ಇದು ಸಮುದಾಯ-ಹರಡಿಕೆಯನ್ನು ತಡೆಗಟ್ಟುವ ಗುರಿಯನ್ನು ವಿಫಲಗೊಳಿಸುತ್ತದೆ
ಮಾರ್ಚ್ 26ರಂದು, ಪ್ರಧಾನಮಂತ್ರಿಗಳ ಜನತಾ ಕರ್ಫ್ಯೂ ಕರೆಯ 6 ದಿನಗಳ ನಂತರ, 21 ದಿನಗಳ ಲಾಕ್‌ಡೌನ್ ನ 36 ಗಂಟೆಗಳ ನಂತರ, ಕೊನೆಗೂ ಮೋದಿ ಸರಕಾರದ ಹಣಕಾಸು ಮಂತ್ರಿಗಳು ಕೋವಿಡ್-19ರಿಂದ ಉಂಟಾಗಿರುವ ಪರಿಸ್ಥಿತಿಯನ್ನು ಎದುರಿಸಲೆಂದು ಒಂದು ಆರ್ಥಿಕ ಪ್ಯಾಕೇಜನ್ನು ಪ್ರಕಟಿಸಿದ್ದಾರೆ.
ಆದರೆ ಇದು ಸಮಸ್ಯೆಗಳ ಅಗಾಧತೆಯ ಎದುರು ಏನೇನೂ ಸಾಲದು, ಇದರಲ್ಲಿ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳುತ್ತಿರುವ ಪ್ರಮುಖ ಪ್ರಶ್ನೆಯೇ ಕಾಣೆಯಾಗಿರುವುದು 21 ದಿನಗಳ ದಿಗ್ಬಂಧನದ ಉದ್ದೇಶವನ್ನೇ ಸೋಲಿಸಿದೆ, ಏಕೆಂದರೆ ಸಾಗರದಂತೆ ಹರಿವ ದೊಡ್ಡ ಜನಜಂಗುಳಿ ಸೋಂಕು ಸಮುದಾಯದಲ್ಲಿ ಹರಡದಂತೆ ತಡೆಯವುದಕ್ಕೆ ಮಾರಕ. ಇದನ್ನು ತಕ್ಷಣವೇ ಸರಿಪಡಿಸಬೇಕು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿರವರು ಈ ಕುರಿತು ಒಂದು ಹೇಳಿಕೆ ನೀಡಿ ಆಗ್ರಹಿಸಿದ್ದಾರೆ.
ಆದ್ಯತೆ ಕೊಡಬೇಕಾದ್ದು ಮಾನವ ಜೀವಗಳನ್ನು ಉಳಿಸಲು ಮತ್ತು ಮಹಾಮಾರಿಯನ್ನು ಸೋಲಿಸಲು. ಈ ಪ್ಯಾಕೇಜ್ ಅದಕ್ಕೆ ಏನೇನೂ ಸಾಲದು, ಸರಕಾರ ತಕ್ಷಣವೇ ಬೇರೇನು ಮಾಡಬೇಕಾಗಿದೆ ಎಂದು ಯೆಚುರಿ ತಮ್ಮ ಹೇಳಿಕೆಯಲ್ಲಿ ಪಟ್ಟಿ ಮಾಡಿದ್ದಾರೆ.
ಅವರ ಹೇಳಿಕೆಯ ಪೂರ್ಣ ಪಾಠವನ್ನು ಈ ಮುಂದೆ ಕೊಡಲಾಗಿದೆ:
ಸೀತಾರಾಂ ಯೆಚುರಿ ಹೇಳಿಕೆ:
ಸಮಯ ವ್ಯರ್ಥಮಾಡುವಂತಿಲ್ಲ.
ಬದುಕುಗಳು ಮೂರಾಬಟ್ಟೆಯಾಗಿವೆ, ಏಕೆಂದರೆ, ಎರಡು ತಿಂಗಳ ಎಚ್ಚರಿಕೆ ಇದ್ದರೂ ಕೇಂದ್ರ ಸರಕಾರ ಯಾವುದೇ ಪೂರ್ವ ಯೋಜನೆ ಇಲ್ಲದೆ ಒಂದು ದಿಗ್ಬಂಧನವನ್ನು ಸಾರಿದೆ.
ಇದು ಹಣಕಾಸು-ಕೊರತೆಯ ಬಗ್ಗೆಯೇ ಯೋಚಿಸುತ್ತ ಕೂರುವ ಸಮಯವಲ್ಲ.
ಶ್ರೀಮಂತರ ರೂ.7.78 ಲಕ್ಷ ಕೋಟಿ ರೂ.ಗಳಷ್ಟು ಸಾಲಗಳನ್ನು ಮನ್ನಾ ಮಾಡಬಹುದಾದರೆ, ಸಂಪನ್ಮೂಲಗಳ ಕೊರತೆಯೇನೂ ಇಲ್ಲ ಎಂಬುದು ಸುಸ್ಪಷ್ಟ.
ಆದ್ಯತೆ ಕೊಡಬೇಕಾದ್ದು ಮಾನವ ಜೀವಗಳನ್ನು ಉಳಿಸಲು ಮತ್ತು ಮಹಾಮಾರಿಯನ್ನು ಸೋಲಿಸಲು.
ಇಂದು ಪ್ರಕಟಿಸಿರುವ ರೂ.1.75 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳುತ್ತಿರುವ ಪ್ರಮುಖ ಪ್ರಶ್ನೆ ಕಾಣೆಯಾಗಿದೆ. ನಾವು ಹಲವು ದೇಶಗಳಿಂದ ಭಾರತೀಯರನ್ನು ವಿಮಾನ ಮೂಲಕ ವಾಪಾಸು ಕರೆ ತಂದಿದ್ದೇವೆ;
ಖಂಡಿತವಾಗಿಯೂ ನಮ್ಮದೇ ಬಂಧುಗಳಿಗೆ ಅವರು ಸದ್ಯಕ್ಕೆ ಇದ್ದಲ್ಲೇ ಇರಲು ಅನ್ನ, ಸೂರುಗಳನ್ನು ಒದಗಿಸಬೇಕಾಗಿತ್ತು, ಇಲ್ಲವೇ ಅವರವರ ರಾಜ್ಯಗಳಿಗೆ ಕಳಿಸಲು ವ್ಯವಸ್ಥೆ ಮಾಡಬೇಕಿತ್ತು.
ಈ ವಿಫಲತೆ 21 ದಿನಗಳ ದಿಗ್ಬಂಧನದ ಉದ್ದೇಶವನ್ನೇ ಸೋಲಿಸಿದೆ, ಏಕೆಂದರೆ ಸಾಗರದಂತೆ ಹರಿವ ದೊಡ್ಡ ಜನಜಂಗುಳಿ ಸೋಂಕು ಸಮುದಾಯದಲ್ಲಿ ಹರಡದಂತೆ ತಡೆಯವುದಕ್ಕೆ ಮಾರಕ. ಇದನ್ನು ತಕ್ಷಣವೇ ಸರಿಪಡಿಸಬೇಕು.
ಆಹಾರಧಾನ್ಯಗಳನ್ನು ದ್ವಿಗುಣಗೊಳಿಸುವುದು, ಮೂರು ತಿಂಗಳಿಗೆ ಉಚಿತ ಅನಿಲ ಸಿಲಿಂಡರುಗಳು ಮುಂತಾದ ಕೆಲವು ಯೋಗ್ಯ ಪ್ರಸ್ತಾವಗಳು ಸರಕಾರ ಈಗ ಪ್ರಕಟಿಸಿರುವ ಪ್ಯಾಕೇಜಿನಲ್ಲಿ ಇವೆಯಾದರೂ, ಪ್ರತಿ ಕುಟುಂಬಕ್ಕೆ ಒಂದು ಕೆ.ಜಿ. ಬೇಳೇಕಾಳು ಏನೇನೂ ಸಾಲದು. ಕೋವಿಡ್-19ನ್ನು ಎದುರಿಸಲು ಬಹಳ ಮುಖ್ಯವಾದದ್ದು ಉತ್ತಮ ಪೋಷಕಾಂಶಗಳು. ಇದಿಲ್ಲದೆ ಉದ್ದೇಶ ಸಾಧನೆಯಾಗುವುದಿಲ್ಲ.
