ಶ್ರೀನಗರಕ್ಕೆ ಪ್ರವೇಶ ನಿರಾಕರಣೆ: ರಾಷ್ಟ್ರಪತಿಗಳಿಗೆ ಯೆಚುರಿ ಪ್ರತಿಭಟನಾ ಪತ್ರ

“ತಮ್ಮ ಹೆಸರಿನ ಆಳ್ವಿಕೆಯ ಅಡಿಯಲ್ಲಿ ಮಾನವ ಹಕ್ಕುಗಳ ನಿರಾಕರಣೆಯಾಗುತ್ತಿರುವ ಗಂಭೀರ ವಿಷಯದಲ್ಲಿ ಮಧ್ಯಪ್ರವೇಶಿಸಿ”

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ‍ಯೆಚುರಿಯವರು ಆಗಸ್ಟ್ 9ರಂದು ತಮಗೆ ಶ್ರೀನಗರದಲ್ಲಿ ಪ್ರವೇಶವನ್ನು ನಿರಾಕರಿಸಿರುವುದನ್ನು ಪ್ರತಿಭಟಿಸಿ ಆಗಸ್ಟ್ 10ರಂದು ಭಾರತದ ರಾಷ್ಟ್ರಪತಿಗಳಿಗೆ ಪತ್ರ ಬರೆದು ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರೀಯ ಆಳ್ವಿಕೆ ಇರುವುದರಿಂದ ಮತ್ತು ಅದು ಭಾರತದ ರಾಷ್ಟ್ರಪತಿಗಳ ಹೆಸರಲ್ಲಿ ನಡೆಯುತ್ತಿರುವುದರಿಂದ  ಈ ಪ್ರತವನ್ನು ಬರೆಯುತ್ತಿರುವುದಾಗಿ ಹೇಳಿರುವ ಯೆಚುರಿಯವರು ಶ್ರೀನಗರ ವಿಮಾನ ನಿಲ್ದಾಣದಲ್ಲಿ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲದ ತಮ್ಮ ಪ್ರತಿಭಟನೆಯ ವೇಳೆಯಲ್ಲಿ ಜನಗಳ ನಡುವೆ ವ್ಯಾಪಕವಾದ ಅಸಂತೃಪ್ತಿ ಇದೆ ಮತ್ತು ಮೂಲಭೂತ ಮಾನವ ಹಕ್ಕುಗಳನ್ನು ನಿರಾಕರಿಸಿರುವುದರ ಕುರಿತು ದೊಡ್ಡ ಸಂಖ್ಯೆಯಲ್ಲಿ ದೂರುಗಳಿವೆ ಎಂದು ತಿಳಿದು ಬಂದಿದೆ, ಕೆಲವು ದೇಶಿ ಹಾಗೂ ವಿದೇಶಿ ಸುದ್ದಿ ಸಂಸ್ಥೆಗಳು, ಜನಗಳ ಪ್ರತಿಭಟನೆಗಳು ಮತ್ತು ಅವರ ವಿರುದ್ಧ ಪೋಲಿಸ್ ಹಿಂಸಾಚಾರವನ್ನು ವರದಿ ಮಾಡುತ್ತಿದ್ದು, “ಇದು ನೀವು ಪರಿಶೀಲಿಸಬೇಕಾದ ಮತ್ತು ಮಧ್ಯಪ್ರವೇಶಿಸಬೇಕಾದ ಒಂದು ಗಂಭೀರ ವಿಷಯವಾಗಿದೆ” ಎಂದು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ರಾಷ್ಟ್ರಪತಿಗಳು ಭಾರತದ ಸಂವಿಧಾನದ ಪಾಲಕರಾಗಿರುವುದರಿಂದ, ಭಾರತದ ಸಂವಿಧಾನ ಎಲ್ಲ ನಾಗರಿಕರಿಗೆ ಖಾತ್ರಿಪಡಿಸಿರುವ ಅವರ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಅನುಮತಿಯಿರುವಂತೆ ನೋಡಿಕೊಳ್ಳಬೇಕಾಗಿ ಅವರನ್ನು ಈ ಪತ್ರದಲ್ಲಿ ಸೀತಾರಾಮ್‍ ಯೆಚುರಿ ಆಗ್ರಹಿಸಿದ್ದಾರೆ. ಅವರ ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:

ಪ್ರಿಯ ಮಾನ್ಯ ರಾಷ್ಟ್ರಪತಿಯವರೇ,

ನಾನು 9 ಆಗಸ್ಟ್ ಬೆಳಿಗ್ಯೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಇಳಿದಾಗ ನನಗಾಗಿರುವ ಅನುಭವದ ಕುರಿತು ತಮಗೆ ಪತ್ರ ಬರೆಯುತ್ತಿದ್ದೇನೆ. ಜಮ್ಮು ಮತ್ತು ಕಾಶ್ಮೀರ ತಮ್ಮ, ಭಾರತದ ರಾಷ್ಟ್ರಪತಿಯ, ಅಧಿಕಾರದ ಅಡಿಯಲ್ಲಿ ಕೇಂದ್ರೀಯ ಆಡಳಿತಕ್ಕೆ ಒಳಪಟ್ಟಿರುವುದರಿಂದಾಗಿ ನಾನು ತಮಗೆ ಈ ಪತ್ರ ಬರೆಯುತ್ತಿದ್ದೇನೆ.

ನಾನು ವಿಮಾನದಿಂದ ಹೊರಬರುತ್ತಿದ್ದಂತೆಯೇ, ಪೋಲೀಸರು ನನ್ನನ್ನು ಸುತ್ತುವರೆದರು ಮತ್ತು ಒಂದು ಕೋಣೆಗೆ ಕರೆದುಕೊಂಡು ಹೋದರು. ಅಲ್ಲಿ ಒಬ್ಬ ಹಿರಿಯ ಪೋಲೀಸ್‍ ಅಧಿಕಾರಿ ನನ್ನನ್ನು ವಿಮಾನ ನಿಲ್ದಾಣದಿಂದ ಹೊರಹೋಗಲು ಬಿಡಬಾರದು ಎಂದು ತನಗೆ ಆದೇಶ ಬಂದಿದೆ, ನಾನು ಆದಷ್ಟು ಬೇಗನೇ ಸಿಗುವ ವಿಮಾನದಿಂದ ದಿಲ್ಲಿಗೆ ಹಿಂದಿರುಗಬೇಕು ಎಂದು ತಿಳಿಸಿದರು, ಇದಕ್ಕೆ ತಾವುಗಳು ವ್ಯವಸ್ಥೆ ಮಾಡುವುದಾಗಿಯೂ ಹೇಳಿದರು. ನನ್ನಲ್ಲಿ ಅದೇ ದಿನ ಸಾಯಂಕಾಲ ದಿಲ್ಲಿಗೆ ಮರಳುವ ರಿಟರ್ನ್ ಟಿಕೆಟ್ ಇತ್ತು. ನಾನು ಈಗಾಗಲೇ ಬುಕ್‍ ಮಾಡಿರುವುದರಿಂದ ಆ ಟಿಕೆಟ್‍ ಮೇಲೆಯೇ ಹಿಂದಿರುಗುವುದಾಗಿ ಹೇಳಿದೆ.

ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನನ್ನನ್ನು ಪೋಲಿಸ್ ಕಸ್ಟಡಿಯಲ್ಲಿ ಇಡಲಾಯಿತು. ಕಾಮ್ರೇಡ್ ಡಿ. ರಾಜ, ಭಾರತ ಕಮ್ಯುನಿಸ್ಟ್  ಪಕ್ಷದ ಪ್ರಧಾನ ಕಾರ್ಯದರ್ಶಿ, ಕೂಡ  ನನ್ನ ಜತೆಗಿದ್ದರು.

ನಾನು ಆದೇಶವನ್ನು ನೋಡಬೇಕು ಎಂದು ಆಗ್ರಹಿಸಿದಾಗ, ಒಬ್ಬ ಜಿಲ್ಲಾ ಮ್ಯಾಜಿಸ್ಟ್ರೇಟ್ ರನ್ನು ಕರೆಸಲಾಯಿತು. ಅವರ ಬಳಿ ನಾವು ಶ್ರೀನಗರಕ್ಕೆ ಭೇಟಿ ನೀಡುತ್ತಿರುವುದು ಕಾನೂನು ಮತ್ತು ವ್ಯವಸ್ಥೆಯ ಸಮಸ್ಯೆಯನ್ನು ಉಂಟು ಮಾಡಬಹುದು ಮತ್ತು ಅದರಿಂದಾಗಿ ನಾವು ವಿಮಾನ ನಿಲ್ದಾಣವನ್ನು ಬಿಡುವುದನ್ನು ನಿಷೇಧಿಸಲಾಗಿದೆ ಎಂಬ ಆದೇಶವಿತ್ತು.

ಇದು ವಿಚಿತ್ರವಾಗಿತ್ತು. ನಾನು ಮಾನ್ಯ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಿಗೆ 8ನೇ ತಾರೀಕಿನಂದು  9ರಂದು ಮಹಮ್ಮದ್‍ ಯುಸುಫ್‍ ತರಿಗಾಮಿ, ಸಿಪಿಐ(ಎಂ) ನ ಕೇಂದ್ರ ಸಮಿತಿ ಸದಸ್ಯರು ಮತ್ತು ಜಮ್ಮು ಮತ್ತು ಕಾಶ್ಮೀರದ ನಾಲ್ಕು ಬಾರಿ ಚುನಾಯಿತರಾದ ಶಾಸಕರು, ಇವರನ್ನು ಕಾಣಲು  ಶ್ರಿನಗರಕ್ಕೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದ್ದೆ. ಅವರ ಆರೋಗ್ಯ ಚೆನ್ನಾಗಿಲ್ಲ, ಅವರಿಗೆ ಕೆಲವು ಔಷಧಿಗಳನ್ನು ನಾನು ಒಯ್ಯುತ್ತಿದ್ದೆ.

