ಗುರು ರವಿದಾಸ್ ಮಂದಿರದ ಪುನರ್ನಿರ್ಮಾಣವಾಗಬೇಕು -ನಗರಾಭಿವೃದ್ಧಿ ಮಂತ್ರಿಗೆ ಬೃಂದಾ ಕಾರಟ್ ಪತ್ರ
“ರಾಮಮಂದಿರ ನಿರ್ಮಾಣದಲ್ಲಿರುವ ‘ಜನರ ನಂಬಿಕೆ’ಯ ಪ್ರಶ್ನೆ. ರವಿದಾಸ ಮಂದಿರದ ನೆಲಸಮದಲ್ಲಿ ಅಡ್ಡಿಯಾಗಲಿಲ್ಲವೇಕೆ ?”
ದಿಲ್ಲಿಯ ಒಂದು ಬಡಾವಣೆ, ತುಘಲಕಾಬಾದ್ನ ಅರಣ್ಯ ಪ್ರದೇಶದಲ್ಲಿದ್ದ ಗುರು ರವಿದಾಸ್ ಮಂದಿರ ಮತ್ತು ನಾಲ್ಕು ಸಮಾಧಿಗಳನ್ನು ಧ್ವಂಸ ಮಾಡಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದು ಮುಖ್ಯವಾಗಿ ಪರಿಶಿಷ್ಟ ಜಾತಿಗಳಿಗೆ ಸೇರಿದ ಜನಗಳು ದರ್ಶನಕ್ಕೆ ಬರುವ ಮಂದಿರ ಎಂಬುದು ಗಮನಾರ್ಹ. ಈ ಪ್ರದೇಶಕ್ಕೆ ಸಿಪಿಐ(ಎಂ)ನ ದಿಲ್ಲಿ ರಾಜ್ಯ ಮುಖಂಡರು ಮತ್ತು ದಲಿತ ಶೋಷಣ ಮುಕ್ತಿ ಮಂಚ್ನ ಮುಖಂಡರೊಂದಿಗೆ ಭೇಟಿ ನೀಡಿದ ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಈ ಕುರಿತಂತೆ ಕೇಂದ್ರ ನಗರಾಭಿವೃದ್ಧಿ ಮಂತ್ರಿ ಹರದೀಪ್ ಪುರಿಯವರಿಗೆ ಆಗಸ್ಟ್ ೧೬ರಂದು ಪತ್ರ ಬರೆದು ಮಂದಿರದ ಪುನರ್ನಿರ್ಮಾಣವಾಗಬೇಕು ಮತ್ತು ಸಮಾಧಿಗಳನ್ನು ಅವಿದ್ದ ಸ್ಥಳದಲ್ಲಿ ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ವಿಷಯದಲ್ಲಿ ಸರಕಾರದ ನಡೆ ಸಂಪೂರ್ಣವಾಗಿ ಇಬ್ಬಂದಿತನದಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ. ಒಂದು ಕಡೆ ಸರ್ಕಾರ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿಂತಿದ್ದ ಸ್ಥಳದಲ್ಲಿಯೇ ಒಂದು ಮಂದಿರವನ್ನು ನಿರ್ಮಿಸುವ ಬೇಡಿಕೆಯನ್ನು ಕುರಿತಂತೆ ಇದು “ಜನರ ನಂಬಿಕೆ”ಯ ರಕ್ಷಣೆಯ ಪ್ರಶ್ನೆ ಎಂದು ನ್ಯಾಯಾಲಯದಲ್ಲಿದೆ. ಮತ್ತೊಂದೆಡೆ, ಅದೇ ಸರಕಾರ ಗುರು ರವಿದಾಸ್ ಭಕ್ತರಿಗೆ ದಶಕಗಳಿಂದ ಒಂದು ಯಾತ್ರಾ ಕೇಂದ್ರವಾಗಿದ್ದ ಸ್ಥಳದಲ್ಲಿ ಐವತ್ತರ ದಶಕದಿಂದಿದ್ದ ಒಂದು ಸಣ್ಣ ಮಂದಿರವನ್ನು ,ಮತ್ತು ಸಮಾಧಿಗಳನ್ನು ನೆಲಸಮ ಮಾಡಿದೆ. ಒಂದು ಬಲವಾದ ಕಾನೂನು ಪ್ರಕರಣವಿದ್ದರೂ, ಸರ್ಕಾರ ಅರ್ಜಿದಾರರ ವಿರುದ್ಧ ಹೋಗಿದೆ. ಇದು, ಈ ಭಕ್ತರು ಮುಖ್ಯವಾಗಿ ಪರಿಶಿಷ್ಟ ಜಾತಿಗಳಿಗೆ ಸೇರಿದವರಾಗಿದ್ದರಿಂದಾಗಿ ಮಾಡಿರುವ ತಾರತಮ್ಯ ಮನೋಭಾವದ ಪ್ರದರ್ಶನ ವೆನಿಸುವುದಿಲ್ಲವೇ ಎಂದು ಅವರು ತಮ್ಮ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಅವರ ಪತ್ರದ ಪೂರ್ಣ ಒಕ್ಕಣಿಕೆ ಹೀಗಿದೆ:
“ಆಗಸ್ಟ್ ೧೦ರಂದು ತುಘಲಕಾಬಾದ್ ಬಡಾವಣೆಯ ಅರಣ್ಯ ಪ್ರದೇಶದಲ್ಲಿ ಇದ್ದ ಗುರು ರವಿದಾಸ್ ಮಂದಿರ ಮತ್ತು ನಾಲ್ಕು ಸಮಾಧಿಗಳ ಧ್ವಂಸದತ್ತ ತಮ್ಮ ಗಮನವನ್ನು ಸೆಳೆಯ ಬಯಸುತ್ತೇನೆ. ನನ್ನ ಪಕ್ಷದ ಸಹಯೋಗಿಗಳು ಮತ್ತು ದಲಿತ ಶೋಷಣ ಮುಕ್ತಿ ಮಂಚ್ ನ ಪದಾಧಿಕಾರಿಗಳೊಂದಿಗೆ ಆಗಸ್ಟ್ ೧೪ರಂದು ನಾನು ಭೇಟಿ ನೀಡಿದ್ದೆ ಮತ್ತು ಅರ್ಜಿದಾರರೊಂದಿಗೆ(ಗುರು ರವಿದಾಸ್ ಸಮಿತಿ) ಮಾತಾಡಿದೆ. ಅವರು ನಮಗೆ ವಿವರಗಳನ್ನು ನೀಡಿ ಆ ಜಾಗಕ್ಕೆ ಕರೆದೊಯ್ದರು.
ತಾವು ಇದಕ್ಕೆ ಸಂಬಂಧಪಟ್ಟಂತೆ ದಿಲ್ಲಿಯ ಉಪರಾಜ್ಯಪಾಲರನ್ನು ಭೇಟಿಯಾಗಿದ್ದೀರಿ, ಮತ್ತು ಒಂದು ಪರಿಹಾರವನ್ನು ರೂಪಿಸಲು, ಅಂದರೆ ಮಂದಿರ ಮತ್ತು ಸಮಾಧಿಗಳಿಗೆ ಇನ್ನೊಂದು ಸ್ಥಳವನ್ನು ಮಂಜೂರು ಮಾಡಲು ಪ್ರಯತ್ನಿಸುತ್ತಿರುವುದಾಗಿ ನಾನು ಪತ್ರ್ರಿಕೆಗಳಲ್ಲಿ ಓದಿದ್ದೇನೆ. ದುರದೃಷ್ಟವಶಾತ್, ಈ ಬೆಳವಣಿಗೆಗಳಲ್ಲಿ ನೇರವಾಗಿ ತಮ್ಮ ಇಲಾಖೆಯ ಅಡಿಯಲ್ಲಿರುವ ಡಿ.ಡಿ.ಎ.(ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ) ಅತ್ಯಂತ ಕೆಟ್ಟ ಪಾತ್ರವನ್ನು ವಹಿಸಿದೆ. ಅರ್ಜಿದಾರರ ನ್ಯಾಯಬದ್ಧ ದೂರುಗಳ ವಿಷಯದಲ್ಲಿ ದರ್ಪದಿಂದ ವರ್ತಿಸಿದ್ದರಿಂದಾಗಿ ಇಂತಹ ಪರಿಸ್ಥಿತಿ ಬಂದಿದೆ. ಸುಪ್ರಿಂ ಕೋರ್ಟಿನಲ್ಲಿ ಒಂದು ಮರು ಪರಾಮರ್ಶೆ ಅರ್ಜಿ ಹಾಕುವ ಮೂಲಕ ಇದನ್ನು ಸರಿಪಡಿಸಬೇಕು ಎಂದು ತಮ್ಮನ್ನು ಬಲವಾಗಿ ಆಗ್ರಹಿಸುತ್ತೇನೆ.
