ದಿಲ್ಲಿ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆಯೇ ನಡೆಯಬೇಕು- ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ
ದೇಶದ ರಾಜಧಾನಿಯ ಕಾನೂನು ಮತ್ತು ವ್ಯವಸ್ಥೆಯ ಹೊಣೆಯಿರುವ ಕೇಂದ್ರ ಸರಕಾರ ಕೋಮುವಾದಿ ಹಿಂಸಾಚಾರವನ್ನು ನಿಭಾಯಿಸುತ್ತಿರುವ ರೀತಿಯ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ತನ್ನ ಬಲವಾದ ಅಸಮ್ಮತಿಯನ್ನು ವ್ಯಕ್ತಪಡಿಸಿದೆ.
ನಿರ್ದಿಷ್ಟವಾಗಿ, ಕೋಮುವಾದಿ ಹಿಂಸಾಚಾರದ ತನಿಖೆಗೆ ನೇಮಿಸಿದ ಎರಡು ವಿಶೇಷ ತನಿಖಾ ತಂಡದ ಸಂಯೋಜನೆಯನ್ನು ಗಮನಿಸುತ್ತ ಪೊಲಿಟ್‌ಬ್ಯುರೊ, ಈ ಎರಡೂ ತಂಡಗಳ ನೇತೃತ್ವ ನೀಡಲಾಗಿರುವ ಡೆಪ್ಯುಟಿ ಕಮಿಶನರ್ ಹುದ್ದೆಯ ಅಧಿಕಾರಿಗಳು ಶಾಹೀನ್ ಬಾಗ್, ಜೆಎನ್‌ಯು ಮತ್ತು ಜಾಮಿಯ ಹಿಂಸಾಚಾರಗಳನ್ನು ನಿಭಾಯಿಸುವಲ್ಲಿ ವಹಿಸಿರುವ ಪಾತ್ರದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ ಎಂದು ನೆನಪಿಸಿದೆ. ಇವರಲ್ಲಿ ಒಬ್ಬರಂತೂ ಚುನಾವಣಾ ಆಯೋಗದ ಟೀಕೆಗೂ ಒಳಗಾಗಿರುವವರು.
ಹಿಂಸಾಚಾರವನ್ನು ಮುಂದಾಗಿ ತಡೆಯುವಲ್ಲಿ ದಿಲ್ಲಿ ಪೋಲೀಸ್ ನ ಪಾತ್ರದ ಮುಂದೆ ಹಲವು ಪ್ರಶ್ನೆ ಚಿಹ್ನೆಗಳಿವೆ. ಈ ಹಿಂಸಾಚಾರದಲ್ಲಿ ಇದುವರೆಗೆ ೩೮ ಮಂದಿಯ ಪ್ರಾಣ ಹೋಗಿವೆ. ನೂರಾರು ಜನ ಗಾಯಗೊಂಡಿದ್ದಾರೆ ಮತ್ತು ಸಾವಿರಾರು ಮಂದಿ ಮನೆಮಾರು ಮತ್ತು ಜೀವನಾಧಾರಗಳನ್ನು ಕಳಕೊಂಡಿದ್ದಾರೆ. ಈಗ ಈ ಹಿಂಸಾಚಾರ ಎಸಗಿದವರ ಕೃತ್ಯಗಳನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ.
ರಾಷ್ಟ್ರಿಯ ಭದ್ರತಾ ಸಲಹೆಗಾರ ಅಜಿತ್ ದೊವಾಲ್ ಹಿಂಸಾಚಾರವನ್ನು ಎದುರಿಸಬೇಕಾಗಿ ಬಂದವರೊಡನೆ ಮಾತಾಡುತ್ತ “ಆದದ್ದು ಆಗಿ ಹೋಯಿತು”(ಜೋ ಹುವಾ ಸೋ ಹುವಾ) ಎಂಬ ಆಘಾತಕಾರೀ ಹೇಳಿಕೆಯನ್ನು ಕೊಟ್ಟಿದ್ದಾರೆ. ದಿಲ್ಲಿ ಹೈಕೋರ್ಟಿನಲ್ಲಾದ ಅಸಭ್ಯ ಬೆಳವಣಿಗೆಯಗಳಲ್ಲೂ ಇದೇ ನಿಲುವು ಕಾಣ ಬಂದಿದೆ. ಅಲ್ಲಿ ದಿಲ್ಲಿ ಪೋಲೀಸರು ಕೋಮುವಾದಿ ಧ್ರುವೀಕರಣವನ್ನು ಪ್ರಚೋದಿಸಿದ ಸಾರ್ವಜನಿಕ ಭಾಷಣಗಳನ್ನು ಕೊಟ್ಟವರನ್ನು ತಪ್ಪಿತಸ್ಥರು ಎಂದು ಗುರುತಿಸಲೂ ಮುಲಾಜಿಲ್ಲದೆ ನಿರಾಕರಿಸಿದ್ದಾರೆ.
ಜನಗಳ ನಡುವೆ, ಹಿಂಸಾಚಾರದ ನಂತರದ ಮನೋಘಾತವನ್ನು ಎದುರಿಸಬೇಕಾದ ಈಶಾನ್ಯ ದಿಲ್ಲಿಯ ಜನಗಳು ಮತ್ತು ಅಭದ್ರತೆಯ ಭಾವ ಕಾಡುತ್ತಿರುವ ಇತರೆಡೆಗಳಲ್ಲಿನ ಜನಗಳ ನಡುವೆ ವಿಶ್ವಾಸವನ್ನು ಮೂಡಿಸುವುದು ಈಗಿನ ಅಗತ್ಯ ಎಂದು ತಾನು ಭಾವಿಸುವುದಾಗಿ ಹೇಳಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ, ಇದನ್ನು ಮಾಡುವ ಬದಲು, ತಥಾಕಥಿತ ತನಿಖೆಯನ್ನು ಹಿಂಸಾಚಾರಗಳನ್ನು ನಡೆಸಿದವರ ಕೃತ್ಯಗಳನ್ನು ಮುಚ್ಚಿ ಹಾಕಲು ಹಾಗೂ ಆಯ್ದಾಯ್ದು ‘ಕ್ಲೀನ್ ಚಿಟ್’ ಗಳನ್ನು ಕೊಡಲು ಬಳಸಿಕೊಂಡರೆ ಇದು ಕಂದರವನ್ನು ಮತ್ತಷ್ಟು ಆಳಗೊಳಿಸುತ್ತದಲ್ಲದೇ ಖಂಡಿತಾ ಬೇರೇನೂ ಮಾಡಲಾರದು ಎಂದು ಎಚ್ಚರಿಸಿದೆ.
ಆದ್ದರಿಂದ, ಕೇಂದ್ರ ಸರಕಾರ, ದಿಲ್ಲಿ ಪೋಲೀಸರ ಪಾತ್ರದ ಮೇಲೆ ಭಾರೀ ಕರಿಮೋಡಗಳು ಕವಿದಿರುವಾಗ, ಸರ್ವತೋಮುಖ ವಿಶ್ವಾಸವನ್ನು ಮತ್ತೆ ನೆಲೆಗೊಳಿಸುವಲ್ಲಿ ಪಕ್ಷಪಾತದ ನಿಲುವಿನ ಬಗ್ಗೆ ಸಂದೇಹಗಳನ್ನು ನಿವಾರಿಸಬೇಕಾಗಿದೆ, ಅದಕ್ಕೆ ಸುಪ್ರಿಂ ಕೊರ್ಟಿನ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ, ಅಥವ ಸುಪ್ರಿಂ ಕೋರ್ಟಿನ ಉಸ್ತುವಾರಿಯ ತನಿಖೆಯನ್ನೇ ಮಾಡಬೇಕಾದ್ದು ಅನಿವಾರ್ಯವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹಿಸಿದೆ.