ಪೌರತ್ವದ ಎಲ್ಲಾ ಸಂವಿಧಾನಿಕ ಮೂಲಾಂಶಗಳನ್ನು ಉಲ್ಲಂಘಿಸುವ ಮಸೂದೆ

ಪೌರತ್ವ (ತಿದ್ದುಪಡಿ) ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು-ಸಿಪಿಐ(ಎಂ)

ಕೇಂದ್ರ ಸಚಿವ ಸಂಪುಟ ಡಿಸೆಂಬರ್ ೪ ರಂದು ಪೌರತ್ವ (ತಿದ್ದುಪಡಿ) ಮಸೂದೆಗೆ ಮಂಜೂರಾತಿ ನೀಡಿದೆ ಎಂದು ವರದಿಯಾಗಿದೆ. ಇದರ ಕರಡನ್ನು ಮೊದಲಿಗೆ ೨೦೧೬ರಲ್ಲಿ ತರಲಾಗಿತ್ತು. ಆಗ ಸರಕಾರ ಇದನ್ನು ಸಂಸತ್ತಿನ ಎರಡೂ ಸದನಗಳ ಒಂದು ಜಂಟಿ ಆಯ್ಕೆ ಸಮಿತಿಗೆ ಪರಾಮರ್ಶೆಗೆ ಒಪ್ಪಿಸಬೇಕಾಗಿ ಬಂದಿತ್ತು. ಸಿಪಿಐ(ಎಂ) ಒಂದು ಭಿನ್ನಮತದ ಟಿಪ್ಪಣಿಯನ್ನು ಸಮಿತಿಗೆ ಕೊಟ್ಟಿದೆ.

ಆಗ ಲೋಕಸಭಾ ಸದಸ್ಯರಾಗಿದ್ದ ಮಹಮ್ಮದ್ ಸಲೀಂ ಜನವರಿ ೩, ೨೦೧೯ರಂದು ಸಲ್ಲಿಸಿದ ಈ ಟಿಪ್ಪಣಿಯ ಮುಖ್ಯಾಂಶಗಳೆಂದರೆ:

  • ಈಮಸೂದೆಯನ್ನುಹಿಂತೆಗೆದುಕೊಳ್ಳಬೇಕು.
  • ಈ ಮಸೂದೆ ಭಾರತೀಯ ಸಂವಿಧಾನದ ಮೂಲಭೂತ ಅಂಶಗಳನ್ನು ಉಲ್ಲಂಘಿಸುತ್ತಿದೆ.
  • ಸಂವಿಧಾನದ ಪೀಠಿಕೆ, ಪೌರತ್ವದ ಬಗ್ಗೆ ಹೇಳಿರುವ ಅಂಶಗಳು(ಕಲಮು ೫ರಿಂದ ೧೧) ಮತ್ತು ಮೂಲಭೂತ ಹಕ್ಕುಗಳು ಲಿಂಗ, ಜಾತಿ, ಮತ, ವರ್ಗ, ಸಮುದಾಯ ಅಥವ ಭಾಷೆಯ ಭೇದ-ಭಾವವಿಲ್ಲದ ಸಮಾನತೆಯ ಮೂಲ ಅಂಶಗಳನ್ನು ಒತ್ತಿ ಹೇಳಿವೆ. ಈ ಮಸೂದೆ ಅವೆಲ್ಲವನ್ನೂ ಉಲ್ಲಂಘಿಸುತ್ತದೆ.
  • ಈ ಮಸೂದೆ ಕೇವಲ ಶಾಸನದಲ್ಲಿನ ಬದಲಾವಣೆಯಷ್ಟೇ ಅಲ್ಲ, ಭಾರತೀಯ ಗಣತಂತ್ರದ ಚಾರಿತ್ರ್ಯವನ್ನೇ ಮೂಲಭೂತವಾಗಿ ಬದಲಿಸುವ ಒಂದು ಕಾನೂನು.

ಭಾರತದ ಬುನಾದಿಯನ್ನು ಹಾಳುಗೆಡಹುವ ಉದ್ದೇಶ ಈ ಮಸೂದೆಯದ್ದು- ಯೆಚುರಿ

“ಇದು ಸರಳ ಸಂಗತಿ. ಪೌರತ್ವವನ್ನು ಧರ್ಮದ ಆಧಾರದಲ್ಲಿ ನಿರ್ಧರಿಸುವುದು, ಅಥವ ಅದರೊಂದಿಗೆ ತಳುಕು ಹಾಕುವುದು ಸಾಧ್ಯವಿಲ್ಲ. ಇದೇ ಈ ಮಸೂದೆಯನ್ನು ಅಸ್ವೀಕಾರಾರ್ಹ ಮತ್ತು ಅಸಂವಿಧಾನಿಕಗೊಳಿಸಿದೆ. ಭಾರತದ ಬುನಾದಿಯನ್ನು ಹಾಳುಗೆಡಹುವ ಉದ್ದೇಶ ಈ ಮಸೂದೆಯದ್ದು” ಎಂದುಈ ಕುರಿತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಂ ಯೆಚುರಿ ಟಿಪ್ಪಣಿ ಮಾಡಿದ್ದಾರೆ.

“ಭಾರತದ ಪೌರರು, ಅವರು ಯಾವುದೇ ನಂಬಿಕೆಯನ್ನು ಅನುಸರಿಸುತ್ತಿರಲಿ, ಅಥವ ಅನುಸರಿಸದಿರಲಿ, ಏನೆ ತಿನ್ನಲಿ, ಯಾವುದೇ ಕೆಲಸ ಮಾಡುತ್ತಿರಲಿ,  ಅವರ ಜಾತಿ,ಮತ, ನಿವಾಸ ಸ್ಥಳ, ಲಿಂಗ ಅಥವ ಮೈಬಣ್ಣ ಯಾವುದೇ ಇರಲಿ, ಎಲ್ಲರೂ ಭಾರತೀಯ ಪೌರರೇ. ಪೌರತ್ವ ತಿದ್ದುಪಡಿ ಮಸೂದೆ ಬೇಡ” ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *