ಕೇಂದ್ರದ ದುಡುಕಿನ ಕ್ರಮ : ಕಲ್ಲಿದ್ದಲು, ಚಿಲ್ಲರೆ ವ್ಯಾಪಾರದಲ್ಲಿ 100ಶೇ. ಎಫ್‍.ಡಿ.ಐ.

ಬಿಜೆಪಿ ಸರಕಾರ ಖನಿಜ ಸಂಪನ್ಮೂಲಗಳ ಮೇಲೆ ರಾಷ್ಟ್ರೀಯ ಹತೋಟಿಯನ್ನು ಬಿಟ್ಟು ಕೊಡುತ್ತಿದೆ

ಕೇಂದ್ರ ಸಂಪುಟ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಎಲ್ಲ ವಾಣಿಜ್ಯ ಉದ್ದೇಶಗಳಿಗೆ, ಅದರ ಜೊತೆಗೆ ಕಾಂಟ್ರಾಕ್ಟ್ ತಯಾರಿಕೆಯಲ್ಲಿ 100 ಶೇಕಡಾ ವಿದೇಶಿ ನೇರ ಹೂಡಿಕೆ(ಎಫ್‍.ಡಿ.ಐ.)ಗೆ ಅವಕಾಶ ನೀಡಲು ಮಾಡಿರುವ ನಿರ್ಧಾರವನ್ನು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಬಲವಾಗಿ ಖಂಡಿಸಿದೆ.

ಈ ದುಡುಕಿನ ಕ್ರಮ ವಿದೇಶಿ ಕಂಪನಿಗಳಿಗೆ ನಮ್ಮ ದೇಶದ ಖನಿಜ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯಲು ಅನುಕೂಲ ಮಾಡಿಕೊಡುತ್ತದೆ ಎಂದು ಅದು ಖೇದ ವ್ಯಕ್ತಪಡಿಸಿದೆ.

ಈ ನಿರ್ಧಾರ ಪ್ರಧಾನ ರಾಷ್ಟ್ರೀಯ ಕಲ್ಲಿದ್ದಲು ಗಣಿಗಾರಿಕೆಯ ಕಂಪನಿ ಕೋಲ್ ಇಂಡಿಯಾ ಲಿ. ಮೇಲೂ ಹಾನಿಕಾರಕ ಪರಿಣಾಮ ಬೀರಲಿದೆ. ಮೋದಿ ಸರಕಾರ ಸಾರ್ವಜನಿಕ ವಲಯದ ಈ ಕಲ್ಲಿದ್ದಲು ಕಂಪನಿಯನ್ನು ದುರ್ಬಲಗೊಳಿಸಲು ಟೊಂಕ ಕಟ್ಟಿದೆ.

ಅದು ಈಗಾಗಲೇ ತನ್ನ ಹಿಂದಿನ ಆಳ್ವಿಕೆಯಲ್ಲಿ ಕಲ್ಲಿದ್ದಲು ಗಣಿಗಾರಿಕೆಯನ್ನು ಭಾರತೀಯ ಖಾಸಗಿಯವರಿಗೆ ತೆರೆದಿತ್ತು. ಬಿಜೆಪಿ ಸರಕಾರ ಖನಿಜ ಸಂಪನ್ಮೂಲಗಳ ಮೇಲೆ ರಾಷ್ಟ್ರೀಯ ಹತೋಟಿಯನ್ನು ಬಿಟ್ಟು ಕೊಡುತ್ತಿದೆ. ಇದು ದೇಶದ ಹಿತಾಸಕ್ತಿಗಳಿಗೆ ಬಹಳಷ್ಟು ಮಾರಕವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

ಏಕಬ್ರಾಂಡ್‍ ಚಿಲ್ಲರೆ ವ್ಯಾಪಾರದಲ್ಲಿಯೂ 100 ಶೇಕಡಾ ಎಫ್‍.ಡಿ.ಐ.ಗೆ ನಿಯಮಾವಳಿಗಳನ್ನು ಸಡಿಲಗೊಳಿಸುವ ಇನ್ನೊಂದು ನಿರ್ಧಾರ ದೇಶದಲ್ಲಿವ ವಿಶಾಲ ಚಿಲ್ಲರೆ ವ್ಯಾಪಾರ ವಲಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಈ ಕ್ರಮಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಸರಕಾರವನ್ನು ಆಗ್ರಹಿಸಿದೆ.

Leave a Reply

Your email address will not be published. Required fields are marked *