ದೈಹಿಕ ಅಂತರ, ಸಾಮಾಜಿಕ ಒಗ್ಗಟ್ಟು ಧ್ಯೇಯದೊಂದಿಗೆ ಕಾರ್ಯಾಚರಣೆ
ಕೋವಿಡ್-೧೯ ಮಹಾಮಾರಿಯನ್ನು ಎದುರಿಸುವಲ್ಲಿ ಕೇರಳದ ಸಾಧನೆ ಎಲ್ಲೆಡೆಗಳಲ್ಲೂ ಶ್ಲಾಘನೆಗೆ ಪಾತ್ರವಾಗಿದೆ. ಕೇರಳ ಈ ಮಹಾ ಸವಾಲನ್ನು ಹೇಗೆ ಯಶಸ್ವಿಯಾಗಲು ಎದುರಿಸಲು ಸಾಧ್ಯವಾಯಿತು? ಕೇರಳದ ಎಲ್‌ಡಿಎಫ್ ಸರಕಾರ ಹೇಗೆ ಯೋಜನಾಬದ್ಧವಾಗಿ ಎಲ್ಲ ಲಬ್ಯ ಸಂಪನ್ಮೂಲ-ಸಾಧನಗಳನ್ನು ಬಳಸಿ ಈ ಮಹಾಮಾರಿಯನ್ನು ಎದುರಿಸುತಿದೆ ಎಂಬುದರ ಒಂದು ಚಿತ್ರಣ ಆ ರಾಜ್ಯದ ಮುಖ್ಯಮಂತ್ರಿ ಮತ್ತು ಸಿಪಿಐ(ಎಂ) ಪೊಲಿಟ್‌ಬ್ಯುರೊ ಸದಸ್ಯ ಪಿಣರಾಯಿ ವಿಜಯನ್‌ರವರ ಈ ಲೇಖನದಲ್ಲಿ ಸಿಗುತ್ತದೆ. ಕೋವಿಡ್-೧೯ನ್ನು ಎದುರಿಸುವಾಗ ನಮ್ಮ ಗುರಿ ದೈಹಿಕ ಅಂತರ, ಸಾಮಾಜಿಕ ಒಗ್ಗಟ್ಟು ಎಂಬುದಾಗಿತ್ತು ಎನ್ನುತ್ತಾರೆ ಅವರು.
ಆಗ ಡಿಸೆಂಬರ್ ೨೦೧೯ರ ಉತ್ತರಾರ್ಧ. ಚೈನಾದ ಹುಬೆ ಪ್ರಾಂತದ ವುಹಾನ್ ನಗರದಲ್ಲಿ ಒಂದು ರೋಗ ಹರಡುತ್ತಿತ್ತು. ಅದೊಂದು ಹೊಸರೀತಿಯ ಕೊರೋನಾ ವೈರಾಣು ಸಾರ್ಸ್ ಅoಗಿ-೨ ಎಂದು ಕಂಡು ಹಿಡಿಯಲಾಯಿತು, ಈಗ ಮೂರು ತಿಂಗಳು ಕಳೆದಿದೆ. ಕೊರೋನಾ ವೈರಾಣು ರೋಗ ಕೋವಿಡ್-೧೯ ಜಗತ್ತಿನ ೧೯೫ ದೇಶಗಳನ್ನು ಬಾಧಿಸುತ್ತಿದೆ. ಇಡೀ ಜಗತ್ತು ಈ ಸರ್ವವ್ಯಾಪಿ ಮಹಾಮಾರಿಯ ವಶವಾಗಿದೆ. ಈ ’ಮಹಾಮಾರಿ ವೇಗವಾಗಿ ಹಬ್ಬುತ್ತಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯು.ಹೆಚ್.ಒ) ನಮ್ಮನ್ನು ಎಚ್ಚರಿಸಿದೆ. ೬೭ ದಿನಗಳಲ್ಲಿ ೧,೦೦,೦೦೦ ಪ್ರಕರಣಗಳಿದ್ದದ್ದು, ನಂತರದ ೧೧ ದಿನಗಳಲ್ಲಿ ೨,೦೦,೦೦೦ ತಲುಪಿತು, ಮತ್ತು ಈಗ ೪ ದಿನಗಳ ಹಿಂದೆ ೩,೦೦,೦೦೦ ಮುಟ್ಟಿದೆ.
ಆರಂಭದ ಸಿದ್ಧತೆ:
ಡಬ್ಲ್ಯು.ಹೆಚ್.ಒ ಮತ್ತು ಕೇಂದ್ರ ಸರ್ಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯಗಳು ಕಳಿಸಿದ್ದ ನಿರ್ದೇಶನಗಳು ಮತ್ತು ಮಾರ್ಗದರ್ಶನಗಳನ್ನು ೨೦೨೦ರ ಜನವರಿ ೧೮ ಮತ್ತು ೨೨ರ ನಡುವೆ ಕೇರಳ ಸರ್ಕಾರವು ತನ್ನ ೧೪ ಜಿಲ್ಲೆಗಳೊಂದಿಗೆ ಹಂಚಿಕೊಂಡಿತು. ರಾಜ್ಯ ಮಟ್ಟದ ’ರ‍್ಯಾಪಿಡ್ ಆಕ್ಷನ್ ಫೋರ‍್ಸ್’(ತ್ವರಿತ ಕ್ರಿಯಾಚರಣೆ ಪಡೆ) ಸಭೆ ಸೇರಿತು. ಪರಿಶೀಲನೆ, ಪ್ರಯೋಗಾಲಯಗಳು, ಚಿಕಿತ್ಸೆ ಮತ್ತು ತರಬೇತಿಗೆ ಮಾರ್ಗದರ್ಶನಗಳನ್ನು ಸಿದ್ಧಪಡಿಸಿತು. ಮತ್ತು ಎಲ್ಲಾ ಜಿಲ್ಲೆಗಳೊಂದಿಗೆ ಹಂಚಿಕೊಳ್ಳಲಾಯಿತು. ಯಾವುದೇ ಸಂಭವನೀಯ ಘಟನೆಗಳನ್ನು ಎದುರಿಸಲು ಜಿಲ್ಲಾ ಮಟ್ಟದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮಾಡಿಕೊಳ್ಳಲಾಯಿತು. ತದನಂತರ, ಚೈನಾದಿಂದ ಬರುವ ಎಲ್ಲಾ ಪ್ರಯಾಣಿಕರನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ಚೈನಾದಿಂದ ಬಂದ ಎಲ್ಲಾ ಪ್ರಯಾಣಿಕರ ಮೇಲೆ ನಿಗಾ ಇಡಲು ಹೊರವಲಯದ ಆರೋಗ್ಯ ಪಡೆಗಳನ್ನು ರಚಿಸಲಾಯಿತು. ಎಲ್ಲಾ ಸಂಭವನೀಯ ಪ್ರಕರಣಗಳ ಜಾಡು ಹಿಡಿದು ಪಟ್ಟಿ ಮಾಡಿ ಅವರ ಸಂಪರ್ಕಗಳ ಮೇಲೆ ನಿಗಾ ಇಡಲು ಜಿಲ್ಲಾ ಸಮಗ್ರ ರೋಗ ನಿಗಾವಣೆ ಕಾರ್ಯಕ್ರಮ ಕೋಶಗಳು(ಡಿಸ್ಟ್ರಿಕ್ಟ್ ಇಂಟೆಗ್ರೇಟೆಡ್ ಡಿಸೀಸ್ ಸರ್ವಲಿಯನ್ಸ್ ಪ್ರೊಗ್ರಾಮ್ ಸೆಲ್ಸ್) ಶುರುಮಾಡಿದವು.
ಅಂತರ್ ರಾಷ್ಟ್ರೀಯವಾಗಿ ರೋಗವು ಉಲ್ಬಣಿಸಿ ಹಬ್ಬುವುದರೊಂದಿಗೆ ಮತ್ತು ವಿದೇಶಗಳಿಂದ ಕೇರಳಕ್ಕೆ ಬರುವ ಜನಗಳ ಸಂಖ್ಯೆ ಹೆಚ್ಚಾಗುವುದರೊಂದಿಗೆ, ನಮ್ಮ ರಾಜ್ಯದಲ್ಲೂ ಕೋವಿಡ್-೧೯ ಸೋಂಕಿನ ಸಾಧ್ಯತೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಯಿತು. ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ಕೊಟ್ಟು ಅವರವರ ಜಿಲ್ಲಾ ವ್ಯಾಪ್ತಿಯ ಎಲ್ಲಾ ವೈದ್ಯಕೀಯ ಕಾಲೇಜುಗಳು, ಸಾರ್ವಜನಿಕ ಆಸ್ಪತ್ರೆಗಳು, ಜಿಲ್ಲಾ ಅಸ್ಪತ್ರೆಗಳು ಹಾಗೂ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಐಸೊಲೇಷನ್(ರೋಗಿಗಳನ್ನು ಪ್ರತ್ಯೇಕಗೊಳಿಸಿ ಇಡುವ ಏಕಾಂತ) ಸೌಲಭ್ಯಗಳನ್ನು ಸಿದ್ಧಪಡಿಸಲು ಹೇಳಲಾಯಿತು. ಐಸೊಲೇಷನ್ ಹಾಸ್ಪಿಟಲ್ ಹಾಗೂ ಮನೆ ಕ್ವಾರಂಟೈನ್(ಸಂಪರ್ಕ ನಿಷೇಧ)ಗಳಿಗೆ ಸಂಬಂಧಪಟ್ಟ ಅಗತ್ಯತೆಗಳ ಬಗ್ಗೆ ಕೂಡ ನಿರ್ದೇಶನಗಳನ್ನು ಕಳಿಸಲಾಯಿತು. ೨೦೨೦ರ ಜನವರಿ ೪ ರಂದೇ ಆರೋಗ್ಯ ಸೇವೆಗಳ ನಿರ್ದೇಶನಾಲಯದಲ್ಲಿ ನಿಯಂತ್ರಣ ಕೊಠಡಿಯೊಂದನ್ನು ಆರಂಭಿಸಲಾಯಿತು. ಜನವರಿ ೨೫ ರಂದು ಅಳವಡಿಸಿಕೊಳ್ಳಬೇಕಾದ ಕ್ರಮಗಳ ಬಗ್ಗೆ ಆರೋಗ್ಯ ಸಿಬ್ಬಂದಿಗಳಿಗೆ ಮತ್ತು ಸ್ಥಳೀಯ ಸ್ವಯಮಾಡಳಿತ ಕಛೇರಿಗಳಿಗೆ ಅಗತ್ಯ ಮಾರ್ಗದರ್ಶನಗಳನ್ನು ನೀಡಲಾಯಿತು. ಜನವರಿ ೨೮ರ ಹೊತ್ತಿಗೆ ಎಲ್ಲಾ ಜಿಲೆಗಳಲ್ಲೂ ನಿಯಂತ್ರಣ ಕೊಠಡಿಗಳನ್ನು ಪ್ರಾರಂಭಿಸಲಾಯಿತು.
ಆರಂಭದ ಪ್ರಕರಣಗಳು:
ಜನವರಿ ೩೦ ರಂದು ಭಾರತದ ಮೊಟ್ಟ ಮೊದಲ ಕೋವಿಡ್-೧೯ ಸೋಂಕಿನ ಪ್ರಕರಣ ಕೇರಳದಲ್ಲಿ ಇರುವುದನ್ನು ಕೇಂದ್ರ ಆರೋಗ್ಯ ಸಚಿವಾಲಯ ದೃಢಪಡಿಸಿತು. ವುಹಾನಿನಿಂದ ಹಿಂತಿರುಗಿದ್ದ ವಿದ್ಯಾರ್ಥಿಯೊಬ್ಬ ತ್ರಿಶೂರ್‌ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಏಕಾಂತ ಕೊಠಡಿಯ ಚಿಕಿತ್ಸೆ ಪಡೆಯುತ್ತಿದ್ದ. ತದನಂತರ, ಫೆಬ್ರವರಿ ೨ ಮತ್ತು ೩ ರಂದು ಎರಡು ಮತ್ತು ಮೂರನೇ ಪ್ರಕರಣಗಳು ದೃಢಪಟ್ಟವು. ಅವರೂ ಕೂಡ ವುಹಾನಿನಿಂದ ಹಿಂತಿರುಗಿದ ವಿದ್ಯಾರ್ಥಿಗಳೇ ಆಗಿದ್ದರು. ’ರಾಜ್ಯ ವಿಪತ್ತು’ ಎಂದು ಘೋಷಿಸಿ ತುರ್ತು ಕ್ರಮಗಳನ್ನು ಆರಂಭಿಸಲಾಯಿತು.
ಈ ಆರಂಭದ ಹಂತದಲ್ಲೇ ಆರೋಗ್ಯ ಸಚಿವೆ, ಆರೋಗ್ಯ ಕಾರ್ಯದರ್ಶಿ ಮತ್ತು ವೈದ್ಯಕೀಯ ಸೇವೆಗಳ ನಿರ್ದೇಶಕರು ಸಭೆ ಸೇರಿ ತುರ್ತಾಗಿ ಕೈಗೊಳ್ಳಬೇಕಾದ ಅಗತ್ಯ ಕೆಲಸಗಳ ಕುರಿತು ನಿರ್ಧಾರ ಮಾಡಿದರು. ರಾಜ್ಯ ಹಾಗೂ ಜಿಲ್ಲಾ ಮಟ್ಟದ ತ್ವರಿತ ಸ್ಪಂದನಾ ತಂಡಗಳ(ರ‍್ಯಾಪಿಡ್ ರೆಸ್ಪಾನ್ಸ್ ಟೀಮ್ಸ್) ಸಭೆಯನ್ನು ಕರೆಯಲಾಯಿತು. ಫೆಬ್ರವರಿ ೧ ರಂದು, ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ(ನ್ಯಾಷನಲ್ ಇನಿಸ್ಟಿಟ್ಯೂಟ್ ಆಫ್ ವೈರಾಲಜಿ)ಯ ಅಳಪುಳ ಘಟಕವು ಮಾದರಿಗಳನ್ನು ಪರೀಕ್ಷಿಸಲು ಸಿದ್ಧವಾಯಿತು. ರಾಜ್ಯ ಹಾಗೂ ಜಿಲ್ಲಾ ನಿಯಂತ್ರಣ ಕೊಠಡಿಗಳು ಹಗಲೂ ಇರುಳೂ ಕಾರ್ಯನಿರ್ವಹಿಸಲು ಪ್ರಾರಂಭಿಸಿದವು. ಗೊತ್ತುಪಡಿಸಿದ ಆಸ್ಪತ್ರೆಗಳಲ್ಲಿ ಏಕಾಂತ ಸೌಲಭ್ಯಗಳನ್ನು ಇನ್ನೂ ಬಲಪಡಿಸಲಾಯಿತು. ರೋಗ ಲಕ್ಷಣಗಳಿದ್ದು ಏಕಾಂತ ಸೌಲಭ್ಯದ ಅಗತ್ಯವಿರುವವನ್ನು ಆರೈಕೆ ಮಾಡಲು ಪ್ರತೀ ಜಿಲ್ಲೆಯಲ್ಲೂ ಕೊನೇ ಪಕ್ಷ ಎರಡು ಆಸ್ಪತ್ರೆಗಳು ಮುಂದಾದವು. ನಾವು ಸಾಕಷ್ಟು ಮುಂಚೆಯೇ ತಯಾರಿ ಮಾಡಿಕೊಂಡಿದ್ದರಿಂದ ಆರಂಭದ ಪ್ರಕರಣಗಳಿಂದ ಬೇರೆಯವರಿಗೆ ರೋಗ ಹರಡುವುದನ್ನು ತಡೆಯಲು ಸಾಧ್ಯವಾಯಿತು. ಆರಂಭದ ಎಲ್ಲಾ ಪ್ರಕರಣಗಳಲ್ಲೂ ರೋಗಿಗಳು ಫೆಬ್ರವರಿ ಮೂರನೇ ವಾರದ ಹೊತ್ತಿಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಹೆಚ್ಚುವರಿ ಕ್ರಮಗಳು:
ಎಲ್ಲಾ ಚಿತ್ರಮಂದಿರಗಳಲ್ಲೂ ಕೋವಿಡ್-೧೯ ಕುರಿತ ಜಾಗೃತಿಗಾಗಿ ದೃಶ್ಯಸುರುಳಿ(ವೀಡಿಯೋ)ಯನ್ನು ಪ್ರದರ್ಶಿಸಲಾಗುತ್ತಿದೆ. ಟಿ.ವಿ. ಹಾಗೂ ಎಫ್.ಎಂ. ರೇಡಿಯೋ ಚಾನಲುಗಳಲ್ಲಿ ರೋಗ ಕುರಿತ ಮಾಹಿತಿಗಳನ್ನು ಪ್ರಚಾರ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಜನಜಾಗೃತಿ ಪ್ರಚಾರ ಕೈಗೊಳ್ಳಲಾಗಿದೆ. ಅದೇ ಸಮಂiiದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದವರಿಗೆ ದಂಡ ವಿಧಿಸಲಾಗಿದೆ. ಆರೋಗ್ಯ ಇಲಾಖೆಯು ಸ್ಮಾರ್ಟ್ ಕ್ಲಾಸ್ ರೂಮ್‌ಗಳ ಮೂಲಕ ೪೦ ಲಕ್ಷ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುತ್ತಿದೆ. ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಕಟ್ಟುನಿಟ್ಟಾದ ತಪಾಸಣೆ ನಡೆಸಲಾಗುತ್ತಿದೆ. ಇಟಲಿ ಮತ್ತು ಇರಾನಿನಲ್ಲಿ ರೋಗದ ಹರಡುವಿಕೆ ವರದಿಯಾಗುತ್ತಿದ್ದಂತೆ ಇನ್ನೂ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಚೈನಾ, ಹಾಂಗ್‌ಕಾಂಗ್, ಥೈಲ್ಯಾಂಡ್, ಸಿಂಗಪೂರ್, ಜಪಾನ್, ದಕ್ಷಿಣ ಕೊರಿಯಾ, ವಿಯೆಟ್ನಾಂ, ನೇಪಾಳ, ಇಂಡೋನೇಶ್ಯಾ, ಮಲೇಶಿಯಾ, ಇರಾನ್ ದೇಶಗಳಿಂದ ಬರುವವರಿಗೆ ಅಥವಾ ಫೆಬ್ರವರಿ ೧೦, ೨೦೨೦ ರಿಂದೀಚೆಗೆ ಈ ದೇಶಗಳಿಗೆ ಹೋಗಿಬಂದ ಚರಿತ್ರೆ ಇರುವವರಿಗೆ ೧೪ ದಿನಗಳ ಕಡ್ಡಾಯ ಮನೆ ಏಕಾಂತ ವಿಧಿಸಲಾಗಿದೆ.
ದೇಶದ ಇತರೆ ರಾಜ್ಯಗಳಲ್ಲಿಯೂ ಹೊಸ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟ ಕಾರ್ಯದರ್ಶಿಯವರು ಆ ರಾಜ್ಯಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಕೇರಳ ಆರೋಗ್ಯ ಇಲಾಖೆಯ ಪ್ರಯತ್ನಗಳನ್ನು ಅವರು ಮೆಚ್ಚಿದರು ಮತ್ತು ಆ ಕುರಿತ ಪ್ರಾತ್ಯಕ್ಷಿಕೆಯ ಮೂಲಕ ನಿರೂಪಣೆ ಮಾಡಿ ತೋರಿಸಿ ಎಂದು ಕೇರಳ ಮುಖ್ಯ ಕಾರ್ಯದರ್ಶಿಯನ್ನು ಕೇಳಿಕೊಂಡರು. ಕೇರಳವು ಅಭಿವೃದ್ಧಿಪಡಿಸಿದ ಮಾದರಿ ನಿರ್ವಹಣಾ ವಿಧಾನ(ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್)ವನ್ನು ಉಳಿದ ರಾಜ್ಯಗಳೂ ಅನುಸರಿಸಬೇಕೆಂದು ಅವರು ನಿರ್ದೇಶನ ನೀಡಿದರು. ವೈರಾಣುವನ್ನು ಹಿಮ್ಮೆಟ್ಟಿಸಲು ಉಳಿದ ರಾಜ್ಯಗಳ ಪ್ರಯತ್ನಗಳಿಗೆ ಕೇರಳ ಬೆಂಬಲ ನೀಡಬೇಕೆಂದೂ ಅವರು ಕೋರಿದರು.
ನಂತರದ ಪ್ರಕರಣಗಳು ಮತ್ತು ಕಾರ್ಯರೂಪದ ಉತ್ತರ:
ದೊಡ್ಡ ಸಂಖ್ಯೆಯ ವಲಸೆ ಸಮುದಾಯದ ಬೀಡಾಗಿರುವ ಕೇರಳವು ಜಗತ್ತಿನ ಬೇರೆ ಕಡೆಗಳಿಂದ ರಾಜ್ಯಕ್ಕೆ ಪ್ರತಿನಿತ್ಯ ಬರುವ ಮಲಯಾಳಿಗಳನ್ನು ಹೊಂದಿದೆ. ಪ್ರವಾಸಿಗರ ಒಂದು ಜನಪ್ರಿಯ ತಾಣವಾದ್ದರಿಂದ ರಾಜ್ಯವು ಹೆಚ್ಚು ಅಂತರ್ರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಾರ್ಚ್ ೮ರ ನಂತರ ನಾವು ನೋಡುತ್ತಿರುವ ಪ್ರಕರಣಗಳ ಈಗಿನ ಗುಂಪು ಬಹುತೇಕ ವಿದೇಶಗಳಿಂದ ಮುಖ್ಯವಾಗಿ ಯೂರೋಪು ಹಾಗೂ ಕೊಲ್ಲಿಯಿಂದ ಬಂದವರದ್ದಾಗಿದೆ. ಕೆಲವೇ ಕೆಲವು ಪ್ರಕರಣಗಳು ಅಂತಹ ವ್ಯಕ್ತಿಗಳ ಜತೆಗಿನ ಸಂಪರ್ಕದಿಂದ ಆದವು ಎಂದು ವರದಿಯಾಗಿವೆ. ಈ ಪ್ರಥಮ ಹಾಗೂ ದ್ವಿತೀಯ ವರ್ಗಗಳ ಹೊರತಾಗಿ ವಿಶೇಷ ಎಚ್ಚರ ವಹಿಸಿ ತೃತೀಯ ವರ್ಗದ ಪ್ರಕರಣಗಳು ರಾಜ್ಯದಲ್ಲಿ ಇಲ್ಲದಿರುವಂತೆ ಖಾತ್ರಿಪಡಿಸಲಾಗುತ್ತಿದೆ.
ಮಾರ್ಚ್ ೨೪ರ ಹೊತ್ತಿಗೆ, ಕೋವಿಡ್-೧೯ರ ೧೦೯ ಪ್ರಕರಣಗಳು ಕೇರಳದಲ್ಲಿ ವರದಿಯಾಗಿವೆ. ಇವುಗಳಲ್ಲಿ, ನಾಲ್ವರನ್ನು ಗುಣಪಡಿಸಿ ಮನೆಗೆ ಕಳಿಸಲಾಗಿದೆ, ಮತ್ತು ೧೦೫ ಸೋಂಕಿತರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ೭೨,೪೬೦ ಮಂದಿ ನಿಗಾವಣೆಯಲ್ಲಿದ್ದಾರೆ, ಅವುಗಳಲ್ಲಿ ೪೬೬ ಆಸ್ಪತ್ರೆ ಆರೈಕೆಯಲ್ಲಿದ್ದಾರೆ. ೪,೫೧೬ ಮಾದರಿಗಳನ್ನು ಪರೀಕ್ಷೆಗೆ ಕಳಿಸಲಾಗಿದೆ, ಅದರಲ್ಲಿ ೩,೩೩೧ರ ಫಲಿತಾಂಶ ಋಣಾತ್ಮಕ(ನೆಗೆಟೀವ್)ವಾಗಿ ಬಂದಿವೆ. ರಾಜ್ಯವು ಧನಾತ್ಮಕ ಪ್ರಕರಣಗಳ ಏರಿಕೆಯನ್ನು ಅನುಭವಿಸುತ್ತಿರುವಾಗಲೂ, ಈ ಮಹಾಮಾರಿಯಿಂದ ಕೇರಳದಲ್ಲಿ ಇಲ್ಲಿಯವರೆಗೂ ಒಂದೂ ಸಾವು ಆಗಿಲ್ಲ ಎಂಬುದೇ ವಿಶೇಷವಾಗಿ ಉಲ್ಲೇಖಿಸಬೇಕಿರುವ ಅಂಶವಾಗಿದೆ. ಕೇರಳದಲ್ಲಿ ಸಾಮುದಾಯಿಕವಾಗಿ ಹಬ್ಬದಂತೆ ನಾವು ಕಟ್ಟುನಿಟ್ಟಾದ ಕ್ರಮಗಳನ್ನು ಖಾತರಿಪಡಿಸಿದ್ದೇವೆ.
ಅದೇ ಸಮಯದಲ್ಲಿ, ತುರ್ತು ಸನ್ನಿವೇಶಗಳನ್ನೂ ಒಳಗೊಂಡಂತೆ ಯಾವುದೇ ಸಂಭವನೀಯ ಪರಿಸ್ಥಿತಿಯನ್ನು ಎದುರಿಸಲು ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಲು ನಾವು ಸಿದ್ಧರಾಗಿದ್ದೇವೆ. ಈ ಮಹಾಮಾರಿಯನ್ನು ನಿಭಾಯಿಸಲು ಸಾಕಾಗುವಷ್ಟು ಮಾನವ ಸಂಪನ್ಮೂಲಗಳನ್ನು ಖಾತ್ರಿಪಡಿಸಲು ಆರೋಗ್ಯ ಇಲಾಖೆಯು ೨೭೬ ವೈದ್ಯರನ್ನು ತುರ್ತಾಗಿ ನೇಮಕ ಮಾಡಿಕೊಂಡಿದೆ. ಅಗತ್ಯವಿರುವ ಅರೆವೈದ್ಯಕೀಯ ಸಿಬ್ಬಂದಿಗಳನ್ನು ಕೂಡ ನೇಮಕ ಮಾಡಿಕೊಳ್ಳಲಾಗುವುದು. ಈ ಎಲ್ಲಾ ನೇಮಕವನ್ನು ಸಾರ್ವಜನಿಕ ಸೇವಾ ಆಯೋಗ(ಪಬ್ಲಿಕ್ ಸರ್ವಿಸ್ ಕಮಿಷನ್)ದ ಈಗಿರುವ ಪಟ್ಟಿಯಿಂದಲೇ ಮಾಡಲಾಗಿದೆ. ಏಕಾಂತ ಕೊಠಡಿಗಳನ್ನಾಗಿ ಬಳಸಲು ಕಟ್ಟಡಗಳನ್ನು ಗುರುತಿಸಲಾಗಿದೆ. ಯುವಜನರು ಮತ್ತು ಸ್ವಯಂಸೇವಾ ಸಂಘಟನೆಗಳ ಸಹಾಯದಿಂದ ಅವುಗಳನ್ನು ಕ್ರಿಮಿ ಕೀಟಗಳು ಬರದಂತೆ ಸ್ವಚ್ಛಗೊಳಿಸಿ ಉಪಯೋಗಕ್ಕೆ ಬರುವಂತೆ ಸಿದ್ಧಪಡಿಸಲಾಗಿದೆ.
ಸಾರ್ವಜನಿಕ ವಲಯದ ಘಟಕಗಳಾದ ಕೇರಳ ರಾಜ್ಯ ಔಷಧಿ ಮತ್ತು ಫಾರ್ಮಸುಟಿಕಲ್ಸ್ ಲಿ. ಮತ್ತು ಕೇರಳ ರಾಜ್ಯ ಕೈಗಾರಿಕಾಭಿವೃದ್ಧಿ ನಿಗಮಗಳು ಅಗತ್ಯವಾದ ಔಷಧಿಗಳು ಹಾಗೂ ಶುದ್ಧೀಕರಣ ವಸ್ತುಗಳು ಮತ್ತು ಮುಖಗವಸುಗಳ ಲಭ್ಯತೆಯನ್ನು ಖಾತ್ರಿಪಡಿಸುವಲ್ಲಿ ಮುಂದಾಳುತ್ವ ವಹಿಸಿವೆ. ಕೇರಳದ ಜೈಲು ನಿವಾಸಿಗಳೂ ಕೂಡ ಈ ವಿಷಯದಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ. ಅನೇಕ ವಸತಿನಿವಾಸಿಗಳ ಕಲ್ಯಾಣ ಸಂಘಗಳು, ಸ್ವಯಂಸೇವಾ ಸಂಘಗಳು ಮತ್ತು ರಾಜಕೀಯ ಗುಂಪುಗಳು ನಿರ್ಮಲೀಕರಣ ವಸ್ತುಗಳ ಮತ್ತು ಮುಖಗವಸುಗಳ ತಯಾರಿ ಮತ್ತು ವಿತರಣೆಯನ್ನು ತಮ್ಮ ಸಾಮಾಜಿಕ ಜವಾಬ್ದಾರಿಯೆಂದು ತಿಳಿದುಕೊಂಡು ಕಾರ್ಯ ನಿರ್ವಹಿಸುತ್ತಿವೆ.
ಈ ಹೊಸ ನಮೂನೆಯ ಕೊರೋನಾ ವೈರಾಣು ಹರಡುವುದನ್ನು ತಡೆಗಟ್ಟಲು ವ್ಯಕ್ತಿಗಳ ನಡುವೆ ಸುರಕ್ಷಿತ ದೂರವನ್ನು ಇಟ್ಟುಕೊಳ್ಳಬೇಕು ಹಾಗೂ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕೆಂದು ಅಂತರ್ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು ಮತ್ತು ತಜ್ಞರು ಸೂಚನೆ ನೀಡಿದ್ದಾರೆ. ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳುವುದು ಮತ್ತು ನಿರ್ಮಲೀಕರಣ ವಸ್ತುಗಳನ್ನು ಬಳಸುವುದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ’ಕೊಂಡಿ ಕಳಚಿ’(ಬ್ರೇಕ್ ದಿ ಚೈನ್) ಆಂದೋಲನ ನಡೆಸಲಾಗಿದೆ. ಸರ್ಕಾರಿ ಕಛೇರಿಗಳು, ಸಾರ್ವಜನಿಕ ಕಛೇರಿಗಳು, ಸ್ವಯಮಾಡಳಿತ ಸಂಸ್ಥೆಗಳು, ಖಾಸಗಿ ಕಂಪನಿಗಳು, ಹೆಸರಾಂತ ವ್ಯಕ್ತಿಗಳು ಈ ಆಂದೋಲನದಲ್ಲಿ ಪಾಲ್ಗೊಂಡು ಪ್ರಚಂಡ ಯಶಸ್ಸಿಗೆ ಕಾರಣರಾಗಿದ್ದಾರೆ. ಸಾಮಾಜಿಕ ಮಾಧ್ಯಮವನ್ನು ಸೃಜನಾತ್ಮಕವಾಗಿ ಬಳಸುವುದನ್ನೂ ಒಳಗೊಂಡಂತೆ ಹೊಸ ಹೊಸ ವಿಧಾನಗಳ ಮೂಲಕ ಕೂಡ ಜನಜಾಗೃತಿಯನ್ನು ಮಾಡಲಾಗಿದೆ.
ದಿಗ್ಬಂಧನ (ಲಾಕ್ ಡೌನ್):
ಜನರ ಓಡಾಟ ಮತ್ತು ಜನರ ನಡುವಿನ ಪರಸ್ಪರ ಸಂಪರ್ಕದ ಮೇಲೆ ಕೆಲವು ನಿರ್ಬಂಧಗಳನ್ನು ಹೇರುವುದರ ಮೂಲಕ ಮಾತ್ರವೇ ಜನರ ನಡುವಿನ ಸುರಕ್ಷಿತ ದೂರವನ್ನು ಖಾತ್ರಿಪಡಿಸಲು ಸಾಧ್ಯ. ಅದನ್ನು ಸಾಧ್ಯವಾಗಿಸಲು ಇಡೀ ರಾಜ್ಯ ಈಗ ಲಾಕ್ ಡೌನ್ ಆಗಿದೆ. ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟಿವೆ, ಪರೀಕ್ಷೆಗಳು ಮುಂದೂಡಲ್ಪಟ್ಟಿವೆ, ಚಿತ್ರಮಂದಿರಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ, ಪ್ರಯಾಣ ಮಾಡದಂತೆ ಜನರಿಗೆ ಹೇಳಲಾಗಿದೆ, ಗುಂಪು ಸೇರುವುದನ್ನು ಹಾಗೂ ಧಾರ್ಮಿಕ ಕೂಟಗಳನ್ನು ನಿಷೇಧಿಸಲಾಗಿದೆ, ಸಾರ್ವಜನಿಕ ಸಾರಿಗೆ ಸೌಲಭ್ಯವನ್ನು ನಿಲ್ಲಿಸಲಾಗಿದೆ ಮತ್ತು ರಾಜ್ಯದ ಗಡಿಗಳನ್ನು ಮುಚ್ಚಲಾಗಿದೆ. ಅದೇ ಸಂದರ್ಭದಲ್ಲಿ, ತುರ್ತು ಸೇವೆಗಳು, ಆಸ್ಪತ್ರೆಗಳು ಹಾಗೂ ಔಷಧಿ ಅಂಗಡಿಗಳು ಎಂದಿನಂತೆ ಕೆಲಸ ಮಾಡುತ್ತಿವೆ. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ನಿಗದಿತ ವೇಳೆಯಲ್ಲಿ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಊಟೋಪಹಾರ ಮಂದಿರಗಳನ್ನು ಪೊಟ್ಟಣ ಕಟ್ಟಿ ಕೊಡಲು ಮತ್ತು ಮನೆ ಮನೆಗೆ ಕೊಂಡೊಯ್ದು ತಲುಪಿಸಲು ಅವಕಾಶ ನೀಡಲಾಗಿದೆ. ಆಹಾರ ಪೂರೈಕೆಯನ್ನು ಸುಗಮಗೊಳಿಸಲು ಸಾಕಷ್ಟು ಆಹಾರ ದಾಸ್ತಾನು ಮತ್ತು ರಾಜ್ಯದ ಗಡಿಯಾದ್ಯಂತ ಅವುಗಳ ಸಂಚಾರಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತಿದ್ದೇವೆ. ಸರ್ಕಾರಿ ಕಛೇರಿಗಳು ಕಾರ್ಯ ನಿರ್ವಹಿಸುವಂತೆ ಮಾಡಲು ಸಿಬ್ಬಂದಿಗಳನ್ನು ಹಂತ ಹಂತವಾಗಿ ಹಾಜರಾಗಲು ಹೇಳಲಾಗಿದೆ.
ಕೋವಿಡ್-೧೯ ಪರಿಹಾರ ಸೌಲಭ್ಯಗಳು:
ಜನರ ತಿರುಗಾಟ ಮತ್ತು ಪರಸ್ಪರ ಸಂಪರ್ಕಗಳ ಮೇಲೆ ನಿರ್ಬಂಧ ಹೇರಿದಾಗ, ಅದು ಸಾಮಾಜಿಕ ಹಾಗೂ ಆರ್ಥಿಕ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಅರಿತು, ಲಾಕ್ ಡೌನ್ ಘೋಷಣೆಗೆ ಸಾಕಷ್ಟು ಮುಂಚೆಯೇ, ಮಾರ್ಚ್ ೧೮ರಂದೇ ಕೇರಳ ಸರ್ಕಾರವು ಮುಂಬರುವ ಬಿಕ್ಕಟ್ಟನ್ನು ನಿಭಾಯಿಸಲು ರೂ.೨೦,೦೦೦ ಕೋಟಿ ನೆರವಿನ ಪ್ಯಾಕೇಜನ್ನು ಘೋಷಿಸಿತು. ಸಮಾಜ ಕಲ್ಯಾಣ ನಿವೃತ್ತಿವೇತನಗಳನ್ನು ಮುಂಗಡವಾಗಿ ಮಾರ್ಚ್‌ನಲ್ಲೇ ವಿತರಿಸಲು ರೂ.೧೩೨೦ ಕೋಟಿಯನ್ನು ತೆಗೆದಿರಿಸಲಾಗಿದೆ. ಕಲ್ಯಾಣ ನಿವೃತ್ತಿ ವೇತನಕ್ಕೆ ಅರ್ಹತೆಯಿಲ್ಲದವರಿಗೆ ಪ್ರತಿ ಕುಟುಂಬಕ್ಕೂ ರೂ.೧೦೦೦ ಸಹಾಯ ಒದಗಿಸಲು ರೂ.೧೦೦ ಕೋಟಿ ಇಡಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಕುಟುಂಬಶ್ರೀ ಯೋಜನೆಯಡಿಯಲ್ಲಿ ರೂ.೨೦೦೦ ಕೋಟಿಯನ್ನು ವಿತರಿಸಲಾಗುವುದು. ಆದರ ಬಡ್ಡಿಯನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸುತ್ತದೆ. ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಒದಗಿಸಲು ರೂ.೨೦೦೦ ಕೋಟಿ ಬಳಸಲಾಗುವುದು.
