ಮೋದಿ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿರುವದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ.
ಅಂತರ್ರಾಷ್ಟ್ರೀಯ ಕಚ್ಚಾತೈಲ ಬೆಲೆಗಳು ತೀವ್ರವಾಗಿ ಬೀಳುತ್ತಿರುವಾಗ, ನರೇಂದ್ರ ಮೋದಿ ಸರಕಾರ ತನ್ನ ಸ್ವಭಾವಕ್ಕೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕಗಳನ್ನು ಏರಿಸಿದೆ. ಇದು ಆಗಲೇ ಆರ್ಥಿಕ ಹಿಂಜರಿತದ ಅಡಿಯಲ್ಲಿ ನರಳುತ್ತಿರುವ ಜನಗಳ ಮೆಲೆ ಒಂದು ಕ್ರಿಮಿನಲ್ ಏಟು ಎಂದು ಪೊಲಿಟ್ ಬ್ಯುರೊ ವರ್ಣಿಸಿದೆ.
ಪೆಟ್ರೋಲ್ ಮೇಲಿನ ವಿಶೇಷ ಅಬಕಾರಿ ಸುಂಕವನ್ನು ಲೀಟರಿಗೆ 2ರೂ.ಗಳಷ್ಟು ಹೆಚ್ಚಿಸಿ ಲೀಟರಿಗೆ 8ರೂ. ಮಾಡಲಾಗಿದೆ ಮತ್ತು ಡೀಸೆಲ್ ಗೆ ೪ರೂ. ಮಾಡಲಾಗಿದೆ. ಪ್ರತಿ ಲೀಟರ್ ಪೆಟ್ರೋಲ್ಗೆ ಅಬಕಾರಿ ಸುಂಕ ರೂ.22.98 ಆಗುತ್ತದೆ, ಮತ್ತು ಡೀಸೆಲ್ ಗೆ ರೂ.18.83ಆಗುತ್ತದೆ. ಇದರೊಂದಿಗೇ, ರಸ್ತೆ ಕರವನ್ನು ಲೀಟರಿಗೆ 1 ರೂ. ಹೆಚ್ಚಿಸಿ 10ರೂ. ಮಾಡಲಾಗಿದೆ.
ಆಡಳಿತಾತ್ಮಕ ಬೆಲೆ ನಿಗದಿ ವ್ಯವಸ್ಥೆ(ಎಪಿಎಂ)ಯನ್ನು ಕಳಚಿ ಹಾಕುವಾಗ ಕಚ್ಚಾತೈಲಗಳಲ್ಲಿ ಇಳಿಕೆಯ ಪ್ರಯೋಜನವನ್ನು ಬಳಕೆದಾರರಿಗೆ ವರ್ಗಾಯಿಸಲಾಗುವುದು ಎಂದು ಹೇಳಲಾಗಿತ್ತು. ತದ್ವಿರುದ್ಧವಾಗಿ, 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ಪೆಟ್ರೋಲ್ ಮೇಲಿನ ಸುಂಕಗಳನ್ನು 142ಶೇ.ದಷ್ಟು ಮತ್ತು ಡೀಸೆಲ್ ಮೇಲಿನ ಸುಂಕಗಳನ್ನು 429 ಶೇ.ದಷ್ಟು ಹೆಚ್ಚಿಸಲಾಗಿದೆ. ಆರ್ಥಿಕ ವ್ಯವಸ್ಥೆ ಒಂದು ಹಿಂಜರಿತವನ್ನು ಎದುರಿಸುತ್ತಿರುವಾಗ, ಕೊರೊನ ವ್ಯಾಧಿ ವ್ಯಾಪಕವಾಗಿ ಹರಡುವ ಭೀತಿ ಒಂದು ಬೃಹತ್ ಆರೋಗ್ಯ ಕಾಳಜಿಯಾಗಿ ಇದನ್ನು ಉಲ್ಬಣಗೊಳಿಸುತ್ತಿರುವಾಗ, ಅದಾಗಲೇ ವಿಪರೀತ ಹೊರೆಯಿಂದ ಪೀಡಿತರಾಗಿರುವ ಬಳಕೆದಾರರಿಗೆ ಬೆಲೆಗಳ ಇಳಿಕೆಯ ಪ್ರಯೋಜನವನ್ನು ತಲುಪಿಸಬೇಕಾಗಿತ್ತು.
ಆದರೆ ಜನಸಾಮಾನ್ಯರ ಕಾಳಜಿಗಳ ಪರಿವೆಯೇ ಇಲ್ಲದ, ಕಾರ್ಪೊರೇಟ್ಗಳು ಮತ್ತು ಅವರ ಬಂಟರ ಹಿತಗಳಿಗೆ ಪ್ರೋತ್ಸಾಹ ನೀಡುವುದರಲ್ಲೇ ಹೆಚ್ಚು ಕಾಳಜಿ ತೋರಿಸುತ್ತಿರುವ ಒಂದು ಸರಕಾರದಿಂದ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ವ್ಯಂಗ್ಯವಾಡಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕಗಳ ಈ ಕ್ರಿಮಿನಲ್ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು, ಚಿಲ್ಲರೆ ದರಗಳನ್ನು ಅಂತರ್ರಾಷ್ಟ್ರೀಯ ಬೆಲೆಗಳಲ್ಲಿ ಇಳಿಕೆಯ ಮಟ್ಟಕ್ಕೆ, ಅಂದರೆ 30ಶೇ.ದಷ್ಟು ಇಳಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಕರೆ ನೀಡಿದೆ.