ರಾಷ್ಟ್ರವ್ಯಾಪಿ ಲಾಕ್ ಡೌನನ್ನು ಇನ್ನೂ ಎರಡು ವಾರಕ್ಕೆ ವಿಸ್ತರಿಸಿದಾಗ, ಅದನ್ನು ಕುರಿತು ಮೇ ೨ರಂದು ಒಂದು ಹೇಳಿಕೆಯನ್ನು ನೀಡಿದ ಸಿಪಿಐ(ಎಂ) ಲಾಕ್ ಡೌನಿನ ಆರಂಭದಿಂದಲೇ ಎದ್ದು ಬಂದಿರುವ ಸಮಸ್ಯೆಗಳು ಮತ್ತು ಕೋಟ್ಯಂತರ ಭಾರತೀಯ ಜನತೆ, ಅದರಲ್ಲೂ ವಲಸೆ ಕಾರ್ಮಿಕರು, ದಿನಗೂಲಿಯವರು ಮತ್ತು ಬಡಜನರು ಬದುಕುಳಿಯಲು ಅಸಮರ್ಥರಾದವರು ಎದುರಿಸುತ್ತಿರುವ ಸಂಕಷ್ಟಗಳು ಆಳಗೊಳ್ಳುತ್ತಲೇ ಹೋಗುತ್ತವೆ ಎನ್ನುತ್ತ ಸರಕಾರ ಪ್ರಸಕ್ತ ಅವಧಿಯಲ್ಲಿ ಕೈಗೊಳ್ಳಬೇಕಾದ ಆರ್ಥಿಕ ಕ್ರಮಗಳನ್ನು ಸಾರ್ವಜನಿಕವಾಗಿ ಮುಂದಿಟ್ಟಿತ್ತು. ಇವಕ್ಕೆ ತುರ್ತಾಗಿ ಗಮನ ಹರಿಸಬೇಕು. ಕೇಂದ್ರ ಸರಕಾರ ತಕ್ಷಣವೇ ಈ ಆರ್ಥಿಕ ಮಾರ್ಗನಕಾಶೆಯನ್ನು ಕೈಗೆತ್ತಿಕೊಳ್ಳಬೇಕು ಎನ್ನುತ್ತ ಈ ಮಾರ್ಗನಕಾಶೆಯನ್ನು ರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳಿಗೆ ಕಳಿಸಿತ್ತು.
ಅದನ್ನು ಈ ಮುಂದೆ ಕೊಡಲಾಗಿದೆ:
ಪ್ರಸಕ್ತ ಅವಧಿಯಲ್ಲಿ ಬೇಕಾಗಿರುವ ಆರ್ಥಿಕ ಕ್ರಮಗಳು
ಕೊವಿಡ್ ಮಹಾಮಾರಿಯ ಮುನ್ನವೇ ಉತ್ಪಾದನೆಯಲ್ಲಿ ದೊಡ್ಡ ಪ್ರಮಾಣದ ಇಳಿಕೆ, ಉದ್ಯೋಗ ನಷ್ಟ, ಕೃಷಿ ಸಂಕಟ ಮತ್ತು ನಿರುದ್ಯೋಗದಲ್ಲಿ ತೀವ್ರ ಏರಿಕೆಯೊಂದಿಗೆ ಭಾರತೀಯ ಅರ್ಥ ವ್ಯವಸ್ಥೆ ಆಗಲೇ ಒಂದು ತೀವ್ರ ಹಿಂಜರಿತದ ಹಿಡಿತಕ್ಕೆ ಒಳಗಾಗಿತ್ತು. ಈ ಲಾಕ್ ಡೌನಿನೊಂದಿಗೆ ಪರಿಸ್ಥಿತಿ ಇನ್ನೂ ಕೆಟ್ಟಿದೆ, ಜನಗಳ ಸಂಕಟಗಳು ಬಹುಪಟ್ಟು ಬೆಳೆದಿವೆ.
ಇಂತಹ ಸನ್ನಿವೇಶಗಳಲ್ಲಿ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಸರಕಾರ ತಕ್ಷಣವೇ ಕೈಗೆತ್ತಿಕೊಳ್ಳಬೇಕಾದ ಒಂದು ಆರ್ಥಿಕ ಯೋಜನೆಯನ್ನು ಮುಂದಿಡುತ್ತಿದೆ. ಆರ್ಥಿಕ ಬಿಕ್ಕಟ್ಟು ಮತ್ತು ಅದರೊಂದಿಗೆ ಉಂಟಾಗುವ ಜನಗಳ ನೋವುಗಳನ್ನು ತಕ್ಷಣದ ಕಾರ್ಯಭಾರಗಳಿಗೆ ಸಂಬಂಧಿಸಿದ ಕ್ರಮಗಳು, ಮಧ್ಯಮಾವಧಿಯ ಕ್ರಮಗಳು ದೀರ್ಘಾವಧಿ ಕ್ರಮಗಳ ಮೂಲಕ ಎದುರಿಸಬೇಕಾಗಿದೆ. ಆದರೆ ಈ ಮೂರನ್ನೂ ಇದೀಗಲೇ ಆರಂಭಿಸಬೇಕಾಗಿದೆ.
ನಮ್ಮ ಅರ್ಥವ್ಯವಸ್ಥೆಗೆ ಮತ್ತು ಜನಗಳಿಗೆ ಈ ಗಂಭೀರವಾದ ಗಮನಕ್ಕೆ ಅರ್ಹವಾಗಿರುವ ಈ ಪ್ರಸ್ತಾವಗಳನ್ನು ಕೇಂದ್ರ ಸರಕಾರ ತಕ್ಷಣವೇ ಪರಿಶೀಲಿಸಬೇಕು ಎಂದು ಸಿಪಿಐ(ಎಂ) ಕರೆ ನೀಡುತ್ತದೆ.
ನಮ್ಮ ಎಲ್ಲ ಜನವಿಭಾಗಗಳು, ರಾಜಕೀಯ ಪಕ್ಷಗಳು ಮತ್ತು ಜನತಾ ಚಳುವಳಿಗಳು ಒಟ್ಟುಗೂಡಿ ಈ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಈ ಮುಂದಿನವುಗಳನ್ನು ಜಾರಿಗೊಳಿಸುವಂತೆ ಒತ್ತಡ ತರಬೇಕು ಎಂದು ಸಿಪಿಐ(ಎಂ) ಮನವಿ ಮಾಡಿಕೊಳ್ಳುತ್ತದೆ.
ತಕ್ಷಣದ ಕ್ರಮಗಳು
1. ತಕ್ಷಣದ ಸಮಸ್ಯೆ, ಕೋಟ್ಯಂತರ ದುಡಿಯುವ ಜನಗಳು ಈಗ ಉಪವಾಸವಿದ್ದಾರೆ,ನಿರುದ್ಯೋಗಿಗಳಾಗಿದ್ದಾರೆ ಮತ್ತು ಅವರಿಗೆ ಯಾವುದೇ ಆದಾಯ ಇಲ್ಲ ಎಂಬುದಕ್ಕೆ ಸಂಬಂಧಪಟ್ಟದ್ದು; ಹಲವರನ್ನು ಕ್ವಾರಂಟೈನ್ ಶಿಬಿರಗಳಲ್ಲಿ ಕೂಡ ಹಾಕಲಾಗಿದೆ. ತೀವ್ರ ಏರುಗತಿಯಲ್ಲಿ ಇದ್ದ ಕೊವಿಡ್-೧೯ ಸೋಂಕಿತರ ಸಂಖ್ಯೆ ಈಗ ಸುಮಾರಾಗಿ ಒಂದೇ ಮಟ್ಟದಲ್ಲಿರುವಂತಹ ಪರಿವರ್ತನೆಯನ್ನು ಲಾಕ್ಡೌನ್ ತಂದಿದೆ ಎಂಬ ಸರಕಾರದ ದಾವೆಯನ್ನು ಒಪ್ಪಿಕೊಂಡರೂ, ಲಾಕ್ಡೌನ್ ಅಂತ್ಯಗೊಂಡಾಗ ಅದು ಮತ್ತೆ ತೀವ್ರ ಏರುಗತಿಯನ್ನು ಪಡೆಯುವ ಸಾದ್ಯತೆಯಿದೆ. ಲಾಕ್ಡೌನನ್ನೇ ವಿಸ್ತರಿಸಲಿ, ಅಥವ ಬೇರೆ ಯಾವುದೇ ರೀತಿಯ ಬಲವಂತದ ಅಂತರವನ್ನು ಜಾರಿಗೊಳಿಸಲಿ, ಈ ಕೋಟ್ಯಂತರ ಜನಗಳ ಬದುಕಿನಲ್ಲಿ ಉಂಟಾಗಿರುವ ಅಸ್ತವ್ಯಸ್ತತೆ ಮುಂದುವರೆಯುತ್ತದೆ. ಅವರಿಗೆ ಆಹಾರ ಮತ್ತು ನಗದಿನ ರೂಪದಲ್ಲಿ ಒತ್ತಾಸೆ ನೀಡುವುದು ತಕ್ಷಣದ ಆದ್ಯತೆ; ವಿಸ್ಮಯದ ಸಂಗತಿಯೆಂದರೆ, ರೂ. ೧.೭ಕ್ಷ ಕೋಟಿ ರೂ.ಗಳ ಅತ್ಯಲ್ಪ ಆರಂಭಿಕ ಪ್ಯಾಕೇಜಿನ ನಂತರ ಕೇಂದ್ರ ಸರಕಾರ ಈ ಕೋಟ್ಯಂತರ ಸಂಕಷ್ಟಪೀಡಿತರಿಗೆ ನೆರವಾಗಲು ಅಕ್ಷರಶಃ ಏನೂ ಮಾಡಿಲ್ಲ; ಆರಂಭದ ಆ ೧.ಲಕ್ಷ ಕೋಟಿ ರೂ.ಗಳಲ್ಲೂ ಸುಮಾರು ಅರ್ಧದಷ್ಟು ಹೊಸ ರೂಪ ತೊಡಿಸಿದ ಹಳೆಯ ಸ್ಕೀಮುಗಳೇ ಆಗಿವೆ.
2. ಈ ಸಂಕಷ್ಟಗಳು ಎಷ್ಟು ಕಾಲ ಮುಂದುವರೆಯುತ್ತವೆ ಎಂದು ಗೊತ್ತಿಲ್ಲ; ಆದರೆ ಕೇಂದ್ರ ಸರಕಾರ ಮೊದಲಿಗೆ ಆದಾಯ ತೆರಿಗೆದಾರರಲ್ಲದ ಕುಟುಂಬಗಳಿಗೆ ತಿಂಗಳಿಗೆ ರೂ.೭೫೦೦ರಂತೆ ಮೂರು ತಿಂಗಳ ಕಾಲ, ಮತ್ತು ಪ್ರತಿ ವ್ಯಕ್ತಿಗೆ ತಿಂಗಳಿಗೆ ೧೦ ಕೆ.ಜಿ. ಧಾನ್ಯದಂತೆ ಆರು ತಿಂಗಳ ಕಾಲ ಲಭ್ಯಗೊಳಿಸುವುದರೊಂದಿಗೆ ಆರಂಭಿಸಬೇಕು. ಭಾರತ ಆಹಾರ ನಿಗಮ(ಎಫ್ಸಿಐ)ದ ಬಳಿ ಈಗ ೭.೭ ಕೋಟಿ ಟನ್ ಆಹಾರ ಧಾನ್ಯಗಳಿವೆ. ಬಫರ್ ಮತ್ತು ಕಾರ್ಯನಿರ್ವಹಣೆಗೆ ವಿಧಿಸಿರುವ ಮಟ್ಟ ೨.೪ ಕೋಟಿ ಟನ್ಗಳು. ಇದಲ್ಲದೆ, ೪ ಕೋಟಿ ಟನ್ ಹಿಂಗಾರು ಕಟಾವು ಬಂದು ಸೇರಲಿದೆ. ಹೀಗೆ ವಿತರಣೆಗೆ ಧಾನ್ಯಗಳು ಪುಷ್ಕಳವಾಗಿವೆ, ಎಷ್ಟೆಂದರೆ, ಸರಕಾರ ಅಕ್ಕಿ ದಾಸ್ತಾನನ್ನು ಇಥನೊಲ್ ಉತ್ಪಾದಿಸಲು ಬಳಸುವ ಯೋಜನೆ ಹಾಕುತ್ತಿದೆ. ಇಂತಹ ಬಳಕೆಗಿಂತ ಖಂಡಿತವಾಗಿಯೂ ಕೋಟ್ಯಂತರ ಸಂಕಷ್ಟಪೀಡಿತರಿಗೆ ಇದನ್ನು ಉಚಿತವಾಗಿ ಹಂಚುವುದು ಆದ್ಯತೆ ಪಡೆಯಬೇಕು. ಇದನ್ನು ಪಡೆಯುವವರ ಬಳಿ ಅದನ್ನು ಬೇಯಿಸಿ ತಿನ್ನುವ ಸೌಕರ್ಯಗಳಿಲ್ಲದ್ದಲ್ಲಿ ಧಾನ್ಯಗಳ ಬದಲು ಬೇಯಿಸಿದ ಆಹಾರವನ್ನು ಕೊಡಬಹುದು. ಮಧ್ಯಾಹ್ನದ ಊಟದ ರಾಷ್ಟ್ರವ್ಯಾಪಿ ಜಾಲವನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಬಹುದು. ಧಾನ್ಯಗಳಲ್ಲದೆ, ಒಂದು ನಿರ್ದಿಷ್ಟ ಪ್ರಮಾಣದ ಬೇಳೆಕಾಳುಗಳು, ಅಡುಗೆ ಎಣ್ಣೆ ಮತ್ತು ಇತರ ಆವಶ್ಯಕತೆಗಳನ್ನು ಕೂಡ ಈ ಅವಧಿಯಲ್ಲಿ ಉಚಿತವಾಗಿ ಪೂರೈಸಬೇಕು.
3. ಇಂತಹ ೩ ತಿಂಗಳ ವರೆಗಿನ ನಗದು ಮತ್ತು ಆರು ತಿಂಗಳ ವರೆಗಿನ ಆಹಾರ ವರ್ಗಾವಣೆಗಳಿಗೆ ಬೇಕಾಗುವ ಒಟ್ಟು ಮೊತ್ತ, ೨೦ಶೇ. ಶ್ರೀಮಂತರು ಫಲಾನುಭವಿಗಳ ಪಟ್ಟಿಯಿಂದ ತಾವಾಗಿಯೇ ಹೊರಗಿರುತ್ತಾರೆ ಎಂದು ಭಾವಿಸಿದರೆ, ಸುಮಾರಾಗಿ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ದ ೩ಶೇ.ದಷ್ಟಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಇದಕ್ಕಾಗಿ ತೆರಿಗೆಯನ್ನು ಎತ್ತುವ ಸಾಧ್ಯತೆಯನ್ನು ನಂತರ, ಒಂದು ಪೂರಕ ಬಜೆಟನ್ನು ಮಂಡಿಸಬೇಕಾಗಿ ಬಂದಾಗ ಶೋಧಿಸಬಹುದು. ಆ ಬಜೆಟಿನಲ್ಲಿ ಸಂಪತ್ತು ತೆರಿಗೆ ಒಂದು ನಿರ್ಣಾಯಕ ಪಾತ್ರವನ್ನು ವಹಿಸಬೇಕಾಗುತ್ತದೆ: ಅದು ಸಂಪನ್ಮೂಲಗಳನ್ನೂ ಎತ್ತಿ ಕೊಡುತ್ತದೆ ಮತ್ತು ತ್ವರಿತವಾಗಿ ಹೆಚ್ಚುತ್ತಿರುವ ಸಂಪತ್ತಿನ ಅಸಮಾನತೆಗಳನ್ನು ತಡೆಗಟ್ಟುತ್ತದೆ. ಇದರೊಂದಿಗೇ, ಕಡು ಶ್ರೀಮಂತರ ಮೇಲೆ ಒಂದು ತೆರಿಗೆಯನ್ನೂ ಹಾಕಬೇಕು. ಆದರೆ, ಸದ್ಯಕ್ಕೆ, ಈ ಸಮಸ್ತ ವೆಚ್ಚವನ್ನು ಭಾರತೀಯ ರಿಝರ್ವ್ ಬ್ಯಾಂಕಿನಿಂದ ಸಾಲ ಪಡೆದು ಭರಿಸಬೇಕು. ಇದು, ನಮ್ಮ ಅಭಿಪ್ರಾಯದಲ್ಲಿ, ಇಂದಿನ ಸಂದರ್ಭದಲ್ಲಿ, ದೇಶದಲ್ಲಿ ಪೂರ್ಣವಾಗಿ ಬಳಕೆಯಾಗದ ಉತ್ಪಾದನಾ ಸಾಮರ್ಥ್ಯ ಮತ್ತು ಮಾರಾಟವಾಗದ ಆಹಾರ ದಾಸ್ತಾನು ದೊಡ್ಡ ಪ್ರಮಾಣದಲ್ಲಿರುವಾಗ ಅರ್ಥವ್ಯವಸ್ಥೆಗೆ ಯಾವುದೇ ತೊಂದರೆಗಳನ್ನು ಉಂಟುಮಾಡುವುದಿಲ್ಲ.
೪. ಇಂತಹ ವರ್ಗಾವಣೆಗಳಿಗೆ ಸಂಪನ್ಮೂಲಗಳನ್ನು ಕೇಂದ್ರವು ಕೊಡಬೆಕು, ವಾಸ್ತವಿಕ ವರ್ಗಾವಣೆ ರಾಜ್ಯ ಸರಕಾರಗಳ ಅಡಿಯಲ್ಲಿ ನಡೆಯಬೇಕು. ಆದ್ದರಿಂದ ಕೇಂದ್ರವು ಧಾನ್ಯ ವರ್ಗಾವಣೆಗಳನ್ನು ರಾಜ್ಯಗಳಿಗೆ ಉಚಿತವಾಗಿ ಲಭ್ಯಗೊಳಿಸಬೇಕು, ಮತ್ತು ನಗದು ವರ್ಗಾವಣೆಗಳಿಗೆ ಅನುದಾನಗಳ ರೂಪದಲ್ಲಿ ಕೊಡಬೇಕು; ರಾಜ್ಯಗಳ ನಡುವೆ ಇದರ ವಿತರಣೆ ನಡೆಸುವುದು ಸುಲಭವಾಗಿದೆ, ಏಕೆಂದರೆ ವರ್ಗಾಣೆಗಳು ಸಾರ್ವತ್ರಿಕವಾಗಿರುವುದರಿಂದ ಜನಸಂಖ್ಯೆಯೊಂದೇ ನಿರ್ಧಾರಕ ಮಾನದಂಡವಾಗುತ್ತದೆ. ರಾಜ್ಯಗಳು ಇದರಿಂದ ಸೂಕ್ತ ಮೊತ್ತಗಳನ್ನು ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳಿಗೆ ಒದಗಿಸಬೇಕು. ವರ್ಗಾವಣೆಗಳನ್ನು ಮಾಡುವುದರಲ್ಲಿ ಈ ಸಂಸ್ಥೆಗಳ ನೆರವು ಅತ್ಯಗತ್ಯವಾಗಿರುತ್ತದೆ.
೫. ಇಂತಹ ವರ್ಗಾವಣೆಗಳಲ್ಲದೆ, ರಾಜ್ಯ ಸರಕಾರಗಳು ಹೆಚ್ಚುವರಿ ವೆಚ್ಚಗಳನ್ನು ಕೈಗೊಳ್ಳ ಬಯಸಬಹುದು. ಕೇಂದ್ರವು ಜಿಎಸ್ಟಿ ಪರಿಹಾರ ಮೊತ್ತಗಳನ್ನು ಕೊಡುವುದಾಗಿ ಗಂಭೀರ ಆಶ್ವಾಸನೆಯನ್ನು ಕೊಟ್ಟಿದ್ದರೂ, ಆಗಸ್ಟ್ ತಿಂಗಳಿಂದ ಅದನ್ನು ಪಾವತಿ ಮಾಡಿಲ್ಲ ಎಂಬುದು ವಿಸ್ಮಯಕಾರಿ ಸಂಗತಿ. ಈ ಮೊತ್ತವನ್ನು ತಕ್ಷಣವೇ ತೆರಬೇಕು. ಇದರೊಂದಿಗೇ, ರಾಜ್ಯ ಸರಕಾರಗಳ ಸಾಲ ಎತ್ತುವ ಮಿತಿಗಳನ್ನು ದ್ವಿಗುಣಗೊಳಿಸಬೇಕು. ನಿಜ ಹೇಳಬೇಕೆಂದರೆ, ಪ್ರತಿಯೊಂದು ರಾಜ್ಯದ ಸಾಲ ಮಿತಿಯನ್ನು ಪ್ರಮಾಣಾನುಗುಣವಾಗಿ ದ್ವಿಗುಣಗೊಳಿಸುವುದು ತಕ್ಷಣದ ಹೆಜ್ಜೆಯಾಗಬೇಕು. ಮತ್ತು ರಾಜ್ಯಗಳು ಬಹಿರಂಗ ಮಾರುಕಟ್ಟೆಯಿಂದ ಸಾಲ ಎತ್ತುವ ಬದಲು ಕೇಂದ್ರೀಯ ಬ್ಯಾಂಕಿನಿಂದ ಸಾಲ ಪಡೆಯಲು ಬಿಡಬೇಕು. ರಾಜ್ಯ ಸಾಲಪತ್ರಗಳ ಬಹಿರಂಗ ಹರಾಜಿನ ಬಡ್ಡಿದರಗಳು ಇತ್ತೀಚಿನ ಸಮಯದಲ್ಲಿ ಏರಿವೆ, ಇದು ಈಗಾಗಲೆ ಹಣಕಾಸು ಹೊಡೆತಗಳಿಗೆ ಈಡಾಗಿರುವ ರಾಜ್ಯಗಳ ಮೇಲೆ ಅಗಾಧ ಹೊರೆಯನ್ನು ಹಾಕಿದೆ. ಈ ದಾರಿಯುನ್ನು ಅವಲಂಬಿಸುವ ಬದಲು, ರಾಜ್ಯ ಸಾಲಪತ್ರಗಳನ್ನು ರಿಝರ್ವ್ ಬ್ಯಾಂಕ್ ಸದ್ಯದ ರೆಪೊ ದರಗಳಲ್ಲಿ ಖರೀದಿಸಬೇಕು. ಇದನ್ನು ವಿವಿಧ ರೀತಿಗಳಲ್ಲಿ ಯು.ಎಸ್. ಫೆಡರಲ್ ರಿಝರ್ವ್, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್, ಹಾಗೂ ಅಭಿವೃದ್ಧಿಶೀಲ ದೇಶಗಳ ಹಲವು ಕೇಂದ್ರೀಯ ಬ್ಯಾಂಕುಗಳು ಮಾಡುತ್ತಿವೆ. ಇವೆಲ್ಲವೂ ಅಲ್ಲದೆ, ಮುಖ್ಯವಾಗಿ ಕೇಂದ್ರ ಸರಕಾರವು ಪ್ರಧಾನ ಮಂತ್ರಿಗಳ ಹೆಸರಿಟ್ಟಿರುವ ಖಾಸಗಿ ಟ್ರಸ್ಟ್ನಲ್ಲಿ ಸಂಗ್ರಹಿಸಲಾಗುತ್ತಿರುವ ಸಾವಿರಾರು ಕೋಟಿ ರೂಪಾಯಿಗಳಿಂದ ರಾಜ್ಯ ಸರಕಾರಗಳಿಗೆ ಮಹಾಮಾರಿಯ ವಿರುದ್ಧ ಹೋರಾಡಲು ಮತ್ತು ಆರೋಗ್ಯಪಾಲನೆ ಸೌಕರ್ಯಗಳನ್ನು ಉತ್ತಮ ಪಡಿಸಲು, ಅಂದರೆ ವೆಂಟಿಲೇಟರುಗಳು, ಮುಖಗವಸುಗಳು, ಸುರಕ್ಷಾ ಉಡುಗೆಗಳು, ತಪಾಸಣಾ ಸಾಧನಗಳು ಇತ್ಯಾದಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಸಹಾಯವನ್ನು ಕೊಡಬೇಕು.
೬. ಮಹಾಮಾರಿಯ ವಿರುದ್ಧ ಹೋರಾಟವನ್ನು ನಡೆಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುತ್ತಲೇ, ಗಂಭೀರ ಕಾಯಿಲೆಗಳಿಂದ ನರಳುತ್ತಿರುವ ಯಾರೂ ಕೂಡ ಅಗತ್ಯ ವೈದ್ಯಕೀಯ ಸಹಾಯದಿಂದ ವಂಚಿತರಾಗುವುದಿಲ್ಲ ಎಂದು ಕೇಂದ್ರ ಸರಕಾರ ತಕ್ಷಣವೇ ಖಾತ್ರಿಪಡಿಸಬೇಕು. ನಮ್ಮ ಮಕ್ಕಳಿಗೆ ಜೀವವುಳಿಸುವ ಚುಚ್ಚುಮದ್ದುಗಳು ಮತ್ತು ಗರ್ಭಿಣಿಯರಿಗೆ ಚುಚ್ಚುಮದ್ದುಗಳು ಮಹಾಮಾರಿಯ ವಿರುದ್ಧ ನಮ್ಮ ಹೋರಾಟದೊಂದಿಗೇ ಮುಂದುವರೆಯುವಂತೆ ನೋಡಿಕೊಳ್ಳಬೇಕು. ಔಷಧಿಗಳ ಕೊರತೆ, ಜತೆಗೆ, ರಕ್ತ ಮುಂತಾದವುಗಳ ಕೊರತೆ ಉಂಟಾಗದಂತೆ ಯುದ್ಧೋಪಾದಿಯಲ್ಲಿ ಅದನ್ನು ಎದುರಿಸಬೇಕು.
೭. ಕೇಂದ್ರವು ರಾಜ್ಯಗಳಿಗೆ ಕೊಡಬಹುದಾದ ಸಹಾಯಗಳನ್ನು ನೀಡಿದಾಗ್ಯೂ, ಮಹಾಮಾರಿಯನ್ನು ನೇರವಾಗಿ ಎದುರಿಸುತ್ತಿರುವ ರಾಜ್ಯ ಸರಕಾರಗಳು ಸಾರ್ವಜನಿಕ ಆರೋಗ್ಯಪಾಲನೆ ಸೌಕರ್ಯಗಳನ್ನು ಮಾತ್ರವೇ ಅವಲಂಬಿಸಿದ್ದರೆ, ಕೊರತೆಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಸ್ಪೇನ್ ಮಾಡಿರುವಂತೆ, ಖಾಸಗಿ ಆರೋಗ್ಯಪಾಲನೆ ಸೌಕರ್ಯಗಳನ್ನು ಮಹಾಮಾರಿ ಇರುವ ವರೆಗಾದರೂ ಜನಗ ತಪಾಸನೆಗೆ ಮತ್ತು ಉಚಿತ ಶುಶ್ರೂಷೆಯ ಸಾರ್ವಜನಿಕ ಉದ್ದೇಶದಿಂದ ವಶಪಡಿಸಿಕೊಳ್ಳಬೇಕು. ಸರಕಾರ ಡಾಕ್ಟರುಗಳು ಮತ್ತು ನರ್ಸ್ಗಳ ಸೇವೆಗಳನ್ನು ತರ್ಕಬದ್ಧ ದರಗಳಲ್ಲಿ ಬಳಸಿಕೊಳ್ಳುವುದಾಗಿ ಹೇಳಬೇಕು. ಸುಪ್ರಿಂ ಕೋರ್ಟ್ ಖಾಸಗಿ ಆರೋಗ್ಯಪಾಲನೆ ಸೌಕರ್ಯಗಳಲ್ಲಿ ತಪಾಸಣೆಯನ್ನು ಶುಲ್ಕರಹಿತಗೊಳಿಸಿತ್ತು, ಆದರೆ ನಂತರ ಅದು ಈ ನಿಲುವಿನಿಂದ ಹಿಂದಕ್ಕೆ ಸರಿದಿರುವುದು ತಬ್ಬಿಬ್ಬುಗೊಳಿಸಿರುವ ಸಂಗತಿ. ಇದು ಕಾರ್ಯಾಂಗದ ಮಧ್ಯಪ್ರವೇಶವನ್ನು ಸಂಪೂರ್ಣವಾಗಿ ಆವಶ್ಯಕಗೊಳಿಸುತ್ತದೆ. ಅಯೋಜಿತ ಮತ್ತು ಸರಿಯಾಗಿ ಪರಿಕಲ್ಪಿಸದೇ ಮಾಡಿರುವ ಲಾಕ್ಡೌನ್ನಿಂದ ಲಕ್ಷಾಂತರ ಜನಗಳಿಗೆ ತೀಕ್ಷ್ಣ ಸಂಕಷ್ಟಗಳನ್ನು ಉಂಟು ಮಾಡಿರುವ ಕೇಂದ್ರ ಸರಕಾರಕ್ಕೆ ಈ ಬಿಕ್ಕಟ್ಟಿನ ಸಮಯದಲ್ಲಿ ಖಾಸಗಿ ಆರೋಗ್ಯಪಾಲನೆ ಸೌಕರ್ಯಗಳನ್ನು ಬಳಸಿಕೊಳ್ಳುವಂತೆ ಮಾಡಲಾಗದಿದ್ದರೆ, ಆಗ ಅದು ಒಂದು ಆಘಾತಕಾರೀ ವರ್ಗ ಪಕ್ಷಪಾತವನ್ನು ಪ್ರದರ್ಶಿಸಿದಂತಾಗುತ್ತದೆ; ಇದು ಮಹಾಮಾರಿಯ ವಿರುದ್ಧ ಹೋರಾಡಲು ಅತ್ಯಗತ್ಯವಾಗಿ ಬೇಕಾಗಿರುವ ರಾಷ್ಟ್ರೀಯ ಸೌಹಾರ್ದವನ್ನು ಶಿಥಿಲಗೊಳಿಸಿದಂತಾಗುತ್ತದೆ.
೮. ಉದ್ಯೋಗನಷ್ಟಗಳು ಮತ್ತು ಸಂಬಳ ಕಡಿತಗಳು ಇಲ್ಲದಂತೆ ಖಾತ್ರಿಪಡಿಸಲು ಕೇಂದ್ರ ಸರಕಾರ ತಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕು. ಅವಕ್ಕೆ ಗ್ಯಾರಂಟಿಯಾಗಿ ನಿಲ್ಲಬೇಕು. ಅತ್ಯಂತ ಹೆಚ್ಚು ಬಾಧಿತರಾಗುವ ವಿಭಾಗಗಳು-ಮಹಿಳೆಯರು, ನಿರ್ದಿಷ್ಟವಾಗಿ ಆದಿವಾಸಿಗಳು, ಕಾಂಟ್ರಾಕ್ಟ್ ಮತ್ತು ದಲಿತ ದೈಹಿಕ ಶ್ರಮಜೀವಿಗಳು- ವಿಶೇಷವಾಗಿ ರಕ್ಷಣೆ ಪಡೆಯುವಂತೆ ವಿಶೇಷ ಗಮನವನ್ನು ನೀಡಬೇಕು. ಜಗತ್ತಿನ ಹಲವು ದೇಶಗಳು ಸಂಬಳಗಳ ಮೊತ್ತಕ್ಕೆ ಗ್ಯಾರಂಟಿ ಪ್ರಕಟಿಸಿವೆ, ಕೆಲವು ೮೦ಶೇ.ದ ವರೆಗೂ ಹೊಣೆ ತಗೊಂಡಿವೆ. ಕೇಂದ್ರ ಸರಕಾರ ಇದನ್ನು ತಕ್ಷಣವೇ ಪ್ರಕಟಿಸಬೇಕು.
೯. ಸಾರ್ವತ್ರಿಕ ವರ್ಗಾವಣೆಗಳನ್ನು ಹೇಗೆ ಜಾರಿಗೆ ತರುವುದು ಎಂಬುದು ಸಮಸ್ಯೆಗಳನ್ನು ಒಡ್ಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಫಲಾನುಭವಿಗಳ ಈಗಿರುವ ಯಾವ ಪಟ್ಟಿಯೂ ಸಾಲದಾಗುತ್ತದೆ, ಅದೇ ರೀತಿಯಲ್ಲಿ ರೇಷನ್ ಅಂಗಡಿಗಳು ಮುಂತಾದ ಈಗಿರುವ ಯಾವುದೇ ಒಂದು ಕೊಂಡಿಯಿಂದ ಎಲ್ಲರನ್ನೂ ತಲುಪಲು ಸಾಧ್ಯವಾಗಲಿಕ್ಕಿಲ್ಲ. ಈ ಸಮಸ್ಯೆ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಹೆಚ್ಚು ಗಂಭೀರವಾಗಿರುತ್ತದೆ. ಧಾನ್ಯ ವಿತರಣೆಯನ್ನು ವಿವಿಧ ಗುರುತು ದಾಖಲೆಗಳ(ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ನರೇಗ ಜಾಬ್ ಕಾರ್ಡ್ ಇತ್ಯಾದಿ) ಸಂಯೋಜನೆಯಿಂದ ಮಾಡಬಹುದು. ಇದರ ಜತೆಗೆ, ಈ ಯಾವ ಕಾರ್ಡ್ಗಳೂ ಇರದವರನ್ನು ತಲುಪುವುದನ್ನು ಖಾತ್ರಿಪಡಿಸಲು ಸ್ವಲ್ಪ ಮಟ್ಟದ ವರೆಗೆ ಶಾಸಕರ, ಗ್ರಾಮ ಪಂಚಾಯತು ಮುಖ್ಯಸ್ಥರ, ನಗರಸಭಾ ಸದಸ್ಯರ ವಿವೇಚನೆಗೆ ಅವಕಾಶ ಕೊಡಬಹುದು. ವಿವಿಧ ರಾಜ್ಯ ಸರಕಾರಗಳು ನಗದು ವರ್ಗಾವಣೆಗೆ ಈಗಿರುವ ಫಲಾನುಭವಿಗಳ ಪಟ್ಟಿಗಳು ಮತ್ತು ಬ್ಯಾಂಕ್ ಖಾತೆಗಳನ್ನಷ್ಟೇ ಅವಲಂಬಿಸದೆ ಎಲ್ಲರನ್ನೂ(ಕೆಲವರನ್ನು ಹೊರತುಪಡಿಸಿ) ತಲುಪಲು ವಿವಿಧ ನವೀನ ದಾರಿಗಳನ್ನು ಶೋಧಿಸುತ್ತಿವೆ. ಇವನ್ನು ವಿಸ್ತರಿಸಬೇಕು.
೧೦. ಈ ಕಾರ್ಯಾಚರಣೆಗಳನ್ನು, ಭಾರತವು ಜಾಗತಿಕ ಅರ್ಥ ವ್ಯವಸ್ಥೆಯಿಂದ ಸಾಕಷ್ಟು ಪ್ರಮಾಣದಲ್ಲಿ ಎದುರುಗಾಳಿಯನ್ನು ಎದುರಿಸ ಬೇಕಾಗಿರುವ ಮತ್ತು ನಮ್ಮ ಪಾವತಿ ಶಿಲ್ಕು ಒತ್ತಡಕ್ಕೆ ಒಳಗಾಗಬಹುದಾಗಿರುವ ಸಮಯದಲ್ಲಿ ಕೈಗೊಳ್ಳಲೇ ಬೇಕಾಗಿದೆ. ಮಹಾಮಾರಿ ಸ್ಪಷ್ಟವಾಗಿ ಬಂಡವಾಳಶಾಹಿ ಜಾಗತೀಕರಣದ ಕುಂದುಕೊರತೆಗಳನ್ನು ಪ್ರಕಟಗೊಳಿಸಿದೆ. ಒಂದೆಡೆಯಲ್ಲಿ, ಗಡಿಗಳ ಆಚೆ-ಈಚೆ ವೈರಾಣುವಿನ ಹರಡಿಕೆ, ಗಡಿಗಳ ಆಚೆ-ಈಚೆ ಹಣಕಾಸು ಬಂಡವಾಳದ ಚಲನವಲನದಷ್ಟೇ ತ್ವರಿತವಾಗಿ ನಡೆದಿದೆ. ಇನ್ನೊಂದೆಡೆಯಲ್ಲಿ, ರಾಷ್ಟ್ರೀಯ ಸರಕಾರಗಳು, ವಿಶೇಷವಾಗಿ ಭಾರತ ಸರಕಾರವೂ ಸೇರಿದಂತೆ, ಹಣಕಾಸಿನ ಪ್ರತಿಯೊಂದೂ ಚಪಲತೆಯ ಎದುರು ತಲೆಬಾಗುವಂತೆ ಹೆದರಿಸಲಾಗಿದೆ. ಇದರಲ್ಲಿ ಮಹಾಮಾರಿಯ ಸಂದರ್ಭದಲ್ಲೂ, ವಿತ್ತೀಯ ಕೊರತೆಯ ನಿರ್ಬಂಧಗಳನ್ನು ಗೌರವಿಸುವ, ಆ ಮೂಲಕ ಕೋಟ್ಯಂತರ ದುಡಿಯುವ ಜನಗಳ ಸಂಕಷ್ಟಗಳನ್ನು ನಿವಾರಿಸಲು ಸಾಕಷ್ಟು ವೆಚ್ಚ ಮಾಡದೇ ಇರುವಂತಹ ಅವಿವೇಕವೂ ಸೇರಿದೆ. ಆದರೆ, ಈಗಲೂ, ಭಾರತೀಯ ಸರಕಾರ ಹಣಕಾಸು ಬಂಡವಾಳದ ತಾಕೀತುಗಳನ್ನು ವಿಧೇಯವಾಗಿ ಪಾಲಿಸಿ, ಸಂಕಷ್ಟಗಳನ್ನು ನಿವಾರಿಸುವಲ್ಲಿ ಅತ್ಯಂತ ಜಿಪುಣತನವನ್ನು ತೋರಿದರೂ, ಕೇಂದ್ರ ಸರಕಾರದ ನೌಕರರಿಗೆ ತುಟ್ಟಿ ಭತ್ಯೆಯನ್ನು ನಿರಾಕರಿಸುವ ವರೆಗೂ ಹೋಗಿದ್ದರೂ, ಹಣಕಾಸು ಬಂಡವಾಳ ದೇಶ ಬಿಟ್ಟು ಪಲಾಯನ ಮಾಡುತ್ತಿದೆ. ಇದರ ಫಲಿತಾಂಶವಾಗಿ ರೂಪಾಯಿ ಮೌಲ್ಯ ಡಾಲರಿಗೆ ಎದುರಾಗಿ ಹಿಂದೆಂದೂ ಕಾಣದ ರೀತಿಯಲ್ಲಿ ಇಳಿಯುತ್ತಿದೆ. ಹಣಕಾಸು ಬಂಡವಾಳದ ಈ ರೀತಿಯ ಹೊರ ಹಾರಾಟ ಮೂರನೇ ಜಗತ್ತಿನ ಎಲ್ಲ ದೇಶಗಳಲ್ಲೂ ಕಾಣಬರುತ್ತಿದೆ. ಇದರಲ್ಲಿ ಭಾರತದ ಸ್ಥಿತಿಯೇ ಇತರರಿಗಿಂತ ಉತ್ತಮವಾಗಿದೆ, ಏಕೆಂದರೆ ಅರ್ಧ ಟ್ರಿಲಿಯನ್ ಡಾಲರ್ಗಳಷ್ಟು ವಿದೇಶಿ ವಿನಿಮಯ ಮೀಸಲು ಭಾರತದಲ್ಲಿದೆ. ಈ ಟಿಪ್ಪಣಿಯಲ್ಲಿ ಸೂಚಿಸಿದ ಕ್ರಮಗಳನ್ನು ಕೈಗೊಂಡರೆ ದೇಶದಿಂದ ಹೊರಗೆ ಪಲಾಯನ ಮಾಡುವ ಹಣಕಾಸು ಬಂಡವಾಳದ ಪ್ರವೃತ್ತಿ ಇನ್ನಷ್ಟು ಗಟ್ಟಿಗೊಳ್ಳುತ್ತದೆ. ಅದನ್ನು ಎದುರಿಸಲು ತಕ್ಷಣವೇ ಎರಡು ಕ್ರಮಗಳನ್ನು ಕೈಗೊಳ್ಳಬೇಕು. ಮೊದಲನೆಯದಾಗಿ, ಹಣಕಾಸು ಬಂಡವಾಳದ ಹೊರ ಹರಿವಿನ ಮೇಲೆ ಸ್ವಲ್ಪ ಮಟ್ಟಿನ ನೇರ ಹತೋಟಿಯನ್ನು ತರುವುದು; ಏಕೆಂದರೆ ನಮ್ಮ ವಿದೇಶಿ ವಿನಿಮಯ ಮೀಸಲು ಬಂಡವಾಳದ ಹೊರಹರಿವಿಗೆ ಪೋಲು ಆಗಬಾರದು. ಎರಡನೆಯ ಕ್ರಮ ಐಎಂಎಫ್ ಗಮನಾರ್ಹ ಪ್ರಮಾಣದಲ್ಲಿ ಹೊಸ ’ಸ್ಪೆಷಲ್ ಡ್ರಾಯಿಂಗ್ ರೈಟ್ಸ್’(ಎಸ್.ಡಿ.ಆರ್.- ವಿಶೇಷ ಹಣ ಪಡೆಯುವ ಹಕ್ಕು-ಅನು)ಗಳನ್ನು ನೀಡುವುದಕ್ಕೆ ಸಂಬಂಧಪಟ್ಟದ್ದು. ಭಾರತ, ಈಗ ಸರಕಾರ ಮಾಡಿರುವಂತೆ, ಇದನ್ನು ತರ್ಕಹೀನವಾಗಿ ವಿರೋಧಿಸುವ ಬದಲು, ಇದನ್ನು ಸಕ್ರಿಯವಾಗಿ ಬೆಂಬಲಿಸಬೇಕು. ಯುಎಸ್ ಫೆಡರಲ್ ರಿಝರ್ವ್ ಬೋರ್ಡಿನ ಸ್ವಾಪ್ ಲೈನ್ಸ್ ಸೇರಿದಂತೆ ಬೇರೆಲ್ಲ ಸಾಲಗಳಂತಲ್ಲದೆ, ಎಸ್ಡಿಆರ್ಗಳಲ್ಲಿ ತಾರತಮ್ಯಗಳಿಲ್ಲ, ಇವು ಯಾರದೋ ವಿವೇಚನಾ ಅಧಿಕಾರವನ್ನು ಅವಲಂಬಿಸಿಲ್ಲ, ಬಡ್ಡಿರಹಿತವಾಗಿವೆ, ಮರುಪಾವತಿ ಮಾಡಬೇಕಾಗಿಲ್ಲ, ಮತ್ತು ಯಾವುದೇ ಷರತ್ತುಗಳಿಗೆ ಒಳಪಟ್ಟಿಲ್ಲ ಅಥವ ಯಾರೂ ಕೈತಿರುಚಲು ಅವಕಾಶವಿಲ್ಲ.
ಮಧ್ಯಮಾವಧಿ ಕ್ರಮಗಳು
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಸ್ಕೀಮ್(ಮನರೇಗ)
೧೧. ಈ ತಕ್ಷಣದ ಕ್ರಮಗಳನ್ನು ಅನುಸರಿಸಿ, ಲಾಕ್ಡೌನನ್ನು ನಿಧಾನವಾಗಿ ತೆರವು ಮಾಡುತ್ತಿರುವಂತೆಯೇ, ಮಧ್ಯಮಾವಧಿ ಕ್ರಮಗಳನ್ನು ಕೈಗೊಳ್ಳಬೇಕು. ಇವುಗಳಲ್ಲಿ, ನಾಲ್ಕು ಕೇಂದ್ರೀಯ ಮಹತ್ವ ಹೊಂದಿವೆ. ಮೊದಲನೆಯದ್ದು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಸ್ಕೀಮ್(ಮನರೇಗ)ಗೆ ಸಂಬಂಧಪಟ್ಟದ್ದು. ಹೆಚ್ಚಿನ ರಾಜ್ಯಗಳಲ್ಲಿ ಇದು ಸುಮಾರಾಗಿ ನಿಂತೇ ಹೋಗಿದೆ. ಮನರೆಗದ ಅಡಿಯಲ್ಲಿ ಕಾಮಗಾರಿಗಳನ್ನು ಪುನರುಜ್ಜೀವನಗೊಳಿಸಬೇಕು. ಈ ಮೂಲಕ ಮೇಲೆ ಸೂಚಿಸಿದಂತಹ ನಗದು ವರ್ಗಾವಣೆ ಖಾಲಿಯಾಗಲಾರವಂಭಿಸುವ ವೇಳೆಗೆ, ಲಾಕ್ಡೌನಿನಿಂದಾಗಿ ಊರುಗಳಿಗೆ ಮರಳಿದ, ಸದ್ಯ ಆದಾಯವಿಲ್ಲದ ಕೆಲಸಗಾರರೂ ಸೇರಿದಂತೆ ಎಲ್ಲ ಕೂಲಿಕಾರರರಿಗೆ ಜೀವನೋಪಾiಸಿಕ್ಕಂತಾಗುತ್ತದೆ. ಉದ್ಯೋಗ ಖಾತ್ರಿಗೆ ಸಂಬಂಧಪಟ್ಟಂತೆ ನಾಲ್ಕು ಅಂಶಗಳು ನಿರ್ಣಾಯಕವಾಗಿವೆ. ಮೊದಲನೆಯದು, ಬಾಕಿಯಾಗಿರುವ ಕೂಲಿಗಳನ್ನು ತಕ್ಷಣವೇ ಪಾವತಿ ಮಾಡಬೇಕು. ಎರಡು, ಪಟ್ಟಣಗಳಿಂದ ಹಿಂದಿರುಗಿರುವ ವಲಸಿಗರೂ ಸೇರಿದಂತೆ, ಈ ಸ್ಕೀಮಿನಲ್ಲಿ ಈ ಹಿಂದೆ ದಾಖಲಾತಿ ಪಡೆದವರು ಮಾತ್ರವಲ್ಲದೆ, ಕೆಲಸ ಕೇಳುವ ಯಾರಿಗೇ ಆದರೂ ಉದ್ಯೋಗವನ್ನು ಕೊಡಬೇಕು. ಮೂರನೆಯದಾಗಿ, ೧೦೦ ದಿನಗಳ ಕೆಲಸದ ಖಾತ್ರಿಯನ್ನು ಕುಟುಂಬಗಳಿಗೆ ಸೀಮಿತಗೊಳಿಸದೆ, ಪ್ರತಿಯೊಬ್ಬ ವಯಸ್ಕ ರಿಗೆ ವಿಸ್ತರಿಸಬೇಕು; ಮತ್ತು ಉದ್ಯೋಗ ಕೊಡಲಾಗದಿದ್ದಾಗ, ಈ ಕಾಯ್ದೆ ವಿಧಿಸಿರುವಂತೆ, ನಿರುದ್ಯೋಗ ಭತ್ಯೆಯನ್ನು ಕೊಡಬೇಕು. ಮತ್ತು ಕೊನೆಯದಾಗಿ, ಮನರೇಗವನ್ನು ನಗರ ಪ್ರದೇಶಗಳಿಗೆ ವಿಸ್ತರಿಸಬೇಕು. ಇದರಲ್ಲಿ ಸಣ್ಣ ಉದ್ದಿಮೆಗಳಲ್ಲಿ, ವಿಶೇಷವಾಗಿ ಅಗತ್ಯ ಸರಕುಗಳು ಮತ್ತು ಸೇವೆಗಳನ್ನು ಪೂರೈಸುವ ಉದ್ದಿಮೆಗಳಲ್ಲಿ ಉದ್ಯೋಗಗಳು ಸೇರಿರಬಹುದು: ಈ ಮೂಲಕ ಒಂದು ಅವಧಿಯ ವರೆಗೆ ಸರಕಾರ ಈ ಸಣ್ಣ ಉದ್ದಿಮೆಗಳ ಸಂಬಳಗಳ ವೆಚ್ಚವನ್ನು ವಹಿಸಿಕೊಂಡಂತಾಗುತ್ತದೆ. ಇದು ಸಣ್ಣ ಉದ್ದಿಮೆಗಳಿಗೆ ಸಬ್ಸಿಡಿ ಕೊಡುವ ಒಂದು ದಾರಿಯೂ ಆಗಬಲ್ಲದು. ಮತ್ತು ಇದು ಶ್ರಮವನ್ನೂ ಪೂರೈಸಿ, ಹಾಗೂ ಅದಕ್ಕೆ ಹಣ ತೆರುವ ಅಗತ್ಯವಿಲ್ಲದಂತಾಗಿ ನಿಧಾನವಾಗಿ ಇವನ್ನು ಪುನರುಜ್ಜೀವನಗೊಳಿಸುವ ಒಂದು ದಾರಿಯೂ ಆಗಬಲ್ಲದು.