ಕೋವಿಡ್-೧೯ ಆರೈಕೆಗಾಗಿ ಸಾರ್ವಜನಿಕ ಆರೋಗ್ಯಕ್ಕೆ ಆಗಬಹುದಾದ ಹೆಚ್ಚುವರಿ ವೆಚ್ಚಗಳಿಗೆ ರೂ.೫೦೦ ಕೋಟಿ ಇಡಲಾಗಿದೆ. ಪಡಿತರ ಪದ್ಧತಿ ಅಡಿಯಲ್ಲಿ ಅರ್ಹ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಲು ರೂ.೧೦೦ ಕೋಟಿ ಬಳಸಲಾಗುವುದು. ಹಸಿವು ಮುಕ್ತ ಕೇರಳದ ಯೋಜನೆಯಡಿಯಲ್ಲಿ ಕೇವಲ ರೂ.೨೦ನಲ್ಲಿ ಒಂದು ಊಟ ಒದಗಿಸಲು ರೂ.೫೦ ಕೋಟಿ ಇಡಲಾಗಿದೆ. ಇದಕ್ಕಾಗಿ ಏಪ್ರಿಲ್ ತಿಂಗಳಿನಲ್ಲೇ ೧೦೦೦ ಆಹಾರ ಮಳಿಗೆಗಳನ್ನು ತೆರೆಯಲಾಗುವುದು. ಸೆಪ್ಟೆಂಬರ್ ತಿಂಗಳಿನಲ್ಲಿ ಒಂದು ಊಟಕ್ಕೆ ರೂ.೨೫ ನಂತೆ ಪೂರೈಸಲಾಗುವುದು ಎಂದು ರಾಜ್ಯ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ರಾಜ್ಯ ಸರ್ಕಾರದ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಬಾಕಿ ಉಳಿದಿರುವ ಹಣವನ್ನು ಪಾವತಿಸಲು ರೂ.೧೪,೦೦೦ ಕೋಟಿ ಬಳಸಲಾಗುತ್ತದೆ. ತುರ್ತಾಗಿ ರಾಜ್ಯದ ಆರ್ಥಿಕತೆಗೆ ರೂ.೨೦೦೦೦ ಕೋಟಿ ಹಣವನ್ನು ಈ ರೀತಿಯಲ್ಲಿ ವಿನಿಯೋಗಿಸಲಾಗುವುದು.
ಆಟೋರಿಕ್ಷಾ ಮತ್ತು ಟ್ಯಾಕ್ಸಿಗಳಿಗೆ ಅರ್ಹತಾ ಶುಲ್ಕವನ್ನು ಸಡಿಲಗೊಳಿಸಲಾಗಿದೆ. ರಾಜ್ಯ ಸಾಗಣೆ ಮತ್ತು ಗುತ್ತಿಗೆ ಸಾಗಣೆಯ ತ್ರೈಮಾಸಿಕ ತೆರಿಗೆ ಪಾವತಿಗೆ ಒಂದು ತಿಂಗಳ ರಿಯಾಯಿತಿ ನೀಡಲಾಗುವುದು. ಈ ರೀತಿಯಲ್ಲಿ ರೂ.೨೩.೬ ಕೋಟಿ ರಿಯಾಯಿತಿ ನೀಡಲಾಗಿದೆ. ವಿದ್ಯುಚ್ಛಕ್ತಿ ಹಾಗೂ ನೀರಿನ ಬಿಲ್ಲುಗಳನ್ನು ಒಂದು ತಿಂಗಳು ತಡವಾಗಿ ಯಾವುದೇ ದಂಡವಿಲ್ಲದೇ ಸಲ್ಲಿಸಬಹುದು. ಚಿತ್ರಮಂದಿರಗಳಿಗೆ ಮನರಂಜನಾ ತೆರಿಗೆಯನ್ನು ಒಂದು ತಿಂಗಳ ಕಾಲ ಮನ್ನಾ ಮಾಡಲಾಗಿದೆ. ಬಿಕ್ಕಟ್ಟಿನ ಪರಿಹಾರಕ್ಕಾಗಿ ಆರ್ಥಿಕತೆಗೆ ತುರ್ತು ಹಣವನ್ನು ತುಂಬುವುದರ ಜತೆಯಲ್ಲೇ, ಜನರಿಗೆ ಸಹಾಯ ಒದಗಿಸಲು ರಿಯಾಯಿತಿಗಳನ್ನೂ ನೀಡಲಾಗಿದೆ.
ಈ ಸಮಯದಲ್ಲಿ ಅಗತ್ಯ ವಸ್ತುಗಳ ಲಭ್ಯತೆಯನ್ನು ಖಾತ್ರಿಪಡಿಸುವ ಸಲುವಾಗಿ ವರ್ತಕರು ಮತ್ತು ವ್ಯಾಪಾರಿಗಳ ಸಂಘಗಳೊಂದಿಗೆ ಮಾತುಕತೆ ನಡೆಸಲಾಗಿದೆ. ತರಕಾರಿಗಳು ಮತ್ತು ಬೇಳೆಕಾಳುಗಳನ್ನೂ ಒಳಗೊಂಡಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಕುಟುಂಬಗಳಿಗೆ ಈ ಲಾಕ್ ಡೌನ್ ಅವಧಿಯಲ್ಲಿ ಪೂರೈಸಲು ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಬಿದ್ದಾಗ ಜನರಿಗೆ ಸಹಾಯ ಮಾಡಲು ಸ್ವಯಂಸೇವಾ ಸಂಘಟನೆಗಳನ್ನು ಕೋರಿಕೊಳ್ಳಲಾಗಿದೆ. ಏಕಾಂತ ವ್ಯವಸ್ಥೆಯಲ್ಲಿರುವವರಿಗಾಗಿ ಪುಸ್ತಕಗಳನ್ನು ಒದಗಿಸಲು ಪ್ರಕಾಶನ ಸಂಸ್ಥೆಗಳು ಸಹಾಯ ಮಾಡಲಿವೆ. ದೂರ ಸಂಪರ್ಕ ಸೇವಾ ಪೂರೈಕೆದಾರರೊಂದಿಗೆ ಮಾತನಾಡಿ ಅಂತರ್ಜಾಲಗಳ ಸುಗಮ ಸಂಪರ್ಕವನ್ನು ಒದಲಾಗಿಸಲಾಗಿದೆ, ಆ ಮೂಲಕ ಜನರು ಮನೆಯಲ್ಲೇ ಉಳಿದು ಸಂಪರ್ಕ ಹಾಗೂ ಮನರಂಜನೆಯನ್ನು ಹೊಂದಬಹುದಾಗಿದೆ.
ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯೊಂದಿಗೆ ಸಭೆ ನಡೆಸಲಾಗಿದ್ದು, ಈ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಸಾಲ ವಸೂಲಾತಿ ಮಾಡಲು ಮುಂದಾಗದೆ ಬಡ್ಡಿ ಹಾಗೂ ಕಂತುಗಳ ಪಾವತಿಗೆ ರಿಯಾಯಿತಿಗಳನ್ನು ಒದಗಿಸಲು ಮನದಟ್ಟುಮಾಡಲಾಗಿದೆ. ಈ ವಿಷಯದಲ್ಲಿ ಕೇರಳ ಹೈಕೋರ್ಟು ಕೂಡ ಅನುಕೂಲಕರ ತೀರ್ಪನ್ನು ನೀಡಿದೆ. ಆದರೆ, ಕೇಂದ್ರ ಸರ್ಕಾರದ ಒತ್ತಡದ ಮೇರೆಗೆ ಸುಪ್ರೀಂ ಕೋರ್ಟು ಅದಕ್ಕೆ ತಡೆ ನೀಡಿದೆ. ಲಾಕ್‌ಡೌನ್‌ನತ್ತ ಸಾಗುವಾಗ ಕೂಡ, ಜನರ ರಕ್ಷಣೆಗೆ ಎಲ್ಲಾ ರೀತಿಯ ಕ್ರಮಗಳನ್ನು ನಾವು ಖಾತ್ರಿಪಡಿಸುತ್ತಿದ್ದೇವೆ. ಬದುಕಿ ಉಳಿಯಬೇಕೆಂದರೆ, ಆರೋಗ್ಯ ಮತ್ತು ಆರ್ಥಿಕ ಚಟುವಟಿಕೆಗಳು ಇರಬೇಕಾಗುತ್ತದೆ. ಈ ಎರಡನ್ನೂ ಖಾತ್ರಿಪಡಿಸಲು ಈ ಸವಾಲಿನ ಸಮಯದಲ್ಲಿ ಕೇರಳ ಸರ್ಕಾರವು ನಿರಂತರವಾಗಿ ಕೆಲಸ ಮಾಡುತ್ತಿದೆ. ಜನರಿಗೆ ಕೇವಲ ಮನೆಯಲ್ಲಿರಿ ಎಂದಷ್ಟೇ ನಾವು ಹೇಳುತ್ತಿಲ್ಲ, ಅವರು ಮನೆಯಲ್ಲಿ ಇರುವಾಗ ತಾಳಿಕೊಳ್ಳಲು ಅವರು ಸಮರ್ಥರಾಗುವಂತೆ ಕೂಡ ನಾವು ನೋಡಿಕೊಳ್ಳುತ್ತಿದ್ದೇವೆ.
ಕೇಂದ್ರ ಸರ್ಕಾರದೊಂದಿಗೆ ಆತಂಕ ವ್ಯಕ್ತಪಡಿಸಲಾಗಿದೆ:
ದೊಡ್ಡ ಸಂಖ್ಯೆಯ ತಪಾಸಣೆಗಳ ಮೂಲಕ ವೈರಾಣುವನ್ನು ಪತ್ತೆ ಮಾಡಬಹುದು ಮತ್ತು ಸೋಂಕಿತ ವ್ಯಕ್ತಿಗಳನ್ನು ಚಿಕಿತ್ಸೆಗೆ ಒಳಪಡಿಸಬಹುದು ಮತ್ತು ಆಗ ಮಾತ್ರವೇ ಅದರ ಹರಡುವಿಕೆಯನ್ನು ತಡೆಯಬಹುದು ಎಂಬುದನ್ನು ಚೈನಾ ಮತ್ತು ದಕ್ಷಿಣ ಕೊರಿಯಾದ ಅನುಭವಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯು.ಹೆಚ್.ಒ) ನಿರ್ದೇಶನಗಳು ಸೂಚಿಸಿವೆ. ಆದುದರಿಂದ, ಕೇರಳವು ದೊಡ್ಡ ಸಂಖ್ಯೆಯ ತಪಾಸಣೆಗಳ ಮೊರೆಹೋಗಿದೆ. ಆದರೆ, ಒಂದು ರಾಜ್ಯ ಸರ್ಕಾರ ಏನು ಮಾಡಬಹುದು ಎನ್ನುವುದಕ್ಕೆ ಒಂದು ಮಿತಿ ಇದೆ. ದೇಶಾದ್ಯಂತ ಅಂತಹ ದೊಡ್ಡ ರೀತಿಯಲ್ಲಿ ತಪಾಸಣೆಗಳನ್ನು ಮಾಡದಿದ್ದರೆ, ಆ ವೈರಾಣು ಹರಡುವಿಕೆಯ ಮತ್ತು ರೋಗ ಹರಡಿಕೆ ಪ್ರಮಾಣವನ್ನು ನಿಖರವಾಗಿ ಅಂದಾಜು ಮಾಡುವುದು ಸಾಧ್ಯವಿಲ್ಲ. ಈ ವಿಚಾರದಲ್ಲಿ ಯಾವುದೇ ತಪ್ಪು ಲೆಕ್ಕಾಚಾರ ಮಾಡಿದ್ದೇ ಆದರೆ ಆಗ ಇಡೀ ದೇಶ ಗಂಭೀರ ಆರೋಗ್ಯ ತುರ್ತುಸ್ಥಿತಿಗೆ ತಳ್ಳಲ್ಪಡುತ್ತದೆ. ಆದಕಾರಣ, ತಪಾಸಣೆ ನಡೆಸಲು ಹೆಚ್ಚು ಕೇಂದ್ರಗಳನ್ನು ತೆರೆಯಲು ಅನುವು ಮಾಡಿಕೊಡಬೇಕೆಂದು ಕೇಂದ್ರ ಸರ್ಕಾರವನ್ನು ನಾವು ಕೋರಿದ್ದೇವೆ.
ಸಾರ್ಸ್-ಅoಗಿ-೨ ಮತ್ತು ಕೋವಿಡ್-೧೯ ವೈರಾಣುಗಳ ವಿರುದ್ಧ ಹೋರಾಡುವ ಸಂದರ್ಭದ ಉದ್ದಕ್ಕೂ ಕೇರಳವು ಹಲವಾರು ಮುಜುಗರಗಳಿಗೆ ಒಳಗಾಯಿತು ಮತ್ತು ಅದೇ ಸಮಯದಲ್ಲಿ ಹೊಸ ತಿಳುವಳಿಕೆಯನ್ನು ಪಡೆಯಿತು. ಅವುಗಳನ್ನು ಕೇಂದ್ರ ಸರ್ಕಾರದೊಂದಿಗೆ ಹಂಚಿಕೊಳ್ಳಲು ನಾವು ಪ್ರಯತ್ನ ಮಾಡಿದ್ದೇವೆ; ಪ್ರಧಾನ ಮಂತ್ರಿ, ಆರೋಗ್ಯ ಸಚಿವರು, ಹಣಕಾಸು ಸಚಿವರು, ವಿದೇಶಾಂಗ ಸಚಿವರುಗಳಿಗೆ ಪತ್ರ ಬರೆದಿದ್ದೇವೆ. ಅವುಗಳ ಮುಖ್ಯ ಅಂಶವೇನೆಂದರೆ, ಒಂದು ರಾಜ್ಯ ಸರ್ಕಾರಕ್ಕಿರುವ ಸೀಮಿತ ಸಂಪನ್ಮೂಲಗಳ ಲಭ್ಯತೆಯೊಂದಿಗೆ ಅಂತಹ ರಾಕ್ಷಸಾಕಾರದ ಮಹಾಮಾರಿಯನ್ನು ಎದುರಿಸುವುದು ಕಷ್ಟಸಾಧ್ಯವೇ ಸರಿ ಎನ್ನುವುದಾಗಿತ್ತು. ರಾಜ್ಯಗಳಿಗೆ ಹೆಚ್ಚು ಸಂಪನ್ಮೂಲಗಳನ್ನು ಒದಗಿಸದೆ ಅದನ್ನು ಸಮಗ್ರವಾಗಿ ಹಿಮ್ಮೆಟ್ಟಿಸಿ ಗೆಲ್ಲುವುದು ಸಾಧ್ಯವಿಲ್ಲ. ಆದಕಾರಣ ರಾಜ್ಯಗಳ ಸಾಲಪಡೆಯುವ ಮಿತಿಯನ್ನು ಹೆಚ್ಚಿಸಬೇಕು, ಬಡ್ಡಿ ದರವನ್ನು ಕಡಿಮೆ ಮಾಡಬೇಕು, ಮುಂಗಡ ಪಡೆಯಲು ಅನುವುಮಾಡಿಕೊಡಬೇಕು, ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯಿದೆಯಡಿಯಲ್ಲಿ ಕೆಲಸದ ದಿನಗಳನ್ನು ಮತ್ತು ಕೂಲಿಯನ್ನು ಹೆಚ್ಚು ಮಾಡಲು ಬಿಡಬೇಕು, ಔಷಧಿಗಳು ಹಾಗೂ ಮುಖಗವಸು ಮತ್ತು ನಿರ್ಮಲೀಕರಣ ಬಾಬತ್ತುಗಳು ಮುಂತಾದ ಅಗತ್ಯ ವಸ್ತುಗಳ ಉತ್ಪಾದನೆ ಮಾಡಲು ಸಾರ್ವಜನಿಕ ವಲಯದ ಘಟಕಗಳು ಭಾಗವಹಿಸುವಂತೆ ಆಗಬೇಕು, ತಪಾಸಣಾ ಕೇಂದ್ರಗಳನ್ನು ಹೆಚ್ಚಿಸಬೇಕು, ಹೆಚ್ಚು ವೈದ್ಯಕೀಯ ಉಪಕರಣಗಳನ್ನು ಒದಗಿಸಬೇಕು, ಬರ ಪರಿಹಾರ ನಿಧಿ ಬಳಕೆಯ ನಿರ್ಬಂಧ ಸಡಿಲಗೊಳಿಸಬೇಕು, ಮುಂತಾದ ಕೆಲವು ಕ್ರಮಗಳನ್ನು ಆದ್ಯತೆಯ ಮೇಲೆ ಕೇಂದ್ರ ಸರ್ಕಾರವು ಜಾರಿಗೊಳಿಸಬೇಕಾದ ಅಗತ್ಯವಿದೆ.
