ಕಾಮ್ರೇಡ್ ಆರ್. ಶ್ರೀನಿವಾಸ್ ರವರ ಕುರಿತು ಸಂಗಾತಿ ಜಿ.ಎನ್.ನಾಗರಾಜ್ ರವರು ಬರಹ.
ಕಾಂ. ಶ್ರೀನಿವಾಸ್ ಮತ್ತು ಅವರ ಕುಟುಂಬದೊಡನೆ ನನಗೆ ಬಹು ದೀರ್ಘ ಕಾಲದ ಒಡನಾಟ. ನಾನು 1983ರಲ್ಲಿ ಪೂರ್ಣಕಾಲದ ಕಾರ್ಯಕರ್ತನಾಗಿ ಬೆಂಗಳೂರಿಗೆ ಬಂದು ಸಿಪಿಎಂನ ಮೊದಲ ಶಾಸಕಾಂಗ ಕಾರ್ಯದರ್ಶಿಯಾಗಿ ಶಾಸಕರ ಭವನದಲ್ಲಿದ್ದಾಗ ಅವರಿನ್ನೂ ಫೆದರ್ಲೈಟ್ಎಂಬ ಕಾರ್ಖಾನೆಯ ಕಾರ್ಮಿಕರು. ಆ ಫ್ಯಾಕ್ಟರಿಯ ಕಾರ್ಮಿಕ ನಾಯಕರು ಮತ್ತು ಆಗಲೇ ನೆರೆ ಹೊರೆಯ ಫ್ಯಾಕ್ಟರಿಗಳ ಕಾರ್ಮಿಕ ಸಂಘಗಳ ನಾಯಕರೂ ಆಗಿದ್ದರು.
ನಾನಿದ್ದ ಶಾಸಕರ ಭವನ ವಾರಕ್ಕೆ ಎರಡು ಮೂರು ಬಾರಿ ಭೇಟಿ ಕೊಟ್ಟು ಹಲವು ಪ್ರಸ್ತುತ ರಾಜಕೀಯ ವಿಷಯಗಳ ಬಗ್ಗೆ ಪಕ್ಷದ ನಿಲುವು , ಮಾರ್ಕ್ಸ್ವಾದದ ಬಗೆಗಿನ ಅರಿವು ಇವುಗಳ ಬಗ್ಗೆ ಚರ್ಚಿಸುತ್ತಿದ್ದರು. ಅವರು ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸವಷ್ಟೇ ಆಗಿದ್ದುದರಿಂದ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕೆನ್ನುವ ಹಸಿವು. ಅನೇಕ ವಾರಾಂತ್ಯದಲ್ಲಿ ಅವರ ಮನೆಗೆ ಭೇಟಿ ಕೊಡುತ್ತಿದ್ದೆ. ಅಲ್ಲಿ ಅವರೊಡನೆ ಚರ್ಚೆ ಮುಂದುವರೆಯುತ್ತಿತ್ತು. ಅಷ್ಟೇ ಅಲ್ಲ ಅವರ ಮೂರೂ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದೆ.
ಆಗ ಇನ್ನೂ ಕನ್ನಡ ಭಾಷೆಯ ಗೋಕಾಕ್ ಚಳವಳಿಯ ಬಿಸುಪು. ಅವರು ಕಾರ್ಮಿಕ ಚಳುವಳಿಗೆ ಬರುವ ಮೊದಲು ಕನ್ನಡ ಚಳುವಳಿಗಾರರಾಗಿದ್ದವರು. ಆದ್ದರಿಂದ ಅವರಿಗೆ ಭಾಷೆಯ ಬಗ್ಗೆ ಬಹಳ ಪ್ರಶ್ನೆಗಳು.ನಾನು ನರಗುಂದದಲ್ಲಿ ಕೃಷಿ ಸಹಾಯಕ ನಿರ್ದೇಶಕನಾಗಿದ್ದಾಗಲೇ ಬೆಳೆದ ಗೋಕಾಕ್ ಚಳುವಳಿಯ ಬಗ್ಗೆ , ಭಾಷೆಯ ಬಗೆಗೆ ಕಾರ್ಮಿಕರ, ದುಡಿಯುವವರ ಕಣ್ಣೋಟದ ಬಗ್ಗೆ ಲೆನಿನ್ ಮಾರ್ಕ್ಸ್, ಸ್ಟಾಲಿನ್ ಮೊದಲಾದವರ ಬರಹಗಳನ್ನು, ಮೂರು ತಿಂಗಳಲ್ಲಿ ಪತ್ರಿಕೆಗಳಲ್ಲಿ ಬಂದ ವರದಿಗಳು, ಲೇಖನಗಳು, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಸಂಪಾದಕರಾಗಿದ್ದ ಹರಿಕುಮಾರ್ರವರ ಲೇಖನಗಳು, ಭಾಷೆಯ ಬಗ್ಗೆ ಕಾಂ.ಪ್ರಕಾಶ್ ಕಾರತ್ರವರ ಎಂ.ಎ ಥೀಸೀಸ್ ಮೊದಲಾದವನ್ನು ನಮ್ಮ ಮನೆಯಲ್ಲಿ ನಿತ್ಯಾನಂದ ಸ್ವಾಮಿಜಿಯವರೂ ಸೇರಿದಂತೆ ನಾಲ್ಕಾರು ಜನ ಕೂಡಿ ಅಧ್ಯಯನ ಮಾಡಿದ್ದೆವು.
ಅವರಿಗೆ ಬೆಂಗಳೂರಿನ ಕನ್ನಡ ಚಳುವಳಿಯ ಪರಿಚಯ ಚೆನ್ನಾಗಿತ್ತು. ಆದ್ದರಿಂದ ಅವುಗಳ ಬಗ್ಗೆ ನಾಲ್ಕಾರು ದಿನ ಚರ್ಚೆ ಮಾಡಿದೆವು.
ಅಷ್ಟೇ ಅಲ್ಲದೆ ಕಾರ್ಮಿಕರಲ್ಲಿ ಭಾಷಾ ದ್ವೇಷಕ್ಕೆ ಎಡೆಮಾಡಿರುವ ಬಗ್ಗೆ ತಿಳಿದುಬಂದು ಅವರ ಉಮೇದಿನಿಂದ ಮೈಸೂರು ರಸ್ತೆಯ ಕೆಲವು ಕಾರ್ಮಿಕ ಸಂಘಗಳ ಮುಖಂಡರನ್ನು, ಮುಖ್ಯವಾಗಿ ಬಿಎಚ್ಇಎಲ್ ಕಾರ್ಮಿಕರಿಗೆ ತಂಡ ತಂಡವಾಗಿ ಉಪನ್ಯಾಸ ನೀಡಿದೆ.
ಮುಂದೆ ನಾನು ಪಕ್ಷದ ಪತ್ರಿಕೆಯಲ್ಲಿ ಕೆಲಸ ಮಾಡಲು ಕಾ.ಬಿಟಿಆರ್ ನನ್ನನ್ನು ನಿಯೋಜಿಸಿದಾಗ ಕರ್ನಾಟಕ ಏಕೀಕರಣ ಚಳುವಳಿ ಮತ್ತು ಅದರ ವೈಚಾರಿಕತೆ , ಅದರಲ್ಲಿ ವಿವಿಧ ಸಾಮಾಜಿಕ ಸ್ತರಗಳ ಪಾತ್ರದ ಬಗ್ಗೆ ಒಂದು ದೀರ್ಘ ಸಂಶೋಧನಾ ಪ್ರಬಂಧ ಬರೆಯಲು ಈ ಎಲ್ಲ ಚರ್ಚೆಗಳು ಪ್ರೇರಣೆಯಾದವು.
ಆಗ ಮತ್ತೊಂದು ಮುಖ್ಯ ಚರ್ಚೆಯ ವಿಷಯ. ಚೀನಾದ ಆರ್ಥಿಕ ಸುಧಾರಣೆಗಳ ಬಗ್ಗೆ. ಅಂದು ಪತ್ರಿಕೆಗಳಲ್ಲಿ ಚೀನಾ ಸಮಾಜವಾದಿ ಪಥವನ್ನು ತೊರೆದು ಬಂಡವಾಳಶಾಹಿ ದಾರಿಯನ್ನು ಹಿಡಿಯಿತು ಎಂದು ದಿನ ದಿನವೂ ಸುದ್ದಿಗಳು. ಕಾಂ.ಶ್ರೀನಿವಾಸ್, ಕಾಂ.ಪಿಕೆ ಸುಬ್ರಮಣಿ ಇವರುಗಳಿಂದ ಈ ಬಗ್ಗೆ ಪ್ರಶ್ನೆಗಳು.ಆಗ ನಾನಿನ್ನೂ ಮಾರ್ಕ್ಸ್ವಾದಕ್ಕೆ ಹೊಸಬ. ಇಂತಹ ವಿಷಯಗಳ ಬಗ್ಗೆ ಹೆಚ್ಚು ತಿಳುವಳಿಕೆ ಇದ್ದವನಲ್ಲ. ನಮ್ಮ ರಾಜ್ಯ ನಾಯಕರುಗಳನ್ನು ಈ ಬಗ್ಗೆ ಕೇಳಿದೆ. ನನಗೆ ಸಮಾಧಾನಕರ ಉತ್ತರ ಸಿಗಲಿಲ್ಲ.ಅಂದು ಸಿಐಟಿಯು ಪ್ರಧಾನಕಾರ್ಯದರ್ಶಿಯಾಗಿದ್ದ ಕಾಂ ಎಂಕೆ ಪಂಧೆಯವರಂತಹ ನಾಯಕರಲ್ಲಿ ಕೇಳಿದೆ . ಅವರಿಂದಲೂ ಸರಿಯಾದ ಉತ್ತರ ಸಿಗಲಿಲ್ಲ.
ಕಾಂ. ಆರೆಸ್,ಪಿಕೆಯವರ ಪ್ರಶ್ನೆಗಳು ಹೆಚ್ಚುತ್ತಲೇ ಇದ್ದವು. ಕೊನೆಗೆ ಚೀನಾದ ಪರಿಸ್ಥಿತಿಗೆ ಸಂಬಂಧಿಸಿದ ಪುಸ್ತಕಗಳು, ಅಲ್ಲಿಯ ಕಮ್ಯುನಿಸ್ಟ್ ಪಕ್ಷದ ನಿರ್ಣಯ, ವರದಿಗಳನ್ನು ಅಧ್ಯಯನ ಮಾಡಲಾರಂಭಿಸಿದೆ. ಅದರಿಂದ ಚೀನಾದ ಸುಧಾರಣೆಗಳು ಹೇಗೆ ಸಮಾಜವಾದಿ ದಾರಿಯಲ್ಲಿನ ಒಂದು ಹಂತ ಎಂಬ ಬಗ್ಗೆ ಮತ್ತು ಆಗಲೇ ಆರಂಭವಾಗುತ್ತಿದ್ದ ಭಾರತದ ಸುಧಾರಣೆಗಳು ಹೇಗೆ ಬಹಳ ಭಿನ್ನ ದಾರಿಯವು ಎಂಬ ಬಗ್ಗೆ ತಿಳುವಳಿಕೆ ಮೂಡಿತು.
ಅದನ್ನು ಕಾಂ. ಆರ್ ಶ್ರೀನಿವಾಸ್, ಪಿಕೆ ಸುಬ್ರಮಣಿ ಇವರುಗಳಿಗೆ ವಿವರಿಸಿದೆ.
ಮುಂದೆ ಕಾಂ. ಬಿಟಿಆರ್, ಕಾಂ.ಇಎಂಎಸ್ ಬೆಂಗಳೂರಿಗೆ ಭೇಟಿ ನೀಡಿದಾಗ ನನ್ನ ಅಧ್ಯಯನದ ಬಗ್ಗೆ ಮತ್ತು ನನಗೆ ಮೂಡಿದ ತಿಳುವಳಿಕೆಯ ಬಗ್ಗೆ ಚರ್ಚಿಸಿದೆ. ಅವರು ಅದಕ್ಕೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಬಹಳ ಸಂಗಾತಿಗಳಿಗೆ ಈ ಪ್ರಶ್ನೆಗಳು ಇದ್ದುದರಿಂದ ನಾನಿನ್ನೂ ಶಾಸಕಾಂಗ ವಿಭಾಗದಲ್ಲಿದ್ದಾಗಲೇ ನಮ್ಮ ಪತ್ರಿಕೆಯಲ್ಲಿ ಒಂದು ಲೇಖನ ಮಾಲೆಯನ್ನೇ ಬರೆದೆ.
ಇವರೊಡನೆ ಒಡನಾಟ ನನಗೆ ಕಾರ್ಮಿಕರ ಮನಸ್ಸಿನ ಬಗ್ಗೆ, ಅವರ ಕೆಲಸದ ಪರಿಸ್ಥಿತಿಯ ಬಗ್ಗೆ , ಕಾರ್ಖಾನೆಗಳ ಶೋಷಣಾ ವಿಧಾನದ ಬಗ್ಗೆ ಪ್ರಾಥಮಿಕ ತಿಳುವಳಿಕೆ ಮೂಡಲು ನೆರವಾಯಿತು.
ಮುಂದೆ ನನ್ನ ಕಾರ್ಯ ಚಟುವಟಿಕೆಗಳು ಕರ್ನಾಟಕದ ತುಂಬೆಲ್ಲಾ ಪ್ರವಾಸಕ್ಕೆ ದೂಡಿದ ಕಾರಣ ಅವರೊಡನೆ ಮೊದಲಿನಷ್ಟು ಸಂಪರ್ಕ ಸಾಧ್ಯವಾಗದಾಯಿತು.
ಮುಂದೆ ಬೆಂಗಳೂರಿನ ಜಿಲ್ಲಾ ಕಾರ್ಯದರ್ಶಿಯ ಸ್ಥಾನ ತೆರವಾದಾಗ ಅವರು ಹೆಚ್ಚು ಓದಿಲ್ಲ ಎಂಬ ವಾದ ಕೆಲವರದಾಗಿತ್ತು. ಆದರೆ ಅವರು ಬೆಳೆಸಿಕೊಂಡಿದ್ದ ತಿಳುವಳಿಕೆ ಅದನ್ನು ನಿರಾಕರಿಸಿ ಅವರು 90 ರ ದಶಕದಲ್ಲಿಯೇ ಜಿಲ್ಲಾ ಕಾರ್ಯದರ್ಶಿಯಾಗಲು ಕಾರಣವಾಯಿತು.
ಕಾರ್ಯದರ್ಶಿಯಾದಾಗ ಅವರ ಅಪೂರ್ವ ಸಂಘಟನಾ ಶಕ್ತಿ ಬೆಳಕಿಗೆ ಬಂದಿತು. ಒಂದು ಕಡೆ ಪಕ್ಷದ ಸಂಘಟನಾ ಕೆಲಸ ಮತ್ತೊಂದು ಕಡೆ ಕಾರ್ಮಿಕ ಚಳುವಳಿಯ ಸಂಘಟನೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಅವರು 92 ರ ಕೋಮುವಾದಿ ದಂಗೆಗಳ ಉರುಬು ಮತ್ತು 94 ರ ವಿಶ್ವ ವ್ಯಾಣಿಜ್ಯ ಸಂಸ್ಥೆಯ ಗ್ಯಾಟ್- ಡಂಕೆಲ್ ಪ್ರಸ್ತಾವಗಳ ವಿರುದ್ಧ ನಡೆಸಿದ ನೇತೃತ್ವ ನೀಡಿದ ಹೋರಾಟಗಳು ಇಂದಿಗೂ ನೆನಪಿಸಿಕೊಳ್ಳಬೇಕಾದದ್ದು.
ಬಾಬರಿ ಮಸೀದಿ ನಾಶದ ನಂತರದ 92 ರ ಕೋಮು ಗಲಭೆಗಳ ಆ ಕ್ಷೋಭೆಯ ಆ ದಿನಗಳಲ್ಲಿ ಬೆಂಗಳೂರಿನ ಸಾಹಿತಿ, ಬುದ್ಧಿಜೀವಿಗಳನ್ನು ಬೀದಿಗಿಳಿಸಿ ಪ್ರತಿ ದಿನವೂ ಒಂದೊಂದು ವಿಸ್ತರಣದಲ್ಲಿ ಕಾಲ್ನಡಿಗೆ ಜಾತಾಗಳನ್ನು ನಡೆಸಿ ಸೌಹಾರ್ದ ಭಾವನೆ ಮೂಡಿಸಿದ್ದು, ಅಲ್ಪ ಸಂಖ್ಯಾತರು ಹೆಚ್ಚಾಗಿ ವಾಸಿಸುತ್ತಿದ್ದ ಕಾಲನಿಗಳಿಗೆ ಕೂಡಾ ಈ ಜಾತಾ ಕೊಂಡೊಯ್ದು ಅವರ ಆತಂಕ ನಿವಾರಿಸಲು ಪ್ರಯತ್ನಿಸಿದ್ದು ಇವುಗಳನ್ನು ವಿಜಯಮ್ಮ, ಗೋವಿಂದರಾವ್ರಂತಹವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಅದೇ ಸಮಯದಲ್ಲಿ ಜಾಗತೀಕರಣದ ನೀತಿಗಳ ವಿರುದ್ಧ, ಗ್ಯಾಟ್ ವಿರುದ್ಧ ಸಂಘಟಿಸಿದ ಸಮರಶೀಲ ಹೋರಾಟ ಪೋಲೀಸರಿಗೇ ಸುಳಿವು ಸಿಗದ ಹಾಗೆ ರಾಜಭವನಕ್ಕೆ ಮುತ್ತಿಗೆ, ಅದರ ಗೋಡೆಗಳನ್ನು ಹಾರಿ ಒಳಗೆ ಪ್ರವೇಶಿಸಿದ್ದು, ರಾಜ್ಯಪಾಲರ ಕೋಪಕ್ಕೆ ತುತ್ತಾದ ಪೋಲೀಸರು ಬೆಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ಜಲ ಫಿರಂಗಿ ಉಪಯೋಗಿಸಿದ್ದು, ಮನಬಂದಂತೆ ಲಾಠಿ ಚಾರ್ಜ್ ಮಾಡಿದ್ದು. ಹಲವರಿಗೆ ತೀವ್ರ ಗಾಯ, ಎಲ್ಐಸಿಯ ಕಾಂ. ಶ್ರೀನಿವಾಸ್ರವರಿಗೆ ಹೃದಯಾಘಾತ ಇವೆಲ್ಲವೂ ನೆನಪಿಗೆ ಬರುತ್ತವೆ.
