ಅಕ್ಷಮ್ಯ ವಿಫಲತೆ! ಮಹಾಮಾರಿಯ ನಡುವೆಯೂ ಸಂಕುಚಿತ ರಾಜಕೀಯ!
ವಿಶ್ವ ಆರೋಗ್ಯ ಸಂಘಟನೆ( ಡಬ್ಲ್ಯು.ಹೆಚ್.ಒ.) ಕೊವಿಡ್-19ರ ಬಗ್ಗೆ ಎಲ್ಲ ರಾಷ್ಟ್ರೀಯ ಸರಕಾರಗಳನ್ನು ಎಚ್ಚರಿಸಿ ಮೂರು ತಿಂಗಳಾಗುತ್ತ ಬಂದಿದೆ. ಭಾರತದಲ್ಲಿ ಮೊದಲ ಪ್ರಕರಣ ದಾಖಲಾಗಿ ಎರಡೂವರೆ ತಿಂಗಳು ದಾಟಿದೆ. ದೇಶಾದ್ಯಂತ ಲಾಕ್‍ಡೌನ್ ನ ಮೂರನೇ ವಾರವೂ ಮುಗಿಯುತ್ತ ಬಂದಿದೆ.
ಆದರೂ ಸೋಂಕು ತಪಾಸಣೆಯ ಕೆಲಸ ಇನ್ನೂ ನಿಧಾನಗತಿಯಲ್ಲೇ ಸಾಗಿದೆ, ಭಾರತ ಇನ್ನೂ ಅತ್ಯಂತ ಕಡಿಮೆ ತಪಾಸಣೆ ನಡೆಸಿದ ದೇಶಗಳ ಪಟ್ಟಿಯಲ್ಲೇ ಇದೆ. ಒಂದು ದಶಲಕ್ಷ ಜನಸಂಖ್ಯೆಯಲ್ಲಿ 102 ತಪಾಸಣೆಗಳಷ್ಟೇ. ಪಕ್ಕದ ಪಾಕಿಸ್ತಾನದಲ್ಲಿಯೂ ಅದರ ಪ್ರಮಾಣ 191. ಈ ಮಹಾಮಾರಿಯನ್ನು ಎದುರಿಸಲು ಸಾಧ್ಯವಾದಷ್ಟು ಹೆಚ್ಚು ಸೋಂಕು ತಪಾಸಣೆ ಅತ್ಯಗತ್ಯ ಎನ್ನುತ್ತಾರೆ ಡಬ್ಲ್ಯು.ಹೆಚ್.ಒ. ತಜ್ಞರು ಮತ್ತು ವೈರಾಣು ಶಾಸ್ತ್ರಜ್ಞರು.
ವೈದ್ಯಕೀಯ ಸಿಬ್ಬಂದಿಗೆ ವೈಯಕ್ತಿಕ ಸುರಕ್ಷಾ ಪರಿಕರ( ಪಿ.ಪಿ.ಇ.) ಗಳ ಅಭಾವ ಹಾಗೆಯೇ ಮುಂದುವರೆದಿದೆ. ದಿನಕ್ಕೆ 1 ಲಕ್ಷ ಸುರಕ್ಷಾ ಉಡುಗೆಗಳು ಬೇಕಾಗಿದೆ. ಆದರೆ ಉತ್ಪಾದನೆ ಎಪ್ರಿಲ್ 23ರ ವೇಳೆಗೂ ದಿನಕ್ಕೆ ಕೇವಲ 30 ಸಾವಿರ ಎನ್ನಲಾಗಿದೆ. ಈ ಅಭಾವದಿಂದಾಗಿ ಈ ಮಹಾಮಾರಿಯ ವಿರುದ್ಧ ಸಮರದಲ್ಲಿ ಮುಂಚೂಣೀಯಲ್ಲಿರುವ ವೈದ್ಯಕೀಯ ಸಿಬ್ಬಂದಿಯಲ್ಲಿ ಹಲವರಿಗೆ ಸೋಂಕು ತಗಲಿರುವ ಆಘಾತಕಾರೀ ಸುದ್ದಿಗಳು ಈಗಾಗಲೇ ಬಂದಿವೆ.
ತೀವ್ರ ಸೋಂಕು ಇರುವವರ ಜೀವವುಳಿಸಲು ಅಗತ್ಯವಾದ ವೆಂಟಿಲೇಟರುಗಳ ಲಭ್ಯತೆಯೂ ಈ ಮೂರು ವಾರಗಳಲ್ಲಿ ಹೆಚ್ಚಿಲ್ಲ.
ಮಹಾಮಾರಿಯನ್ನು ಎದುರಿಸಲು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಪ್ರಧಾನ ಮಂತ್ರಿಗಳು ಮೌನವಾಗಿದ್ದಾರೆ. ಹಾಗಿದ್ದರೆ ಈ ಲಾಕ್‍ಡೌನ್ ಹಾಕಿದ ಉದ್ದೇಶವಾದರೂ ಏನು ಎಂದು ಸೀತಾರಾಂ ಯೆಚುರಿ ಪ್ರಶ್ನಿಸಿದ್ದಾರೆ. ತಟ್ಟೆ ತಟ್ಟಿ, ದೀಪ ಹಚ್ಚಿ ಎಂದು ಜನಗಳಿಗೆ ಹೇಳಿದರಷ್ಟೇ ಸಾಕೇ?
ಕಳೆದ ಎರಡು ಮೂರು ದಿನಗಳಲ್ಲಿ ಸರಕಾರದ ಜವಾಬ್ದಾರಿಯನ್ನು ಪ್ರಶ್ನಿಸಬೇಕಾದ ಮಾಹಿತಿಗಳು ವರದಿಯಾಗಿವೆ.
70 ಲಕ್ಷ ಪಿ.ಪಿ.ಇ.ಗಳಿಗೆ 39 ಪೂರೈಕೆದಾರರಿಗೆ ಆರ್ಡರ್ ಕೊಡಬೇಕಾಗಿತ್ತು. ಆದರೆ ಇದರಲ್ಲಿ ಮಾರ್ಚ್ 24 ರ ಮೊದಲು ಕೊಟ್ಟ ಆರ್ಡರುಗಳು ಕೇವಲ 5, ಮಾರ್ಚ್ 24ರಿಂದ ಎಪ್ರಿಲ್ 1ರ ನಡುವೆ 10ಆರ್ಡರುಗಳನ್ನು, ಉಳಿದ 24ನ್ನು ಎಪ್ರಿಲ್ 1 ರ ನಂತರವೇ ಕಳಿಸಿರುವುದು. ಲಾಕ್‍ಡೌನ್‍ನ ಮೊದಲು 1ಶೇ.ಕ್ಕಿಂತಲೂ ಕಡಿಮೆ ಆರ್ಡರ್ ಕಳಿಸಲಾಗಿತ್ತು ಎಂದು ಎಪ್ರಿಲ್ 10ರಂದು ಎನ್‍ಡಿಟಿವಿ ವರದಿ ಮಾಡಿದೆ.
ರಕ್ತದ ಸೀರಂ ಆಧಾರಿತ ತಪಾಸಣಾ ಸರಂಜಾಮುಗಳು ಬೇಕೆಂದು ಕನಿಷ್ಟ 5 ಸಮಯ ಮಿತಿಗಳನ್ನು ಕೊಡಲಾಗಿತ್ತು. ಆದರೆ ಅವು ಇನ್ನೂ ತಲುಪಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮೂಲಗಳಿಂದ ತಿಳಿದು ಬಂದಿರುವುದಾಗಿ ಸಿಎನ್‍ಎನ್ ನ್ಯೂಸ್ ಎಪ್ರಿಲ್ 10ರಂದು ವರದಿ ಮಾಡಿದೆ.
ಅಂದರೆ ಸರಕಾರ ಯಾವುದೇ ಯೋಜನೆಗಳನ್ನು ಮಾಡದೆ ಲಾಕ್‍ಡೌನ್ ಹಾಕಿದೆ, ಆ ನಂತರವೂ ಯೋಜನೆ ಮಂದಗತಿಯಲ್ಲೇ ಸಾಗಿದೆ ಎಂಬುದನ್ನು ಇದು ತೋರಿಸುತ್ತದೆ.
ಇದಕ್ಕೆ ಪ್ರಧಾನ ಮಂತ್ರಿಗಳು ಮತ್ತು ಆರೋಗ್ಯ ಮಂತ್ರಿಗಳು ಜನರಿಗೆ ಉತ್ತರ ಕೊಡುತ್ತಾರೆಯೇ? ಕೋಟ್ಯಂತರ ಜನಗಳ ಆರೋಗ್ಯ ಮತ್ತು ಜೀವನೋಪಾಯಗಳನ್ನು ಅಪಾಯಕ್ಕೆ ಸಿಲುಕಿಸಿರುವ ಒಂದು ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಇದೊಂದು ಅಕ್ಷಮ್ಯ ವಿಫಲತೆ ಎಂದು ಯೆಚುರಿ ಟಿಪ್ಪಣಿ ಮಾಡಿದ್ದಾರೆ.
ಇಂತಹ ವಿಫಲತೆಗಳೊಂದಿಗೇ ಸಂಕುಚಿತ ರಾಜಕೀಯ ಮುಂದುವರೆದಿದೆ:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಎಪ್ರಿಲ್2ರ ಸುತ್ತೋಲೆ ರಾಜ್ಯ ಸರಕಾರಗಳು ತಮ್ಮ ಮಟ್ಟದಲ್ಲಿ ಯಾವುದೇ ಪಿ.ಪಿ.ಇ. . ಮುಖಗವಸು, ಕೈಗವಸು, ವೆಂಟಿಲೇಟರುಗಳನ್ನು ಖರೀದಿಸಬಾರದು, ಅವನ್ನೆಲ್ಲ ಕೇಂದ್ರ ಸರಕಾರವೇ ಖರೀದಿಸಿ ರಾಜ್ಯಗಳಿಗೆ ವಿತರಿಸುತ್ತದೆ ಎಂದಿದೆ. ಎರಡು ತಿಂಗಳ ವರೆಗೂ ವಿಷಯದಲ್ಲಿ ಕೇಂದ್ರ ಸರಕಾರ ಏನೂ ಮಾಡದ್ದರಿಂದ ರಾಜ್ಯಗಳು ತಾವೇ ಏನಾದರೂ ವ್ಯವಸ್ಥೆ ಮಾಡಿಕೊಳ್ಳಬೇಕಾಗಿ ಬಂದಿತ್ತು. ಈಗ ಇದನ್ನೂ ಮಾಡಬಾರದು ಎಂಬ ನಿರ್ದೇಶನ!
ಕೇಂದ್ರ ಸರಕಾರ ಅನಾಹುತ ಪರಿಹಾರ ನಿಧಿಯ ವಿತರಣೆ ಹೇಗೆ ಮಾಡಿತು ಎಂಬುದನ್ನು ಈಗಾಗಲೇ ನೋಡಿದ್ದೇವೆ. “ರಾಜ್ಯಗಳಿಗೆ ನೆರವು ನೀಢಿ, ಬೆಂಬಲ ನೀಡಿ, ಹತೋಟಿ ಹಾಕುವುದನ್ನ ನಿಲ್ಲಿಸಿ” ಎಂದು ಯೆಚುರಿ ಈಬಗ್ಗೆ ಟಿಪ್ಪಣಿ ಮಾಡುತ್ತ ಹೇಳಿದ್ದಾರೆ.
“ಸಹಕಾರಿ ಒಕ್ಕೂಟ ತತ್ವ’ದ ಅಪಹಾಸ್ಯದ ಇನ್ನೊಂದು ಉದಾಹರಣೆ:
ಈ ನಡುವ ಸಂಕುಚಿತ ರಾಜಕೀಯದ, “ಸಹಕಾರಿ ಒಕ್ಕೂಟ ತತ್ವ’ದ ಇನ್ನೊಂಧು ಅಪಹಾಸ್ಯದ ಉದಾಹರಣೆ ಬೆಳಕಿಗೆ ಬಂದಿದೆ.
ಕಾರ್ಪೊರೇಟ್ ವ್ಯವಹಾರಗಳ ಮಂತ್ರಾಲಯ ದು ‘ಸ್ಪಷ್ಟೀಕರಣ’ ನೀಡಿ ಯಾವುದೇ ರಾಜ್ಯದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅಥವ ರಾಜ್ಯ ಕೊವಿಡ್-19 ಪರಿಹಾರ ನಿಧಿಗೆ ಕಾರ್ಪರೇಟ್‍ಗಳ ದೇಣಿಗೆಗೆ ಸಿ.ಎಸ್.ಆರ್ ವೆಚ್ಚ ಎಂಬ ಸೌಲಭ್ಯ ಲಭ್ಯವಿಲ್ಲ ಎಂದಿದೆ. ಇದು ಹೊಸದಾಗಿ ರಚಿಸಿರುವ, ಹಲವರಲ್ಲಿ ಹಲವು ಸಂದೇಹಗಳನ್ನು ಉಂಟು ಮಾಡಿರುವ ‘ಪಿಎಂ ಕೇರ್ಸ್’ ಗೆ ಮಾತ್ರ ಲಭ್ಯ!
ಬುಡಮಟ್ಟದಲ್ಲಿ ಕೊವಿಡ್ ಮಹಾಮಾರಿಯೊಂದಿಗೆ ಸೆಣಸುತ್ತಿರುವುದು ರಾಜ್ಯ ಸರಕಾರಗಳು. ಆದ್ದರಿಂದ ಕಂಪನಿ ಕಾಯ್ದೆಯ ಶೆಡ್ಯೂಲ್ 7ನ್ನು ತಿದ್ದುಪಡಿ ಮಾಡಿ ರಾಜ್ಯಸರಕಾರಗಳೂ ಸಿಎಸ್‍ಆರ್ ನಿಧಿಗಳನ್ನು ಪಡೆಯಲು ಸಾಧ್ಯವಾಗುವಂತೆ ಮಾಡುವುದು ಮಹಾಮಾರಿಯ ವಿರುದ್ಧದ ಸಮರದಲ್ಲಿ ಅತ್ಯಗತ್ಯ ಎಂದು ಸೀತಾರಾಂ ಯೆಚುರಿ ಹೇಳಿದ್ದಾರೆ.