ಕೋವಿಡ್ ವಿರುದ್ದ ಸಮರದಲ್ಲಿ ಸಾಂಕೇತಿಕ ಆಚರಣೆಗಳು ಮೂರ್ತ ಕ್ರಮಗಳಿಗೆ ಬದಲಿಯಾಗಲಾರವು

ಭಾರತೀಯ ಸಂವಿಧಾನದ ರಕ್ಷಕರಾಗಿರುವ ರಾಷ್ಟ್ರಪತಿಗಳಿಗೆ ಸೀತಾರಾಂ ಯೆಚುರಿ ಪತ್ರ

ನಮ್ಮ ದೇಶ ಒಂದು ಮಹಾಮಾರಿಯ ಎದುರು ಗಂಭೀರ ಸಮರದಲ್ಲಿ ತೊಡಗಿರುವಾಗ ಅದಕ್ಕೆ ಅಗತ್ಯವಾದ ಮೂರ್ತ ಕ್ರಮಗಳ ಬದಲು ಸಾಂಕೇತಿಕ ಆಚರಣೆಗಳು ನಡೆಯುತ್ತಿವೆ. ಎಪ್ರಿಲ್ 5ರ ಸಾಂಕೇತಿಕ ಆಚರಣೆಯನ್ನುಇಂತಹ ಗಂಭೀರ ಸನ್ನಿವೇಶದಲ್ಲೂ ಪಟಾಕಿಗಳ ಮೂಲಕ ಉತ್ಸವದಂತೆ ಆಚರಿಸುವ ಕಳವಳಕಾರೀ ಪ್ರಸಂಗ ನಡೆದಿದೆ.

ಈ ಕುರಿತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿಯವರು ಎಪ್ರಿಲ್ ೬ರಂದು ಭಾರತದ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಇಂತಹ ಸಾಂಕೇತಿಕ ಆಚರಣೆಗಳು ಸರಕಾರ ತುರ್ತಾಗಿ ಕೈಗೊಳ್ಳಬೇಕಾದ ಮೂರ್ತ ಕ್ರಮಗಳಿಗೆ ಬದಲಿಯಾಗಲಾರವು ಎಂಬುದನ್ನು ತಾವು ಕೂಡ ಖಂಡಿತವಾಗಿ ಒಪ್ಪುತ್ತೀರಿ ಎಂದು ಹೇಳುತ್ತ ಈ ಪತ್ರದಲ್ಲಿ ಕೇವಲ 4 ಗಂಟೆಗಳ ನೋಟಿಸಿನಲ್ಲಿ ತಂದ ದೇಶವ್ಯಾಪಿ ಲಾಕ್‌ಡೌನ್ ಸೃಷ್ಟಿಸಿದ ಲಕ್ಷಾಂತರ ವಲಸೆ ಕಾರ್ಮಿಕರ ಬವಣೆ, ರಾಜ್ಯಗಳನ್ನು ವಿಶ್ವಾಸಕ್ಕೆ ತಗೊಳ್ಳದಿರುವುದು, ಇದರಿಂದ ಉಂಟಾಗಿರುವ ಪ್ರತಿಕೂಲ ಆರ್ಥಿಕ ಪರಿಸ್ಥಿತಿ, ವೈದ್ಯಕೀಯ ಪರಿಕರ-ಸಾಧನಗಳ ಕೊರತೆ, ಕೋವಿಡ್-19ಕ್ಕೆ ಹೊಸ ನಿಧಿ ಮತ್ತು ಈ ಗಂಭೀರ ಸನ್ನಿವೇಶದಲ್ಲೂ ಕೋಮುವಾದಿ ಧ್ರುವೀಕರಣವನ್ನು ಹೆಚ್ಚಿಸುವ ಪ್ರಯತ್ನಗಳತ್ತ ರಾಷ್ಟ್ರಪತಿಗಳ ಗಮನ ಸೆಳೆದಿದ್ದಾರೆ.

ಈ ಹಿಂದೆ ಪ್ರಧಾನ ಮಂತ್ರಿಗಳು ಮತ್ತು ಹಣಕಾಸು ಮಂತ್ರಿಗಳಿಗೆ ಪತ್ರ ಬರೆದರೂ ಕೇವಲ ಇಂತಹ ಸಾಂಕೇತಿಕ ಆಚರಣೆಗಳಷ್ಟೇ ನಡೆಯುತ್ತಿರುವುದರ ಹಿನ್ನೆಲೆಯಲ್ಲಿ ಭಾರತೀಯ ಸಂವಿಧಾನದ ರಕ್ಷಕರು ತಾವಾಗಿರುವುದರಿಂದ, ನಿಮ್ಮ ಮಂಜೂರಾತಿಯಿಂದ ಮತ್ತು ಅಧಿಕಾರದ ಅಡಿಯಲ್ಲಿ ಕೇಂದ್ರ ಸರಕಾರ ಕಾರ್ಯ ನಿರ್ವಹಿಸುತ್ತಿರುವುದರಿಂದಈ ಪತ್ರ ಬರೆಯಬೇಕಾಗಿ ಬಂದಿದೆ ಎಂದು ಯೆಚುರಿ ಈ ಪತ್ರದಲ್ಲಿ ಖೇದ ವ್ಯಕ್ತಪಡಿಸಿದ್ದಾರೆ.

ಈ ಆರು ಮೂರ್ತ ಪ್ರಶ್ನೆಗಳಲ್ಲಿ ಈಗ ತುರ್ತಾಗಿ ಕೈಗೊಳ್ಳಲೇ ಬೇಕಾಗಿರುವ ಮೂರ್ತ ಕ್ರಮಗಳ ಬಗ್ಗೆ ಬರೆಯುತ್ತ ಇವನ್ನು ಎಲ್ಲ ಗಂಭೀರತೆ ಮತ್ತು ತುರ್ತಿನಿಂದ ಗಮನಕ್ಕೆ ತಗೊಳ್ಳಬೇಕು  ಎಂದು ನಾನು ನಿಮ್ಮನ್ನು ಪ್ರಾರ್ಥಿಸುತ್ತೇನೆ. ಈ ವಿಷಯಗಳ ಮೇಲೆ ತಕ್ಷಣವೇ ಸಮರೋಪಾದಿಯಾಗಿ ಕ್ರಿಯೆಗಿಳಿಯಬೇಕು ಎಂದು ನಿಮ್ಮ ಸರಕಾರಕ್ಕೆ ದಯವಿಟ್ಟು ನಿರ್ದೇಶನ ನೀಡಿ ಎಂದು  ಯೆಚುರಿ ತಮ್ಮ ಪತ್ರದ ಕೊನೆಯಲ್ಲಿ ಹೇಳಿದ್ದಾರೆ.

ಈ ಪತ್ರದ ಪೂರ್ಣ ಪಾಠವನ್ನು ಈ ಮುಂದೆ ಕೊಡಲಾಗಿದೆ:

ಗೌರವಾನ್ವಿತ ರಾಷ್ಟ್ರಪತಿಗಳೇ,

ಭಾರತೀಯ ಸಂವಿಧಾನದ ರಕ್ಷಕರು ತಾವಾಗಿರುವುದರಿಂದ, ನಿಮ್ಮ ಮಂಜೂರಾತಿಯಿಂದ ಮತ್ತು ಅಧಿಕಾರದ ಅಡಿಯಲ್ಲಿ ಕೇಂದ್ರ ಸರಕಾರ ಕಾರ್ಯ ನಿರ್ವಹಿಸುತ್ತಿರುವುದರಿಂದ, ನಾನು ತಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.

ದೇಶ ಮತ್ತು ಜನತೆ ಇದುವರೆಗೆ ಎರಡು ಸಾಂಕೇತಿಕ ಪ್ರಸಂಗಗಳ ಮೂಲಕ ಹಾದು ಬಂದಿದ್ದಾರೆ. ಕಳವಳಕಾರಿ ಸಂಗತಿಯೆಂದರೆ, ನಿನ್ನೆಯ ಸಾಂಕೇತಿಕ ಸಂದರ್ಭವನ್ನು ಹಲವರು, ದೇಶ ಮಹಾಮಾರಿಯ ವಿರುದ್ಧ ಗಂಭೀರ ಸಮರ ನಡೆಸುತ್ತಿರುವಾಗ, ಪಟಾಕಿಗಳ ಮೂಲಕ ಒಂದು ಉತ್ಸವದಂತೆ ಆಚರಿಸಿದ್ದಾರೆ. ಇಂತಹ ಸಾಂಕೇತಿಕ ಆಚರಣೆಗಳು ಸರಕಾರ ತುರ್ತಾಗಿ ಕೈಗೊಳ್ಳಬೇಕಾದ ಮೂರ್ತ ಕ್ರಮಗಳಿಗೆ ಬದಲಿಯಾಗಲಾರವು ಎಂಬುದನ್ನು ತಾವು ಕೂಡ ಖಂಡಿತವಾಗಿ ಒಪ್ಪುತ್ತೀರಿ.

ನಾನು ತಮ್ಮ ಮಧ್ಯಪ್ರವೇಶವನ್ನು ಕೋರಬೇಕಾಗಿ ಬಂದಿರುವುದು, ಈ ಹಿಂದೆ ನಾನು ಗೌರವಾನ್ವಿತ ಪ್ರಧಾನ ಮಂತ್ರಿಗಳು ಮತ್ತು ಹಣಕಾಸು ಮಂತ್ರಿಗಳೋಡನೆ ನಡೆಸಿದ ಸಂಪರ್ಕಗಳಿಗೆ ಅಷ್ಟೇನೂ ಸ್ಪಂದನೆ ಸಿಕ್ಕಿಲ್ಲವಾದ್ದರಿಂದ. ಇದು ನಿಮ್ಮ ಸರಕಾರವಾದ್ದರಿಂದ, ನಾನು, ನಮ್ಮ ಜನಗಳ ಪರವಾಗಿ ಈ ಕೆಳಗಿನ ಪ್ರಶ್ನೆಗಳನ್ನು ಪರಿಶೀಲಿಸಿ, ಅದಕ್ಕನುಗುಣವಾಗಿ ಸರಕಾರಕ್ಕೆ ಕೊವಿಡ್-19 ಮಹಾಮಾರಿಯ ವಿರುದ್ಧ ಸಮರ ನಡೆಸುವುದಕ್ಕಾಗಿ ಮತ್ತು ಅದನ್ನು ಸೋಲಿಸುವುದಕ್ಕಾಗಿ ನಿರ್ದೇಶನಗಳನ್ನು ನೀಡಬೇಕೆಂದು ತಮ್ಮನ್ನು ವಿನಂತಿಸಿಕೊಳ್ಳುತ್ತೇನೆ.

ಪ್ರಧಾನ ಮಂತ್ರಿಗಳ ದೇಶವ್ಯಾಪಿ 21 ದಿನಗಳ ಲಾಕ್‌ಡೌನಿನ ಪ್ರಕಟಣೆ ಕೇವಲ ನಾಲ್ಕು ಗಂಟೆಗಳ ನೋಟೀಸು ಕೊಟ್ಟಿತ್ತು. ಆದರೆ ಅವರು ಮಾರ್ಚ್ 22ರಂದು ನಡೆಸಬೇಕೆಂದು ನೀಡಿದ ಒಂದೇ ದಿನದ  ಜನತಾ ಕರ್ಫ್ಯೂನ ಕರೆಗೆ ಜನಗಳು ಸಿದ್ಧರಾಗಲು ಅನುವಾಗುವಂತೆ ಎರಡು ದಿನಗಳ ನೋಟೀಸು ಕೊಡಲಾಗಿತ್ತು.

ಈ ಲಾಕ್‌ಡೌನನ್ನು, ಸರಕಾರದಿಂದಾಗಲೀ, ಜನತೆಯಿಂದಾಗಲೀ, ಯಾವುದೇ ಪೂರ್ವಸಿದ್ಧತೆಯಿಲ್ಲದೆ ಹೇರಲಾಯಿತು. ಅದರ ಫಲಿತಾಂಶವೆಂದರೆ, ಒಂದು ಮಟ್ಟಿನ ಅಸ್ತವ್ಯಸ್ತತೆ ಮತ್ತು ಅರಾಜಕತೆ, ಈ ಮಹಾಮಾರಿ ಇಡೀ ಸಮುದಾಯದಲ್ಲಿ ಹರಡದಂತೆ ತಡೆಯುವ ಗುರಿಯನ್ನೇ ವಿಫಲಗೊಳಿಸುವಂತದ್ದು.

ಆದ್ದರಿಂದ ಈ ಕೆಳಗಿನ ಪ್ರಶ್ನೆಗಳನ್ನು ಸಮರೋಪಾದಿಯಲ್ಲಿ ಎತ್ತಿಕೊಳ್ಳುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರುತ್ತೇನೆ:

1. ವಲಸೆ ಕಾರ್ಮಿಕರು

ಈ ಲಾಕ್‌ಡೌನಿನಿಂದ ತಮ್ಮ ಜೀವನಾಧಾರಗಳನ್ನು ಮತ್ತು ದೈನಂದಿನ ಆದಾಯಗಳನ್ನು ಕಳಕೊಂಡ ಲಕ್ಷ-ಲಕ್ಷ ವಲಸೆ ಕಾರ್ಮಿಕರು ನೂರಾರು ಕಿಲೋಮೀಟರುಗಳ ದೂರದಲ್ಲಿರುವ ತಮ್ಮ ಮನೆಗಳಿಗೆ ಧಾವಿಸುತ್ತಿದ್ದಾರೆ. ಅಲ್ಲದೆ ಇದು ಕಟಾವಿನ ಸಮಯ. ಅವರಲ್ಲಿ ಹಲವರು ಈ ಅವಧಿಯಲ್ಲಿ ತಮ್ಮ ಕಟುಂಬಗಳಿಗೆ ನೆರವಾಗಲು ಹಿಂದಿರುಗುತ್ತಾರೆ.

ಸರಕಾರ ಭಾರತಕ್ಕೆ ಮರಳಲು ಸಾಧ್ಯವಾಗದೆ ವಿದೇಶಗಳಲ್ಲಿ ಇಕ್ಕಟ್ಟಿನಲ್ಲಿದ್ದ ಭಾರತೀಯರನ್ನು ಕರೆ ತರಲು ವಿಶೇಷ ವಿಮಾನ ಹಾರಾಟಗಳನ್ನು ಸಂಘಟಿಸಿತು. ಇದೇ ರೀತಿಯಲ್ಲಿ, ನಮ್ಮ ಈ ಬಂಧುಗಳಿಗೆ, ಅದೇ ರೀತಿಯಲ್ಲಿ ವಿಮಾನಗಳಲ್ಲವಾದರೂ, ವಿಶೇಷ ರೈಲುಗಳ ಅಥವ ಬಸ್‌ಗಳ ವ್ಯವಸ್ಥೆ ಮಾಡಬಹುದಿತ್ತು. ಅದು ಸಾಧ್ಯವಾಗದಿದ್ದರೆ, ಲಾಕ್‌ಡೌನಿನ ಪ್ರಕಟನೆಯ ಮೊದಲು, ಅವರು ವೈಯಕ್ತಿಕ ದೂರಗಳನ್ನು ಕಾಯ್ದುಕೊಳ್ಳುವಂತೆ ತಾತ್ಕಾಲಿಕ ಆಶ್ರಯ ತಾಣಗಳನ್ನು , ಸಾಕಷ್ಟು ರೇಶನ್‌ನೊಂದಿಗೆ ಮತ್ತು ಉಳಿದುಕೊಳ್ಳುವ ಸೌಲಭ್ಯಗಳೊಂದಿಗೆ ವ್ಯವಸ್ಥೆಗೊಳಿಸಬೇಕಾಗಿತ್ತು.

2. ರಾಜ್ಯಗಳನ್ನು ವಿಶ್ವಾಸಕ್ಕೆ ತಗೊಳ್ಳಲಿಲ್ಲ

ಒಕ್ಕೂಟ ತತ್ವ ನಮ್ಮ ಸಂವಿಧಾನದ ಒಂದು ಮೂಭೂತ ಲಕ್ಷಣ. ಭಾರತೀಯ ಸಂವಿಧಾನದ ಮೊದಲ ಕಲಮು ಇಂಡಿಯಾ, ಅಂದರೆ ಭಾರತ, ಒಂದು ರಾಜ್ಯಗಳ ಸಂಘ ಎಂದು ನಿರೂಪಿಸುತ್ತದೆ.

ದುರದೃಷ್ಟವಶಾತ್, ಪ್ರಧಾನ ಮಂತ್ರಿಗಳು, ದೇಶವ್ಯಾಪಿ ಲಾಕ್‌ಡೌನನ್ನು ಪ್ರಕಟಿಸುವ ಮೊದಲು ಚುನಾಯಿತ ರಾಜ್ಯ ಸರಕಾರಗಳನ್ನು ವಿಶ್ವಾಸಕ್ಕೆ ತಗೊಳ್ಳಲಿಲ್ಲ. ಇದರಿಂದಾಗಿ ಹಲವು ರಾಜ್ಯಗಳು ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ.

ಈಗ ರಾಜ್ಯಗಳನ್ನು ವಲಸೆ ಕಾರ್ಮಿಕರ ಬಿಕ್ಕಟ್ಟಿನ ಹೊಣೆ ತಗೊಳ್ಳಬೇಕು ಎಂದು ಹೇಳುವುದು ಬಹಳ ಅನ್ಯಾಯದ ಸಂಗತಿ. ಕೇಂದ್ರ ಸರಕಾರ, ಈ ಪ್ರಯತ್ನಗಳಲ್ಲಿ ರಾಜ್ಯ ಸರಕಾರಗಳಿಗೆ ಉದಾರವಾಗಿ ಹಣಕಾಸು ಬೆಂಬಲ ನೀಡಬೇಕು. ಇತ್ತೀಚೆಗೆ, ರಾಜ್ಯ ಅನಾಹುತ ಅಪಾಯ ನಿರ್ವಹಣೆ ನಿಧಿಯಿಂದ ಪ್ರಕಟಿಸಿದ ಬೆಂಬಲ ಅತ್ಯಲ್ಪ, ಏನೇನೂ ಸಾಲದು.

3. ಪ್ರತಿಕೂಲ ಆರ್ಥಿಕ ಪರಿಣಾಮಗಳನ್ನು ಶಮನಗೊಳಿಸಬೇಕು

ಅ) ಕೋಟ್ಯಂತರ ಜನಗಳು ತಮ್ಮ ಆದಾಯ ಗಳಿಸುವ ಸಾಮರ್ಥ್ಯವನ್ನು ಕಳಕೊಂಡಿದ್ದಾರೆ. ಸಾಮೂಹಿಕ ಹಸಿವು ಮತ್ತು ಆಹಾರ ಕೊರತೆಯ ಒಂದು ತೀವ್ರ ಬಿಕ್ಕಟ್ಟು ಸಂಭವಿಸಲು ನಾವು ಬಿಡಲಾಗದು. ಏನೇ ಬೆಲೆ ತೆತ್ತಾದರೂ ಇದನ್ನು ತಡೆಯಬೇಕಾಗಿದೆ ಎಂಬುದನ್ನು ನೀವೂ ಒಪ್ಪುತ್ತೀರಿ ಎಂಬ ಖಾತ್ರಿ ನನಗಿದೆ.

ಕೇಂದ್ರ ಸರಕಾರದ ಎಫ್‌ಸಿಐ ಗೋದಾಮುಗಳಲ್ಲಿ ಸುಮಾರು 7.5 ಕೋಟಿ ಟನ್ ಆಹಾರಧಾನ್ಯಗಳ ದಾಸ್ತಾನು ಇದೆ. ಈ ದಾಸ್ತಾನು ಕೊಳೆತು ಹೋಗಲು, ಅಥವ ಹೆಗ್ಗಣಗಳಿಗೆ ಆಹಾರವಾಗಲು ಬಿಡುವ ಬದಲು, ಅದನ್ನು ತಕ್ಷಣವೇ ರಾಜ್ಯಗಳಿಗೆ ತಮ್ಮ ಆದಾಯಗಳನ್ನು ಕಳಕೊಂಡಿರುವ ಜನಗಳ ನಡುವೆ ಹಂಚಲು ರವಾನಿಸಬೇಕು.

ಆ) ಈ ಮಹಾಮಾರಿ ಎರಗುವ ಮೊದಲೇ ಕಾಲು ಹಾಕಿದ್ದ ಆರ್ಥಿಕ ಹಿಂಜರಿತವನ್ನು ಈ ಲಾಕ್‌ಡೌನಿನ ದುಷ್ಪರಿಣಾಮಗಳು ಉಲ್ಬಣಗೊಳಿಸಿವೆ. ಹಲವು ಉದ್ಯಮಗಳು ಕಾರ್ಮಿಕರ ಲೇ-ಆಫ್ ಮಾಡುತ್ತಿವೆ, ಮತ್ತು ಹಲವು ರಾಜ್ಯಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ವೇತನ ಕಡಿತಗಳಾಗುತ್ತಿವೆ. ವೇತನಗಳನ್ನು ಮೊದಲಿನ ಹಾಗೇ ಇಟ್ಟುಕೊಳ್ಳಬೇಕು ಎಂದೇನೋ ಸರಕಾರ ಆದೇಶ ನೀಡಿದೆ. ಆದರೆ ಕಾರ್ಯತಃ ಹೀಗಾಗುತ್ತಿಲ್ಲ. ಮಾಲಕರು ತಮ್ಮ ವ್ಯವಹಾರಗಳು ಸ್ತಬ್ಧಗೊಂಡಿರುವುದರಿಂದಾಗಿ ಸಂಬಳಗಳನ್ನು ಕೊಡಲು ತಮಗಾಗುತ್ತಿಲ್ಲ ಎನ್ನುತ್ತಿದ್ದಾರೆ.

ಹಲವು ದೇಶಗಳ ಸರಕಾರಗಳು ಮಾಲಕರ ನಷ್ಟಗಳನ್ನು ತುಂಬಿಕೊಡಲು ಮುಂದೆ ಬಂದಿವೆ. ಕೆಲವು ಒಟ್ಟು ವೇತನ ಪಾವತಿಗೆ ಬೇಕಾದ ಮೊತ್ತದ 80 ಶೇ. ವರೆಗೆ ಕೊಡುವುದಾಗಿ ಹೇಳಿವೆ. ನಿಮ್ಮ ಸರಕಾರವೂ ಇದೇ ರೀತಿಯ ಒಂದು ಕ್ರಮವನ್ನು ಪ್ರಕಟಿಸಬೇಕು.

ಇ) ಕೋಟ್ಯಂತರ ಮಧ್ಯಮ ವರ್ಗಗಳ ಜನರು ತೆಗೆದುಕೊಂಡ ಸಾಲದ ಕಂತುಗಳನ್ನು ಕಟ್ಟಬೇಕಾಗಿದೆ. ಇಂತಹ ಪಾವತಿಗಳನ್ನು ಕನಿಷ್ಟ ಮೂರು ತಿಂಗಳ ಮಟ್ಟಿಗೆ ಮುಂದೂಡಬೇಕು. ಈ ಮುಂದೂಡಿಕೆ ಬಡ್ಡಿರಹಿತವಾಗಿರಬೇಕು.

ಈ) ಕೃಷಿ ಸಂಕಟ ಮತ್ತಷ್ಟು ತೀಕ್ಷ್ಣಗೊಳ್ಳುವುದು ಖಂಡಿತ. ಇಂತಹ ಸಂದರ್ಭಗಳಲ್ಲಿ ನಿಮ್ಮ ಸರಕಾರ ತಕ್ಷಣವೇ ರೈತರು ತೆಗೆದುಕೊಂಡ ಸಾಲದ ಒಂದು ಸಮಯದ ಸಾಲಮನ್ನಾವನ್ನು ಪ್ರಕಟಿಸಬೇಕು. ಇದು ಖಂಡಿತಾ ಸಾಧ್ಯವಿದೆ. ಏಕೆಂದರೆ, ಇದುವರೆಗೆ ನಮ್ಮ ಸೂಪರ್ ಶ್ರೀಮಂತ ಕಾರ್ಪೊರೇಟ್‌ಗಳ ರೂ. 7.78 ಲಕ್ಷ ಕೋಟಿ ರೂ.ಗಳಷ್ಟು ಸಾಲಗಳನ್ನು ಈ ಸರಕಾರ ಮನ್ನಾ ಮಾಡಿದೆ. ಖಂಡಿತವಾಗಿಯೂ, ಇಂತಹ ತಾದಾತ್ಮ್ಯವನ್ನು ನಮ್ಮ ಅನ್ನದಾತರ ವಿಷಯದಲ್ಲೂ ತೋರಿಸಬಹುದು.

4. ವೈದ್ಯಕೀಯ ಸಾಧನಗಳ ಕೊರತೆ

ಅತ್ಯಗತ್ಯವಾದ ವೈದ್ಯಕೀಯ ಸಾಧನಗಳ ತೀವ್ರ ಕೊರತೆ ಇದೆ ಎಂಬ ಹಲವಾರು ವರದಿಗಳಿವೆ. ಅತ್ಯಂತ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ನಮ್ಮ ಧೀರ ಆರೋಗ್ಯ ಕಾರ್ಯಕರ್ತರಿಗೆ ಸರಿಯಾದ ಸುರಕ್ಷಾ ಉಡುಗೆ-ಪರಿಕರಗಳಿಲ್ಲ. ಅವರಿಗೆ ಈಗಾಗಲೇ ಸೋಂಕು ತಗಲಿರುವ ವರದಿಗಳು ಹಲವು ಆಸ್ಪತ್ರೆಗಳಿಂದ ಬರುತ್ತಿವೆ. ಇವುಗಳ ಪೂರೈಕೆಯನ್ನು ಹೇಗಾದರೂ ಮಾಡಿ ತಕ್ಷಣವೇ ಹೆಚ್ಚಿಸಬೇಕು.

ರೋಗಿಗಳನ್ನು ಪ್ರತ್ಯೇಕಗೊಳಿಸಿಡುವ ಐಸೊಲೇಷನ್ ವಾರ್ಡುಗಳಿಗೆ ಆಸ್ಪತ್ರೆಗಳಲ್ಲಿ ಕೊರತೆ ಉಂಟಾಗುವ ಸಂಭವವೂ ಇದೆ. ಈಗಲಾದರೂ ಇವನ್ನು ತಕ್ಷಣವೇ ಹೆಚ್ಚಿಸಬೇಕು. ವೆಂಟಿಲೇಟರುಗಳ ಕೊರತೆ ತೀವ್ರವಾಗಿದೆ, ಅವನ್ನು ತಕ್ಷಣವೇ ಖರೀದಿಸಬೇಕು.

ಸೋಂಕಿನ ತಪಾಸಣೆಯ ಪ್ರಮಾಣ ಅತೀ ಕಡಿಮೆ ಇರುವ ದೇಶಗಳಲ್ಲಿ ಭಾರತವೂ ಒಂದು ಎಂದು ಸಾರ್ವತ್ರಿಕವಾಗಿ ಟಿಪ್ಪಣಿ ಮಾಡಲಾಗಿದೆ. ದಕ್ಷಿಣ ಕೊರಿಯಾದಲ್ಲಿ ಪ್ರತಿ ದಶಲಕ್ಷ ಜನಸಂಖ್ಯೆಯಲ್ಲಿ 7,659 ಜನಗಳ ತಪಾಸಣೆ ಮಾಡಿದ್ದರೆ, ಭಾರತದಲ್ಲಿ ಇದು ಕೇವಲ 32ರಷ್ಟು ಅತೀ ಕೆಳಮಟ್ಟದಲ್ಲಿದೆ. ಇದು ಭವಿಷ್ಯದ ಮಟ್ಟಿಗೆ ಅತ್ಯಂತ ಅಪಾಯಕಾರಿ. ಎಷ್ಟು ಸಾಧ್ಯವೋ ಅಷ್ಟು ವ್ಯಾಪಕವಾಗಿ ಸೋಂಕು ತಪಾಸಣೆ ಆಗಬೇಕಿದೆ, ದೇಶವ್ಯಾಪಿ ಲಾಕ್‌ಡೌನ್ ಬದಲು, ಯಾವ ಸಮೂಹಗಳಲ್ಲಿ ವೈರಸ್‌ಗಳು ಹರಡುತ್ತಿವೆ ಎಂದು ಗುರುತಿಸಿ, ಅವನ್ನು ಪ್ರತ್ಯೇಕಗೊಳಿಸಿ ಅಲ್ಲಿ ಲಾಕ್ಡೌನ್ ಹಾಕಬೇಕಿದೆ.

ಈ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕಿದೆ, ನಿಮ್ಮ ಸರಕಾರಕ್ಕೆ ಹೀಗೆ ಮಾಡಲು ನಿರ್ದೇಶನ ನೀಡಬೇಕು.

5. ಹೊಸ ಕೊವಿಡ್-19 ನಿಧಿ

ವಿಚಿತ್ರ ಸಂಗತಿಯೆಂದರೆ, ನಿಮ್ಮ ಸರಕಾರ ಈ ಮಹಾಮಾರಿಯನ್ನು ಎದುರಿಸಲು ಪಿಎಂ ಕೇರ್ಸ್ ಎಂಬ ಹೊಸದೊಂದು ನಿಧಿಯನ್ನು ಸ್ಥಾಪಿಸಿದೆ. ಕಾಯ್ದೆ ಪ್ರಕಾರ ಸ್ಥಾಪಿಸಿದ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿದಿ ದೇಶ ಸ್ವತಂತ್ರವಾದಂದಿನಿಂದ ಅಸ್ತಿತ್ವದಲ್ಲಿ ಇದೆ. ಈ ನಿಧಿ ಪಾರದರ್ಶಕವಾಗಿದೆ, ಇದರಲ್ಲಿ ಜವಾಬುದಾರಿಕೆ ಇದೆ ಮತ್ತು ದೇಶದ ಮಹಾ ಲೆಕ್ಕ ಪರಿಶೋಧಕರು ಇದರ ಲೆಕ್ಕ ಪರಿಶೋಧನೆ ಮಾಡುತ್ತಾರೆ. ಇನ್ನೊಂದೆಡೆಯಲ್ಲಿ ‘ಪಿಎಂ ಕೇರ್ಸ್’ ನಿಧಿಯನ್ನು ನಾಲ್ವರು-ಪ್ರಧಾನ ಮಂತ್ರಿ, ಗೃಹಮಂತ್ರಿ, ರಕ್ಷಣಾ ಮಂತ್ರಿ ಮತ್ತು ಹಣಕಾಸು ಮಂತ್ರಿಗಳಿರುವ ಒಮದು ಟ್ರಸ್ಟ್ ನೊಡಿಕೊಳ್ಳುತ್ತದೆ. ಈ ನಿಧಿಗೆ ಸಂಗ್ರಹ, ಅದರಿಂದ ವಿತರಣೆ  ಹೇಗೆ ನಡೆಯುತ್ತದೆ, ಅದಕ್ಕೆ ಜವಾಬುದಾರಿಕೆ ಏನು, ಇವೆಲ್ಲ ಅಂಶಗಳು ಅಜ್ಞಾತವಾಗಿವೆ. ಬಲವಂತದಿಂದ ಸಂಗ್ರಹ, ಸರಕಾರೀ ನೌಕರರ, ವೃತ್ತಿಪರರ, ಅಷ್ಟೇ ಏಕೆ, ಆರೋಗ್ಯ ಕರ್ತರ ಸಂಬಳಗಳಿಂದಲೂ, ಅವರ ಒಪ್ಪಿಗೆ ಇಲ್ಲದೆ ಒಂದು ದಿನದ ಸಂಬಳವನ್ನು ತಂತಾನೇ ಮುರಿದುಕೊಳ್ಳಲಾಗುತ್ತಿದೆ ಎಂಬ ಕಳವಳಕಾರೀ ವರದಿಗಳಿವೆ.

ಈಗಾಗಲೇ ಕಾರ್ಪೊರೇಟ್‌ಗಳಿಂದ, ಪ್ರತಿಷ್ಠಿತ ವ್ಯಕ್ತಿಗಳಿಂದ, ಸಾರ್ವಜನಿಕ ವಲಯದ ಉದ್ದಿಮೆಗಳಿಂತ ಮತ್ತು ವೇತನ ಮುರಿಕೆಗಳಿಂದ ಸಾವಿರಾರು ಕೋಟಿ ರೂ. ಗಳನ್ನು ಸಂಗ್ರಹಿಸಲಾಗಿದೆ.

ಇಂತಹುದೇ, `ಭಾರತ್ ಕೇ ವೀರ್’ ಎಂಬ ಫುಲ್ವಾಮ ಭಯೋತ್ಪಾದಕ ದಾಳಿಯ ನಂತರ ಈ ದುರಂತಕ್ಕೆ ಬಲಿಯಾದವರು ಮತ್ತು ಅವರ ಕುಟುಂಬಗಳಿಗೆ ನೆರವಾಗಲೆಂದು ರಚಿಸಿದ ನಿಧಿಯ ಅನುಭವ ದೇಶಕ್ಕೆ ಈಗಾಗಲೇ ಆಗಿದೆ. ಇದುವರೆಗೂ ಈ ಕುರಿತ ವಿವರಗಳು ಸಾರ್ವಜನಿಕವಾಗಿ ಲಭ್ಯವಿಲ್ಲ. ಇಂತಹ ನಿಧಿ ಅಪಾರದರ್ಶಕವಾಗಿದೆ, ಮತ್ತು ಉತ್ತರದಾಯಿಯಾಗಿಲ್ಲ ಎಂಬುದನ್ನು ನೀವು ಕೂಡ ಒಪ್ಪುತ್ತಿರಿ ಎಂಬ ಖಾತ್ರಿ ನನಗಿದೆ. ನೀವು ನಿಮ್ಮ ಸರಕಾರಕ್ಕೆ ಹೀಗೆ ಮಾಡಲು ಅನುಮತಿ ನೀಡುವುದು ಹೇಗೆ ಸಾಧ್ಯ?

ಈ ನಿಧಿಯನ್ನು, ಮೊದಲನೆಯದಾಗಿ ‘ಇಂಡಿಯಾ ಕೇರ್ಸ್’ ಎಂದಿರಬೇಕಾಗಿದ್ದ ಈ ನಿಧಿಯನ್ನು, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯೊಂದಿಗೆ ವಿಲೀನಗೊಳಿಸಲು ತಮ್ಮ ಮಧ್ಯಪ್ರವೇಶವನ್ನು ನಾನು ಕೋರುತ್ತೇನೆ.

ಅಲ್ಲದೆ, ಆರೋಗ್ಯ ಪಾಲನೆ ಪ್ರಥಮತಃ ರಾಜ್ಯ ಸರಕಾರಗಳ ಹೊಣೆಯಾಗಿರುವುದರಿಂದ ಈ ನಿಧಿಯ ಬಹುಪಾಲು ಮೊತ್ತವನ್ನು ಆಯಾಯ ರಾಜ್ಯ ಸರಕಾರಗಳಿಗೆ ವರ್ಗಾಯಿಸಬೇಕು, ಈ ಮೂಲಕ ಕೊವಿಡ್-19 ರ ವಿರುದ್ಧ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದನ್ನು ಖಾತ್ರಿಪಡಿಸಬೇಕು.

6. ಕೋಮುವಾದ

ಅಂತಿಮವಾಗಿ, ಈ ವೈರಸ್‌ನ ಹರಡಿಕೆಗೆ ಒಂದು ನಿರ್ದಿಷ್ಟ ಸಮುದಾಯವನ್ನು ದೂಷಿಸುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂಬದು ಗಂಭೀರ ಆತಂಕದ ಒಂದು ವಿಷಯ ಎಂಬುದನ್ನು ನೀವು ಕಾಣಬಲ್ಲಿರಿ. ತಬ್ಲಿಘಿ ಸಂಘಟಕರು ಅತ್ಯಂತ ಬೇಜವಾಬ್ದಾರಿತನ ತೋರಿದ್ದಾರೆ. ಆದರೆ ಇದು ಇಡಿಯಾಗಿ ಮುಸ್ಲಿಂ ಸಮುದಾಯವನ್ನು ಗುರಿ ಮಾಡಲು ನೆವವಾಗಬಾರದು. ಇದನ್ನು ನಿಲ್ಲಿಸದಿದ್ದರೆ ಇದು ಕೊವಿಡ್ ಮಹಾಮಾರಿಯ ವಿರುದ್ಧ ಜನಗಳ ಐಕ್ಯ ಹೋರಾಟವನ್ನು ಛಿದ್ರಗೊಳಿಸುತ್ತದೆ.

ಸರಕಾರ ಬಹಳ ಜನ ಸೇರುವ ಸಮಾರಂಭಗಳನ್ನು ನಿಷೇಧಿಸುವ ಆದೇಶವನ್ನು ಹೊರಡಿಸಿದ ನಂತರವೂ ಹಲವು ಧಾರ್ಮಿಕ ಮತ್ತು ಇತರ ಗೋಷ್ಠಿಗಳು ನಡೆದಿವೆ ಎಂಬುದು ತಮ್ಮ ಅರಿವಿಗೂ ಬಂದಿರಬಹುದು. ಸಂಸತ್ತು ಕೂಡ ದೇಶವ್ಯಾಪಿ ಲಾಕ್‌ಡೌನ್ ಘೋಷಿಸುವ ಹಿಂದಿನ ದಿನದ ವರೆಗೂ ಕಾರ್ಯ ನಿರ್ವಹಿಸುತ್ತಿತ್ತು. ಮಧ್ಯಪ್ರದೇಶದಲ್ಲಿ ಒಂದು ಸದನ ಪರೀಕ್ಷೆ ನಡೆಯಿತು, ಪಕ್ಷಾಂತರಗಳನ್ನು ಪ್ರೋತ್ಸಾಹಿಸುವಲ್ಲಿ ಒಂದು ಹೊಸ ಸರಕಾರದ ಪ್ರತಿಜ್ಞಾ ಸ್ವೀಕಾರ ನಡೆಯಿತು. ಇಂತಹ ಸಮಾರಂಭಗಳಲ್ಲಿ ಭಾಗವಹಿಸಿದ ಎಲ್ಲರನ್ನೂ ತಕ್ಷಣವೇ ತಪಾಸಣೆ ಮಾಡಬೇಕು ಮತ್ತು ಈ ಮಹಾಮಾರಿ ಇನ್ನಷ್ಟು ಹರಡದಂತೆ ತಡೆಯಲು ಅವರನ್ನು ಏಕಾಂತವಾಸದಲ್ಲಿಡಬೇಕು.

ಸಂವಿಧಾನದ ರಕ್ಷಕರಾಗಿ, ನೀವು, ಧರ್ಮ, ಜಾತಿ, ವರ್ಗದ ಆಧಾರದಲ್ಲಿ ಭೇದವೆಣಿಸದ ಒಂದು ವೈರಿಯ ವಿರುದ್ಧ ಹೋರಾಟದಲ್ಲಿ ದೇಶ ಐಕ್ಯತೆಯಿಂದಿರಬೇಕಾದ ಈಗಿನ ಯಾತನಾಮಯ ಸಮಯದಲ್ಲಿ ಕೋಮುವಾದಿ ಧ್ರುವೀಕರಣವನ್ನು ಬೆಳೆಯಲು ಬಿಡುವುದಿಲ್ಲ ಎಂಬ ನಿರೀಕ್ಷೆ ನನ್ನದು. ನಮಗೆ ಬೇಕಾಗಿರುವುದು ಮಾನವೀಯ ಅನುತಾಪವೇ ಹೊರತು ಅಪರಾಧೀಕರಣ ಅಲ್ಲ ಎಂಬುದನ್ನು ದಯವಿಟ್ಟು ನಿಮ್ಮ ಸರಕಾರಕ್ಕೆ ಮನದಟ್ಟು ಮಾಡಿ.

ಈ ಪ್ರಶ್ನೆಗಳನ್ನು ಅದಕ್ಕೆ ಅರ್ಹವಾದ ಎಲ್ಲ ಗಂಭೀರತೆ ಮತ್ತು ತುರ್ತಿನಿಂದ ಗಮನಕ್ಕೆ ತಗೊಳ್ಳಬೇಕು  ಎಂದು ನಾನು ನಿಮ್ಮನ್ನು ಪ್ರಾರ್ಥಿಸುತ್ತೇನೆ. ಈ ವಿಷಯಗಳ ಮೇಲೆ ತಕ್ಷಣವೇ  ಕ್ರಿಯೆಗಿಳಿಯಬೇಕು, ಮತ್ತೆ ಹೇಳುತ್ತೇನೆ, ಸಮರೋಪಾದಿಯಾಗಿ ಕ್ರಿಯೆಗಿಳಿಯಬೇಕು ಎಂದು ನಿಮ್ಮ ಸರಕಾರಕ್ಕೆ ದಯವಿಟ್ಟು ನಿರ್ದೇಶನ ನೀಡಿ.

 

ನಿಮ್ಮ ವಿಶ್ವಾಸಿ

ಸೀತಾರಾಂ ಯೆಚುರಿ, ಪ್ರಧಾನ ಕಾರ್ಯದರ್ಶಿ

Leave a Reply

Your email address will not be published. Required fields are marked *