಾವದ ವಿರುದ್ಧ ಜನಗಳನ್ನು ಅಣಿನೆರೆಸುವ ಪ್ರಚಾರಾಂದೋಲನಗಳನ್ನು ವಿಸ್ತರಿಸಬೇಕು.
- ಪಕ್ಷ ಹೆಚ್ಚುತ್ತಿರುವ ಸರ್ವಾಧಿಕಾರಶಾಹಿಯನ್ನು ಎದುರಿಸಲು ಸಾಧ್ಯವಾದಷ್ಟು ಶಕ್ತಿಗಳನ್ನು ಅಣಿನೆರೆಸಬೇಕು. ಪ್ರಜಾಪ್ರಭುತ್ವ, ಕಲಾತ್ಮಕ ಸ್ವಾತಂತ್ರ್ಯ ಮತ್ತು ಶೈಕ್ಷಣಿಕ ಸ್ವಾಯತ್ತತೆಯ ಮೇಲೆ ಪ್ರಹಾರಗಳ ವಿರುದ್ಧ ಒಂದು ವಿಶಾಲ ಸ್ವರೂಪದ ಅಣಿನೆರಿಕೆ ಆಗಬೇಕು.
- ಪಕ್ಷ ತನ್ನ ಸ್ವತಂತ್ರ ಪಾತ್ರವನ್ನು ಬಲಪಡಿಸಲು ಮತ್ತು ವರ್ಗ ಮತ್ತು ಸಾಮೂಹಿಕ ಹೋರಾಟಗಳನ್ನು ಕಟ್ಟುವ ಮೂಲಕ ತನ್ನ ಪ್ರಭಾವ ಮತ್ತು ಸಾಮೂಹಿಕ ನೆಲೆಯನ್ನು ವಿಸ್ತರಿಸಲು ಆದ್ಯತೆ ನೀಡಬೇಕು. ಪಕ್ಷ ಪಶ್ಚಿಮ ಬಂಗಾಲದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿಗಳು ಮತ್ತು ಪಕ್ಷ ಹಾಗೂ ಎಡರಂಗದ ಮೇಲೆ ಹಿಂಸಾಚಾರದ ವಿರುದ್ಧ ಹೋರಾಟಕ್ಕೆ ವಿಶೇಷ ಗಮನ ನೀಡಬೇಕು. ತ್ರಿಪುರ ಮತ್ತು ಕೇರಳದ ಎಡ ನೇತೃತ್ವದ ಸರಕಾರಗಳ ರಕ್ಷಣೆ ಒಂದು ಮಹತ್ವದ ಕಾರ್ಯಭಾರ.
- ಎಡ ಐಕ್ಯತೆಯನ್ನು ಈಗಿರುವ ಕೊರತೆಗಳನ್ನು ನೀಗಿಸಿಕೊಂಡು ಬಲಪಡಿಸಬೇಕು, ಅದಕ್ಕಾಗಿ ಒಂದು ಎಡ ವೇದಿಕೆಯ ಆಧಾರದಲ್ಲಿ ಜಂಟಿ ಕಾರ್ಯಾಚರಣೆಗಳು ಮತ್ತು ಪ್ರಚಾರಾಂದೋಲನಗಳ ಮೇಲೆ ಗಮನ ಕೇಂದ್ರೀಕರಿಸಬೇಕು. ಇದು ಇತರ ಪ್ರಜಾಪ್ರಭುತ್ವವಾದಿ ಸಂಘಟನೆಗಳನ್ನು ಮತ್ತು ಶಕ್ತಿಗಳನ್ನು ಒಂದು ಎಡ ಮತ್ತು ಪ್ರಜಾಪ್ರಭುತ್ವವಾದಿ ಕಾರ್ಯಕ್ರಮದತ್ತ ಸೆಳೆಯಲು ಆಧಾರವಾಗಬೇಕು. ಇಂತಹ ಒಂದು ಕಾರ್ಯಕ್ರಮದ ಸುತ್ತ ಚಳುವಳಿಗಳು ಮತ್ತು ಹೋರಾಟಗಳ ಮೂಲಕ ಒಂದು ನಿಜವಾದ ಪರ್ಯಾಯ-ಎಡ ಮತ್ತು ಪ್ರಜಾಪ್ರಭುತ್ವವಾದಿ ಪರ್ಯಾಯ ಮೂಡಿ ಬರುತ್ತದೆ.
ಕನ್ನಡ ಹಾಗೂ ಇಂಗ್ಲೀಷ್ ಆವೃತ್ತಿಯ ಪೂರ್ಣ ಕರಡು ವರದಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.