ದೈಹಿಕ ಅಂತರ, ಸಾಮಾಜಿಕ ಒಗ್ಗಟ್ಟು:
ಕೇರಳದ ಮಟ್ಟಿಗೆ ಹೇಳುವುದಾದರೆ, ವೈರಾಣುಗಳ ಮತ್ತು ಸಾಂಕ್ರಾಮಿಕ ರೋಗಗಳ ಸತತ ದಾಳಿಯು ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಚೇತರಿಕೆಯನ್ನು ಹೆಚ್ಚುಮಾಡಿದೆ. ನಮ್ಮ ಅಡ್ಡಿ ಆತಂಕಗಳನ್ನು ಅರಿತುಕೊಳ್ಳಲು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಹಾಯ ಮಾಡಿದೆ. ಕೋವಿಡ್-೧೯ನ್ನು ಎದುರಿಸುವಲ್ಲಿನ ಜಗತ್ತಿನ ಎಲ್ಲೆಡೆಯ ಅನುಭವವು ಸದೃಢ ಸಾರ್ವಜನಿಕ ಅರೋಗ್ಯ ಪಾಲನೆ ವ್ಯವಸ್ಥೆಯ ಅಗತ್ಯವನ್ನು ಒತ್ತಿಹೇಳುತ್ತದೆ. ಅದರಿಂದ ಪಾಠ ಕಲಿತು, ಕೇರಳದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ಆರ್ದ್ರಂ ಮಿಷನ್ ಮೂಲಕ ಸಾಮರ್ಥ್ಯ ವೃದ್ಧಿ ಕಾರ್ಯವನ್ನು ಕೈಗೊಂಡಿದ್ದು ಈ ಸಮಯದಲ್ಲಿ ನಮಗೆ ಬಹಳ ಸಹಾಯವಾಯಿತು ಎಂಬ ಅಂಶವನ್ನು ಅಗತ್ಯವಾಗಿ ಗಮನಿಸಬೇಕು. ಈ ಬಿಕ್ಕಟ್ಟಿನಿಂದ ಪಾರಾಗಲು, ಇಡೀ ಸಮಾಜವು ಒಂದಾಗಿ ಮೂದುವರಿಯಬೇಕು ಎಂಬುದನ್ನು ಕೂಡ ನಾವು ಖಾತ್ರಿಪಡಿಸಿದೆವು.
ಕೋವಿಡ್-೧೯ನ್ನು ಎದುರಿಸುವಾಗ ನಮ್ಮ ಗುರಿ ’ದೈಹಿಕ ಅಂತರ, ಸಾಮಾಜಿಕ ಒಗ್ಗಟ್ಟು’ ಎಂಬುದಾಗಿತ್ತು. ಸಮಾಜವನ್ನು ಒಂದಾಗಿಟ್ಟುಕೊಳ್ಳಲು ಪತ್ರಿಕಾ ಗೋಷ್ಠಿ ಮತ್ತು ಸರ್ಕಾರಿ ಸಂಪರ್ಕ ಸಾಧನಗಳ ಮೂಲಕ ಪ್ರತಿ ಹಂತದಲ್ಲೂ ನಾವು ಅವರಿಗೆ ಮಾಹಿತಿಗಳನ್ನು ಒದಗಿಸುತ್ತಿದ್ದೆವು. ವಿಶ್ವಾಸಾರ್ಹ ಹಾಗೂ ವೈಜ್ಞಾನಿಕ ಮಾಹಿತಿಗಳನ್ನು ಹಂಚಿಕೊಳ್ಳಲು ಮತ್ತು ಸುಳ್ಳು ಸುದ್ದಿಗಳನ್ನು ಹಾಗೂ ಸುಳ್ಳು ಮಾಹಿತಿಗಳನ್ನು ವಿರೋಧಿಸಲು ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿದೆವು. ಜನರಿಗೆ ಪರಿಹಾರ ಒದಗಿಸಲು ಸರ್ಕಾರಿ ಯಂತ್ರವನ್ನು ಬಳಸಿದೆವು. ಅದನ್ನು ಸಾಧ್ಯವಾಗಿಸಲು, ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸನ್ನಿವೇಶ ಉಂಟಾದರೆ ಸರ್ಕಾರ ಪರಿಣಾಮಕಾರಿಯಾಗಿ ಹಾಗೂ ಪೂರ್ವಭಾವಿಯಾಗಿ ಮಧ್ಯಪ್ರವೇಶಿಸಲು ಕೇರಳ ಸಾಂಕ್ರಾಮಿಕ ರೋಗ ಸುಗ್ರೀವಾಜ್ಞೆ, ೨೦೨೦ ನ್ನು ನಾವು ಹೊರಡಿಸಿದೆವು.
ನಾವು ಅತ್ಯಂತ ಅಸಾಧಾರಣವಾದ ಸವಾಲನ್ನು ಎದುರಿಸುತ್ತಿದ್ದೇವೆ. ನಾವು ಮುಂದೆ ಸಾಗಲು ನಮ್ಮ ಎಲ್ಲಾ ವ್ಯವಸ್ಥೆಗಳು, ಬದ್ಧತೆ, ಒಡನಾಡಿಗಳ ಜತೆಗಿನ ಪ್ರೀತಿ ಇವೆಲ್ಲವನ್ನು ಒಟ್ಟುಗೂಡಿಸುತ್ತಿದ್ದೇವೆ. ಈ ಮಹಾಮಾರಿಯು ಹಲವಾರು ಮುಂದುವರಿದ ದೇಶಗಳನ್ನು ಸ್ತಬ್ಧಗೊಳಿಸಿದೆ. ಈ ವೈರಾಣು ಹರಡದಂತೆ ತಡೆಯಲು ಕೇರಳವು ಕಠೋರವಾದ ವಿರೋಧ ಒಡ್ಡುತ್ತಿದೆ. ಅದನ್ನು ತಡೆಯುವ ಸಲುವಾಗಿ, ನಾವು ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಕೇರಳ ಎಲ್‌ಡಿಎಫ್ ಸರ್ಕಾರವು ಮುಂಚೂಣಿಯಲ್ಲಿ ನಿಂತು ಈ ಹೋರಾಟಕ್ಕೆ ನಾಯಕತ್ವ ನೀಡುತ್ತಿದೆ.
ಅನು:ಟಿ. ಸುರೇಂದ್ರ ರಾವ್