ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಲು ಪ್ರತಿಪಕ್ಷಗಳ ನಿಯೋಗಕ್ಕೆ ಅನುಮತಿ ನಿರಾಕರಣೆ
ಜಮ್ಮು ಮತ್ತು ಕಾಶ್ಮೀರ ಆಡಳಿತ ಎಂಟು ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸಿದ್ದ ಹನ್ನೊಂದು ಸದಸ್ಯರ ನಿಯೋಗಕ್ಕೆ ಆ ರಾಜ್ಯಕ್ಕೆ ಭೇಟಿ ನೀಡಲು ಅನುಮತಿ ನಿರಾಕರಿಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ಕಾಂಗ್ರೆಸ್, ಸಿ ಪಿ ಐ(ಎಂ), ಸಿ ಪಿ ಐ, ಡಿ ಎಂ ಕೆ, ಎನ್ ಸಿ ಪಿ, ಜೆ ಡಿ(ಎಸ್), ಆರ್ ಜೆ ಡಿ ಮತ್ತು ಟಿ ಎಂ ಸಿ ಪಕ್ಷಗಳ ಜಂಟಿ ನಿಯೋಗ ಆಗಸ್ಟ್ 24ರ ಬೆಳಿಗ್ಯೆ ಸಂವಿಧಾನದ ವಿಧಿ 370ನ್ನು ರದ್ದು ಮಾಡುವ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಹಾಕಿರುವ ರಾಜಕೀಯ ನಿರ್ಬಂಧದ ವಿರುದ್ಧ ಇರುವ ಸನ್ನಿವೇಶದ ಒಂದು ಅಂದಾಜು ಮಾಡಲು ಶ್ರೀನಗರಕ್ಕೆ ಹೋಗಿತ್ತು.
ಮುಂದಿನ ಕೆಲವು ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿ ವಿವಿಧ ಜನಗಳೊಂದಿಗೆ ಮತ್ತು ವಿವಿಧ ರಾಜಕೀಯ ಅಭಿಪ್ರಾಯಗಳುಳ್ಳ ವಿಭಾಗಗಳೊಂದಿಗೆ ಮಾತನಾಡಿ ಕಾಶ್ಮೀರ ಕಣಿವೆಯನ್ನು ಹಲವು ದಿನಗಳಿಂದ ಸಂಪೂರ್ಣವಾಗಿ ಮುಚ್ಚಿ ಬಿಟ್ಟಿರುವುದರ ಫಲಿತಾಂಶವಾಗಿ ಅವರೆಲ್ಲ ಎದುರಿಸುತ್ತಿರುವ ಕಷ್ಟಗಳು ಹಾಗೂ ನೆಲಮಟ್ಟದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ತಿಳಿಯುವ ಯೋಜನೆಯನ್ನು ಈ ನಿಯೋಗ ಹಾಕಿಕೊಂಡಿತ್ತು.
ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಸುಪರಿಚಿತ ಮುಖಂಡರುಗಳಿಗೆ ಪ್ರವೇಶ ನಿರಾಕರಿಸಿರುವುದು ತಮ್ಮ ಪಕ್ಷಗಳಿಗೆ ಸೇರಿದವರನ್ನು ಭೇಟಿಯಾಗುವ, ಅವರೊಂದಿಗೆ ಮಾತಾಡುವ ರಾಜಕೀಯ ಪಕ್ಷಗಳ ಹಕ್ಕುಗಳ ಮೇಲೆ ನಡೆಸಿರುವ ನೇರ ದಾಳಿಯಾಗಿದೆ. ಶ್ರೀನಗರ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳವರೊಂದಿಗೆ ಪೋಲೀಸರ ದುರ್ವರ್ತನೆ ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸುವ ಒಂದು ನಗ್ನ ಪ್ರಯತ್ನವಾಗಿದೆ ಎಂದಿರುವ ಪೊಲಿಟ್ ಬ್ಯುರೊ, ಸರಕಾರ ಹೇಳಿಕೊಳ್ಳುವಂತೆ ಕಣಿವೆಯಲ್ಲಿ “ಸಾಮಾನ್ಯ” ಸ್ಥಿತಿ ಇರುವುದಾದರೆ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಜನರನ್ನು ಭೇಟಿಯಾಗದಂತೆ ಅದು ತಡೆಯುವುದಾದರೂ ಏಕೆ ಎಂದು ಪ್ರಶ್ನಿಸಿದೆ.
ದೇಶಾದ್ಯಂತ ಜನಗಳು ಸರ್ವಾಧಿಕಾರಿ ಆಳ್ವಿಕೆಯನ್ನು ಹೇರಲು ಪ್ರಯತ್ನಿಸುತ್ತಿರುವ ಪಕ್ಷವೊಂದು ಜನಗಳ ಮತ್ತು ಅವರ ಪ್ರತಿನಿಧಿಗಳ ಪ್ರಜಾಪ್ರಭುತ್ವ ಹಕ್ಕುಗಳನ್ನುತುಳಿದು ಹಾಕುತ್ತಿರುವ ನಗ್ನ ಪ್ರದರ್ಶನವನ್ನು ಕಾಣುತ್ತಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ಈ ನಿಯೋಗದಲ್ಲಿದ್ದರು.