ಈ ವಿಷಯದಲ್ಲಿ ಸರಕಾರದ ನಡೆ ಸಂಪೂರ್ಣವಾಗಿ ಇಬ್ಬಂದಿತನದಿಂದ ಕೂಡಿದೆ. ಒಂದು ಕಡೆ ಸರ್ಕಾರ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿಂತಿದ್ದ ಸ್ಥಳದಲ್ಲಿಯೇ ಒಂದು ಮಂದಿರವನ್ನು ನಿರ್ಮಿಸುವ ಬೇಡಿಕೆ ಕುರಿತಂತೆ “ಜನರ ನಂಬಿಕೆ”ಯ ರಕ್ಷಣೆಗೆ ನ್ಯಾಯಾಲಯದಲ್ಲಿದೆ. ಮತ್ತೊಂದೆಡೆ, ಅದೇ ಸರಕಾರ ಗುರು ರವಿದಾಸ್ ಭಕ್ತರಿಗೆ ದಶಕಗಳಿಂದ ಒಂದು ಯಾತ್ರಾ ಕೇಂದ್ರವಾಗಿದ್ದ ಮತ್ತು ಐವತ್ತರ ದಶಕದಲ್ಲಿ ಒಂದು ಸಣ್ಣ ಮಂದಿರದ ಕಟ್ಟಡವಿದ್ದ ಸ್ಥಳವನ್ನು ನೆಲಸಮ ಮಾಡಿದೆ. ಅಂದಿನಿಂದಲೂ ದೇವಾಲಯದಲ್ಲಿ ಸೇವೆ ಸಲ್ಲಿಸಿದ ನಾಲ್ಕು ಪೂಜಾರಿಗಳ ಸಮಾಧಿಗಳನ್ನು ಕೂಡ ನೆಲಸಮ ಮಾಡಲಾಗಿದೆ. ಒಂದು ಬಲವಾದ ಕಾನೂನು ಪ್ರಕರಣವಿದ್ದರೂ, ಸರ್ಕಾರ ಅರ್ಜಿದಾರರ ವಿರುದ್ಧ ಹೋಯಿತು. ಇದು ತಾರತಮ್ಯ ಮನೋಭಾವವನ್ನು ಪ್ರದರ್ಶಿಸುವುದಿಲ್ಲವೇ? ಏಕೆಂದರೆ ಈ ಭಕ್ತರು ಮುಖ್ಯವಾಗಿ ಪರಿಶಿಷ್ಟ ಜಾತಿಗಳಿಗೆ ಸೇರಿದವರಾಗಿದ್ದಾರೆ.
ರವಿದಾಸ್ ಮಂದಿರವಿದ್ದ ಸ್ಥಳದ ಪಕ್ಕದ ರಸ್ತೆಗೆ ಗುರು ರವಿದಾಸ್ ಮಾರ್ಗ ಎಂದು ಹೆಸರಿಡಲಾಗಿದೆ ಮತ್ತು ಮಂದಿರ ಅಲ್ಲಿ ಇರುವದರಿಂದಾಗಿಯೇ ಅದೇ ಹೆಸರಿನ ಎರಡು ಬಸ್ ನಿಲುಗಡೆಗಳಿವೆ ಎಂದು ತಮಗೆ ಚೆನ್ನಾಗಿ ಗೊತ್ತಿದೆ. ಇದು ಈಗ ನೆಲಸಮ ಮಾಡಲ್ಪಟ್ಟಿರುವ ಮಂದಿರದ ಅಸ್ತಿತ್ವಕ್ಕೆ ದೊರೆತ ಮಾನ್ಯತೆಯಲ್ಲವೇ? ಇದು ಈ ಸಮುದಾಯದ ವಿರುದ್ಧ “ಅತಿಕ್ರಮಣಕಾರರು” ಎಂಬ ದುರುದ್ದೇಶಪೂರಿತ ಅಪಪ್ರಚಾರಕ್ಕೆ ಉತ್ತರ ನೀಡುವುದಿಲ್ಲವೇ? ಅದು ಅತಿಕ್ರಮಣವಾಗಿದ್ದರೆ ಒಂದು ಸಾರ್ವಜನಿಕ ಸ್ಥಳಕ್ಕೆ ಮಂದಿರದ ಹೆಸರನ್ನೇಕೆ ಇಡಲಾಯಿತು? ಎರಡನೆಯದಾಗಿ, ನೀವು ಈ ಪ್ರದೇಶವನ್ನು ಭೇಟಿ ಮಾಡುವ ಕಾಳಜಿ ವಹಿಸಿದರೆ, ಅದೇ ಪ್ರದೇಶದಲ್ಲಿ ದು ಕ್ಲಬ್ಹೌಸ್ ನಿರ್ಮಿಸಲು ಡಿಡಿಎ ಅನುಮತಿ ನೀಡಿರುವುದನ್ನು ನೀವು ಕಾಣಬಹುದು. ಮರಮಟ್ಟುಗಳಿದ್ದ ಪ್ರದೇಶದಲ್ಲಿ ಇತ್ತೀಚೆಗಷ್ಟೇ ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ. ಇದು ಇಬ್ಬಂದಿತನ ಅಲ್ಲವೇ? ನೆಲಸಮಗೊಳಿಸುವ ಸಮಯದಲ್ಲಿ ಡಿಡಿಎ ಹಲವಾರು ಮರಗಳನ್ನು ನಾಶಪಡಿಸಿದೆ ಎಂಬುದನ್ನು ಕೂಡ ನಾನು ನೋಡಿದೆ.