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮಗಾತ್ರದ ಉದ್ದಿಮೆ(ಎಂಎಸ್ಎಂಇ)ಗಳು
೧೨. ಎರಡನೇ ಮಧ್ಯಮಾವಧಿ ಕ್ರಮ ನಿರ್ದಿಷ್ಟವಾಗಿ ಎಂಎಸ್ಎಂಇ ಗಳಿಗೆ ಮತ್ತು ಕೃಷಿಗೆ ಸಂಬಂಧಪಟ್ಟದ್ದು. ಒಂದು ನಗರ ಪ್ರದೇಶ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಇವಕ್ಕೆ ಶ್ರಮಶಕ್ತಿಯನ್ನು ಪೂರೈಸಿದರೆ ಸಾಲದು. ಅವಕ್ಕೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿನ ಬೆಂಬಲವೂ ಬೇಕಾಗುತ್ತದೆ. ಬ್ಯಾಂಕುಗಳು ಅವುಗಳಿಗೆ ಸಮಯಕ್ಕೆ ಸರಿಯಾಗಿ ಸಾಲಗಳನ್ನು ಬಹಳೇನೂ ಜಾಮೀನು ಭದ್ರತೆ ಕೇಳದೆ ಕೊಡಬೇಕು. ಸರಕಾರ ಇದಕ್ಕೆ ಸಾಲ ಗ್ಯಾರಂಟಿ ಒದಗಿಸಬೇಕು. ಇದಲ್ಲದೆ, ರಿಝರ್ವ್ ಬ್ಯಾಂಕ್ನ ಸಾಲ ಮರುಪಾವತಿಯನ್ನು ಒಂದು ನಿದಿಷ್ಟ ಅವಧಿಯ ವರೆಗೆ ಕೇಳದಿರುವ ವ್ಯವಸ್ಥೆಯನ್ನು ಮೂರು ತಿಂಗಳಿಂದ ಒಂದು ವರ್ಷಕ್ಕೆ ಏರಿಸಿ ಇವುಗಳಿಗೂ ವಿಸ್ತರಿಸಬೇಕು. ಬೇಡಿಕೆ ಇದ್ದಕ್ಕಿದಂತೆ ನಿಂತು ಹೋದರೆ ಅಥವ ತೀವ್ರವಾಗಿ ಇಳಿದರೆ, ಸಾಮಾನ್ಯ ಸ್ಥಿತಿಗೆ ಮರಳುವ ವರೆಗೆ ಬದುಕುಳಿಯುವುದು ಇವುಗಳಲ್ಲಿ ಬಹಳಷ್ಟು ಉದ್ದಿಮೆಗಳಿಗೆ ಕಷ್ಟವಾಗುವುದರಿಂದಾಗಿ, ಗಡುವನ್ನು ವಿಸ್ತರಿಸುವ , ಮತ್ತು ಎಲ್ಲ ಬಡ್ಡಿದರಗಳನ್ನು ಒಳಗೊಳ್ಳುವಂತಹ ಸರಕಾರದ ನೆರವು ವ್ಯವಸ್ಥೆ ಅಗತ್ಯವಾಗುತ್ತದೆ. ಕೃಷಿಯ ವಿಷಯದಲ್ಲಿ, ರೈತರಿಗೆ ಸಾಲ ಮನ್ನಾ ಆಗಬೇಕು, ಮತ್ತು ಸರಕಾರ ವಹಿಸಿಕೊಳ್ಳುವ ಬಡ್ಡಿದರಗಳಲ್ಲಿ ಹೊಸ ಸಾಲಗಳನ್ನು ಒದಗಿಸಬೇಕು. ಇದರೊಂದಿಗೆ, ಹೈನು ಸಹಕಾರಿಗಳಿಗೆ ಪ್ರತಿ ಲೀಟರ್ ಹಾಲಿಗೆ ೫ ರೂ. ಸಬ್ಸಿಡಿ ಹೈನು ರೈತರಿಗೆ ನೆರವಾಗಲು ಮತ್ತು ಹಾಲಿಗೆ ಬೇಡಿಕೆಯ ಪುನರುಜ್ಜೀವನಕ್ಕೆ ಅಗತ್ಯವಾಗಿದೆ.
ವಲಸೆ ಕಾರ್ಮಿಕರ ವಾಪಸಾತಿ
೧೩. ಮೂರನೇ ಮಧ್ಯಮಾವಧಿ ಕ್ರಮವೆಂದರೆ ತಮ್ಮ ಹಳ್ಳಿಗಳಿಗೆ ಮರಳಿರುವ ವಲಸಿಗರಿಗೆ ತಮ್ಮ ಈ ಹಿಂದಿನ ಕೆಲಸದ ಸ್ಥಳಗಳಿಗೆ ಹಿಂದಿರುಗಿ ಬರಲು ಪ್ರೋತ್ಸಾಹ ನೀಡುವುದು. ಇದಕ್ಕೆ ಸಮಯ ತಗಲುತ್ತದೆ, ಮತ್ತು ಇದು ಸುಲಭವೇನಲ್ಲ. ಏಕೆಂದರೆ ಕಾಯಿಲೆಯ ನೆರಳು ಮತ್ತು ಮತ್ತೊಮ್ಮೆ ಲಾಕ್ಡೌನಿನ ಭೀತಿ ಪ್ರತಿಯೊಬ್ಬರನ್ನೂ ದೀರ್ಘ ಕಾಲದ ವರೆಗೆ ಕಾಡುತ್ತದೆ. ವಲಸೆ ಕಾರ್ಮಿಕರ ಭಯಗಳನ್ನು ನಿವಾರಿಸಬೇಕು, ಮತ್ತು ನಮ್ಮ ಈಗಿನ, ಹುಚ್ಚುಹುಚ್ಚಾದ ನಿರ್ಧಾರಗಳನ್ನು ಕೈಗೊಂಡು, ಅವನ್ನು ಪೋಲಿಸ್ ಲಾಠಿಗಳನ್ನು ಬಳಸಿ ಜಾರಿ ಮಾಡುವ ಸರಕಾರದ ಬದಲು, ಒಂದು ಮಾನವೀಯ ಸರಕಾರದ ಬಿಂಬವನ್ನು ಸ್ಥಾಪಿಸಬೇಕು. ವಿದೇಶಗಳಿಂದ ಹಿಂದಿರುಗ ಬಯಸುವ ವಲಸಿಗರ ವಾಪಸಾತಿಗೆ ಸೌಕರ್ಯಗಳನ್ನು ವ್ಯವಸ್ಥೆ ಮಾಡಬೇಕು.
ಆವಶ್ಯಕ ಸಾಮಗ್ರಿಗಳ ಪೂರೈಕೆ
೧೪. ನಾಲ್ಕನೇ ಮಧ್ಯಮಾವಧಿ ಕ್ರಮ ಆವಶ್ಯಕ ಸಾಮಗ್ರಿಗಳು ಮತ್ತು ಸಾಮೂಹಿಕ ಬಳಕೆಯ ವಸ್ತುಗಳನ್ನು ತರ್ಕಬದ್ದ ಬೆಲೆಗಳಲ್ಲಿ ಸ್ಥಿರವಾಗಿ, ಸಾಕಷ್ಟು ಪ್ರಮಾಣದಲ್ಲಿ ಮತ್ತು ಸತತವಾಗಿ ಲಭ್ಯಗೊಳಿಸುವುದಕ್ಕೆ ಸಂಬಂಧಪಟ್ಟಿದೆ. ಲಾಕ್ಡೌನ್ ಈಗಾಗಲೇ ಪೂರೈಕೆ ಕೊಂಡಿಗಳನ್ನು ಮುರಿದಿದೆ, ಮತ್ತು ಆವಶ್ಯಕ ಸೇವೆಗಳ ಮತ್ತು ಸಾಮಗ್ರಿಗಳ ಉತ್ಪಾದನೆಯನ್ನು ಹಲವು ರೀತಿಗಳಲ್ಲಿ ಅಸಮರ್ಥಗೊಳಿಸಿದೆ. ಇವಕ್ಕೆಲ್ಲ ಮತ್ತೆ ಜೀವ ತುಂಬಲು ನಿರ್ದಿಷ್ಟ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಂಯೋಜಿತ ಪ್ರಯತ್ನಗಳು ಅಗತ್ಯವಾಗಿವೆ. ಇದಕ್ಕೆ , ಇಂತಹ ಉತ್ಪಾದನೆಯಲ್ಲಿನ ಲಾಗುವಾಡುಗಳು-ಉತ್ಪನ್ನಗಳ ಸಂಬಂಧಗಳನ್ನು ಅವು ಗಮನದಲ್ಲಿಡಬೇಕಾಗುತ್ತದೆ. ಆದ್ದರಿಂದ ಇದಕ್ಕೆ ದೇಶಾದ್ಯಂತ ಒಂದು ತೆರನ ಯೋಜನಾ ವ್ಯವಸ್ಥೆಯನ್ನು ಮತ್ತೆ ಸ್ಥಾಪಿಸಬೇಕಾಗುತ್ತದೆ.