ಒಂದು ರಾಷ್ಟ್ರೀಯ ರಾಜಕೀಯ ಪಕ್ಷವಾದ ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿಯಾಗಿ ನನಗೆ ನನ್ನ ಪಕ್ಷದ ಸದಸ್ಯರನ್ನು ಮತ್ತು ನನ್ನ ಪಕ್ಷದ ಮುಖಂಡರನ್ನು, ವಿಶೇಷವಾಗಿ ಅವರಿಗೆ ಆರೋಗ್ಯ ಸಮಸ್ಯೆಗಳಿದ್ದಾಗ, ಭೇಟಿಯಾಗುವ ಹಕ್ಕು ಇದೆ ಎಂದು ತಿಳಿದಿದ್ದರೂ, ನನಗೆ ನನ್ನ ಮೂಲ ಪ್ರಜಾಪ್ರಭುತ್ವ ಹಕ್ಕನ್ನು ನಿರಾಕರಿಸಲಾಗಿದೆ.

ನಮ್ಮ ಪಕ್ಷದ ಸದಸ್ಯರನ್ನು ಭೇಟಿಯಾಗಲು ಅನುಮತಿ ನಿರಾಕರಿಸಿದ್ದಕ್ಕೆ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲದ ನಮ್ಮ ಪ್ರತಿಭಟನೆಯ ವೇಳೆಯಲ್ಲಿ ಜನಗಳ ನಡುವೆ ವ್ಯಾಪಕವಾದ ಅಸಂತೃಪ್ತಿ ಇದೆ ಮತ್ತು ಮೂಲಭೂತ ಮಾನವ ಹಕ್ಕುಗಳನ್ನು ನಿರಾಕರಿಸಿರುವುದರ ಕುರಿತು ದೊಡ್ಡ ಸಂಖ್ಯೆಯಲ್ಲಿ ದೂರುಗಳಿವೆ ಎಂದು ನನಗೆ ತಿಳಿದು ಬಂತು. ಕೆಲವು ಸುದ್ದಿ ಸಂಸ್ಥೆಗಳು, ದೇಶಿ ಹಾಗೂ ವಿದೇಶಿ, ಜನಗಳ ಪ್ರತಿಭಟನೆಗಳು ಮತ್ತು ಅವರ ವಿರುದ್ಧ ಪೋಲಿಸ್ ಹಿಂಸಾಚಾರವನ್ನು ವರದಿ ಮಾಡುತ್ತಿವೆ. ಇದು ನೀವು ಪರಿಶೀಲಿಸಬೇಕಾದ ಮತ್ತು ಮಧ್ಯಪ್ರವೇಶಿಸಬೇಕಾದ ಒಂದು ಗಂಭೀರ ವಿಷಯವಾಗಿದೆ.

ತಾವು ಭಾರತದ ಸಂವಿಧಾನದ ಪಾಲಕರಾಗಿರುವುದರಿಂದ, ಭಾರತದ ಸಂವಿಧಾನ ಎಲ್ಲ ನಾಗರಿಕರಿಗೆ ಖಾತ್ರಿಪಡಿಸಿರುವ ಅವರ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಅನುಮತಿಯಿರುವಂತೆ ನೋಡಿಕೊಳ್ಳಬೇಕಾಗಿ ನಾನು ತಮ್ಮನ್ನು ಆಗ್ರಹಿಸುತ್ತೇನೆ.

ನನಗೆ, ತಮ್ಮ ಅಧಿಕಾರದ ಅಡಿಯಲ್ಲಿ ಪ್ರಸಕ್ತ ಕೇಂಧ್ರೀಯ ಆಳ್ವಿಕೆಯು ಕಾರ್ಯ ನಿರ್ವಹಿಸುವಾಗ ನನ್ನ ಪ್ರಾಥಮಿಕ ಪ್ರಜಾಪ್ರಭುತ್ವ ಹಕ್ಕನ್ನು ನಿರಾಕರಿಸಲಾಗಿದೆ. ನನ್ನ ಪ್ರಜಾಪ್ರಭುತ್ವ ಹಕ್ಕಿನ ನಿರಾಕರಣೆಗೆ ನನ್ನ ಬಲವಾದ ಪ್ರತಿಭಟನೆಯನ್ನು ದಾಖಲಿಸಲು ನಾನು ನಿಮಗೆ ಬರೆಯುತ್ತಿದ್ದೇನೆ.

ನಾನು ಮಾನ್ಯ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಿಗೆ 8 ರಂದು ಬರೆದ ಪತ್ರದ ನಕಲನ್ನು ಜತೆಗೆ ಲಗತ್ತಿಸಿದ್ದೇನೆ.

ಗೌರವಗಳೊಂದಿಗೆ,

ನಿಮ್ಮ ವಿಶ್ವಾಸಿ

ಸೀತಾರಾಮ್‍ ಯೆಚುರಿ, ಪ್ರಧಾನ ಕಾರ್ಯದರ್ಶಿ

Leave a Reply

Your email address will not be published. Required fields are marked *