ವಯಸ್ಸಾದ ವಿಧವೆಯರಿಗೆ ಮತ್ತು ವಿಕಲಾಂಗರಿಗೆ ರೂ.1,000 ಕೊಡುವುದಾಗಿ ಹೇಳಿರುವುದು ಬಹಳ ಕಡಿಮೆಯಾಗುತ್ತದೆ. ಇವರೆಲ್ಲರಿಗೂ ತಮ್ಮ ಬದುಕು ಸಾಗಿಸಲು ನೆರವು ಬೇಕಾಗಿದೆ. 1,000ರೂ. ಎಷ್ಟು ಸಾಲುತ್ತದೆ?
ಆರೋಗ್ಯ ಕಾರ್ಯಕರ್ತರಿಗೆ ವಿಮೆಗೆ ಸರಕಾರವೇನೂ ವೆಚ್ಚ ಮಾಡುತ್ತಿಲ್ಲ. ಇದು ಖಾಸಗೀ ವಲಯವನ್ನು ಒಳಗೊಂಡಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇವರಿಗೆಲ್ಲ ತಕ್ಷಣವೇ ಬೇಕಾಗಿರುವುದು ಸುರಕ್ಷತಾ ಉಡುಗೆಗಳು, ಔಷಧಿಗಳು ಮತ್ತು ಸಾಕಷ್ಟು ತಪಾಸಣಾ ಸೌಲಭ್ಯಗಳು. ಇವುಗಳ ಪ್ರಸ್ತಾಪವೇ ಇಲ್ಲ.
ಸರಕಾರ ಪ್ರತಿ ರೈತನಿಗೆ ರೂ.2,000 ಕೊಡುವುದಾಗಿ ಪ್ರಕಟಿಸಿದೆ. ಆದರೆ ಇದು 2019ರ ಚುನಾವಣೆಗಳ ತುಸು ಮೊದಲು ಪ್ರಕಟಿಸಿದ್ದ ಪ್ರಧಾನ ಮಂತ್ರಿ-ಕಿಸಾನ್ ಯೋಜನಾ(ಪಿಎಂಕೆವೈ)ದಲ್ಲಿ ಸಿಗಬೇಕಾಗಿದ್ದ ಮೊದಲ ಕಂತು.
ಮಹಿಳೆಯರ ಜನಧನ ಖಾತೆಗೆ 500 ರೂ. ವರ್ಗಾವಣೆ ಏನೇನೂ ಸಾಲದು. ನಾವು ಎಲ್ಲ ಜನಧನ ಖಾತೆದಾರರಿಗೆ ಮತ್ತು ಬಿಪಿಎಲ್ ಕುಟುಂಬಗಳಿಗೆ ಮುಂದಿನ ಮೂರು ತಿಂಗಳು ಮಾಸಿಕ 5000 ರೂ. ವರ್ಗಾವಣೆ ಮಾಡಬೇಕು ಎಂದು ಕೇಳಿದ್ದೆವು.
ಕಾರ್ಮಿಕರಿಗೆ ಗಮನಾರ್ಹ ಪ್ರಯೋಜನಗಳೇನೂ ಇಲ್ಲ. ಅವರ ಭವಿಷ್ಯ ನಿಧಿ ಖಾತೆಗಳಿಗೆ ತಿಂಗಳ ಸಂಬಳದ 24% ಅವರಿಗೇನೂ ಹೆಚ್ಚಿನ ಪರಿಹಾರ ಕೊಡುವುದಿಲ್ಲ, ಅದು ಅವರಿಗೆ ಸಲ್ಲಬೇಕಾದ್ದು, ಅವರದ್ದೇ ಉಳಿತಾಯ!