ಅಂದಿನ ಎರಡು ವಾರದ ಹಿಂದೆ ಪಕ್ಷ ಮತ್ತು ಸಾಮೂಹಿಕ ಸಂಘಟನೆಗಳ ಏಕಮಾತ್ರ ಕಛೇರಿಯಾಗಿದ್ದ ಸುಲ್ತಾನ ಪೇಟೆ ಕಛೇರಿಯಲ್ಲಿ ಕಾಂ. ಶ್ರೀನಿವಾಸ್ ಮತ್ತು ನಾನು ಹಾಗೂ ಬಾಳೆ ನಡೆಸಿದ ಚರ್ಚೆ ನೆನಪಿಗೆ ಬರುತ್ತದೆ.
ಆಗ ಕರ್ನಾಟಕ ಪ್ರಾಂತ ರೈತ ಸಂಘ ಗ್ಯಾಟ್ ವಿರುದ್ಧ ದೊಡ್ಡ ರಾಜ್ಯ ಮಟ್ಟದ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು. ಪಕ್ಷವೂ ಗ್ಯಾಟ್ ವಿರುದ್ಧ ಪ್ರತಿಭಟನೆ ಸಂಘಟಿಸುವುದಿತ್ತು.
ಈ ಹೋರಾಟ ಪರಿಣಾಮಕಾರಿಯಾಗಲು ಒಂದೇ ದಿನ ಎರಡೂ ಹೋರಾಟ ನಡೆಸುವ ಬಗ್ಗೆ ಚರ್ಚಿಸಿದೆವು.. ರೈತ ಸಂಘದ ನಾವು ಶಾಂತ ರೀತಿಯಿಂದ ಮೆರವಣಿಗೆ ಹೊರಟು ಕೆ.ಆರ್ ಸರ್ಕಲ್ಗೆ ಬಂದು ಧರಣಿ ಕೂರುವುದು . ಆಗ ಪೋಲೀಸರ ಹಾಗೂ ಪತ್ರಿಕೆಗಳ ಗಮವೆಲ್ಲಾ ಈ ದೊಡ್ಡ ಮೆರವಣಿಗೆಯ ಮೇಲಿರುತ್ತದೆ.
ಅದರ ಪ್ರಯೋಜನ ಪಡೆದು ಯಾವುದೇ ಪೋಲೀಸ್ ಅನುಮತಿಗಾಗಿ ಅರ್ಜಿ ಹಾಕದೆ ಪಕ್ಷದ ಮೆರವಣಿಗೆ ಜಿಪಿಒದಿಂದ ರಾಜಭವನದ ಕಡೆಗೆ ಧಾವಿಸಿ ರಾಜ ಭವನಕ್ಕೆ ಮುತ್ತಿಗೆ ಹಾಕುವುದು. ಆಗ ಅಲ್ಲಿ ಪೋಲೀಸರಪಡೆ ಇರುವುದಿಲ್ಲ.ಆದ್ದರಿಂದ ಮಧ್ಯದಲ್ಲಿ ತಡೆಯುವುದಾಗುವುದಿಲ್ಲ. ಗೇಟಿನ ಬಳಿಯೂ ಕೆಲವೇ ಪೋಲಿಸರಿರುತ್ತಾರೆ. ಆ ಅವಕಾಶ ಬಳಸಿ ಗೇಟಿನ ಒಳಗೆ ನುಗ್ಗುವುದು, ಗೇಟಿನ ಮೇಲೆ ಹತ್ತಿ ಒಳಗೆ ಧುಮುಕುವುದು ,
ಅಷ್ಟೇ ಅಲ್ಲ ರಾಜಭವನದ ಹಿಂಬಾಗಿಲು ಶಾಸಕರ ಭವನಕ್ಕೆ ಹೊಂದಿಕೊಂಡಿದೆ.ಅಲ್ಲಿಯ ಕಾಂಪೌಂಡ್ ಗೋಡೆ ಕಡಿಮೆ ಎತ್ತರದ್ದು. ಅಲ್ಲದೆ ರಾಜಭವನ ಮತ್ತು ಶಾಸಕರ ಭವನದ ನಡುವೆ ಒಂದು ಕಳ್ಳಗಿಂಡಿ ಇತ್ತು. ಇದು ಹಲವು ವರ್ಷಗಳ ಕಾಲ ಶಾಸಕರ ಭವನದ ನಿವಾಸಿಯಾಗಿದ್ದ ನನಗೆ ಚೆನ್ನಾಗಿ ಗೊತ್ತಿದ್ದ ವಿಷಯ. ಎರಡು ತಂಡಗಳು ಈ ಕಡೆಯಿಂದ ರಾಜಭವನದೊಳಕ್ಕೆ ಹಾರುವುದು ಹೀಗೆ ರಾಜಭವನವನ್ನು ಮುತ್ತಿಗೆ ಹಾಕುವುದು ಕೇವಲ ಸಾಂಕೇತಿಕವಲ್ಲ , ನಿಜವಾದ ಮುತ್ತಿಗೆಯಾಗುವಂತೆ ಮಾಡುವುದು ಎಂದು ಯೋಜಿಸಿದೆವು.
ಇದರ ಪರಿಣಾಮ ಬಹಳ ದೊಡ್ಡದಾಯಿತು.
ಪೋಲಿಸರು ದಡಬಡನೆ ಧಾವಿಸಿದರು. ಪತ್ರಿಕಾ ವರದಿಗಾರರು ಕೂಡಾ. ಬೆಳಗ್ಗೆ ದೊಡ್ಡ ವರದಿಗಳು. ರಾಜ್ಯಪಾಲರು ಕೆಂಡಾಮಂಡಲವಾಗಿ ಒಬ್ಬ ಡಿಸಿಪಿ , ಎಸಿಪಿಗಳ ವರ್ಗಾವಣೆ , ರಾಜ ಭವನದ ಗೇಟುಗಳನ್ನು ಎಲ್ಲ ಕಡೆಯ ಕಾಂಪೌಡ್ ಎತ್ತರಿಸಿದ್ದು, , ಯಾವಾಗಲೂ ರಾಜಭವನದ ಮುಂದೆ ಒಂದು ರಿಸರ್ವ್ ಪೋಲೀಸ್ ವ್ಯಾನ್ ಖಾಯಂ ಹೀಗೆ .
ಮತ್ತೂ ಒಂದು ಆ ಕಾಲದ ನೆನಪು ಎಂದರೆ ಗ್ಯಾಟ್ ವಿರುದ್ಧ ರಾಜ್ಯಾದ್ಯಂತ ಜೈಲು ಭರೋ ಕಾರ್ಯಕ್ರಮ.ಅಂದರೆ ನಿಜವಾದ ಜೈಲು ಭರೋ. ಆಗ ಶ್ರೀನಿವಾಸ ಅದನ್ನು ಹದಿನೈದು ದಿನಗಳ ಕಾಲದ intensive ಅಧ್ಯಯನ ಶಿಬಿರವಾಗಲು ಬಯಸಿದರು.ನಾನು ಬೆಂಗಳೂರಿನ ತಂಡದೊಂದಿಗೆ ಭಾಗವಹಿಸಿ ಜೈಲಿನೊಳಗೆ ಬರಲು ವಿನಂತಿಸಿದರು. ಆದರೆ ಪಕ್ಷದ ತೀರ್ಮಾನ ನಾನು ಬೇರೆಡೆ ಕೃಷಿ ಕೂಲಿಕಾರರಿಗೆ ನೇತೃತ್ವ ಕೊಡಬೇಕೆಂದಾಯಿತು. ಆದ್ದರಿಂದ ನಾನು ಅವರೊಡನೆ ಬೆಂಗಳೂರು ಸೆಂಟ್ರಲ್ ಜೈಲು ಸೇರುವುದಾಗಲಿಲ್ಲ. ಆದರೆ ಜೈಲಿನೊಳಗಿನ ಅಧ್ಯಯನ ಶಿಬಿರದ ಯೋಜನೆಗೆ ನೆರವಾಗಲು ಮರುದಿನ ಬೆಂಗಳೂರಿಗೆ ಬಂದೆ.ಜೈಲು ಅಧಿಕಾರಿಗಳಿಗೆ ವಿನಂತಿಸಿ ಎಲ್ಲರನ್ನೂ ಒಮ್ಮೆಗೇ ಬೇಟಿಯಾಗಲು ವಿನಂತಿಸಿ ಒಳಗೆ ಹೋದೆ. ಮೂರು ಗಂಟೆಗಳ ಕಾಲ ಗ್ಯಾಟ್ , ಜಾಗತೀಕರಣದ ಬಗೆಗಿನ ವಿವರಗಳ ಬಗ್ಗೆ ಉಪನ್ಯಾಸ ನೀಡಿದೆ. ಹೀಗೇ ಮೂರು ದಿನ ಭಾರತದ ಬಂಡವಾಳ ಶಾಹಿ ಬೆಳವಣಿಗೆಯ ಬಗ್ಗೆ, ಬ್ರಿಟಿಷ್ ಬಂಡವಾಳಶಾಹಿಯ ವಿರುದ್ಧ ಸೆಣಸಿದ ಭಾರತದ ಬಂಡವಾಳಗಾರರು ಜಾಗತಿಕರಣ ಪರ ಬಂಡವಾಳಶಾಹಿಯ ಅಮೆರಿಕ ಬಾಲಂಗೋಚಿಗಳಾಗಿ ಪರಿವರ್ತಿತರಾಗಿರುವ ಬಗ್ಗೆ ಉಪನ್ಯಾಸ ನೀಡಿದೆ.ಅದನ್ನು ಮತ್ತಷ್ಟು ಮುಂದುವರೆಸಲು ಜೈಲು ಅಧಿಕಾರಿಗಳು ಬಿಡಲಿಲ್ಲ. ಆದ್ದರಿಂದ ಐದು ದಿನಗಳ ನಂತರ ಬೇಲ್ ಪಡೆದು ಶ್ರೀನಿವಾಸ್ ಮತ್ತು ಬೆಂಗಳೂರಿನ ಸಂಗಾತಿಗಳು ಹೊರ ಬಂದರು.
ಪಕ್ಷದ ಸಂಗಾತಿಗಳಿಗೆ ಶಿಕ್ಷಣದ ಪ್ರಾಮುಖ್ಯತೆ ಶ್ರೀನಿವಾಸ್ರವರಿಗೆ ಬಹಳ ಚೆನ್ನಾಗಿ ಅರಿವಿತ್ತು.
ಆದ್ದರಿಂದ ಅವರು ತಿಂಗಳಿಗೊಂದು ಭಾನುವಾರದ ಅಧ್ಯಯನ ದಿನದ ಪರಿಪಾಠ ಪ್ರಾರಂಭಿಸಿದರು. ಈ ಮಾಲೆಯಲ್ಲಿ ಏಳು ತತ್ವಶಾಸ್ತ್ರದ ಉಪನ್ಯಾಸಗಳನ್ನು ನೀಡಿದೆ ವಿಶ್ವದ ತತ್ವಶಾಸ್ತ್ರ, ಮಾರ್ಕ್ಸ್ವಾದಿ ತತ್ವಶಾಸ್ತ್ರದ ಬಗ್ಗೆ ಮೊದಲಿನ ಉಪನ್ಯಾಸ ನೀಡಿದೆ. ಆದರೆ ಭಾರತದ ಸಾಮಾನ್ಯ ಜನರಲ್ಲಿ ಬೇರೂರಿದ ನಂಬಿಕೆ, ವಿಚಾರಗಳಿಗೆ ಎದುರಾಗದೆ ಈ ತತ್ವಶಾಸ್ತ್ರದ ಅರಿವು ಮೂಡುವುದಿಲ್ಲ ಎಂದು ಅರಿವಾಗಿ ಭಾರತದ ತತ್ವಶಾಸ್ತ್ರದ ವೇದ, ಉಒನಿಷತ್ತುಗಳು, ಷಡ್ದರ್ಶನಗಳು, ವಚನ ಚಳುವಳಿಯ ಬಗೆಗೆ ಉಪನ್ಯಾಸಗಳನ್ನು ನೀಡಿದೆ. ಏಳು ತಿಂಗಳು ನಡೆದು ಇದು ನಿಂತು ಹೋಯಿತಿ. ರಾಜಕೀಯ ಅರ್ಥಶಾಸ್ತ್ರ, ಸಮಾಜವಾದಿ ಕ್ರಾಂತಿಗಳ ಬಗ್ಗೆ ಯೋಜಿಸಿದ್ದ ಉಪನ್ಯಾಸಗಳನ್ನು ಮುಂದುವರೆಸಲಾಗಲಿಲ್ಲ.
ಹೀಗೆ ಕಾಂ. ಶ್ರೀನಿವಾಸರೊಡನೆ ಹಲವು ಆಯಾಮಗಳ ಒಡನಾಟ ನನಗೆ.
ಬೆಂಗಳೂರಿನಲ್ಲಿ ಅತ್ಯಂತ ದೊಡ್ಡದಾಗಿ ಬೆಳೆಯುತ್ತಿದ್ದ ಮತ್ತು ಅತ್ಯಂತ ಹೆಚ್ಚು ಶೋಷಣೆಗೆ ತುತ್ತಾಗಿದ್ದ ಗಾರ್ಮೆಂಟ್ ಮಹಿಳಾ ಕಾರ್ಮಿಕರನ್ನು ಹತ್ತಾರು ಸಾವಿರಗಟ್ಟಲೆ ಸಂಘಟಿಸಿದ ಮತ್ತು ಹೋರಾಟಕ್ಕಿಳಿಸಿದ ವಿಧಾನ ಒಂದು ಮಾದರಿ. ಈ ಹೋರಾಟಗಳ ಪ್ರಭಾವದಿಂದ ಜೊತೆಗೇ ಬೆಂಗಳೂರಿನ ಸುತ್ತ ಬೆಳೆಯುತ್ತಿದ್ದ ಬಿಪಿಎಲ್ ಎಂಬ ಎಲೆಕ್ಟ್ರಾನಿಕ್ ಉದ್ದಿಮೆಯ ಕಾರ್ಮಿಕರು ಸಿಐಟಿಯುನತ್ತ ಆಕರ್ಷಿತರಾದರು. ಕಾರ್ಮಿಕರಿಗೆ ಸಂಘ ಕಟ್ಟುವುದಕ್ಕೆ ಅವಕಾಶವನ್ನೇ ಕೊಡೆನೆಂಬ ಬಿಪಿಎಲ್ ಮಾಲೀಕರ ದುರ್ಲಾಭಕೋರ ನೀತಿಯನ್ನು ಬೇಧಿಸಿ ಅದರ ಹಲವು ಘಟಕಗಳ ಕಾರ್ಮಿಕರನ್ನು ಏಕಕಾಲಕ್ಕೆ ಸಂಘಟಿಸಿದ ಪರಿಯೂ ಕೂಡಾ ಅವರ ಸಂಘಟನಾ ಚಾತುರ್ಯಕ್ಕೆ ಒಂದು ಮಾದರಿ.
ಈ ಹೋರಾಟ ಗಾರ್ಮೆಂಟ್,ಎಲೆಕ್ಟ್ರಾನಿಕ್ ಉದ್ಯಮದ ದೊಡ್ಡ ಮಾಲೀಕರನ್ನು ಮಾತ್ರವಲ್ಲ ಅವರ ನೆರೆಯ ಕೈಗಾರಿಕೆಗಳ ಮಾಲೀಕರನ್ನು ಕಂಗೆಡಿಸಿತು.ಅವರು ಮತ್ತು ಅಂದಿನ ಕರ್ನಾಟಕ ಸರ್ಕಾರ ಹೇಗಾದರೂ ಸಿಐಟಿಯು ಮತ್ತು ಕಾಂ. ಶ್ರೀನಿವಾಸರನ್ನು ಹತ್ತಿಕ್ಕಲು ಯೋಜನೆ ಹಾಕಿದರು.
ಆ ಸಮಯದಲ್ಲಿ ನಡೆದ ದುರ್ಘಟನೆಯ ಸಂದರ್ಭದಲ್ಲಿ ಮಾಲಿಕ ವರ್ಗ ಮತ್ತು ಸರ್ಕಾರ ಸಂಚು ಹೂಡಿ ಅವರನ್ನು ಜೀವಾವಧಿ ಜೈಲಿಗೆ ಹಾಕಿತು. ನ್ಯಾಯಾಲಯವೂ ಕೂಡಾ ಮಾಲೀಕರೊಡನೆ ಸಹಕರಿಸಿದ್ದು ನಮಗೆಲ್ಲಾ ಪ್ರಭುತ್ವದ ಸ್ವರೂಪದ ಬಗ್ಗೆ ಅರಿವು ಮೂಡಿಸಲು ನೆರವಾಗಬೇಕು.
ಜೈಲಿನಲ್ಲೂ ಸುಮ್ಮನಿರುವವರಲ್ಲ ಕಾಂ ಶ್ರೀನಿವಾಸ್. ಅಲ್ಲಿಯೂ ಅನ್ಯಾಯವಾಗಿ ಜೈಲು ಸೇರಿದ್ದ ಜೈಲುವಾಸಿಗಳನ್ನು ಸಂಘಟಿಸಿದರು. ಜೈಲುವಾಸಿಗಳ ಸಂಘದ ಅಧ್ಯಕ್ಷರಾಗಿದ್ದರು. ಅವರ ಎರಡು ರಾಜ್ಯವ್ಯಾಪಿ ಉಪವಾಸ ಮುಷ್ಕರ ಸಂಘಟಿಸಿದರು.
ಕ್ಷಮಾದಾನದ ಮೇಲೆ ಖೈದಿಗಳ ಬಿಡುಗಡೆಗಾಗಿ ನಿರಂತರ ಪ್ರಯತ್ನ ನಡೆಸಿ ಹಲವರನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾದರು. ಜೈಲಿನಲ್ಲೂ ತಮಗೆ ಸಾಧ್ಯವಾದುದನ್ನೆಲ್ಲಾ ಅಧ್ಯಯನ ಮಾಡಿದರು.
ಜೈಲಿನಿಂದ ಅವಧಿ ಮುಗಿದು ಬಿಡುಗಡೆಯಾದ ಮೇಲೂ ಪಕ್ಷದ ಜಿಲ್ಲಾ ಕಾರ್ಯದರ್ಶಿ, ರಾಜ್ಯ ಸಮಿತಿ ಸದಸ್ಯರಾಗಿ ದುಡಿದರು.
ಇವುಗಳನ್ನೆಲ್ಲಾ ನೆನಸಿಕೊಳ್ಳುತ್ತಾ ಕಣ್ತುಂಬಿ ಬರುತ್ತಿದೆ.
ಅವರಿಗೆ ನನ್ನ ಹೃದಯಪೂರ್ವಕ, ಕಣ್ತುಂಬಿದ ನಮನಗಳು.
ಲಾಲ್ ಸಲಾಮ್ ಕಾಮ್ರೇಡ್.
ಲಾಲ್ ಸಲಾಂ ಕಾಮರೇಡ್
ಲಾಲ್ ಸಲಾಂ