ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಪಾದರಾಯನಪುರ ಸೀಲ್ ಡೌನ್ ಹಿನ್ನೆಯಲ್ಲಿ ಏಪ್ರಿಲ್ 19ರಂದು ಸಂಜೆ ನಡೆದಿರುವ ಸೀಲ್ ಡೌನ್ ಉಲ್ಲಂಘನೆ ದಾಂದಲೆಯಲ್ಲಿ ಭಾಗಿಗಳಾದ ತಪ್ಪಿತಸ್ಥರಿಗೆ ವಿಚಾರಣೆ ನೆಡೆಸಿ ಶಿಕ್ಷೆಗೆ ಒಳಪಡಿಸಲು ರಾಜ್ಯ ಸರ್ಕಾರವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ಒತ್ತಾಯಿಸಿದೆ.
ಈ ಅವಕಾಶವನ್ನು ಯಾವುದೆ ರೀತಿಯ ಸೇಡಿನ ರಾಜಕಾರಣಕ್ಕೆ ಬಳಸಬಾರದೆಂದು ಆಗ್ರಹಿಸಿದೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾಗೃತಿ ಮೂಡಿಸಲು ಮತ್ತು ಸಂಕಷ್ಟಕ್ಕೆ ಪರಿಹಾರ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೋರಿದೆ.
ಅದೇ ವೇಳೆ ನಗರ ಪೋಲೀಸ್ ಆಯುಕ್ತರು ಪೋಲೀಸರ ಮೇಲೆ ಯಾರು ಹಲ್ಲೆ ನಡೆಸಿಲ್ಲ ಎಂದೂ ಸಹಾ ಸ್ಪಷ್ಟಪಡಿಸಿದ್ದಾರೆ ಎಂಬುದನ್ನು ಗಮನಿಸಬೇಕು. ಆದರೆ ಕೆಲವು ಮಾಧ್ಯಮಗಳು ಪೋಲಿಸರ ಮೇಲೂ ಹಲ್ಲೆ ನಡೆದಿದೆ ಎಂದು ವರದಿ ಮಾಡಿರುವುದು ಸರಿಯಲ್ಲ. ಇದನ್ನು ಬಳಸಿ ಕೆಲವು ಆಡಳಿತಾರೂಢ ಬಿಜೆಪಿ ಸಚಿವರು, ಶಾಸಕರು ಹಾಗು ಇತರೆ ವಿರೋಧ ಪಕ್ಷಗಳ ಶಾಸಕರು ಮನ ಬಂದಂತೆ ಹೇಳಿಕೆಗಳನ್ನು ನೀಡಿ ಕೋಮು ಭಾವನೆ ಪ್ರಚೋಧನೆಗೆ ಉತ್ತೇಜನ ನೀಡುತ್ತಿರುವುದನ್ನು ಸಿಪಿಐ(ಎಂ) ಖಂಡಿಸಿದೆ.
ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಜನತೆಯ ನಡುವೆ ದ್ವೇಷ ಬಿತ್ತುವ ಕಾರ್ಯಕ್ಕೆ ಕಡಿವಾಣ ವಿಧಿಸಿ ಕೊಳ್ಳಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ. ಅಸಂಘಟಿತ ವಲಯದ ಕಾರ್ಮಿಕರು ಮತ್ತು ಬಡವರೇ ಹೆಚ್ಚಿರುವ ಸೀಲ್ ಡೌನ್ ಮಾಡಲಾಗಿರುವ ಪಾದರಾಯನಪುರ ಹಾಗು ಇತರೆ 35 ವಾರ್ಡ್ ಗಳಲ್ಲಿ ಮನೆ ಮನೆಗೂ ಅಗತ್ಯಗಳನ್ನು ಪೂರೈಸುವ ಕಾರ್ಯವನ್ನು ಸರ್ಕಾರವೇ ತನ್ನ ರಾಜಕೀಯ ಬದಿಗಿರಿಸಿ ಪೂರೈಸುವ ಕ್ರಮ ವಹಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.