ಸರಕಾರ ಈಗೇನು ಮಾಡಬೇಕು?
ಹಸಿವು ಮತ್ತು ಪೋಷಕಾಂಶ ಕೊರತೆಯನ್ನು ಎಲ್ಲ ಬಡವರಿಗೆ, ನಿರ್ದಿಷ್ಟವಾಗಿ ಮಧ್ಯಾಹ್ನದ ಊಟದ ಯೋಜನೆಗೆ ಒಳಪಟ್ಟಿರುವ ಮಕ್ಕಳ ಕುಟುಂಬಗಳಿಗೆ ರೇಷನ್ ಕಿಟ್‌ಗಳನ್ನು ಒದಗಿಸುವ ಮೂಲಕ ತಡೆಯಬಹುದು. ಕೇರಳ ಇದನ್ನು ಮಾಡುತ್ತಿದೆ.
ದೊಡ್ಡ ಪ್ರಮಾಣದಲ್ಲಿ ಲೇ-ಆಫ್‌ಗಳು, ರಿಟ್ರೆಂಚ್‌ಮೆಂಟ್‌ಗಳು ನಡೆಯುತ್ತಿರುವಾಗ, ಸರಕಾರ ಕನಿಷ್ಟ, ಮುಂದಿನ ಮೂರು ತಿಂಗಳು ಸಂಬಳ ಪಾವತಿಯ ಖಾತರಿ ನೀಡಬೇಕು.
ರೈತರ ಒಂದು ಬಾರಿಯ ಸಾಲಮನ್ನಾ ಪಡೆಯಬೇಕು
ಇದು ಫಸಲಿನ ಸಮಯ. ರೈತರ ಉತ್ಪನ್ನಗಳನ್ನು ಘೋಷಿತ ಕನಿಷ್ಟ ಬೆಂಬಲ ಬೆಲೆಗಳಲ್ಲಾದರೂ ಖರೀದಿಸುವ ಮತ್ತು ರೈತರು ಸುರಕ್ಷಿತವಾಗಿ ಫಸಲು ತೆಗೆಯಲು ನೆರವಾಗುವ ಖಾತರಿ ನೀಡಬೇಕು. ಇದಕ್ಕೆ ಆದ್ಯತೆ ನೀಡಲೇಬೇಕು.
ಮಧ್ಯಮ ವರ್ಗಗಳಿಗೆ, ವಿಶೇಷವಾಗಿ ನೌಕರರಿಗೆ, ಸಾಲ ಮರುಪಾವತಿಯನ್ನು ಮತ್ತು ತಿಂಗಳ ಇಎಂಐ ಕಂತುಗಳನ್ನು ಮುಂದೂಡುವ ಪರಿಹಾರ ಒದಗಿಸಬೇಕು.
ಸ್ವಸಹಾಯ ಗುಂಪುಗಳಿಗೆ ಸಾಲ ಲಭ್ಯತೆ ಎಂಬುದು ದೇಶದಲ್ಲಿನ 6.85 ಕೋಟಿ ಕುಟಂಬಗಳಿಗೆ ಅರ್ಥಹೀನ, ಏಕೆಂದರೆ, ಅವರ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಂಡಿವೆ. ಅವರು ಬದುಕುಳಿಯಲು ಮತ್ತು ಆರೋಗ್ಯವಾಗಿರಲು ನೇರವಾಗಿ ಹಣ ನೀಡಿ.
ಮನರೇಗಾ ಕೂಲಿಗಳಲ್ಲಿ 20ರೂ. ಹೆಚ್ಚಳ ಒಂದು ತಮಾಷೆಯಾಗಿದೆ. ಈಗ ಯಾವ ಕೆಲಸವೂ ನಡೆಯುತ್ತಿಲ್ಲ. ಅವರಿಗೆ ಬೇಕಾಗಿರುವುದು ನೇರ ನಗದು ವರ್ಗಾವಣೆಗಳು ಅಥವ ಕೆಲಸವಿಲ್ಲದಿದ್ದರೂ ಕೂಲಿಗಳ ಪಾವತಿ.