ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ವನ್ನು ಕಳಚಿ ಹಾಕಿ ಅದರ ಸ್ಥಾನದಲ್ಲಿ ‘ಭಾರತದ ಉನ್ನತ ಶಿಕ್ಷಣ ಆಯೋಗ’ ರಚಿಸುವ ಕೇಂದ್ರ ಸರಕಾರದ ಪ್ರಸ್ತಾವವನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ದೃಢವಾಗಿ ವಿರೋಧಿಸುವುದಾಗಿ ಹೇಳಿದೆ.
ಈ ಕುರಿತ ಮಸೂದೆಯನ್ನು ಆತುರಾತುರವಾಗಿ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಸರಕಾರ ಪಾಸು ಮಾಡಿಸಿ ಕೊಳ್ಳಬಯಸುವಂತೆ ಕಾಣುತ್ತದೆ. ಏಕೆಂದರೆ ಈ ಬಗ್ಗೆ ಚರ್ಚೆಗೆ ಮತ್ತು ಮಾಹಿತಿಗಳನ್ನು ಕೊಡಲು ಕೇವಲ ಹತ್ತು ದಿನಗಳನ್ನು ಕೊಡಲಾಗಿದೆ. ಕನಿಷ್ಟ ಸರಕಾರ, ಗರಿಷ್ಟ ಆಳ್ವಿಕೆ ಎಂಬ ಪದಪುಂಜಗಳನ್ನು ಮತ್ತೆ-ಮತ್ತೆ ಬಳಸುತ್ತಿದ್ದರೂ ಈ ಕರಡು ಮಾತ್ರ ಅನುದಾನಗಳ ವಿತರಣೆಯ ಅಧಿಕಾರವನ್ನು ಕೇಂದ್ರ ಸರಕಾರದಲ್ಲೇ ಮತ್ತಷ್ಟು ಕೇಂದ್ರೀಕರಿಸುವ ಪ್ರಸ್ತಾವನೆಯನ್ನು ಹೊಂದಿದೆ.
ಇದರಲ್ಲಿ ಅಡಕವಾಗಿರುವ ಶೈಕ್ಷಣಿಕ ಪ್ರಕ್ರಿಯೆಗೆ ಏನೇನೂ ಸಂಬಂಧವಿಲ್ಲದಂತಹ ಫಲಿತಾಂಶಗಳತ್ತ ಪಲ್ಲಟದ ಮೂಲಕ ವಿಪರೀತ ನಿಯಂತ್ರಣದ ಮೇಲೆ ಒತ್ತು ನೀಡಲಾಗಿದೆ. ಇದು ತಲೆಗೆಲ್ಲಾ ಒಂದೇ ಮಂತ್ರ ಎಂಬ ನಿಲುವನ್ನು ಅನುಸರಿಸಿ ಶಿಕ್ಷಣದ ಮತ್ತಷ್ಟು ವ್ಯಾಪಾರೀಕರಣದ ಗುರಿ ಹೊಂದಿರುವ ಪ್ರಯತ್ನವೂ ಆಗಿದೆ ಎಂದು ಪೊಲಿಟ್ಬ್ಯುರೊ ವಿಶ್ಲೇಷಿಸಿದೆ.
ಈಗಿರುವ ಯುಜಿಸಿಯಲ್ಲಿ ಬಹಳಷ್ಟು ಮಿತಿಗಳಿದ್ದರೂ ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಸ್ವಲ್ಪ ಮಟ್ಟಿನ ಸ್ವಾಯತ್ತತೆ ಇತ್ತು; ಆದರೆ ಪ್ರಸ್ತಾವಿತ ಶಾಸನದಲ್ಲಿ ಅದನ್ನೂ ಕಳಚಿ ಹಾಕಿ, ಸಂಪೂರ್ಣ ಪ್ರಕ್ರಿಯೆಯನ್ನು ಅಧಿಕಾರಶಾಹಿಗಳು ಮತ್ತು ಸರಕಾರದ ಯಜಮಾನರುಗಳೇ ವಹಿಸಿಕೊಳ್ಳುತ್ತಾರೆ.
ದೇಶಕ್ಕೆ ಇಷ್ಟೊಂದು ಪ್ರಾಮುಖ್ಯತೆಯುಳ್ಳ ಒಂದು ಪ್ರಯತ್ನವನ್ನು ಇಂತಹ ಯೋಚನಾಹೀನ ವೇಗದಲ್ಲಿ ತರಾತುರಿಯಿಂದ ನಡೆಸಲು ಸಾಧ್ಯವಿಲ್ಲ. ಈ ದೇಶದಲ್ಲಿ ಉನ್ನತ ಶಿಕ್ಷಣದ ಭವಿಷ್ಯದೊಂದಿಗೆ ನೇರ ಸಂಬಂಧವಿರುವ ಹಲವಾರು ಸಂಘಟನೆಗಳು ಆಗ್ರಹಿಸಿರುವಂತೆ ಈ ಮಸೂದೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ.