ಮೋದಿ ಸರಕಾರ ತಡೆದಿಟ್ಟಿದ್ದ ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಘಟನೆ(ಎನ್.ಎಸ್.ಎಸ್.ಒ.) ಇತ್ತೀಚಿನ ಮಾಹಿತಿಯು ನೋಟುರದ್ಧತಿಯ ನಂತರ ಭಾರತದ ನಿರುದ್ಯೋಗ ನಾಲ್ಕು ದಶಕಗಳಲ್ಲೇ ಅತಿ ಹೆಚ್ಚು ಎಂಬುದನ್ನು ತೋರಿಸಿದೆ. ೧೫-೨೯ ವರ್ಷ ವಯೋಗುಂಪಿನ ಗ್ರಾಮೀಣ ಪುರುಷ್ರರಲ್ಲಿ ಉದ್ಯೋಗಹೀನತೆಯ ಪ್ರಮಾಣ ಮೂರು ಪಟ್ಟಿಗಿಂತಲೂ ಹೆಚ್ಚಿನ ಜಿಗಿತ ಕಂಡಿದೆ.
೨೦೧೧-೧೨ರಲ್ಲಿ 5% ಇದ್ದ ಅದು 2017-18ರಲ್ಲಿ 17.4%ಕ್ಕೆ ಏರಿದೆ. ಗ್ರಾಮೀಣ ಯುವತಿಯರ ನಡುವಿನ ನಿರುದ್ಯೋಗ ದರ ಇದೇ ಅವಧಿಯಲ್ಲಿ 4.8%ದಿಂದ ೧೩.೬%ಕ್ಕೆ ಬಂದಿದೆ. ವಿದ್ಯಾವಂತ ಯುವಜನರ ನಡುವಿನ ನಿರುದ್ಯೋಗವು ಗ್ರಾಮೀಣ ಪ್ರದೇಶಗಳಲ್ಲೂ, ನಗರಪ್ರದೇಶಗಳಲ್ಲೂ ಹೆಚ್ಚಿನ ಪ್ರಮಾಣವನ್ನು ದಾಖಲಿಸಿದೆ.
ಮೋದಿ ಸರಕಾರ ಈ ಮಾಹಿತಿ ಸಾರ್ವಜನಿಕಗೊಳ್ಳದಂತೆ ದಮನ ಮಾಡುತ್ತಿತ್ತು ಎಂಬುದು ಸ್ಪಷ್ಟವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಟಿಪ್ಪಣಿ ಮಾಡಿದೆ. ಇದರ ಫಲಿತಾಂಶವಾಗಿ ಎನ್.ಎಸ್.ಎಸ್.ಒ. ವರದಿಗಳನ್ನು ಬಿಡುಗಡೆ ಮಾಡುವ ಶಾಸನಬದ್ಧ ಸಂಸ್ಥೆಯಾದ ರಾಷ್ಟ್ರೀಯ ಸಾಂಖ್ಯಿಕ ಆಯೋಗ (ಎನ್.ಎಸ್.ಸಿ.)ದ ಇಬ್ಬರು ಸದಸ್ಯರು ರಾಜೀನಾಮೆ ನೀಡುವಂತಾಗಿದೆ. ಇವರಲ್ಲಿ ಆಯೋಗದ ಹಂಗಾಮಿ ಅಧ್ಯಕ್ಷರೂ ಸೇರಿದ್ದಾರೆ. ಈಗ, ಏಳು ಸದಸ್ಯರನ್ನು ಹೊಂದಿರಬೇಕಾದ ಈ ಆಯೋಗದಲ್ಲಿ ಕೇವಲ ಇಬ್ಬರು ಉಳಿದಿದ್ದಾರೆ ಎಂದಿರುವ ಪೊಲಿಟ್‌ಬ್ಯುರೊ, ಈ ಹಿಂದೆ ಮೋದಿ ಸರಕಾರ ಲೇಬರ್ ಬ್ಯುರೋದ ೨೦೧೬-೧೭ರ ವಾರ್ಷಿಕ ಸರ್ವೆಯನ್ನು ಬಿಡುಗಡೆ ಮಾಡಲು ಕೂಡ ನಿರಾಕರಿಸಿತ್ತು ಎಂಬ ಸಂಗತಿಯನ್ನು ನೆನಪಿಸಿದೆ.
ಮೋದಿ ಸರಕಾರ ಈ ಮಾಹಿತಿ ಪ್ರಕಟವಾಗದಂತೆ ದಮನ ಮಾಡಿಡುವ ಮೂಲಕ ತನ್ನ ಧೋರಣೆಗಳು ನಮ್ಮ ಜನತೆಗೆ ಹೆಚ್ಚಿನ ಸಂಕಟಗಳನ್ನು ತಂದೊಡ್ಡಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ ಎಂದು ಪೊಲಿಟ್‌ಬ್ಯುರೊ ಹೇಳಿದೆ. ನಮ್ಮ ಆಸ್ತಿಯಾದ ಭಾರತ ಯುವಜನರನ್ನು ಈಗ ವ್ಯರ್ಥಗೊಳಿಸಲಾಗುತ್ತಿದೆ. ಇದು ವರ್ಷಕ್ಕೆ ೨ ಕೋಟಿ ಹೊಸ ಉದ್ಯೋಗಗಳನ್ನು, ಅಂದರೆ ಕಳೆದ ಐದು ವರ್ಷಗಳಲ್ಲಿ ೧೦ ಕೋಟಿ ಹೊಸ ಉದ್ಯೋಗಗಳನ್ನು ಒದಗಿಸುವ ತನ್ನ ಭರವಸೆಯನ್ನು ಈಡೇರಿಸುವಲ್ಲಿ ಬಿಜೆಪಿ ನೇತೃತ್ವದ ಸರಕಾರದ ಸಂಪೂರ್ಣ ವಿಫಲತೆಯನ್ನೂ ಬಯಲಿಗೆ ತಂದಿಟ್ಟಿದೆ ಎಂದು ಅದು ಹೇಳಿದೆ.
ಎಲ್ಲ ಮಾಹಿತಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಇವನ್ನು ಸಂಸತ್ತಿನಲ್ಲಿ ಮಂಡಿಸಿ, ಅದರ ಮೇಲೆ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ, ದೇಶದ ಜನತೆಗೆ ತಮ್ಮ ಮುಂದಿರುವ ಗಂಭೀರ ವಾಸ್ತವತೆಗಳನ್ನು ತಿಳಿಯುವ ಹಕ್ಕು ಇದೆ ಎಂದಿದೆ.