ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಒಂದು ಸಿಆರ್‌ಪಿಎಫ್ ತಂಡದ ಮೇಲೆ ಭಯೋತ್ಪಾದಕರ ದಾಳಿ ನಡೆಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ. ಈ ದಾಳಿಯಲ್ಲಿ ಇದುವರೆಗೆ 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿ ಹತರಾಗಿದ್ದಾರೆ, 50 ಮಂದಿ ಗಾಯಗೊಂಡಿದ್ದಾರೆ.
ರಾಜ್ಯದಲ್ಲಿನ ಪ್ರಶ್ನೆಗಳನ್ನು ಬಗೆಹರಿಸಲು ಸಂಬಂಧಪಟ್ಟ ಎಲ್ಲರೂ ತೊಡಗಬೇಕು, ಹಿಂಸಾಚಾರ ಇದಕ್ಕೆ ಉತ್ತರವಲ್ಲ ಎಂದಿರುವ ಪೊಲಿಟ್ ಬ್ಯುರೊ, ಮೂರು ವರ್ಷಗಳ ಹಿಂದೆ ಮೋದಿ ಸರಕಾರ ಒಂದು ಸಂವಾದದ ಮೂಲಕ ಸಂಬಂಧಪಟ್ಟ ಎಲ್ಲರನ್ನೂ ಒಳಗೊಳ್ಳುವ ಒಂದು ರಾಜಕೀಯ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಆಶ್ವಾಸನೆ ನೀಡಿತ್ತು. ಇದು ಸಂಭವಿಸಿಲ್ಲ. ಇದನ್ನು ಕೂಡಲೇ ಮಾಡಬೇಕು ಎಂದು ಹೇಳಿದೆ.
ರಾಜ್ಯದಲ್ಲಿ ಶಾಂತಿ ಮತ್ತು ಸಾಮಾನ್ಯ ಪರಿಸ್ಥಿತಿ ನೆಲೆಗೊಳ್ಳುವಂತೆ ಕೇಂದ್ರ ಸರಕಾರ ಖಾತ್ರಿಗೊಳಿಸಬೇಕು ಎಂದು ಕರೆ ನೀಡಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ತಮ್ಮ ಕರ್ತವ್ಯ ನಿರ್ವಹಿಸುತ್ತ ಪ್ರಾಣಾರ್ಪಣೆ ಮಾಡಿರುವ ಸಿಬ್ಬಂದಿಯ ದುಃಖತಪ್ತ ಕುಟುಂಬಗಳಿಗೆ ಹಾರ್ದಿಕ ಸಂತಾಪಗಳನ್ನು ವ್ಯಕ್ತಪಡಿಸಿದೆ.