ದೇಶ ಮಾರಕ ಕೊವಿದ್-19 ವೈರಸ್ ಹರಡದಂತೆ ತಡೆಗಟ್ಟಲು ಹೆಣಗುತ್ತಿರುವಾಗಲೇ, ಅದರ ಪ್ರತಿಕೂಲ ಆರ್ಥಿಕ ಪರಿಣಾಮಗಳು ಅದಾಗಲೇ ಬಹುದೊಡ್ಡ ಬಡ ಮತ್ತು ಅಂಚಿನಲ್ಲಿರುವ ಜನವಿಭಾಗಗಳ ಬದುಕುಗಳನ್ನು ಬಾಧಿಸಲಾರಂಭಿಸಿವೆ. ಹೊಟೇಲು, ಪ್ರವಾಸೋದ್ಯಮ, ಕಟ್ಟಡ ನಿರ್ಮಾಣ, ಸಾರಿಗೆ ಮುಂತಾದ ಆರ್ಥಿಕ ವ್ಯವಸ್ಥೆಯ ವಲಯಗಳಲ್ಲಿ ಚಟುವಟಿಕೆಗಳು ಸುಮಾರಾಗಿ ನಿಂತೇ ಹೋಗಿವೆ. ಇದು ದಿನಗೂಲಿಗಳು, ಅಂಸಂಘಟಿತ ಕಾರ್ಮಿಕರು, ರಸ್ತೆ ವ್ಯಾಪಾರಿಗಳು, ಸಣ್ಣ ಅಂಗಡಿಕಾರರು ಮತ್ತು ವಲಸೆ ಕಾರ್ಮಿಕರ ಆದಾಯಗಳಲ್ಲಿ ತೀವ್ರ ಕಡಿತ ತಂದಿದೆ.
ಇದು ಹಸಿವು, ಅಪೌಷ್ಟಿಕತೆಯ ಮೇಲೆ ನೇರ ದುಷ್ಪ್ರಭಾವ ಬೀರುತ್ತದೆ, ಆಮೂಲಕ ಜನಗಳ ರೋಗ ನಿರೋಧಕ ಸಾಮರ್ಥ್ಯವನ್ನು ಕುಂದಿಸುತ್ತದೆ. ಆದ್ದರಿಂದ ರಾಜ್ಯ ಸರಕಾರಗಳು ಅಸಂಘಟಿತ ಮತ್ತು ವಲಸೆ ಕಾರ್ಮಿಕರಿಗೆ ಪುಕ್ಕಟೆ ರೇಶನ್ ಒದಗಿಸುವ ಒಂದು ಕಾರ್ಯಕಕ್ರಮವನ್ನು ಆರಂಭಿಸಲು ಅನುವಾಗುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಹಾರಧಾನ್ಯಗಳನ್ನು ಪುಕ್ಕಟೆಯಾಗಿ ಪೂರೈಸುವುದು ಅಗತ್ಯವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಅಭಿಪ್ರಾಯ ಪಟ್ಟಿದೆ.
ಕೇಂದ್ರ ಸರಕಾರದ ಬಳಿ ಫೆಬ್ರುವರಿ ೧ರ ವೇಳೆಗೇ 7.5 ಕೋಟಿ ಟನ್ ಆಹಾರಧಾನ್ಯಗಳ ಅಪಾರ ದಾಸ್ತಾನು ಇದ್ದು, ಅವು ಗೋದಾಮುಗಳಲ್ಲಿ ಕೊಳೆಯುತ್ತಿವೆ ಎಂದು ವರದಿಯಾಗಿದೆ.
ಕೇಂದ್ರ ಮತ್ತು ರಾಜ್ಯಸರಕಾರಗಳು ಪುಕ್ಕಟೆ ರೇಶನ್‌ಗಳನ್ನು ಒದಗಿಸಿ ಬಡಕುಟುಂಬಗಳಿಗೆ ಅವರ ಪ್ರಸಕ್ತ ಕಷ್ಟಗಳನ್ನು ಎದುರಿಸುವಲ್ಲಿ ನೆರವಿಗೆ ಬಾರದಿದ್ದರೆ, ಅವರು ಕೋವಿದ್-19 ವೈರಸ್‌ಗಳಿಗೆ ತುತ್ತಾಗುವ ಸಂಭವ ಹೆಚ್ಚುತ್ತದೆ ಎಂದು ಎಚ್ಚರಿಸಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ದೇಶಾದ್ಯಂತ ಆಹಾರದ ತೀವ್ರ ಅಗತ್ಯವಿರುವ ಬಡಜನಗಳ ನಡುವೆ ವಿತರಣೆಗೆ ತನ್ನ ಅಪಾರ ದಾಸ್ತಾನಿನಿಂದ ಆಹಾರಧಾನ್ಯಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿಸಿದೆ.