ಮೋದಿ ಸರಕಾರ ಇತ್ತೀಚೆಗೆ ನಿವೃತ್ತರಾದ ಭಾರತದ ಮುಖ್ಯ ನ್ಯಾಯಾಧೀಶ ಶ್ರೀ ರಂಜನ್ ಗೊಗೊಯ್ ರವರನ್ನು ರಾಜ್ಯಸಭೆಯ ಸದಸ್ಯರಾಗಿ ನಾಮಕರಣ ಮಾಡಿರುವುದಕ್ಕೆ ಸಿಪಿಐ(ಎಂ) ಪೊಲಿಟ್ಬ್ಯುರೊ ಧೃಢ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಈ ನಡೆಯ ಮೂಲಕ ಮೋದಿ ಸರಕಾರ ನ್ಯಾಯಾಂಗದ ಸ್ವಾತಂತ್ರ್ಯವನ್ನು ಯಾವುದೇ ನಾಚಿಕೆಯಿಲ್ಲದೆ ಶಿಥಿಲಗೊಳಿಸಿದೆ. ಪ್ರಭುತ್ವದ ಅಂಗಗಳ ಅಧಿಕಾರಗಳನ್ನು ಪ್ರತ್ಯೇಕಗೊಳಿಸಿರುವ ನಮ್ಮ ಸಂವಿಧಾನಿಕ ವ್ಯವಸ್ಥೆಯ ಅನುಲ್ಲಂಘನೀಯ ನೀತಿಯನ್ನು ಈ ಮೂಲಕ ಬುಡಮೇಲು ಮಾಡಲಾಗಿದೆ ಎಂದು ಅದು ಟೀಕಿಸಿದೆ.
ತಮಾಷೆಯೆಂದರೆ, ನಿವೃತ್ತಿಯ ನಂತರದ ನೇಮಕ ನ್ಯಾಯಾಂಗದ ಸ್ವಾತಂತ್ರ್ಯದ ಮೇಲೊಂದು ಕಪ್ಪುಚುಕ್ಕೆ ಎಂದು ಕಳೆದ ವರ್ಷವಷ್ಟೇ ಆಗ ದೇಶದ ಮುಖ್ಯ ನ್ಯಾಯಾಧೀಶರಾಗಿದ್ದ ಗೊಗೊಯ್ರವರೇ ಹೇಳಿದ್ದರು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ನೆನಪಿಸಿದೆ.
ಸಂವಿಧಾನಿಕ ವ್ಯವಸ್ಥೆಯಲ್ಲಿ, ಭಾರತದಲ್ಲಿ ನ್ಯಾಯಾಂಗ ಸ್ವತಂತ್ರವಾಗಿದೆ ಮಾತ್ರವಲ್ಲ, ನಮ್ಮ ಸಂವಿಧಾನದ ಅಡಿಯಲ್ಲಿ ಕಾನೂನಿನ ಆಳ್ವಿಕೆಯನ್ನು ಕಾಪಾಡುವಲ್ಲಿ ಅದಕ್ಕೆ ಒಂದು ಅತ್ಯಂತ ಮಹತ್ವದ ಪಾತ್ರವಿದೆ. ಇತ್ತೀಚೆಗೆ ನ್ಯಾಯ ನೀಡಿಕೆಯಲ್ಲಿ ವಿಳಂಬ, ಹೈಕೋರ್ಟ್ ನ್ಯಾಯಾಧೀಶರ ಮಧ್ಯರಾತ್ರಿ ವರ್ಗಾವಣೆಗಳು ಮತ್ತು ಕಲಮು 370 ರದ್ಧತಿ ಹಾಗೂ ಸಿಎಎ ಗೆ ಸವಾಲುಗಳನ್ನು ವಿಚಾರಣೆಗೆ ಎತ್ತಿಕೊಳ್ಳುವಲ್ಲಿ ವಿಳಂಬ ಜನಗಳಲ್ಲಿ ವಿಶ್ವಾಸವನ್ನು ಉಂಟುಮಾಡುತ್ತಿಲ್ಲ ಮತ್ತು ಇವೆಲ್ಲ ಜನಗಳ ಅತ್ಯುಚ್ಚ ನಿರೀಕ್ಷೆಗಳಿಗೆ ಅನುಗುಣವಾಗಿಲ್ಲ ಎಂದು ಈ ಮೊದಲೇ ಸಿಪಿಐ(ಎಂ) ಸ್ಪಷ್ಟವಾಗಿ ಹೇಳಿತ್ತು.
ಕಾರ್ಯಾಂಗವು ನ್ಯಾಯಾಂಗದ ಮೇಲೆ ಒತ್ತಡ ಹಾಕುತ್ತಿದೆ ಮತ್ತು ನ್ಯಾಯಾಂಗ ತನ್ನ ಹೊಣೆಗಾರಿಕೆಯನ್ನು ಬಿಟ್ಟುಕೊಟ್ಟಿದೆ ಎಂಬ ವ್ಯಾಪಕ ಟೀಕೆಗಳ ಹಿನ್ನೆಲೆಯಲ್ಲಿ ಸಿಪಿಐ(ಎಂ) ಸರಕಾರದ ಈ ನಡೆಯನ್ನು ದೃಢವಾಗಿ ವಿರೋಧಿಸುತ್ತದೆ ಎಂದಿರುವ ಪೊಲಿಟ್ಬ್ಯುರೊ ನಮ್ಮ ಸಂವಿಧಾನದ ಭಾವನೆಯ ಹಿತದೃಷ್ಟಿಯಿಂದ ಈ ಪ್ರವೃತ್ತಿಯನ್ನು ತುರ್ತಾಗಿ ಸರಿಪಡಿಸಬೇಕಾಗಿದೆ, ಆದ್ದರಿಂದ ಭಾರತದ ರಾಷ್ಟ್ರಪತಿಗಳು ಶ್ರೀ ಗೊಗೊಯ್ ಅವರ ನಾಮಕರಣವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದೆ.