ಜಲಿಯನ್ ವಾಲಾಬಾಗ್ 1919-2019 : ಹತ್ಯಾಕಾಂಡ ಶತಾಬ್ಧಿ

*   ವ್ಹಿ.ಪಿ. ಕುಲಕರ್ಣಿ

ಏಪ್ರಿಲ್ 13, 1919- ಪಂಜಾಬಿನ ಎಲ್ಲ ಸಮುದಾಯದವರು ಒಟ್ಟಾಗಿ ಆಚರಿಸುವ ಬೈಸಾಖಿ ಹಬ್ಬದ ದಿನ. ಅಮೃತಸರದಲ್ಲಿ ನಾಲ್ಕು ದಿನಗಳ ಹಿಂದೆ, ಏಪ್ರಿಲ್ 9(೧೯೧೯) ರಂದು ಕಂಡಿದ್ದ ಹಿಂದೂ-ಮುಸ್ಲಿಂ-ಸಿಖ್ ಐಕ್ಯತೆ ಅಂದು ಇನ್ನೂ ಗಾಢವಾದ ಅಭಿವ್ಯಕ್ತಿ ಕಂಡಿತು. ಎಲ್ಲರೂ-ಸಾಮೂಹಿಕ ಭೋಜನದಲ್ಲಿ ಪಾಲ್ಗೊಂಡು ಸ್ವರ್ಣ ಮಂದಿರದ ಪಕ್ಕದಲ್ಲಿದ್ದ ಜಲಿಯನ್ ವಾಲಾಬಾಗ್ (ಉದ್ಯಾನ)ದತ್ತ ನಡೆದರು. ಅದು ಕಟ್ಟಡಗಳಿಂದ ಸುತ್ತುವರೆದಿದ್ದ ಒಂದು ಕಿರಿಯದಾದ ಪ್ರವೇಶ ದ್ವಾರ ಮಾತ್ರ ತೆರೆದಿದ್ದ ಮೈದಾನ ಮತ್ತು ಉದ್ಯಾನವನ ಆಗಿತ್ತು.

ಏಪ್ರಿಲ್ ೧೩ ರಂದು ಸಂಜೆ ತಮ್ಮ ಪ್ರೀತಿ ಪಾತ್ರ ಮುಖಂಡರಾಗಿದ್ದ ಡಾ|| ಸತ್ಯಪಾಲ ಮತ್ತು ಡಾ|| ಸೈಪುದ್ದಿನ್ ಕಿಚಲೂ ಅವರನ್ನು ಬಂಧಿಸಿದಕ್ಕೆ ನಡೆದ ಪ್ರತಿಭಟನಾ ಸಭೆಯಲ್ಲಿ ಸುಮಾರು ೨೦ ಸಾವಿರ ಜನ ಪಾಲ್ಗೊಂಡಿದ್ದರು. ಸಂಜೆ ೫ ರ ವೇಳೆ ಬ್ರಿಟೀಷ್ ಬ್ರಿಗೇಡಿಯರ್ ಜನರಲ್ ಡಾಯರ್ ನೇತೃತ್ವದಲ್ಲಿ ಶಸ್ತ್ರ ಸಜ್ಜಿತ ಭದ್ರತಾ ಪಡೆಗಳು ನುಗ್ಗಿ ಬಂದವು. ಇದ್ದ ಒಂದು ಪ್ರವೇಶ ದ್ವಾರವನ್ನು ಅಡ್ಡಗಟ್ಟಿ ಯಾವುದೇ ಮುನ್ಸೂಚನೆ ಇಲ್ಲದೆ ಗುಂಡಿನ ಸುರಿಮಳೆ ಆರಂಭವಾಯಿತು. ಭದ್ರತಾ ಸಿಬ್ಬಂದಿಯ ಬಂದೂಕುಗಳಲ್ಲಿನ ಗುಂಡುಗಳು ಖಾಲಿ ಆಗುವ ತನಕ ಗುಂಡಿನ ಸುರಿಮಳೆ ನಡೆಯಿತು.

1650 ಸುತ್ತು ಗೋಲಿಬಾರ್ ನಡೆಯಿತು ಎನ್ನಲಾಗಿದೆ. ಇಡೀ ಮೈದಾನದಲ್ಲಿ ಹೆಣಗಳ ರಾಶಿ, ನೆತ್ತರ ಕೋಡಿ, ಸುಮಾರು 1000 (ಒಂದು ಸಾವಿರ) ಜನ ಸತ್ತು ಸುಮಾರು 1500 ಜನ ತೀವ್ರ ಗಾಯಾಳುಗಳಾದರು. (ಸರಕಾರದ ಅಂದಾಜು 370 ಸಾವು. 1100 ಜನ ಗಾಯಾಳುಗಳು) ಪಂಜಾಬಿನ ಖ್ಯಾತ ಸಾಹಿತ್ಯಕಾರ ನಾನಕಸಿಂಗ್ ತಮ್ಮ ಒಂದು ನೀಳ್ಗವನದಲ್ಲಿ ಈ ಘಟನೆಯನ್ನು ಖೂನಿಬೈಸಾಕಿ (ರಕ್ತಸಿಕ್ತ ಬೈಸಾಕಿ) ಎಂದರು. ಈ ಭೀಕರ ಹತ್ಯಾಕಾಂಡ ನಡೆದು ಇಂದಿಗೆ 100 ವರ್ಷಗಳಾದವು. ಈ ಅಮಾನುಷ ಘಟನೆ ಅಂದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತು.

Jaliyan-walabag

ಅದು ಮಹಾತ್ಮಾಗಾಂಧಿ ಸ್ವಾತಂತ್ರ್ಯ ಆಂದೋಲನದ ನೇತಾರರಾಗಿ ಮೂಡಿ ಬಂದಿದ್ದ ಸಮಯ. ೧೯೧೮ ರಲ್ಲಿ ಪ್ರಥಮ ಜಾಗತಿಕ ಯುದ್ದ ಮುಗಿದಿತ್ತು. ಬ್ರಿಟಿಷರ ಪರವಾಗಿ ಸೈನ್ಯದಲ್ಲಿದ್ದ ಸಾವಿರಾರು ಭಾರತೀಯ ಸೈನಿಕರು ಕೆಚ್ಚದೆಯಿಂದ ಹೋರಾಡಿದ್ದರು. ಆದರೂ ಯುದ್ಧಾನಂತರ ಸ್ವಯಮಾಡಳಿತ ಹಕ್ಕು ಸಿಗಬಹುದೆಂಬ ದೇಶದ ನಂಬಿಕೆ ಹುಸಿಯಾಯಿತು. ಬದಲಿಗೆ ಸಿಕ್ಕಿದ್ದು ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ರೌಲತ್ ಆಕ್ಟ್ ಎಂಬ ಕರಾಳ ಶಾಸನ.

1919 ಮಾರ್ಚ್ ತಿಂಗಳಲ್ಲಿ ಜಾರಿಗೆ ಬಂದ ಕರಾಳ ರೌಲತ್ ಕಾನೂನಿಗೆ ದೇಶಾದ್ಯಂತ ಗಾಂಧೀಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಚಳುವಳಿಗಳು ಕಾರಣವಾಗಿದ್ದವು. ಬ್ರಿಟಿಷ ನ್ಯಾಯಾಧೀಶ ರೌಲತ್ ನ ಅಧ್ಯಕ್ಷತೆಯಲ್ಲಿ 1917 ರಲ್ಲಿ ಒಂದು ಸಮಿತಿ ರಚಿಸಲಾಯಿತು. 1918 ರಲ್ಲಿ ಈ ಸಮಿತಿಯು ಸರಕಾರಕ್ಕೆ ತನ್ನ ವರದಿ ಸಲ್ಲಿಸಿತು. ಈ ವರದಿಯು ರೌಲತ್ ಕಾಯ್ದೆ  ಎಂಬ ಹೆಸರಿನಲ್ಲಿ ಮಾರ್ಚ್ ೧೯೧೯ ನಲ್ಲಿ ಜಾರಿಗೆ ಬಂತು. ಯಾವುದೇ ವಾರೆಂಟ್ ಇಲ್ಲದೆ ಶಂಕಿತ ಅಪರಾಧಿಗಳ ಸ್ಥಳ ಶೋಧಿಸಿ ಬಂಧಿಸುವದಕ್ಕೆ, ಯಾವುದೇ ವಿಚಾರಣೆ ನಡೆಸದೆ ಶಂಕಿತರನ್ನು ಅನಿರ್ಧಿಷ್ಠಕಾಲ ಬಂಧನದಲ್ಲಿಡುವುದಕ್ಕೆ ಈ ಕಾನೂನುನಿಂದ ಅವಕಾಶವಾಯಿತು.

ಈ ಕರಾಳ ಕಾನೂನನ್ನು ಇಡೀ ದೇಶ ಉಗ್ರವಾಗಿ ಪ್ರತಿಭಟಿಸಿತು. ಆ ವೇಳೆಗೆ ಕಾಂಗ್ರೆಸ್ಸಿನ ಹಾಗೂ ದೇಶದ ನಿರ್ವಿವಾದ ನಾಯಕರಾಗಿದ್ದ ಗಾಂಧೀಯವರು ವೈಸರಾಯನ್‌ನಾಗಿದ್ದ ಚೇಮ್ಸ್‌ಫರ್ಡನಿಗೆ ಪತ್ರ ಬರೆದು ಈ ಕರಾಳ ಕಾನೂನನ್ನು ವಾಪಸ್ಸ್ ಪಡೆಯಬೇಕೆಂದು ಆಗ್ರಹಿಸಿದರು. ಬ್ರಿಟಿಷ ಪ್ರಭುತ್ವ ಇದಾವುದನ್ನು ಗಮನಕ್ಕೆ ತೆಗೆದುಕೊಳ್ಳದೆ ತನ್ನ ದಮನಕಾರಿ ನೀತಿಗೆ ಕಟಿಬದ್ದವಾಗಿತ್ತು.

ಗಾಂಧೀಯವರು ೧೯೧೯ ರ ಏಪ್ರಿಲ್ ೬ ರಂದು ಅಖಿಲ ಭಾರತ ಹರತಾಳ ಮತ್ತು ಕಾಯ್ದೆ ಭಂಗಕ್ಕೆ ಕರೆ ನೀಡಿದರು. ಇಡೀ ಭಾರತ ಒಂದಾಗಿ ಮಹಾತ್ಮರ ಕರೆಗೆ ಓಗೊಟ್ಟಿತು. ಹರತಾಳ ಭಾರೀ ಯಶಸ್ವಿಯಾಯಿತು.

ಇದರಿಂದ ಕುಪಿತಗೊಂಡ ಬ್ರಿಟಿಷ ಸರಕಾರದ ನೀಚ ಹಾಗೂ ರಾಕ್ಷಸಿ ಕೃತ್ಯಗಳು ಪಂಜಾಬಿನಲ್ಲಿ ಹೆಚ್ಚು ಪ್ರಕಟಗೊಂಡವು. ಅಲ್ಲಿನ ಇಬ್ಬರು ಪ್ರಮುಖ ನಾಯಕರಾಗಿದ್ದ ಡಾ|| ಸತ್ಯಪಾಲ ಹಾಗೂ ಡಾ|| ಕಿಚಲೂರನ್ನು ಏಪ್ರೀಲ್ ೧೦ ರಂದು ದಸ್ತಗೀರಿ ಮಾಡಿದ್ದು ಜನತೆಯನ್ನು ಕೆರಳಿಸಿತು. ಚಳುವಳಿಗಾರರು ರೊಚ್ಚಿಗೆದ್ದು ಐವರು ಯೂರೋಪಿಯನ್ನರನ್ನು ಕೊಂದು ಕಟ್ಟಡಗಳಿಗೆ ಬೆಂಕಿ ಇಟ್ಟರು. ಪರಸ್ಥಿತಿ ಉಲ್ಬಣಗೊಂಡಿದ್ದರಿಂದ ಜನರಲ್ ಡಾಯರ್‌ನನ್ನು ಪರಿಸ್ಥಿತಿ ಸುಧಾರಿಸಲು ಅಮೃತಸರಕ್ಕೆ ಕರೆಸಲಾಯಿತು.

ಪಂಜಾಬಿನ ಲೆಫ್ಟಿನೆಂಟ್ ಗೌರ‍್ನರ್ ಸರ್ ಮೈಕಲ್ ಓಡ್ವಾಯರ್ ಮತ್ತು ಜನರಲ್ ಡಾಯರ್ ಇಬ್ಬರೂ ಕಟ್ಟಾ ಸಾಮ್ರಾಜ್ಯವಾದಿಗಳಾಗಿದ್ದು, ಜನರನ್ನು ಅಮಾನುಷವಾಗಿ ಸದೆ ಬಡೆದರೆ ಭಾರತೀಯರು ಸ್ವಾತಂತ್ರ್ಯ ಆಂದೋಲವನ್ನು ಕೈಬಿಡುವದಾಗಿ ನಂಬಿದ್ದರು. ಅಮೃತಸರದಲ್ಲಿ ಯಾವುದೇ ರಾಜಕೀಯ ಸಭೆ, ಮೆರವಣೆಗೆ ನಡೆಸಬಾರದೆಂದು ಡಾಯರ್ ಆದೇಶ ಹೊರಡಿಸಿದ.

Jaliyan-walabag2

ಆದರೆ ಅಮೃತಸರದ ಕಾಂಗ್ರೆಸ್ ನಾಯಕರು ಸರಕಾರದ ದಮನಕಾರಿ ನೀತಿ ಕಾರ್ಯಕ್ರಮವನ್ನು ವಿರೋಧಿಸಲು ಏಪ್ರೀಲ್ ೧೩ ರಂದು ಸಾರ್ವಜನಿಕ ಸಭೆಯನ್ನು ಜಲಿಯನ್ ವಾಲಾಬಾಗ್‌ನಲ್ಲಿ ಏರ್ಪಡಿಸಿದ್ದರು. ಈ ಬೃಹತ್ ಸಭೆಯಲ್ಲಿ ೨೦ ಸಾವಿರ ಜನತೆ ಪಾಲ್ಗೊಂಡಿತ್ತು. ತನ್ನ ಆಜ್ಞೆಯನ್ನು ಉಲ್ಲಂಘಿಸಿ ನೆರೆದ ಜನರನ್ನು ಉಗ್ರವಾಗಿ ಶಿಕ್ಷಿಸಲು, ತಕ್ಕ ಪಾಠ ಕಲಿಸಲು ಡಾಯರ್ ತೀರ್ಮಾನಿಸಿದ. ತನ್ನ ಪಡೆಗಳೊಟ್ಟಿಗೆ ಆಗಮಿಸಿದ ಡಾಯರ್ ಜನರ ಮೇಲೆ ಗುಂಡಿನ ಮಳೆಗರೆಯಲು ಆಜ್ಞಾಪಿಸಿದ.

ಈ ರಾಕ್ಷಿಸಿ ವರ್ತನೆಯನ್ನು ನಿರೀಕ್ಷಿಸದ ಜನತೆ ಓಡಿ ಹೋಗಲು ಯತ್ನಿಸಿದರೆ ಇದ್ದೊಂದೆ ಬಾಗಿಲಲ್ಲಿ ಶಸ್ತ್ರ ಸಜ್ಜಿತ ಪಡೆ ನಿಂತಿತ್ತು. ತರಗಲೆಗಳಂತೆ ಜನ ಕೆಳಗುರುಳಿದರು. ಮೈದಾನ ರಕ್ತದಿಂದ ಕೆಂಪಾಯಿತು. ಅಲ್ಲೊಂದು ಭಾವಿ ಇತ್ತು. ಜೀವ ಉಳಿಸಿಕೊಳ್ಳುವ ಭರದಲ್ಲಿ ಆ ಭಾವಿಗೆ ಬಿದ್ದು ೧೨೦ ಜನ ಪ್ರಾಣ ಕಳೆದುಕೊಂಡರು. ಈ ಭಾವಿಯನ್ನು, ಮೈದಾನದ ಸುತ್ತಲೂ ಇದ್ದ ಕಂಪೌಂಡ ಗೋಡೆ ಮೇಲೆ ಇದ್ದ ಬಂದೂಕಿನ ಗುಂಡುಗಳ ಗುರುತನ್ನು ಇಂದಿಗೂ ಕಾಣಬಹುದು. ನೆರೆದಿದ್ದ ಜನರಲ್ಲಿ ಮಹಿಳೆಯರು, ಮಕ್ಕಳು ಇದ್ದರು.

ಈ ರಾಕ್ಷಸಿ ಕೃತ್ಯ, ಅನಾಗರಿಕ ಹತ್ಯಾಕಾಂಡ ಬ್ರಿಟಿಷರ ಬಗ್ಗೆ ದೇಶದ ಜನರಲ್ಲಿ ಜಿಗುಪ್ಸೆ ಹುಟ್ಟುವಂತೆ ಮಾಡಿತು. ದೇಶಾದ್ಯಾಂತ ಆಕ್ರೋಶ ಬುಗಿಲೆದ್ದಿತು. ಕವಿ ರವೀಂದ್ರರರು ಬ್ರಿಟಿಷರು ತಮಗೆ ಕೊಟ್ಟಿದ್ದ ಸರ್ ಹುದ್ದೆಯನ್ನು ಮರಳಿಸಿದರು.

ಜಲಿಯನ್ ವಾಲಾಬಾಗ ಘಟನೆ ನಡೆದಾಗ ೧೧ ವರ್ಷದ ಬಾಲಕನಾಗಿದ್ದ ಭಗತಸಿಂಗ್ ಸುದ್ದಿ ಕಿವಿಗೆ ಬೀಳುತ್ತಲೇ ಅಲ್ಲಿಗೆ ಬರಿಗಾಲಲ್ಲೆ ಓಡಿದ. ರಕ್ತಸಿಕ್ತ ಮೈದಾನ ಮತ್ತು ಹೆಣಗಳ ರಾಶಿ ನಡುವೆ ಸಿಲುಕಿಗೊಂಡವರ ಆಕ್ರಂದನ ಆ ಪುಟ್ಟ ಬಾಲಕನಿಗೆ ಸಹಿಸಲಾರದಾಗಿತ್ತು. ಬಿಕ್ಕಿ ಬಿಕ್ಕಿ ಅತ್ತ. ಒಂದು ಸೀಸೆಯಲ್ಲಿ ನೆತ್ತರದಿಂದ ತೊಯ್ದ ಮಣ್ಣನ್ನು ತುಂಬಿ ಮನೆ ಕಡೆ ಹೊರಟ. ಅಲ್ಲಿನ ದೃಶ್ಯಗಳು ಅವನ ಮನದಲ್ಲಿ ಕೂತು ಬಿಟ್ಟಿದ್ದವು. ಈ ಘಟನೆ ಅವನ ಬದುಕಿನ ದಿಕ್ಕನ್ನು ನಿರ್ಧರಿಸಿತ್ತು. (ಈ ನೆತ್ತರದಿಂದ ತೊಯ್ದ ಮಣ್ಣು ತುಂಬಿದ ಸೀಸೆಯನ್ನು ಭಗತಸಿಂಗ್ ಸ್ಮಾರಕ ಸಂಗ್ರಹಾಲಯದಲ್ಲಿ ಕಾಯ್ದು ಇಡಲಾಗಿದೆ).

ಕಟುಕ ಜನರಲ್ ಡಾಯರನ ಪಡೆಗಳು ಈ ಹತ್ಯಾಕಾಂಡ ನಡೆಸಿದಾಗ ೧೫ ವರ್ಷದ ಬಾಲಕ ಉಧಮ್‌ಸಿಂಗ್ ಅಲ್ಲಿ ಸ್ವಯಂಸೇವಕನಾಗಿ ಜನರಿಗೆ ಕುಡಿಯುವ ನೀರು ಪೂರೈಸುತ್ತಿದ್ದ. ಗೋಲಿಬಾರಿನ ನಡುವೆ ಹೇಗೂ ಪಾರಾದ. ಆದರೆ ಕಣ್ಣಾರೆ ಕಂಡ ದೃಶ್ಯಗಳು ಆತನ ರಕ್ತ ಕುದಿಯುವಂತೆ ಮಾಡಿದ್ದವು. ಆಗಲೇ ಆತ ಸೇಡು ತೀರಿಸಿಕೊಳ್ಳುವ ಪಣ ತೊಟ್ಟ. ಅದಕ್ಕೆ ಸಿದ್ಧತೆಯನ್ನೂ ಆರಂಭಿಸಿದ. ಸ್ವಲ್ಪ ಹಣ ಕೂಡಿಸಿಕೊಂಡು ಮರುವರ್ಷ ಅಮೆರಿಕ ಮತ್ತು ಆಫ್ರಿಕಾದಲ್ಲಿ ಕೆಲಸ ಮಾಡಿದ. ಈ ನಡುವೆ ಗದರ್ ಪಾರ್ಟಿಯ ಕ್ರಾಂತಿಕಾರಿಗಳ ಪರಿಚಯವೂ ಆಯಿತು. ಮೂರು ವರ್ಷಗಳ ನಂತರ ಭಾರತಕ್ಕೆ ಮರಳಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವಾಗ ಸಿಕ್ಕಿ ಬಿದ್ದು ಜೈಲುವಾಸವೂ ಆಯಿತು.

ಈ ಸಂದರ್ಭದಲ್ಲಿ ಆತ ಹಿಂದೂ-ಮುಸ್ಲಿಂ-ಸಿಖ್ ಐಕ್ಯತೆಯ ಪ್ರತೀಕವಾಗಿ ತನ್ನ ಹೆಸರು ರಾಮ್ ಮೊಹಮ್ಮದ್ ಸಿಂಗ್ ಎಂದು ಹೇಳಿಕೊಳ್ಳುತ್ತಿದ್ದ. ಜೈಲಿನಿಂದ ಬಿಡುಗಡೆಯಾದ ನಂತರ ಜರ್ಮನಿಗೆ, ಅಲ್ಲಿಂದ ಇಂಗ್ಲೆಂಡ್‌ಗೆ ಹೋದ. ಈ ನಡುವೆ ಕಟುಕ ಡಾಯರ್ ೧೯೨೭ರಲ್ಲಿ ಕೊನೆಯುಸಿರೆಳೆದಿದ್ದ, ಆದರೆ ಆತನ ಬೆಂಬಲಕ್ಕೆ ನಿಂತಿದ್ದ ಪಂಜಾಬ್  ಪ್ರಾಂತ್ಯದ ಗವರ್ನರ್ ಮೈಕೆಲ್ ಒಡ್ವಾಯರ್ ನಿವೃತ್ತನಾಗಿ ತನ್ನ ದೇಶಕ್ಕೆ ಮರಳಿದ್ದ. ಕೊನೆಗೂ ೧೯೪೦ರ ಮಾರ್ಚ್ ೧೩ರಂದು ಸಮಾರಂಭವೊಂದರಲ್ಲಿ ಉಧಮ್ ಸಿಂಗ್ ಪಣ ಈಡೇರಿತು. ಒಡ್ವಾಯರ್‌ನನ್ನು ಗುಂಡಿಕ್ಕಿ ಕೊಂದ ಮೇಲೆ ಓಡಿ ಹೋಗುವ ಅವಕಾಶವಿದ್ದರೂ ಹೋಗಲಿಲ್ಲ. ಆತನ ಜೀವನದ ಗುರಿ ಈಡೇರಿತ್ತು.ತ್ವರಿತವಾಗಿ ವಿಚಾರಣೆಯೆಂಬುದೂ ಆಯಿತು, ಗಲ್ಲು ಶಿಕ್ಷೆಯೂ ಆಯಿತು. ದೇಶಕ್ಕಾಗಿ ಗಲ್ಲಿಗೇರುವ ಬಹುಮಾನ ಸಿಕ್ಕಿದೆ ಎಂದು ನಗುನಗುತ್ತಲೇ ಜುಲೈ ೩೧, ೧೯೪೦ರಂದು ನೇಣುಗಂಬವನ್ನು ಏರಿದ. ಜಲಿಯಾಂವಾಲಾಬಾಗ್ ರಾಷ್ಟ್ರೀಯ ಸ್ಮಾರಕದಲ್ಲಿ ಈತನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

(ಸಂಗ್ರಹ)

Leave a Reply

Your email address will not be published. Required fields are marked *