“ಸ್ವಾಯತ್ತತೆ ಮತ್ತು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಸರಕಾರದ ತುಚ್ಛೀಕಾರದ ನಿಲುವು”
ಸೆಪ್ಟಂಬರ್ 28ನ್ನು ‘ಮಿಂಚಿನ ಪ್ರಹಾರ ದಿನ’( ಸರ್ಜಿಕಲ್ ಸ್ಟ್ರೈಕ್ ಡೇ)ವಾಗಿ ಆಚರಿಸಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನಿರ್ದೇಶನದ ಮೇರೆಗೆ ಯುಜಿಸಿ ಸುತ್ತೋಲೆ ಹೊರಡಿಸಿರುವುದು ಆಕ್ರೋಶಕಾರಿ ಮತ್ತು ಆಕ್ಷೇಪಕಾರಿ, ಏಕೆಂದರೆ ಇದು ಆಳುವ ಪಕ್ಷದ ರಾಜಕೀಯ ಅಜೆಂಡಾವನ್ನು ಮುಂದೊಯ್ಯಲು ದೇಶದಲ್ಲಿ ಒಂದು ಸಂಕುಚಿತ ಸ್ವರೂಪದ ದೇಶಭಕ್ತಿಯ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.
ಈ ಸರಕಾರ ತನ್ನ ಸಂಕುಚಿತ ಅಜೆಂಡಾವನ್ನು ಮುಂದೊತ್ತಲು ಪ್ರಜಾಪ್ರಭುತ್ವವ ಕನಿಷ್ಟ ವಿಧಿವಿಧಾನಗಳ ಬಗ್ಗೆ ಮತ್ತು ಸ್ವಾಯತ್ತ ಸಂಸ್ಥೆಗಳ ಗೌರವದ ಬಗ್ಗೆ ಎಂತಹ ತುಚ್ಛೀಕಾರದ ನಿಲುವು ಹೊಂದಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ.
ಒಂದು ಸ್ವಾಯತ್ತ ಸಂಸ್ಥೆಯೆನಿಸಿರುವ ಯು.ಜಿ.ಸಿ. ಶೈಕ್ಷಣಿಕ ಸಂಸ್ಥೆಗಳಿಗೆ ನಿರ್ದೇಶನಗಳನ್ನು ಹೊರಡಿಸಲು ಚಿತಾವಣೆ ಮಾಡಿರುವುದಷ್ಟೇ ಅಲ್ಲ, ಮಾಧ್ಯಮಗಳಿಗೂ ಈ ‘ಮಿಂಚಿನ ಪ್ರಹಾರ’ಗಳ ಬಗ್ಗೆ ಕಾರ್ಯಕ್ರಮಗಳನ್ನು ನಡೆಸುವಂತೆ ಹೇಳಲಾಗಿದೆ. ಇದು ಪತ್ರಿಕಾ ಸ್ವಾತಂತ್ರ್ಯದಲ್ಲಿ ಒಂದು ನೇರ ಹಸ್ತಕ್ಷೇಪವಾಗಿದೆ.
ನಂತರ, ಮಂತ್ರಿಗಳಾದ ಪ್ರಕಾಶ ಜಾವಡೇಕರ್ ಇದು ಕಡ್ಡಾಯವೇನಲ್ಲ ಎಂದು ಹೇಳಿಕೆ ನೀಡಿರುವುದು ಈ ಸುತ್ತೋಲೆಗೆ ಬಲವಾದ ವಿರೋಧ ಬಂದಾಗ ಕೊಟ್ಟಿರುವ ದುರ್ಬಲ ಸಮರ್ಥನೆಯಲ್ಲದೇ ಬೇರೇನೂ ಅಲ್ಲ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಈ ಸುತ್ತೋಲೆಯನ್ನು ತಕ್ಷಣ ಹಿಂತೆದುಕೊಳ್ಳಬೇಕು ಎಂದು ಆಗ್ರಹಿಸಿದೆ.