ಶೋಚನೀಯ ಆರ್ಥಿಕ ವಿಫಲತೆಯನ್ನು ಮರೆಮಾಚುವ ಕ್ರಮ – ಸಿಪಿಐ(ಎಂ) ಪೊಲಿಟ್‍ಬ್ಯುರೊ
ನವಂಬರ್ 8ರ ಮಧ್ಯರಾತ್ರಿಯ ನಂತರ 500ರೂ. ಮತ್ತು 1000ರೂ.ಗಳ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಲಾಗಿದೆ ಎಂಬ ಪ್ರಧಾನ ಮಂತ್ರಿಗಳ ಪ್ರಕಟಣೆ ಕಪ್ಪು ಹಣವನ್ನು ಹೊರಗೆಳೆಯುವ ಅಪೇಕ್ಷಿತ ಫಲಿತಾಂಶವನ್ನು ಕೊಡಲಾರದು, ಅದರ ಪರಿಣಾಮ ಸೀಮಿತವಾಗಿರುತ್ತದೆ, ಅದು ಹೆಚ್ಚಾಗಿ ನಟನೆಯಂತೆಯೇ ಆಗುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿದೆ. ಈ ರೀತಿಯ ಅನಾಣ್ಯೀಕರಣ ಕಪ್ಪು ಹಣವನ್ನು, ಭ್ರಷ್ಟಚಾರವನ್ನು ಮತ್ತು ಭಯೋತ್ಪಾದನೆಯನ್ನು ತಡೆಯುತ್ತದೆ ಎಂಬ ಸಮರ್ಥನೆಯಲ್ಲಿ ಸಾರವಿಲ್ಲ ಎಂದು ಅದು ಹೇಳಿದೆ.
ಬಹುಪಾಲು ಕಪ್ಪುಹಣದ ಉತ್ಪತ್ತಿ ಮತ್ತು ದಾಸ್ತಾನು ಸಾಗರದಾಚೆಗಿನ ವಿದೇಶಿ ಕರೆನ್ಸಿಗಳಲ್ಲಿ ಇದೆ ಎಂದು ಪ್ರಧಾನ ಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಯಾವುದೇ ಮೊತ್ತದ ನಕಲಿ ನೋಟುಗಳನ್ನು ಉತ್ಪತ್ತಿ ಮಾಡಬಹುದು. ಇನ್ನೊಂದು 500ರೂ. ನೋಟಿನೊಂದಿಗೆ, ಹೊಸದಾಗಿ 2000ರೂ. ನೋಟುಗಳನ್ನು ಮುದ್ರಿಸಲಾಗುವುದು ಎಂದು ಪ್ರಕಟಿಸಲಾಗಿದೆ, ಇದು ಮುಂದೆ ಆಗಬಹುದಾದ ನಕಲಿ ನೋಟುಗಳ ಚಲಾವಣೆಯನ್ನು ತಡೆಯಲಾರದು. ಭಯೋಪತ್ಪಾದಕರಿಗೆ ಹಣ ವರ್ಗಾವಣೆ ಕರೆನ್ಸಿ ವ್ಯವಹಾರಗಳ ಮೂಲಕ ಆಗುವುದಿಲ್ಲ, ಬದಲಾಗಿ ಇಲೆಕ್ಟ್ರಾನಿಕ್ ವರ್ಗಾವಣೆಗಳ ಮೂಲಕ ಆಗುತ್ತದೆ ಎಂಬುದು ಸಾಬೀತಾಗಿರುವ ಸಂಗತಿ ಎಂದು ಸಿಪಿಐ(ಎಂ) ಪೊಲಿಟ್‍ಬುರೊ ಹೇಳಿದೆ.
ನಿಗದಿತ ಸಮಯ ಮಿತಿಯೊಳಗೆ 1000ರೂ. ಮತ್ತು 500ರೂ. ನೋಟುಗಳ ಪರಿವರ್ತನೆಗೆ ಅವಕಾಶ ಕೊಡಲಾಗಿದ್ದು, ಬೇನಾಮಿ ಪರಿವರ್ತನೆಗಳನ್ನು ತಡೆಯುವ ಯಾವುದೇ ಪರಿಣಾಮಕಾರಿ ಕ್ರಮ ಇಲ್ಲವಾಗಿದೆ. ಅಲ್ಲದೆ ಪ್ಲಾಸ್ಟಿಕ್‍ಹಣ (ಕಾರ್ಡುಗಳು) ಮೂಲಕ ವ್ಯವಹಾರಗಳು ಎಂದಿನಂತೆ ಮುಂದುವರಿಯುತ್ತವೆ ಎಂಬ ಸಂಗತಿಯತ್ತವೂ ಪೊಲಿಟ್‍ಬ್ಯುರೊ ಗಮನ ಸೆಳೆದಿದೆ.
