ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಾಧೀಶರ ನೇತೃತ್ವದ ಐವರು ಸದಸ್ಯರಿರುವ ಸಂವಿಧಾನ ಪೀಠ ಚುನಾಯಿತ ರಾಜ್ಯ ಸರಕಾರಗಳ ಹಕ್ಕುಗಳನ್ನು ಎತ್ತಿ ಹಿಡಿದಿದೆ, ದಿಲ್ಲಿಯ ಉಪರಾಜ್ಯಪಾಲರು ಅದರ ಸಂವಿಧಾನಿಕ ಮುಖ್ಯಸ್ಥರು ಎಂಬ ದಿಲ್ಲಿ ಹೈಕೋರ್ಟಿನ ನಿರ್ಧಾರವನ್ನು ಅದು ರದ್ದು ಮಾಡಿದೆ.
ಇದನ್ನು ಸ್ವಾಗತಿಸುತ್ತ ಸಿಪಿಐ(ಎಂ) ಪೊಲಿಟ್‌ಬ್ಯುರೊ ಉಪರಾಜ್ಯಪಾಲರು ಅಲ್ಲಿಯ ಚುನಾಯಿತ ದಿಲ್ಲಿ ಸರಕಾರದ ಮಂತ್ರಿಮಂಡಳದ ಸಲಹೆಗೆ ಬದ್ಧರಾಗಿರಬೇಕು ಎಂದು ಈಗ ಸರಿಯಾಗಿಯೇ ತೀರ್ಪಿತ್ತಿದೆ ಎಂದು ಹೇಳಿದೆ.
ಇಂದಿನ ತೀರ್ಪಿನಲ್ಲಿ ಉಪರಾಜ್ಯಪಾಲರುಗಳು ಮತ್ತು ರಾಜ್ಯಪಾಲರುಗಳ ಪಾತ್ರ ಮತ್ತು ಈ ಹುದ್ದೆಗಳ ದುರುಪಯೋಗದ ಬಗ್ಗೆ ತೀಕ್ಷ್ಣವಾದ ಗಮನ ಕೇಂದ್ರೀಕರಿಸಲಾಗಿದೆ. ಬಿಜೆಪಿ ‘ಸಹಕಾರಿ ಒಕ್ಕೂಟತತ್ವ’ ಎಂಬ ಪದಪುಂಜಗಳ ಮರೆಯಲ್ಲಿ ಮಾಡುತ್ತಿರುವ ನಟನೆ ವಾಸ್ತವವಾಗಿ ನಮ್ಮ ಒಕ್ಕೂಟ ರಚನೆಯನ್ನು ಧ್ವಂಸ ಮಾಡುತ್ತಿದೆ ಎಂದು ಪೊಲಿಟ್‌ಬ್ಯುರೊ ಅಭಿಪ್ರಾಯಪಟ್ಟಿದೆ.
ರಾಜ್ಯಪಾಲರುಗಳು ಮತ್ತು ಉಪರಾಜ್ಯಪಾಲರುಗಳು ಒಂದು ಚುನಾಯಿತ ರಾಜ್ಯಸರಕಾರದ ಅಧಿಕಾರಗಳನ್ನು ಕಸಿದುಕೊಳ್ಳಲು ಅಥವ ಅದರ ಹಕ್ಕುಗಳ ಅತಿಕ್ರಮಣ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರಿಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತ ಸಿಪಿಐ(ಎಂ) ಪೊಲಿಟ್‌ಬ್ಯುರೊ ಇದು ಒಕ್ಕೂಟ ತತ್ವದ ವಿಜಯ ಎಂದು ವರ್ಣಿಸಿದೆ.