ಇದನ್ನು ಅನುಮೋದಿಸದಿರಲು ಮೋದಿ ಸರಕಾರಕ್ಕೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ಕರೆ
ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ಟ್ರಂಪ್ ಇರಾನಿನೊಡನೆ ಪರಮಾಣು ಒಪ್ಪಂದದಿಂದ ತಮ್ಮ ದೇಶ ಹೊರ ಬರುವುದಾಗಿ ಪ್ರಕಟಿಸಿದ್ದಾರೆ. ಇದೊಂದು ಕಾರಣವಿಲ್ಲದ ಮತ್ತು ಬೇಜವಾಬ್ದಾರಿ ಹೆಜ್ಜೆ, ಇದನ್ನು ಬಲವಾಗಿ ಖಂಡಿಸಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ. ಇರಾನ್ ಮೇಲೆ ನಿರ್ಬಂಧಗಳನ್ನು ಹೇರುವ ಬೆದರಿಕೆ ಕಾನೂನುಬಾಹಿರವಾಗಿದ್ದು, ಇದನ್ನು ವಿಶ್ವಸಂಸ್ಥೆ ಖಡಾಖಂಡಿತವಾಗಿ ವಿರೋಧಿಸಬೇಕು ಎಂದೂ ಸಿಪಿಐ(ಎಂ) ಹೇಳಿದೆ.
೨೦೧೫ರಲ್ಲಿ ಇರಾನ್ ಮತ್ತು ಆರು ದೇಶಗಳ ನಡುವೆ ನಡೆದ ಪರಮಾಣು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್, ಬ್ರಿಟನ್ ಮತ್ತು ಜರ್ಮನಿ ಆ ಆರು ದೇಶಗಳು. ಈ ಒಪ್ಪಂದ ಇದುವರೆಗೆ ಚೆನ್ನಾಗಿ ಕೆಲಸ ಮಾಡಿದೆ. ಇತ್ತೀಚೆಗೆ ಫೆಬ್ರುವರಿ ೨೦೧೮ರಲ್ಲಿ ಅಂತರ್ರಾಷ್ಟ್ರೀಯ ಅಣುಶಕ್ತಿ ಏಜೆಂಸಿ ಇರಾನ್ ಈ ಒಪ್ಪಂದದ ಶರತ್ತುಗಳನ್ನು ಪಾಲಿಸುತ್ತಿದೆ ಎಂದು ಹೇಳಿತ್ತು. ಈ ಒಪ್ಪಂದದಿಂದ ಹಿಂದೆ ಸರಿಯುವ ಮೂಲಕ ಟ್ರಂಪ್ ಇರಾನ್ ವಿರುದ್ಧ ಒಂದು ಹೊಸ ಆಕ್ರಮಣಕೋರ ಧೋರಣೆಯ ಸಂಕೇತ ನೀಡಿದ್ದಾರೆ. ಇದು ಪಶ್ಚಿಮ ಏಶ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆ ಒಡ್ಡುತ್ತದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.
ಟ್ರಂಪ್‌ರವರ ಕ್ರಮವನ್ನು ಮಂಜೂರು ಮಾಡದ ಅಮೆರಿಕಾದ ಯುರೋಪಿಯನ್ ಮಿತ್ರರು ಈ ಒಪ್ಪಂದವನ್ನು ಉಳಿಸಿಕೊಳ್ಳಲು ರಷ್ಯಾ ಮತ್ತು ಚೀನಾದೊಂದಿಗೆ ಸಹಕರಿಸಬೇಕು ಎಂದಿರುವ ಪೊಲಿಟ್‌ಬ್ಯುರೊ ಮೋದಿ ಸರಕಾರ ಅಮೆರಿಕ ಸಂಯುಕ್ತ ಸಂಸ್ಥಾನಗಳ ಈ ಕ್ರಮಕ್ಕೆ ಭಾರತದ ಮಂಜೂರಾತಿ ಇಲ್ಲ ಎಂದು ಸ್ಪಷ್ಟಪಡಿಸಬೇಕು ಎಂದು ಕರೆ ನೀಡಿದೆ.
ಇರಾನಿನ ವಿರುದ್ಧ ಯಾವುದೇ ನಿರ್ಬಂಧಗಳನ್ನು ಭಾರತ ಬೆಂಬಲಿಸುವುದಿಲ್ಲ, ಇರಾನಿನೊಂದಿಗೆ ಪೂರ್ಣ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಮುಂದುವರೆಸುತ್ತದೆ, ಅಮೆರಿಕಾದ ಒತ್ತಡಗಳಿಗೆ ಬಲಿ ಬೀಳುವುದಿಲ್ಲ ಎಂಬುದನ್ನು ಮೋದಿ ಸರಕಾರ ಸ್ಪಷ್ಟಪಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.