ವಾಸ್ತವ ಪರಿಣಾಮವೆಂದರೆ ನಮ್ಮ ದೈನಂದಿನ ಆರ್ಥಿಕ ಜೀವನದ ಭಾಗವಾದ ಪಾವತಿಗಳು ಮತ್ತು ಇತ್ಯರ್ಥಗಳು ಪೂರ್ಣವಾಗಿ ಅಸ್ತವ್ಯಸ್ತಗೊಳ್ಳುತ್ತವೆ. ಇದು ನಮ್ಮ ವಿಶಾಲ ಜನಸಮೂಹಗಳ ಮೇಲೆ, ದಿನಗೂಲಿಗಳು, ಮೀನುಗಾರರು, ಸಣ್ಣ ವ್ಯವಹಾರಸ್ಥರು, ವ್ಯಾಪಾರಿಗಳು ಮತ್ತು ಮನೆ-ಮನೆ ತಿರುಗಿ ಮಾರಾಟ ಮಾಡುವವರ ಮೇಲೆಹೊರೆ ಹಾಕುತ್ತದಷ್ಟೇ. ಕರೆನ್ಸಿ ನೋಟುಗಳನ್ನು ಬದಲಾಯಿಸ ಬಯಸುವ ಸಾಮಾನ್ಯ ಜನರ ಬದುಕು ಅಸ್ತವ್ಯಸ್ತಗೊಳ್ಳುತ್ತದೆ ಮತ್ತು ಅವರು ಅಧಿಕಾರಶಾಹೀ ಕಿರುಕುಳಗಳನ್ನೂ ಎದುರಿಸಬೆಕಾಗುತ್ತದೆ ಎಂದು ಸಿಪಿಐ(ಎಂ) ಆತಂಕ ವ್ಯಕ್ತಪಡಿಸಿದೆ.
ಕಪ್ಪು ಹಣವನ್ನು ಬಿಳಿಯಾಗಿಸುವ ಮೂಲ ದಾರಿಗಳಾದ ಪಾರ್ಟಿಸಿಪೇಟರಿ ನೋಟ್‍ಗಳು ಮತ್ತು ತೆರಿಗೆಮುಕ್ತ ಧಾಮಗಳ ಮೂಲಕ ನಡೆಸುವ ವ್ಯವಹಾರಗಳನ್ನು ಈಗಲೂ ಮುಟ್ಟಿಲ್ಲ. ರಿಯಲ್ ಎಸ್ಟೇಟ್ ವಲಯದಂತಹ ಕಪ್ಪು ಹಣ ಉತ್ಪತ್ತಿಯ ಮೂಲಗಳನ್ನು ಹತ್ತಿಕ್ಕುವ ಪ್ರಯತ್ನವನ್ನೇನೂ ಮಾಡಿಲ್ಲ ಎಂಬ ಸಂಗತಿಯತ್ತವೂ ಸಿಪಿಐ(ಎಂ) ಪೊಲಿಟ್‍ಬ್ಯುರೊ ಗಮನ ಸೆಳೆದಿದೆ.
ಇದು ಆರ್ಥಿಕ ರಂಗದಲ್ಲಿ ಮೋದಿ ಸರಕಾರದ ಶೋಚನೀಯ ವಿಫಲತೆಯನ್ನು ಮುಚ್ಚಿಕೊಳ್ಳುವ ಒಂದು ಕ್ರಮ ಎಂದು ಸಿಪಿಐ(ಎಂ) ಹೇಳಿದೆ. ಉದ್ಯೋಗಹೀನತೆ, ವಿಪರೀತ ಬೆಲೆಗಳು, ಆಂತರಿಕ ಬೇಡಿಕೆಗಳು ಹೆಚ್ಚದಿರುವುದು ಮುಂತಾದವುಗಳು ನಮ್ಮ ಎಲ್ಲ ಜನವಿಭಾಗಗಳನ್ನು, ವಿಶೇಷವಾಗಿ ದುಡಿಯುವ ವರ್ಗಗಳನ್ನು ಅಸಹಾಯಕರನ್ನಾಗಿ ಮಾಡುತ್ತಿರುವುದನ್ನು, ರೈತಾಪಿಗಳನ್ನು ನಾಶಗೊಳಿಸುತ್ತಿರುವುದನ್ನು ಮರೆಮಾಚುವ ಪ್ರಯತ್ನ ಇದು ಎಂದು ಸಿಪಿಐ(ಎಂ) ಟೀಕಿಸಿದೆ.
ಈ ಸರಕಾರ ನಿಜವಾಗಿಯೂ ಕಪ್ಪು ಹಣವನ್ನು ಹೊರತೆಗೆಯಲು ಮತ್ತು ಅದರ ಉತ್ಪತ್ತಿಯನ್ನು ತಡೆಯಲು ಬದ್ಧವಾಗಿದ್ದರೆ , ಅದು ತೆರಿಗೆ ತಪ್ಪಿಸಲು ಅವಕಾಶ ಕೊಡುವ ದೇಶ-ಪ್ರದೇಶಗಳಲ್ಲಿ ಬ್ಯಾಂಕ್ ಠೇವಣಿಗಳನ್ನು ಹೊಂದಿರುವವರ ಪಟ್ಟಿಯನ್ನು ಮತ್ತು ಒಟ್ಟು 11ಲಕ್ಷ ಕೋಟಿ ರೂ.ಗಳಷ್ಟು ರಾಷ್ಟ್ರೀಕೃತ ಬ್ಯಾಂಕುಗಳ ಸಾಲಗಳನ್ನು ಮರುಪಾವತಿಸಲು ನಿರಾಕರಿಸುವವರ ಪಟ್ಟಿಯನ್ನು ಸಾರ್ವಜನಿಕಗೊಳಿಸಲಿ ಎಂದು ಸಿಪಿಐ(ಎಂ) ಆಗ್ರಹಿಸಿದೆ.