ಸ್ವಾತಂತ್ರ್ಯಕ್ಕೆ ಮುಂಚೆಯೇ ಮಂದಿರವು ಕಾರ್ಯನಿವ್ಹಿಸುತ್ತಿತ್ತು,, ಭಕ್ತರು ತಮ್ಮ ಗುರು ರವಿದಾಸರು ವರ್ಷಗಳ ಕಾಲ ಭೇಟಿ ನೀಡಿದ್ದರು ಎಂದು ನಂಬಿರುವ ಸ್ಥಳಕ್ಕೆ, ನಿರ್ದಿಷ್ಟವಾಗಿ ಒಂದು ಕೊಳಕ್ಕೆ ಬರುತ್ತಿದ್ದಾರೆ. ನೆಲಸಮಗೊಳಿಸಿರುವ ಕಟ್ಟಡವನ್ನು ಐವತ್ತರ ದಶಕದಲ್ಲಿ ಅಲ್ಲಿದ್ದ ಒಂದು ತಾತ್ಕಾಲಿಕ ಕಟ್ಟಡದ ಬದಲಿಗೆ ನಿರ್ಮಿಸಲಾಯಿತು. ಇವೆಲ್ಲವೂ ದಾಖಲಾಗಿರುವ ವಿಷಯ.
ವಿಶೇಷವಾಗಿ ದುಃಖಕರ ಸಂಗತಿಯೆಂದರೆ, ಡಿಡಿಎ ಪೂಜಾರಿಗಳ ಸಮಾಧಿಗಳನ್ನು ಸಹ ಬಿಡಲಿಲ್ಲ,ವನ್ನು ಪುಡಿಗುಟ್ಟಲಾಯಿತು, ಮತ್ತು ಸಮಾಧಿಗಳನ್ನು ಗುರುತಿಸುವ ಕಲ್ಲುಗಳನ್ನು ಸಹ ತುಂಡರಿಸಿ ಬಿಟ್ಟು ಹೋಗಿವೆ ಅಥವಾ ಮಣ್ಣಿನ ಕೆಳಗೆ ಬಿಟ್ಟು ಹೋಗಿದ್ದಾರೆ. ಇದೀಗ ಪರಿಶಿಷ್ಟ ಜಾತಿಗಳಿಗೆ ಸೇರಿದ ಜನರು ಬಂದು ಹೋಗುವ ದು ದೇವಾಲಯದ ಪಾಲನೆ ಮಾಡುವವರಿಗೆ ಡಿಡಿಎ ನೀಡುವ ಗೌರವದ ರೀತಿಯೇನು?
ದೆಹಲಿ ಹೈಕೋರ್ಟ್ ಸಮಾಧಿಗಳನ್ನು ಹಾಗೇ ಇಟ್ಟುಕೊಂಡು 400 ಗಜಗಳಷ್ಟು ದೂರದಲ್ಲಿರುವ ಸ್ಥಳಕ್ಕೆ ದೇವಾಲಯವನ್ನು ಸ್ಥಳಾಂತರಿಸುವಂತೆ ಸೂಚಿಸಿತ್ತು. ಆದರೆ ಡಿಡಿಎ ಸಮಾಧಿಗಳನ್ನು ಮತ್ತು ದೇವಾಲಯವನ್ನು ನೆಲಸಮಗೊಳಿಸುವ ತನ್ನ ಕ್ರಮಗಳಿಂದಾಗಿ ಪರಿಸ್ಥಿತಿಯನ್ನು ಬದಲಿಸಿದೆ.
ಆದ್ದರಿಂದ ದೇವಾಲಯವನ್ನು ಪುನರ್ನಿರ್ಮಿಸುವಂತೆ ಮತ್ತು ಸಮಾಧಿಗಳನ್ನು ಅವುಗಳ ಮೂಲ ಸ್ಥಳದಲ್ಲಿ ಪುನಃಸ್ಥಾಪಿಸುವಂತೆ ಖಚಿತಪಡಿಸಬೇಕು ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ. ನ್ಯಾಯಕ್ಕಾಗಿ ಗುರು ರವಿದಾಸ್ ಭಕ್ತರ ಹೋರಾಟಕ್ಕೆ ಸಿಪಿಐ(ಎಂ) ಬೆಂಬಲ ನೀಡಿದೆ ಎಂದೂ ನಿಮಗೆ ಈ ಮೂಲಕ ತಿಳಿಸುತ್ತಿದ್ದೇನೆ.”