ರಫೆಲ್‍ ವ್ಯವಹಾರ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಯಬೇಕು-ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹ

ರಫೆಲ್  ಹಗರಣ ಕುರಿತಂತೆ ‘ದಿ ಹಿಂದು’ ಪತ್ರಿಕೆಯಲ್ಲಿ ನಿಯಮಿತವಾಗಿ ಆಘಾತಕಾರಿ ಸಂಗತಿಗಳು ಪ್ರಕಟಗೊಳ್ಳುತ್ತಿವೆ. ಇವು ರಫೆಲ್ ಮಾತುಕತೆಗಳಲ್ಲಿ ಭ್ರಷ್ಟಾಚಾರ-ವಿರೋಧಿ ಕಲಮುಗಳಿಂದ ವಿನಾಯ್ತಿ ನೀಡಲಾಗಿದೆ ಎಂದು  ತೋರಿಸುತ್ತಿವೆ; ಪ್ರಧಾನ ಮಂತ್ರಿಗಳ ಕಚೇರಿ(ಪಿಎಂಒ) ಅಧಿಕೃತ ಮಾತುಕತೆ ತಂಡವನ್ನು ಕತ್ತಲಲ್ಲಿಟ್ಟು ಸಮಾನಾಂತರ ಮಾತುಕತೆಗಳನ್ನು ನಡೆಸುತ್ತಿತ್ತು ಎಂದು ಕಂಡು ಬಂದಿದೆ; ಒಂದು ಎಸ್ಕ್ರೋ ಅಕೌಂಟ್‍ (ಷರತ್ತು ಖಾತ್ರಿ ಖಾತೆ) ಬೇಕೆಂಬ ಸೂಚನೆಯನ್ನು ಪಿಎಂಒ ನಿರಾಕರಿಸಿತು ಎಂದು ತಿಳಿಯುತ್ತಿದೆ;

RAFALE-DNE

ಫ್ರೆಂಚ್‍ ಸರಕಾರದಿಂದ ಸಾರ್ವಭೌಮ ಖಾತ್ರಿಯಿರಲಿಲ್ಲ ಮಾತ್ರವಲ್ಲ, ಬ್ಯಾಂಕ್‍ ಖಾತ್ರಿಯೂ ಬೇಕಿಲ್ಲ ಎಂದು ಪಿಎಂಒ ಹೇಳಿದುದಾಗಿಯೂ ಕಾಣಿಸುತ್ತಿದೆ. ಇವೆಲ್ಲವೂ ಪ್ರಧಾನ ಮಂತ್ರಿಗಳ ಚಮಚಾ ಬಂಡವಾಳಶಾಹಿ ಸ್ನೇಹಿತ ಭಾರತೀಯ ಖಜಾನೆಯನ್ನು ಲೂಟಿ ಮಾಡಲು ಅನುಕೂಲ ಕಲ್ಪಿಸಿಕೊಡಲಿಕ್ಕಾಗಿ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿದೆ.

ಮೋದಿ ಸರಕಾರ ಈ ವ್ಯವಹಾರದ ಬಗ್ಗೆ ಸುಪ್ರಿಂ ಕೋರ್ಟಿಗೆ ಸಂಪೂರ್ಣ ಮಾಹಿತಿಗಳನ್ನು ಸಲ್ಲಿಸಿಲ್ಲ ಎಂಬುದು ಸ್ಪಷ್ಟ.  ಈ ಹಿನ್ನೆಲೆಯಲ್ಲಿ ಗೌರವಾನ್ವಿತ ಸುಪ್ರಿಂ ಕೋಟರ್ಟ್‍ ತಾನಾಗಿಯೇ ತನ್ನ  ಹಿಂದಿನ ತೀರ್ಪಿನ ಬಗ್ಗೆ ಪುನರಾಲೋಚನೆ ನಡೆಸುವುದು ಸೂಕ್ತವಾಗುತ್ತದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.

Rafael-Mir-Suhail-News-18

ರಫೆಲ್‍ ವ್ಯವಹಾರದ ಬಗ್ಗೆ ವರದಿ ಸಲ್ಲಿಸಬೇಕಾದ ಸಿಎಜಿ(ಮಹಾ ಲೆಕ್ಕ ಪರಿಶೋಧಕರು) ಕೂಡ ಒಂದು ಹಿತಾಸಕ್ತಿಯ ಘರ್ಷಣೆಯಿಂದ ಬಾಧಿತರಾಗಿದ್ದಾರೆ. ಏಕೆಂದರೆ ಅವರು ಈ ವ್ಯವಹಾರಕ್ಕೆ ಸಹಿ ಹಾಕಿದಾಗ ಹಣಕಾಸು ಕಾರ್ಯದರ್ಶಿಯಾಗಿದ್ದರು. ಈ ಮೂಲಕ ಸಿಎಜಿ ವರದಿಯ ವಿಶ್ವಾಸಾರ್ಹತೆಯೂ ಕುಂದಿರುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಈ ಮಹಾಹಗರಣದ ತಳಕ್ಕೆ ಹೋಗಲು, ಅದರ ಆಧಾರದಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸಲು ಅನಿವಾರ್ಯವಾಗಿಯೇ ಒಂದು ಉನ್ನತ ಮಟ್ಟದ ತನಿಖೆಯನ್ನು ನಡೆಸಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *