ಆರ್ಥಿಕ ನಿಧಾನಗತಿ: ಜನಗಳ ಜೀವನೋಪಾಯಗಳ ಮೇಲೆ ವಿಧ್ವಂಸಕಾರೀ ಪ್ರಭಾವ ಉಂಟು ಮಾಡುತ್ತಿದೆ

ಜುಲೈ 31ರಂದು ನವದೆಹಲಿಯಲ್ಲಿ ಸಭೆ ಸೇರಿದ ಸಿಪಿಐ(ಎಂ) ಪೊಲಿಟ್‌ಬ್ಯುರೊ ದೇಶದಲ್ಲಿನ ಪ್ರಸಕ್ತ ಪರಿಸ್ಥಿತಿಗಳ ಪರಾಮರ್ಶೆ ನಡೆಸಿ ಸಭೆಯ ನಂತರ ಈ ಕೆಳಗಿನ ಹೇಳಿಕೆಯನ್ನು ನೀಡಿದೆ:

ವಿಧ್ವಂಸಕಾರೀ ಆರ್ಥಿಕ ನಿಧಾನಗತಿ:

ಒಟ್ಟಾರೆ ಆರ್ಥಿಕ ನಿಧಾನಗತಿ ಮತ್ತು ದಿಗಿಲುಂಟು ಮಾಡುವ ರೀತಿಯಲ್ಲಿ ಏರುತ್ತಿರುವ ನಿರುದ್ಯೋಗ , ಜತೆಗೆ ಆಳಗೊಳ್ಳುತ್ತಿರುವ ಕೃಷಿ ಸಂಕಟ ನಮ್ಮ ಬಹುಪಾಲು ಜನಗಳ ಜೀವನೋಪಾಯದ ಸ್ಥಿತಿಗಳ ಮೇಲೆ ವಿಧ್ವಂಸಕಾರೀ ಪ್ರಭಾವ ಉಂಟು ಮಾಡುತ್ತಿವೆ.

ಭಾರತದ ಮುಖ್ಯ ಕೈಗಾರಿಕಾ ವಲಯದ ಬೆಳವಣಿಗೆ ದರ ಜೂನ್ 2019ರಲ್ಲಿ 0.2%ಕ್ಕೆ ಕುಸಿದಿದೆ. ಇದು 44 ವರ್ಷಗಳಲ್ಲೇ ಅತೀ ಕಡಿಮೆ ದರ. ಜೂನ್ 2018ರಲ್ಲಿ ಇದು 7.8% ಇತ್ತು. ನಾಲ್ಕು ಕೋಟಿ ಜನಗಳು ಕೆಲಸ ಮಾಡುವ ವಾಹನ ಉದ್ದಿಮೆ ಆಳವಾದ ಬಿಕ್ಕಟ್ಟಿನಲ್ಲಿದೆ. ದೇಶದ ಜಿಡಿಪಿಗೆ 7.5% ಮತ್ತು ತಯಾರಿಕಾ ವಲಯದ ಜಿಡಿಪಿಯಲ್ಲಿ 49% ನೀಡುವ ಉದ್ದಿಮೆ ಇದು. 17 ಕಾರು ಕಂಪನಿಗಳಲ್ಲಿ 10ರ ಮಾರಾಟ ಬೆಳವಣಿಗೆ ನಕಾರಾತ್ಮಕವಾಗಿದೆ. ಇದರಿಂದಾಗಿ ಉತ್ಪಾದನೆಯಲ್ಲಿ ಆಗಿರುವ ಕಡಿತದಿಂದಾಗಿ ಕಾರ್ಮಿಕರ ಲೇ-ಆಫ್ ಆಗುವ ಸಂಭವವಿದೆ. ಇದು ಈ ವಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗನಷ್ಟವನ್ನುಂಟು ಮಾಡಬಹುದು. ಇದನ್ನು ಅವಲಂಬಿಸಿರುವ ಉಪ ಉದ್ದಿಮೆಗಳಲ್ಲಿ ಈಗಾಗಲೇ ೧೦ಲಕ್ಷ್ಷೂ ಹೆಚ್ಚು ಕಾರ್ಮಿಕರ ಲೇ-ಆಫ್ ಆಗಿದೆ.

ದೊಡ್ಡ ಪ್ರಮಾಣದಲ್ಲಿ ಖಾಸಗೀಕರಣ: ಮರುಆಯ್ಕೆಗೊಂಡ ಮೇಲೆ ಮೋದಿ ಸರಕಾರ ನೇರವಾಗಿ ವ್ಯಾಪಕ ಖಾಸಗೀಕರಣದ ಪ್ರಕಟಣೆ ಮಾಡಿದೆ. ೪೨ ರಕ್ಷಣಾ ಉತ್ಪಾದನೆ ಘಟಕಗಳನ್ನು ಖಾಸಗೀಕರಿಸಲಾಗುತ್ತಿದೆ. ಈ ೪೨ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳು, ಡಿಆರ್‌ಡಿಒ ಘಟಕಗಳು ಮತ್ತು ಎಲ್ಲ ಮಿಲಿಟರಿ ಇಂಜಿನಿಯರಿಂಗ್ ಸೇವೆಗಳಲ್ಲಿ ಈಗ ನಾಲ್ಕು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಖಾಸಗೀಕರಣದಿಂದ ಇವರೆಲ್ಲರ ಭವಿಷ್ಯ ಪಣಕ್ಕೊಡ್ಡಲ್ಪಟ್ಟಿದೆ.

ಈ ಮೊದಲು ಆರು ವಿಮಾನ ನಿಲ್ದಾಣಗಳನ್ನು ಖಾಸಗೀಕರಿಸಿದ್ದು ಅವುಗಳ ಗುತ್ತಿಗೆ ಅದಾನಿ ಗುಂಪಿಗೆ ಹೋಗಿದೆ. ಈಗ ಇನ್ನೂ ೨೦-೨೫ ವಿಮಾನ ನಿಲ್ದಾಣಗಳನ್ನು ಖಾಸಗೀಕರಿಸುವುದಾಗಿ ಸರಕಾರ ಪ್ರಕಟಿಸಿದೆ.

ಭಾರತೀಯ ರೈಲ್ವೆಯನ್ನು ಹಂತ-ಹಂತವಾಗಿ ಖಾಸಗೀಕರಿಸಲಾಗುತ್ತಿದೆ.

ಈ ಸರಕಾರ ಮುಂದಿನ ಮೂರುವರ್ಷಗಳಲ್ಲಿ ಎಲ್ಲ ಕೇಂದ್ರೀಯ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ತನ್ನ ಪಾಲನ್ನು 49%ಕ್ಕೆ ಇಳಿಸುವ ಯೋಜನೆಯನ್ನು ಸಿದ್ಧಪಡಿಸಿದೆ.

ಮಾಹಿತಿ ಕೈಚಳಕ: ಆರ್ಥಿಕ ಜಾರುದಾರಿಯಲ್ಲಿರುವಾಗ, ಸತ್ಯವನ್ನು ಮರೆಮಾಚಲು ಮಾಹಿತಿಗಳನ್ನು ದೊಡ್ಡ ಪ್ರಮಾಣದಲ್ಲಿ ಅರ್ಥಹೀನಗೊಳಿಸುವ ಕೆಲಸಕ್ಕೆ ಸರಕಾರ ಕೈಹಾಕಿದೆ. ಹೆಚ್ಚಿನ ಬಜೆಟ್ ಲೆಕ್ಕಾಚಾರಗಳು ಇಂತಹ ಅಂಕೆ-ಸಂಖ್ಯೆಗಳನ್ನು ಆಧರಿಸಿವೆ ಎಂದು ಈಗ ಕಂಡು ಬಂದಿದೆ. ಬಜೆಟ್ ಲೆಕ್ಕಪತ್ರದಲ್ಲಿ ಕನಿಷ್ಟ 1.7ಲಕ್ಷ ಕೋಟಿ ರೂ.ಗಳನ್ನು ಬಿಟ್ಟಿರುವುದು ಎದ್ದು ಕಾಣುತ್ತಿದೆ. ಜಿಎಸ್‌ಟಿ ಸಂಗ್ರಹ ಪ್ರಕಟಿತ ಗುರಿಗಿಂತ ಬಹಳ ಕೆಳಗಿರುವಾಗ ವರಮಾನಗಳನ್ನು ಹಿಗ್ಗಿಸಿ ತೋರಿಸಲಾಗಿದೆ. ಮಹಾ ಲೆಕ್ಕಪರಿಶೋಧಕರ (ಸಿಎಜಿ) ಪ್ರಕಾರ ಸರಕಾರದ ವಿತ್ತೀಯ ಕೊರತೆ ಜೂನ್ ತ್ರೈಮಾಸಿಕದಲ್ಲಿ 3.42 ಲಕ್ಷ ಕೋಟಿ ರೂ. ತಲುಪಿದೆ. ಇದು 2019-20ರ ಇಡೀ ವರ್ಷದ ಬಜೆಟ್ ಅಂದಾಜಿನ 61.4% ದಷ್ಟು ಆಗಿದೆ. ಈ ಹಣಕಾಸು ವರ್ಷದಲ್ಲಿ ಇನ್ನೂ ಮೂರು ತ್ರೈಮಾಸಿಕಗಳಿವೆ. ಈ ಸರಕಾರ ಜಂಬದಿಂದ ಹೇಳಿಕೊಳ್ಳುತ್ತಿರುವ ಹಣಕಾಸು ಶಿಸ್ತನ್ನು ಉಳಸಿಕೊಳ್ಳಲು ಅಸಮರ್ಥವಾಗಿದೆ ಎಂಬುದು ಸ್ಪಷ್ಟ.

ನಿರುದ್ಯೋಗ ಇಂದು ಕಳೆದ ಅರ್ಧಶತಮಾನದಲ್ಲೇ ತುತ್ತತುದಿಯಲ್ಲಿದೆ ಎಂಬುದಕ್ಕೆ ಪುರಾವೆ ಇದ್ದರೂ, ಉದ್ಯೋಗ ಕುರಿತ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿಲ್ಲ. ರೈತರ ಹತಾಶ ಆತ್ಮಹತ್ಯೆಗಳ ಮಾಹಿತಿಗಳನ್ನೂ ಸಂಗ್ರಹಿಸುತ್ತಿಲ್ಲ, ಇದರಿಂದಾಗಿ ಕೃಷಿ ಸಂಕಟ ಯಾವ ಮಟ್ಟದಲ್ಲಿದೆ ಎಂಬ ಬಗ್ಗೆ ವರದಿ ಬರುತ್ತಿಲ್ಲ, ಆಮೂಲಕ ಸಂಕಟ ಪರಿಹಾರದ ಕ್ರಮಗಳೂ ಇಲ್ಲವಾಗಿವೆ.

ಚಮಚಾ ಬಂಡವಾಳಶಾಹಿ: ದೇಶದ ಸಂಪತ್ತಿನ ಲೂಟಿ, ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಸಾಲಗಳ ಮೂಲಕ ನಿಲ್ಲದೆ ಸಾಗಿದೆ. ಸರಕಾರ ಸುಸ್ತಿಸಾಲಗಳ ಮಟ್ಟ ಇಳಿಯುತ್ತಿದೆ ಎಂದು ಹೇಳುತ್ತಿದ್ದರೂ ಇದು ಮುಂದುವರೆದಿದೆ. ಬ್ಯಾಂಕುಗಳ ಮಾಹಿತಿಗಳ ಪ್ರಕಾರವೇ ಪ್ರಸಕ್ತ ವರ್ಷದಲ್ಲಿ ನಿಜವಾದ ಸುಸ್ತಿಸಾಲಗಳ ಮೊತ್ತ ರೂ.2,30,811 ಕೋಟಿಗೆ ಏರಿದೆ. ಇದು 2018-19ರಲ್ಲಿ ರೂ.1.96 ಲಕ್ಷ ಕೊಟಿಯನ್ನು ಲೆಕ್ಕದಿಂದ ತೆಗೆದು ಹಾಕಿದ ಮೇಲಿನ ಮೊತ್ತ.

ಸಂಸದೀಯ ಸಂಸ್ಥೆಗಳ ಮೇಲೆ ದಾಳಿಗಳು:

ಎಲ್ಲ ಸ್ವತಂತ್ರ ಸಂವಿಧಾನಿಕ ಸಂಸ್ಥೆಗಳನ್ನು ತ್ವರಿತವಾಗಿ ಬಡಮೇಲು ಶಿಥಿಲಗೊಳಿಸಲಾಗುತ್ತಿದೆ.

ಸಂಸದೀಯ ವಿಧಿ-ವಿಧಾನಗಳು: ಬಿಜೆಪಿ ಸರಕಾರ ಚುನಾವಣೆಗಳ ನಂತರ ಮೊದಲ ಸಂಸತ್ ಅಧಿವೇಶನದಲ್ಲೇ ಮಹತ್ವದ ಶಾಸನಗಳನ್ನು ಮುಂದೆ ತಳ್ಳಿ ಪಾಸು ಮಾಡಿಕೊಳ್ಳುತ್ತಿದೆ. ಸಂಸತ್ತು ತನ್ನ ಸ್ಥಾಯೀ ಸಮಿತಿಗಳು ಮತ್ತು ಸದನ ಸಮಿತಿಗಳನ್ನು ರಚಿಸಿದ ಮೇಲೆ ಸಂಸತ್ತಿನಲ್ಲಿ ಮಂಡಿಸುವ ಎಲ್ಲ ಶಾಸನ ಸಂಬಂಧಿ ವ್ಯವಹಾರಗಳನ್ನು ಸಾಮಾನ್ಯವಾಗಿ ಸಂಬಂಧಪಟ್ಟ ಸಮಿತಿಗಳಿಂದ ತಪಾಸಣೆಗೆ ಕಳಿಸಲಾಗುತ್ತದೆ. ಈ ಸರಕಾರ ಈ ವಿಧಾನವನ್ನು ಕೈಬಿಟ್ಟಿದೆ. ಇದುವರೆಗೆ ಯಾವ ಸಮಿತಿಯನ್ನೂ ರಚಿಸಿಲ್ಲ. ಸಂಸತ್ತಿನ ಅಧಿವೇಶನವನ್ನು ಕನಿಷ್ಟ 17 ಮಹತ್ವದ ಶಾಸನಗಳನ್ನು ಪಾಸು ಮಾಡಿಕೊಳ್ಳುವ ಘೋಷಿತ ಆಶಯದಿಂದಲೇ ವಿಸ್ತರಿಸಲಾಗಿದೆ, ಈ ಶಾಸನಗಳ  ಎಲ್ಲ ಕಾನೂನು ರಚನೆಯ ಆಯಾಮಗಳ ಒಂದು ಗಂಭೀರ ಪರಿಶೀಲನೆ ಇಲ್ಲದೆಯೇ ಇವನ್ನು ಪಾಸು ಮಾಡಿಕೊಳ್ಳಲಾಗುತ್ತಿದೆ.

ಮಸೂದೆಗಳ ತಪಾಸಣೆಗೆ ಆಯ್ಕೆ ಸಮಿತಿಗಳನ್ನಾದರೂ ರಚಿಸಿ ಎಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಸರಕಾರ ತಿರಸ್ಕರಿಸಿದೆ. ಬಿಜೆಪಿ ತನ್ನ ಬಹುಮತದ ದಬ್ಬಾಳಿಕೆಯನ್ನು ಚಲಾಯಿಸಿ ಈ ಎಲ್ಲ ಮಸೂದೆಗಳಿಗೆ ಸಂಸತ್ತಿನಿಂದ ಮಂಜೂರಾತಿ ಪಡೆಯುತ್ತಿದೆ.

ಒಕ್ಕೂಟತತ್ವವನ್ನು ಶಿಥಿಲಗೊಳಿಸಲಾಗುತ್ತಿದೆ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಗೆ ಒಂದು  ತಿದ್ದುಪಡಿಯನ್ನು ಪಾಸು ಮಾಡಲಾಗಿದೆ. ಇದರಲ್ಲಿ ಗೃಹ ಮಂತ್ರಾಲಯಕ್ಕೆ ಈಗ ಯಾವುದೇ ರಾಜ್ಯದಲ್ಲಿ ಯಾವುದೇ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸುವ ಅಧಿಕಾರವನ್ನು ಕೊಡಲಾಗಿದೆ, ಮತ್ತು ಇದನ್ನು ಸಂಬಂಧಪಟ್ಟ ರಾಜ್ಯ ಸರಕಾರಕ್ಕೆ ತಿಳಿಸಬೇಕಾಗಿಲ್ಲ. ಇಂತಹ ಗುರುತಿಸಿದ ಜನಗಳ ಆಸ್ತಿಗಳನ್ನು ಮುಟ್ಟುಗೋಲು ಮಾಡಬಹುದು. ಭಿನ್ನಮತ ವ್ಯಕ್ತಪಡಿಸುವ ವ್ಯಕ್ತಿಗಳನ್ನು ಈಗ ಮನಬಂದಂತೆ ಭಯೋತ್ಪಾದಕರು ಎಂದು ಘೋಷಿಸಬಹುದು. ತಾನು ನಿರಪರಾಧಿ ಎಂಬುದನ್ನು ಸಿದ್ಧಪಡಿಸುವ ಹೊಣೆಯನ್ನು ಆಪಾದಿತ ವ್ಯಕ್ತಿಯ ಮೇಲೆಯೇ ಹಾಕಿ ನ್ಯಾಯಶಾಸ್ತ್ರದ ನೀತಿಯನ್ನೇ ತಲೆಕೆಳಗು ಮಾಡಲಾಗಿದೆ. ಅಪರಾಧ ಸಾಬೀತಾಗುವ ವರೆಗೆ ನಿರಪರಾಧಿ ಎಂಬ ತತ್ವದ ಬದಲು ಈಗ ನಿರಪರಾಧಿತ್ವವನ್ನು ಸಾಬೀತುಪಡಿಸುವ ವರೆಗೆ ಅಪರಾಧಿ ಎಂಬ ತತ್ವವನ್ನು ತರಲಾಗಿದೆ. ಇದು ದೊಡ್ಡ ಪ್ರಮಾಣದಲ್ಲಿ ಕಿರುಕುಳಗಳಿಗೆ, ಹಗೆಸಾಧನೆಗೆ ಮತ್ತು ಸಾರಾಸಗಟು ಅನ್ಯಾಯಕ್ಕೆ ಎಡೆಮಾಡಿಕೊಡುತ್ತದೆ. ಒಕ್ಕೂಟ ತತ್ವಕ್ಕೆ ತಿಲಾಂಜಲಿ ಕೊಡಲಾಗಿದೆ, ಕಾನೂನು ವ್ಯವಸ್ಥೆಯ ವಿಷಯ ರಾಜ್ಯಸರಕಾರಗಳ ಅಧಿಕಾರ ವ್ಯಾಪ್ತಿಯಲ್ಲಿದೆ ಎಂಬುದನ್ನು ಬದಿಗೊತ್ತಲಾಗುತ್ತದೆ.

ಮಾಹಿತಿ ಹಕ್ಕಿನ ಕಾಯ್ದೆಯನ್ನು ತಿದುಪಡಿ ಮಾಡಿ ಮಾಹಿತಿ ಹಕ್ಕನ್ನು ಸುಮಾರಾಗಿ ನಿರರ್ಥಕಗೊಳಿಸಲಾಗಿದೆ. ಸರಕಾರ ಬಹಳಷ್ಟು ಸಂಗತಿಗಳನ್ನು ಮರೆಮಾಚಬೇಕಾಗಿದೆ, ಅದರ ಆಂತರಿಕ ಕೆಲಸಕಾರ್ಯಗಳು ಮತ್ತು ತನ್ನ ಚಮಚಾಗಳಿಗೆ ಕೊಡಮಾಡುವ ಅಪಾರ ಪ್ರಯೋಜನಗಳು ಸಾರ್ವಜನಿಕ ಗಮನಕ್ಕೆ ಬರಬಾರದು ಎಂಬುದು ಅದರ ಬಯಕೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇದು ಸಂವಿಧಾನ ಖಾತ್ರಿಪಡಿಸಿರುವ ಮೂಲಭೂತ ಹಕ್ಕುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವಂತದ್ದು.

ತ್ರಿವಳಿ ತಲಾಖ್ ಮಸೂದೆ ಅಂಗೀಕಾರಗೊಂಡಿದೆ. ಇದು ಮದುವೆಯ ಸಿವಿಲ್ ಕರಾರು ಮುರಿದು ಬೀಳುವುದನ್ನು ಕ್ರಿಮಿನಲ್ ಅಪರಾಧವಾಗಿ ಮಾಡುತ್ತದೆ. ಇದನ್ನು ಕೂಡ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ.

ಇದೇ ರೀತಿಯಲ್ಲಿ ಸಿಬಿಐ ಯನ್ನು ಬಿಜೆಪಿಯ ರಾಜಕೀಯ ಅಜೆಂಡಾಕ್ಕೆ ಬಳಸಿಕೊಳ್ಳುವುದು ಮುಂದುವರೆದಿದೆ. ಹಾಗೆಯೇ ಹಣಕಾಸು ಇಲಾಖೆಯ ಜಾರಿ ನಿರ್ದೇಶನಾಲಯ (ಇಡಿ)ವನ್ನು ಕೂಡ ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಈ ಏಜೆನ್ಸಿಗಳು ನೀಡುವ ಬೆದರಿಕೆಗಳು ಆಗಾಗ ಪ್ರಾದೇಶಿಕ ರಾಜಕೀಯ ಪಕ್ಷಗಳನ್ನು ನಿಶ್ಶಸ್ತ್ರಗೊಳಿಸಿ ಅವು ತಲೆಬಾಗುವಂತೆ ಮಾಡುವ ಮತ್ತು ಪಕ್ಷಾಂತರದ ಬಲವಂತವನ್ನು ಉಂಟುಮಾಡುವ ಉದ್ದೇಶಗಳನ್ನು ಹೊಂದಿರುತ್ತದೆ.

ಅದೇ ರೀತಿಯಲ್ಲಿ ಸುಪ್ರಿಂ ಕೋರ್ಟ್ ಮತ್ತು ನ್ಯಾಯಾಂಗ, ಚುನಾವಣಾ ಆಯೋಗ, ರಿಝರ್ವ್ ಬ್ಯಾಂಕ್, ಸಿಎ&ಎಜಿ ಇವೆಲ್ಲವೂ ಬೇರೆ ಬೇರೆ ಮಟ್ಟದ ವರೆಗೆ ಇಂತಹ ಒತ್ತಡಗಳಿಗೆ ಒಳಗಾಗುತ್ತಿವೆ. ಇವೆಲ್ಲವೂ ದೇಶದಲ್ಲಿ ಸಂವಿಧಾನಿಕ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿವೆ.

ಕೋಮುವಾದಿ ಧ್ರುವೀಕರಣ:

ಕೋಮುವಾದಿ ಧ್ರುವೀಕರಣ ತೀಕ್ಷ್ಣಗೊಳ್ಳುತ್ತಿದ್ದು ದೇಶದಲ್ಲಿ ದ್ವೇಷ, ಅಸಹಿಷ್ಣುತೆ, ಮತ್ತು ಹಿಂಸಾಚಾರದ ವಾತಾವರಣದ ಸೃಷ್ಟಿಗೆ ದಾರಿ ಮಾಡಿಕೊಡುತ್ತಿದೆ. ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ಗೋಮಾಂಸ ತಿಂದರೆಂದ ಆಪಾದನೆ ಹೊರಿಸಿಯೋ, ಅಥವ ಜೈಶ್ರೀರಾಮ್ ಎಂದು ಹೇಳುವಂತೆ ಬಲವಂತ ಮಾಡಿಯೋ ಹಲ್ಲೆ ಮಾಡಲಾಗುತ್ತಿದೆ. ಇಂತಹ ಹೆಚ್ಚಿನ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ನಡೆದಿವೆ. ಝಾರ್ಖಂಡ್, ಮಹಾರಾಷ್ಟ್ರ, ಅಸ್ಸಾಂ, ಬಿಹಾರ್, ಪಶ್ಚಿಮ ಬಂಗಾಲ ಮತ್ತು  ಇತರೆಡೆಗಳಿಂದಲೂ ಇಂತಹ ಪ್ರಕರಣಗಳ ವರದಿಗಳು ಬಂದಿವೆ.

ಸರ್ವಾಧಿಕಾರಶಾಹಿ ಪ್ರಹಾರಗಳು: ಈ ಸರಕಾರದ ಈ ಎರಡು ತಿಂಗಳುಗಳಲ್ಲಿ ಜನಗಳ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯದ ಮೇಲೆ ದಾಳಿಗಳಲ್ಲಿ ಅಭೂತಪೂರ್ವ ಏರಿಕೆ ಕಂಡು ಬಂದಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಮುಖ್ಯಮಂತ್ರಿಗಳ ವಿರುದ್ಧ ಆಕ್ಷೇಪಣೀಯ ವಿಷಯವನ್ನು ಹಂಚಿಕೊಂಡರೆಂದು ಬಹಳಷ್ಟು ಜನಗಳನ್ನು ಬಂಧಿಸಲಾಗಿದೆ. ಹಾಗೆಯೇ, ಬಿಜೆಪಿ ಆಳ್ವಿಕೆಯ ಅಸ್ಸಾಂ, ತ್ರಿಪುರಾ, ಉತ್ತರಾಖಂಡ್, ಗೋವಾ ಮುಂತಾದೆಡೆಗಳಲ್ಲಿ ಹಲವಾರು ಜನಗಳನ್ನು ಬಂಧಿಸಲಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಭೀತಿಯ ಭಾವನೆಯನ್ನು ಸೃಷ್ಟಿಸುತ್ತಿದೆ, ಲೇಖಕರು, ಬರಹಗಾರರು ಮತ್ತು ಇತರ ವ್ಯಕ್ತಿಗಳ ಮೇಲೆ  ಸುಪ್ರಿಂ ಕೋರ್ಟ್ ತೀರ್ಪಿಗೆ ವ್ಯತಿರಿಕ್ತವಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕರಾಳ ಸೆಕ್ಷನ್ ೬೬ಎ ಅಡಿಯಲ್ಲಿ ಗುರಿಯಿಡಲಾಗುತ್ತಿದೆ.

ದ್ವೇಷ ಮತ್ತು ಅಸಹಿಷ್ಣುತೆಯ ಹರಡಿಕೆಗೆ ಸಾಮಾಜಿಕ ಕಾರ್ಯಕರ್ತರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಕೂಡ ನಗರ ನಕ್ಸಲರು , ಟುಕ್ಡೆ ಟುಕ್ಡೆ ಗ್ಯಾಂಗ್ ಇತ್ಯಾದಿ ಹೆಸರುಗಳಲ್ಲಿ ಗುರಿಯಾಗುತ್ತಿದ್ದಾರೆ. ಇದರ ಗುರಿ ಸರಕಾರ, ಆರೆಸ್ಸೆಸ್, ಬಿಜೆಪಿ ಮತ್ತು ಅವರ ಮುಖಂಡರ ವಿರುದ್ಧ ಭಿನ್ನಾಭಿಪ್ರಾಯಗಳ ಎಲ್ಲ ಅಭಿವ್ಯಕ್ತಿಗಳನ್ನು ಸುಮ್ಮನಾಗಿಸುವುದು.

ಕಾರ್ಮಿಕ-ವಿರೋಧಿ ಕಾನೂನು ಸುಧಾರಣೆ:

ಈ ಸರಕಾರ ಈಗಿರುವ ಎಲ್ಲ ಕಾರ್ಮಿಕ ಕಾನೂನುಗಳನ್ನು ತೆಗೆದು, ಅವುಗಳ ಸ್ಥಾನದಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತರುವುದಾಗಿ ಘೋಷಿಸಿದೆ. ಈಗಾಗಲೇ ಕಾರ್ಮಿಕರ ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ದಾಳಿಗಳು ಹೆಚ್ಚುತ್ತಿವೆ. ಈ ಪ್ರಸ್ತಾವಿತ ಸಂಹಿತೆಗಳನ್ನು ದುಡಿಯುವ ಜನಗಳು ದಶಕಗಳ ಹೋರಾಟಗಳಿಂದ ಸಾಧಿಸಿರುವ ಹಕ್ಕುಗಳನ್ನು ಶಿಥಿಲಗೊಳಿಸಲಿಕ್ಕಾಗಿ ರೂಪಿಸಲಾಗಿದೆ. ಶ್ರಮಪಟ್ಟು ಪಡೆದ ಈ ಹಕ್ಕುಗಳನ್ನು ತೆಗೆಯಲು ಅಥವ ದುರ್ಬಲಗೊಳಿಸಲು ಬಿಡಲಾಗದು.

ಸಿಪಿಐ(ಎಂ) ಎಲ್ಲ ಕೇಂದ್ರೀಯ ಕಾರ್ಮಿಕ ಸಂಘಗಳು ಮತ್ತು ಒಕ್ಕೂಟಗಳ ಐಕ್ಯವೇದಿಕೆಯ ಆಗಸ್ಟ್ ೨ರ ದೇಶವ್ಯಾಪಿ ಪ್ರತಿಭಟನೆಯೊಂದಿಗೆ ಸೌಹಾರ್ದವನ್ನು ಮತ್ತು ಬೆಂಬಲವನ್ನು ವ್ಯಕ್ತಪಡಿಸುತ್ತದೆ.

ಕಾಶ್ಮೀರ:

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಕೂಡಲೇ ಚುನಾವಣೆಗಳನ್ನು ನಡೆಸಬೇಕು. ರಾಜ್ಯದಲ್ಲಿನ ಎಲ್ಲ ರಾಜಕೀಯ ಪಕ್ಷಗಳು ಲೋಕಸಭಾ ಚುನಾವಣೆಗಳೊಂದಿಗೆ ವಿಸರ್ಜಿತ ವಿಧಾನಸಭೆಗೂ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಬೇಕು ಎಂದು ಆಗ್ರಹಿಸಿದರೂ ನಡೆಸಲಿಲ್ಲ. ಸ್ಪಷ್ಟವಾದ ಯಾವುದೇ ಉತ್ತರವನ್ನು ಕೊಡುತ್ತಿಲ್ಲ. ಭದ್ರತೆಯ ಪರಿಗಣನೆ ಸಂಸದೀಯ ಚುನಾವಣೆಗೆ ಅನುಮತಿ ಕೊಡುವಂತಿದ್ದರೆ, ವಿಧಾನಸಭೆಗೆ ಚುನಾವಣೆಗಳನ್ನು ಏಕೆ ನಡೆಸಲಿಲ್ಲ?

ಕೇಂದ್ರ ಗೃಹ ಮಂತ್ರಿಗಳೂ ಸೇರಿದಂತೆ ವಿವಿಧ ಬಿಜೆಪಿ ಮುಖಂಡರುಗಳು ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆಗೆ ಸಂಬಂಧಪಟ್ಟ ಸಂವಿಧಾನದ ಕಲಮು ೩೫ನ್ನು ರದ್ದು ಮಾಡುವ ಕೇಂದ್ರ ಸರಕಾರದ ಆಶಯಗಳನ್ನು ಪ್ರಕಟಿಸುತ್ತಿದ್ದಾರೆ. ಇದು ಜಮ್ಮು ಮತ್ತು ಕಾಶ್ಮೀರ ಹಾಗೂ ದೇಶದ ಉಳಿದ ಭಾಗಗಳ ನಡುವಿನ ಐಕ್ಯತೆಯ ಬಂಧಗಳನ್ನು ಮತ್ತಷ್ಟು ಕಡಿದು ಹಾಕುತ್ತದೆ. ಈ ವಿಷಯ ಈಗ ಸುಪ್ರಿಂ ಕೋರ್ಟಿನ ಮುಂದಿದೆ. ನ್ಯಾಯಾಂಗ ಪ್ರಕ್ರಿಯೆ ಪೂರ್ಣವಾಗಲಿ. ಬಹಳ ಹಿಂದೆ ಕೊಟ್ಟ ಆಶ್ವಾಸನೆಯಂತೆ ಸಂಬಂಧಪಟ್ಟ ಎಲ್ಲರೊಂದಿಗೆ ರಾಜಕೀಯ ಸಂವಾದವನ್ನು ಆರಂಭಿಸಲು ಬಿಜೆಪಿ ಸರಕಾರ ನಿರಾಕರಿಸುತ್ತಲೇ ಇದೆ. ಕಣಿವೆಯಲ್ಲಿ ಸಾಮಾನ್ಯ ಸ್ಥಿತಿ ಮತ್ತು ಶಾಂತಿ ಏರ್ಪಡಲು ಇದು ಅನಿವಾರ್ಯ. ಸರಕಾರ ಹೆಚ್ಚುವರಿ ಪಡೆಗಳನ್ನು ಕಳಿಸಿರುವುದು ಭಯೋತ್ಪಾದಕ ದಾಳಿಗಳ ಬೆದರಿಕೆ ಹೆಚ್ಚಾಗಿದೆ ಎಂಬ ಭಾವನೆಗೆ ಸ್ಪಂದನೆಯಾಗಿ ಎಂದು ಅಧಿಕೃತವಾಗಿ ಹೇಳಲಾಗಿದೆ. ಇದರೊಂದಿಗೇ ಸಂವಾದದ ಪ್ರಕ್ರಿಯೆ ಆರಂಭವಾಗದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯಗೊಳ್ಳಲಾರದು.

ರಾಜ್ಯ ಸರಕಾರಗಳನ್ನು ಉರುಳಿಸುವುದು:

ಬಿಜೆಪಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿ(ಎಸ್) ರಾಜ್ಯ ಸರಕಾರವನ್ನು ಉರುಳಿಸಲು ನಗ್ನ ಕುದುರೆ ವ್ಯಾಪಾರಕ್ಕೆ ಬಹಿರಂಗವಾಗಿಯೇ ತೊಡಗಿದ್ದು ಒಂದು ಪ್ರತಿಪಕ್ಷ-ಮುಕ್ತ ಭಾರತವನ್ನು ನಿರ್ಮಿಸುವ ಅದರ ಆಶಯವನ್ನು ಸೂಚಿಸುತ್ತದೆ. ಕರ್ನಾಟಕದಲ್ಲಿನ ಸಮ್ಮಿಶ್ರ ಸರಕಾರದ ಸಮಸ್ಯೆಗಳೇನೇ ಇದ್ದರೂ, ವಿಧಾನಸಭಾ ಚಉನಾವಣೆಗಳಾದ ಕೂಡಲೇ  ಈ ಸರಕಾರ ಅಧಿಕಾರ ವಹಿಸದಂತೆ ತಡೆಯಲು ಪ್ರಯತ್ನಿಸಿದ ಬಿಜೆಪಿ ಅದನ್ನು ಅಸ್ಥಿರಗೊಳಿಸುವ ಪ್ರಯತ್ನಗಳನ್ನು ಮುಂದುವರೆಸಿತು ಎಂಬುದು ಸ್ಪಷ್ಟವಾಗಿದೆ. ಅದೀಗ ಇತರ ಪ್ರತಿಪಕ್ಷಗಳ ಆಳ್ವಿಕೆಯ ರಾಜ್ಯಗಳ ಮೇಲೆ ಗುರಿಯಿಟ್ಟಿದೆ.

ಅಸ್ಸಾಂ ನಲ್ಲಿ ಎನ್ ಆರ್‌ಸಿ ಪ್ರಕ್ರಿಯೆ:

ಅಸ್ಸಾಂ ನಲ್ಲಿ ರಾಷ್ಟ್ರೀಯ ಪೌರತ್ವ ದಾಖಲೆ(ಎನ್‌ಆರ್‌ಸಿ)ಯ ಅಂತಿಮ ಪಟ್ಟಿಯನ್ನು ಆಗಸ್ಟ್ ೩೧ರಂದು ಪ್ರಕಟಿಸಲಾಗುತ್ತದೆ. ಇದುವರೆಗೆ ೪೦.೭ ಲಕ್ಷ ಮತ್ತು ಹೆಚ್ಚುವರಿಯಾಗಿ ೧.೦೨ ಲಕ್ಷ ಅರ್ಜಿದಾರರನ್ನು ಎನ್‌ಆರ್‌ಸಿಯಿಂದ ಹೊರಗಿಡಲಾಗಿದೆ. ಹಲವು ನೈಜ ಭಾರತೀಯ ನಾಗರಿಕರನ್ನು ಹೊರಗಿಡಲಾಗಿದೆ ಎಂಬ ಸಂದೇಹಗಳು ಇವೆ. ಅಂತಿಮ ಪಟ್ಟಿಯನ್ನು ಪ್ರಕಟಿಸಿದ ಮೇಲೆ ಈ ಎಲ್ಲರಿಗೂ ಅವರ ಮನವಿಯ ವಿಚಾರಣೆಯ ಒಂದು ನ್ಯಾಯಯುತ ಅವಕಾಶ ಸಿಗುಂವಂತೆ ಮಾಡುವುದು ಅಗತ್ಯವಾಗಿದೆ. ವಿದೆಶೀಯರ ನ್ಯಾಯಮಂಡಳಿ ಒಂದು ನ್ಯಾಯಾಂಗ ಸಂಸ್ಥೆಯಲ್ಲವಾದ್ದರಿಂದ ಇದಕ್ಕೆ ವೇದಿಕೆಯಾಗುವುದು ಸಾಧ್ಯವಿಲ್ಲ. ನಾಗರಿಕೇತರರು ಆಗುವವರ ಸ್ಥಾನಮಾನವೇನು, ಹಕ್ಕುಗಳೇನು ಎಂದು ಸರಕಾರ ವಿವರಿಸಬೇಕು.

ವಿದೇಶೀಯರೆಂದು ಘೋಷಿಸಿದ ಮೇಲೆ ಪ್ರತಿಬಂಧಕ ಶಿಬಿರಗಳಲ್ಲಿ ಇಡಲ್ಪಟ್ಟವರ ದುಸ್ಥಿತಿ ಆತಂಕಕಾರಿ. ಕೆಟ್ಟ ಆಹಾರ ಮತ್ತು ವಿಪರೀತ ಜನಸಂದಣಿಯಿಂದಾಗಿ ಪರಿಸ್ಥಿತಿ ಕೆಟ್ಟದಾಗಿದೆ. ಅವರಲ್ಲಿ ೩೩೫ ಮಂದಿ ಮೂರು ವರ್ಷಗಳಿಂದಲೂ  ಪ್ರತಿಬಂಧಿತರಾಗಿದ್ದರೆ ಎಂದು ವರದಿಯಾಗಿದೆ. ರಾಜ್ಯ ಸರಕಾರ ಇಂತಹ ಶೋಚನೀಯ ಪರಿಸ್ಥಿತಿಗಳ ಮತ್ತು ಬಂಧಿಗಳ ಮೂಲ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಪ್ರತಿಬಂಧಕ ಕೇಂದ್ರಗಳನ್ನು ನಡೆಸಲಾಗದು.

ಅರಣ್ಯ ಹಕ್ಕುಗಳ ಕಾಯ್ದೆಯ ನಿರಾಕರಣೆ:

ದೇಶದೆಲ್ಲೆಡೆಗಳಲ್ಲಿ ಆದಿವಾಸಿಗಳು ಮೋದಿ ಸರಕಾರ ಸುಪ್ರಿಂ ಕೋರ್ಟಿನ ಎದುರು ವಿಚಾರಣೆಯಲ್ಲಿರುವ ಅರ್ಜಿಯಲ್ಲಿ ಅರಣ್ಯ ಹಕ್ಕುಗಳ ಕಾಯ್ದೆಯನ್ನು ರಕ್ಷಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿರುವ ಬಗ್ಗೆ ತಮ್ಮ ಆಳವಾದ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಪಟ್ಟಾ ನಿರಾಕರಿಸಲ್ಪಟ್ಟ 23 ಲಕ್ಷ ಆದಿವಾಸಿ ಕುಟುಂಬಗಳ ಮೇಲೆ ಹೊರಹಾಕುವ ಬೆದರಿಕೆ ನೇತಾಡುತ್ತಿದೆ. ಕೇಂದ್ರ ಸರಕಾರ ಈ ರೀತಿ ಯಾರನ್ನೂ ಹೊರಹಾಕದಂತೆ ಅರಣ್ಯ ಹಕ್ಕುಗಳ ಕಾಯ್ದೆಯನ್ನು ನಿಸ್ಸಂದಿಧವಾಗಿ ಸಮರ್ಥಿಸಿಕೊಳ್ಳಬೇಕು ಎಂದು ಸಿಪೀಐ(ಎಂ) ಆಗ್ರಹಿಸುತ್ತದೆ. ಅದೇ ವಏಳೆಗೆ ಅರಣ್ಯಗಳು ಮತ್ತು ಅರಣ್ಯ ಉತ್ಪನ್ನಗಳ ಮೆಲೆ ಬುಡಕಟ್ಟು ಸಮುದಾಯಗಳ ಹಕ್ಕುಗಳನ್ನು ವಂಚಿಸುವ ಸಾಧನವಾದ ವಸಾಹತುಶಾಹೀ ಕಲದ ಅರಣ್ಯ ಕಾಯ್ದೆ, ೧೯೨೭ನ್ನು ರದ್ದುಪಡಿಸುವ ಬದಲು ಮೋದಿ ಸರಕಾರ ಅದನ್ನು ಇನ್ನಷ್ಟು ಕರಾಳಗೊಳಿಸುವ ತಿದ್ದುಪಡಿಗಳನ್ನು ಮಾಡಿದೆ. ಈ ತಿದ್ದುಪಡಿಗಳನ್ನು ಹೀಮತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಆಗ್ರಹಿಸುತ್ತದೆ. ಕೇಂದ್ರ ಸರಕಾರದ ಈ ಪ್ರಹಾರಗಳ ವಿರುದ್ಧ ನ್ಯಾಯಕ್ಕಗಿ ಆದಿವಾಸಿಗಳ ಹೋರಾಟವನ್ನು ಸಿಪಿಐ(ಎಂ) ಬೆಂಬಲಿಸುತ್ತದೆ.

ಬೇಟಿ ಬಚಾವೋ ವಿಷಯದಲ್ಲಿ ಬಿಜೆಪಿಯ ಸೋಗಲಾಡಿತನ :

ಒಬ್ಬ ಅಪ್ರಾಪ್ತ ವಯಸ್ಸಿನವಳ ಮೇಲೆ ಅತ್ಯಾಚಾರದ ಉನ್ನಾವ್ ಪ್ರಕರಣ ಮತ್ತು ತದನಂತರ ಮುಖ್ಯ ಆಪಾದಿತನಾದ ಬಿಜೆಪಿ ಶಾಸಕನ ಕ್ರಿಮಿನಲ್ ಕೃತ್ಯಗಳು, ದೂರುದಾರಳನ್ನು ಮತ್ತು ಆಕೆಯ ಕುಟುಂಬವನ್ನು ನಿರ್ಮೂಲ ಮಾಡುವ ಕೃತ್ಯಗಳನ್ನು ನೋಡಿ  ಇಡೀ ದೇಶಕ್ಕೆ ಆಘಾತವಾಗಿದೆ. ಇದು ಬಿಜೆಪಿಯ ಬೇಟಿ ಬಚಾವೋದ ಸೋಗಲಾಡಿ ದಾವೆಗಳನ್ನು ಸಂಪೂರ್ಣವಾಗಿ ಬಯಲಿಗೆಳೆದಿದೆ. ರಾಷ್ಟ್ರವ್ಯಾಪಿ ಆಕ್ರೋಶದ ನಂತರ ಈಗಷ್ಟೇ ಈ ಕ್ರಿಮಿನಲ್ ಅನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ನಾಲ್ಕು ಕೇಸುಗಳನ್ನು ಉತ್ತರಪ್ರದೇಶದಿಂದ ಹೊರಗೆ ವರ್ಗಾಯಿಸುವ ಸುಪ್ರಿಂ ಕೋರ್ಟ್‌ನ ಸ್ವಾಗತಾರ್ಹ ಆದೇಶ ಉತ್ತರಪ್ರದೇ ಸರಕಾರವನ್ನು ತಪ್ಪಿತಸ್ಥವೆಂದು ತೋರಿಸುತ್ತದೆ. ಅದು ಅತ್ಯಾಚಾರ ಆಪಾದಿತನ್ನು ರಕ್ಷಿಸಲು ನ್ಯಾಯ ಪ್ರಕ್ರಿಯೆಯನ್ನೇ ಬುಡಮೇಲು ಮಾಡಲು ಪ್ರಯತ್ನಿಸಿತು. ಮಹಿಳೆಯರು ಮತ್ತು ನಿರ್ದಿಷ್ಟವಾಗಿ ಮಕ್ಕಳ ಮೇಲೆ ಲೈಂಗಿಕ ಅಪರಾಧಗಳು ಬಹಳವಾಗಿ ಹೇಚ್ಚುತ್ತಿರುವ ಸಮಯದಲಿ ತಡೆ ಕ್ರಮಗಳಿಗೆ ಮತ್ತು ತ್ವರಿತ ನ್ಯಾಯಕ್ಕೆ  ವರ್ಮ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸುತ್ತದೆ.

ಗಂಭೀರ ಪ್ರವಾಹ ಪರಿಸ್ಥಿತಿ:

ದೇಶದ ವಿವಿಧ ಭಾಗಗಳಲ್ಲಿ ಪ್ರವಾಹವು ಮಾಡಿರುವ ಅನಾಹುತಗಳ ಬಗ್ಗೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಳವಾದ ಆತಂಕವನ್ನು ವ್ಯಕ್ತಪಡಿಸುತ್ತದೆ. ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಮದಾಗಿ ದೊಡ್ಡ ಪ್ರಮಾಣದಲ್ಲಿ ವಿನಾಶ ಮತ್ತು ಪ್ರಾಣಹಾನಿಯಾಗಿದೆ. ಅಸ್ಸಾಂ, ಬಿಹಾರ್, ಉತ್ತರಪ್ರದೇಶ ಮತ್ತು ಇತರ ಹಲವು ರಾಜ್ಯಗಳು ತೀವ್ರ ಪ್ರವಾಹದಿಮದಾಗಿ ಅನಾಹುತಗಳಿಗೆ ಒಳಗಾಗಿವೆ.

ಇನ್ನಷ್ಟು ಹಾನಿಯನ್ನು ತಡೆಯಲು ರಾಜ್ಯ ಸರಕಾರಗಳಿಗೆ ಯುದ್ದೋಪಾದಿಯಲ್ಲಿ ಎಲ್ಲ ಅಗತ್ಯ ನೆರವನ್ನು ಒದಗಿಸಬೇಕು ಎಂದು ಪೊಲಿಟ್‌ಬ್ಯುರೊ ಕೇಂದ್ರ ಸರಕಾರಕ್ಕೆ ಕರೆ ನೀಡುತ್ತದೆ.

ಭಾರತ ಕಮ್ಯುನಿಸ್ಟ್ ಪಕ್ಷದ ಸ್ಥಾಪನಾ ಶತಾಬ್ಧಿ:

ಭಾರತ ಕಮ್ಯುನಿಸ್ಟ್ ಪಕ್ಷವನ್ನು ಅಕ್ಟೋಬರ್ 17, 1920ರಂದು ತಾಷ್ಕೆಂಟಿನಲ್ಲಿ ಸ್ಥಾಪಿಸಲಾಯಿತು. ಅಕ್ಟೋಬರ್ 17, 2019ರಿಂದ ಅಕ್ಟೋಬರ್ 17, 2020ರ ವರೆಗೆ ಈ ಶತಾಬ್ಧಿಯ ಆಚರಣೆ ನಡೆಸಬೇಕು ಎಂದು ಪೊಲಿಟ್‌ಬ್ಯುರೊ ಇಡೀ ಪಕ್ಷಕ್ಕೆ ಕರೆ ನೀಡಿದೆ. ನಮ್ಮ ದೇಶದಲ್ಲಿ ಕಮ್ಯುನಿಸ್ಟ್ ಆಂದೋಲನದ ಶ್ರೀಮಂತ ಇತಿಹಾಸ, ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಅದರ ಕೊಡುಗೆಗಳು, ಮತ್ತು ಜನಗಳ ಬದುಕನ್ನು ಉತ್ತಮಪಡಿಸುವ ಸ್ವಾತಂತ್ರ್ಯೋತ್ತರ ಹೋರಾಟಗಳು ಹಾಗೂ ಕಾರ್ಮಿಕ ವರ್ಗದ, ರೈತಾಪಿಗಳ ಹಕ್ಕುಗಳಿಗೆ ಹೋರಾಟವನ್ನು ಎತ್ತಿ ತೋರಲಾಗುವುದು ಎಂದು ಅದು ಹೇಳಿದೆ.

Leave a Reply

Your email address will not be published. Required fields are marked *