ಜಮ್ಮು ಮತ್ತು ಕಾಶ್ಮೀರದಲ್ಲಿ ಸುಭದ್ರತೆಯ ಪರಿಸ್ಥಿತಿ ಲೋಕಸಭಾ ಚುನಾವಣೆಗಳನ್ನು ನಡೆಸಲು ಉತ್ತಮವಾಗಿದೆ, ಆದರೆ ಈಗಾಗಲೇ ನಡೆಯಬೇಕಾಗಿದ್ದ ವಿಧಾನಸಭಾ ಚುನಾವಣೆಗಳಿಗೆ ಇಲ್ಲ ಎಂಬುದು ಸೋಜಿಗದ ಸಂಗತಿ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ. ಈ ರಾಜ್ಯದ ವಿಧಾನಸಭೆಯನ್ನು ವಿಸರ್ಜಿಸಿದ್ದು, ಸದ್ಯಕ್ಕೆ ಇಲ್ಲಿ ಕೇಂದ್ರೀಯ ಆಳ್ವಿಕೆ ಇದೆ.
ಈ ಹಿಂದೆ ಕೇಂದ್ರ ಗೃಹ ಮಂತ್ರಿಗಳು ವಿಧಾನ ಸಭೆಗೂ ಚುನಾವಣೆಗಳನ್ನು ನಡೆಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ಜನತೆಗೆ ಆಶ್ವಾಸನೆ ನೀಡಿದ್ದರು. ಪೂರ್ಣ ಚುನಾವಣಾ ಆಯೋಗ ರಾಜ್ಯಕ್ಕೆ ಭೇಟಿ ನೀಡಿದ್ದಾಗ ನಡೆದ ಸಭೆಯಲ್ಲಿ ಎಲ್ಲ ಬಿಜೆಪಿಯೇತರ ಪಕ್ಷಗಳು ಲೋಕ ಸಭೆಯೊಂದಿಗೇ ವಿಧಾನ ಸಭೆಗೂ ಚುನಾವಣೆಗಳನ್ನು ನಡೆಸಬೇಕು ಎಂದು ಮನವಿ ಮಾಡಿದ್ದವು.
ಈ ಪ್ರಶ್ನೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು, ಮತ್ತು ಲೋಕಸಭಾ ಚುನಾವಣೆಗಳೊಂದಿಗೇ ವಿಧಾನಸಭೆಗೂ ಚುನಾವಣೆಯ ಕಾರ್ಯಕ್ರಮವನ್ನು ಪ್ರಕಟಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ.
ರಾಜ್ಯದ ಒಳಗೆ ಮತ್ತು ಹೊರಗೆ ತಪ್ಪು ಸಂಕೇತಗಳನ್ನು ನೀಡುತ್ತದೆ-ತರಿಗಾಮಿ
ಲೋಕಸಭಾ ಚುನಾವಣೆಯೊಂದಿಗೆ ರಾಜ್ಯದ ವಿಧಾನಸಭೆಗೆ ಚುನಾವಣೆಗಳನ್ನು ನಡೆಸಲಾಗುವುದಿಲ್ಲ ಎಂದು ಚುನಾವಣಾ ಆಯೋಗ ಪ್ರಕಟಿಸಿರುವುದು ರಾಜ್ಯದ ಜನತೆಯಲ್ಲಿ ನಿರಾಸೆ ಉಂಟು ಮಾಡಿದೆ ಎಂದು ಹಿರಿಯ ಸಿಪಿಐ(ಎಂ) ಮುಖಂಡ ಮತ್ತು ಶಾಸಕರೂ ಆಗಿದ್ದ ಮಹಮ್ಮದ್ ಯುಸುಫ್ ತರಿಗಾಮಿ ಹೇಳಿದ್ದಾರೆ. ಇದು ರಾಜ್ಯದ ಒಳಗೂ ಮತ್ತು ಹೊರಗೂ ತಪ್ಪು ಸಂಕೇತಗಳನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ತಮ್ಮ ಪತ್ರಿಕಾ ಸಮ್ಮೇಳನದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಕಾಶ್ಮೀರದಲ್ಲಿನ ಇತ್ತೀಚಿನ ಹಿಂಸಾಚಾರದ ಘಟನೆಗಳು ಇದಕ್ಕೆ ಕಾರಣ ಎಂದು ಮತ್ತೆ-ಮತ್ತೆ ಹೇಳಿದರು. ಅದು ನಿಜವಾಗಿದ್ದರೆ, ಲೋಕಸಭಾ ಚುನಾವಣೆಗಳು ಹೇಗೆ ನಡೆಯುತ್ತವೆ ಎಂದು ಪ್ರಶ್ನಿಸಿರುವ ಅವರು, ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರು ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು “ಯಶಸ್ವಿಯಾಗಿ” ನಡೆಸಿದ್ದಕ್ಕೆ ಪ್ರಧಾನ ಮಂತ್ರಿ ಮೋದಿಯವರು ತನ್ನನ್ನು ಅಭಿನಂದಿಸಿದ್ದರು ಎಂದು ಹೇಳಿದ್ದರು, ಆ ಚುನಾವಣೆಗಳನ್ನು ನಡೆಸಲು ಸಾಧ್ಯವಾಗಿದ್ದರೆ, ವಿಧಾನಸಭಾ ಚುನಾವಣೆಗಳನ್ನು ಮುಂದಕ್ಕೆ ಹಾಕುವುದರ ಹಿಂದಿರುವ ತರ್ಕವಾದರೂ ಏನು ಎಂದು ಪ್ರಶ್ನಿಸಿದ್ದಾರೆ.
ಕಳೆದ ಒಂಭತ್ತು ತಿಂಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಚುನಾಯಿತ ಸರಕಾರ ಇಲ್ಲ. ಚುನಾಯಿತ ಸರಕಾರ ಇಲ್ಲದ್ದರಿಂದ ರಾಜ್ಯದಲ್ಲಿ ಅನಿಶ್ಚಿತತೆ ದಿನೇ-ದಿನೇ ಆಳಗೊಳ್ಳುತ್ತಿದೆ, ಮತ್ತು ಬಹಳಷ್ಟು ಜನವಿಭಾಗಗಳ ನಡುವೆ ಅಸಂತೃಪ್ತಿ ಹೆಚ್ಚುತ್ತಿದೆ.
ಇಂತಹ ಸನ್ನಿವೇಶಕ್ಕೆ ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಏಕಮಾತ್ರ ಪರಿಣಾಮಕಾರಿ ಸ್ಪಂದನೆಯಾಗುತ್ತಿತ್ತು, ವಿಧಾನಸಭೆಗೆ ಚುನಾವಣೆಗಳನ್ನು ವಿಳಂಬಗೊಳಿಸುವುದು ಪರಿಸ್ಥಿತಿ ಉತ್ತಮಗೊಳ್ಳುವ ಪ್ರಕ್ರಿಯೆಗೆ ಬಾಧಕವಾಗುತ್ತದೆ ಎಂದು ತರಿಗಾಮಿಯವರು ಎಚ್ಚರಿಸಿದ್ದಾರೆ.