ಗ್ರಾಮ ಅರ್ಥವ್ಯವಸ್ಥೆಯ ಪುನರುಜ್ಜೀವನ
೧೫. ಐದನೇ ಮಧ್ಯಮಾವಧಿ ಕ್ರಮವೆಂದರೆ, ಸ್ಥಳೀಯ ಉತ್ಪನ್ನಗಳನ್ನು ಸಂಸ್ಕರಿಸುವುದು ಮುಂತಾದ ಹಲವು ರಂಗಗಳಲ್ಲಿ ಪಂಚಾಯತುಗಳ ಒಡೆತನದ ಸಣ್ಣ ಗ್ರಾಮ ಮಟ್ಟದ ಉದ್ದಿಮೆಗಳನ್ನು ಆರಂಭಿಸುವುದು. ಎಲ್ಲ ಪ್ರಯತ್ನಗಳು, ಆಶ್ವಾಸನೆಗಳ ಹೊರತಾಗಿಯೂ ಹಲವು ವಾಪಾಸು ಬಂದ ವಲಸೆ ಕಾರ್ಮಿಕರು ಗ್ರಾಮೀಣ ಪ್ರದೇಶಗಳಲ್ಲೇ ಉಳಿಯುತ್ತಾರೆ. ಅವರಿಗೆ ಮನರೇಗವಲ್ಲದೆ, ಅದರ ಹೊರಗೂ ಉದ್ಯೋಗಾವಕಾಶಗಳನ್ನು ಹುಡುಕಬೇಕಾಗುತ್ತದೆ. ಕೃಷಿವ್ಯಾಪಾರಗಳಿಗೆ ಉತ್ತೇಜನೆ ಕೊಡಲು ಕೋಲ್ಡ್ ಸ್ಟೋರೇಜ್ಗಳಲ್ಲಿ ಕಾದಿಡುವ ಮತ್ತು ಮಾರಾಟದ ಮೂಲರಚನೆಗಳನ್ನು ಒದಗಿಸಬೇಕು. ಇದು ಗ್ರಾಮ ಅರ್ಥವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಉದ್ಯೋಗ ಸೃಷ್ಟಿಸುವ ದಿಕ್ಕಿನಲ್ಲಿ ಒಂದು ಪರ್ಯಾಯ ಮಾರ್ಗವಾಗುತ್ತದೆ. ಈ ಉದ್ದೇಶಕ್ಕೆ ಪರಿಣಿತ ತಾಂತ್ರಿಕ ಮತ್ತು ನಿರ್ವಹಣಾ ಸಲಹೆಗಳ ಜೊತೆಗೆ ಬ್ಯಾಂಕ್ ಸಾಲವನ್ನು ಲಭ್ಯಗೊಳಿಸಬೇಕು. ಇವಕ್ಕೆ ಏರ್ಪಾಟುಗಳನ್ನು ರಾಜ್ಯ ಸರಕಾರಗಳು ಮಾಡಬಹುದು.
ದೀರ್ಘಾವಧಿ ಕ್ರಮಗಳು
ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸಬೇಕು
೧೬. ನಾವೀಗ ದೀರ್ಘಾವಧಿ ಕ್ರಮಗಳಿಗೆ ಬರುತ್ತೇವೆ. ಇವನ್ನೂ ಈಗಲೇ ಆರಂಭಿಸಬೇಕು. ಅರ್ಥವ್ಯವಸ್ಥೆಯ ಬೆಳವಣಿಗೆ ಕಾರ್ಯವ್ಯೂಹವನ್ನು ಪುನರ್ರೂಪಿಸುವ ಅಗತ್ಯವಿದೆ. ಇದನ್ನು ಆಂತರಿಕ ಮಾರುಕಟ್ಟೆಯ ಆಧಾರದಲ್ಲಿ ಮತ್ತು ಅದರಿಂದಾಗಿ ಅಂತಿಮವಾಗಿ ಈ ಮಾರುಕಟ್ಟೆಯ ಬೆಳವಣಿಗೆಯನ್ನು ನಿರ್ಧರಿಸುವ ಕೃಷಿ ಬೆಳವಣಿಗೆಯ ಆಧಾರದಲ್ಲಿ ಮಾಡಬೇಕು. ಕೃಷಿಯನ್ನು ಇತ್ತೀಚಿನ ಅವಧಿಯಾದ್ಯಂತ ನಿರ್ಲಕ್ಷಿಸಲಾಗಿದೆ. ಆದರೂ, ಲಾಕ್ಡೌನ್ ಪ್ರದರ್ಶಿಸಿರುವಂತೆ ಕೋಟ್ಯಂತರ ಜನಗಳಿಗೆ ಈಗಲೂ ಕೃಷಿಯೇ ಕೊನೆಯ ಆಶ್ರಯವಾಗಿದೆ. ಕೃಷಿಯ ಈ ನಿರ್ಲಕ್ಷ್ಯವನ್ನು ಬದಲಿಸಲೇ ಬೇಕಾಗಿದೆ. ಫಲದಾಯಕ ಖರೀದಿ ಬೆಲೆಗಳು, ಈ ಹಿಂದೆ ಇದ್ದಂತೆ ಖರೀದಿ ಕ್ರಿಯೆಗಳನ್ನು ನಗದು ಬೆಳೆಗಳಿಗೂ ವಿಸ್ತರಿಸುವುದು, ಆಂತರಿಕ ಬೆಲೆಗಳನ್ನು ಅಂತರ್ರಾಷ್ಟ್ರೀಯ ಬೆಲೆಗಳ ಏರುಪೇರುಗಳ ಪ್ರಭಾವದಿಂದ ರಕ್ಷಿಸಲು ದರಪಟ್ಟಿಗಳ ಬಳಕೆ, ಹೊಸ ಇಳುವರಿ ಹೆಚ್ಚಿಸುವ ಕೆಲಸ ಕಾರ್ಯಗಳ ಬಗ್ಗೆ ಸಂಶೋಧನೆ, ಕಡಿಮೆ ನೀರಿನ ಬಳಕೆಯ ತಳಿಗಳ ಅಭಿವೃದ್ಧಿ, ಬಳಕೆಯಾಗದ ಭೂಮಿ ಇರುವ ಪ್ಲಾಂಟೇಶನ್ಗಳಿಂದ ಆರಂಭಿಸಿ ಭೂಹೀನರಿಗೆ ಭೂಮಿತಿ ಮೀರಿದ ಹೆಚ್ಚುವರಿ ಭೂಮಿಯ ವಿತರಣೆ ಮುಂತಾದ ಹಲವಾರು ಹೆಜ್ಜೆಗಳ ಮೂಲಕ ಬದಲಿಸಬೇಕು. ರೈತರು ಮತ್ತು ಕೃಷಿಕೂಲಿಕಾರರ ತಲಾ ಕೃಷಿ ಆದಾಯಗಳನ್ನು ಹೆಚ್ಚಿಸುವುದು ಭಾರತದ ದುಡಿಯುವ ಜನಸಮೂಹಗಳ ಮೇಲೆ ಬಡತನದ ಬಿಗಿಮುಷ್ಠಿಯನ್ನು ಮುರಿಯುವುದಕ್ಕೆ ಕೀಲಿಕೈ ಆಗಿದೆ.
ಇದರ ಜತೆಗೆ, ಕೃಷಿಯೇತರ ಚಟುವಟಿಕೆಗಳನ್ನು ಅವುಗಳ ಪರಿಸರ ಸುಸ್ಥಿರತೆ ಮತ್ತು ಉದ್ಯೋಗಾವಕಾಶ ನಿರ್ಮಾಣದ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರೋತ್ಸಾಹಿಸಬೇಕು. ಇದರ ಅರ್ಥ ಹಸಿರು ಉತ್ಪಾದನೆಗೆ ಮತ್ತು ಪಾಲನೆಯ ಸೇವೆಗಳನ್ನು ವಿಸ್ತರಿಸುವುದರ ಮೇಲೆ ಹೆಚ್ಚಿನ ಒತ್ತು ನೀಡುವುದು.
ಮಹಾಮಾರಿಯ ವಿರುದ್ಧ ಈ ಹೋರಾಟ ದೇಶದಲ್ಲಿನ ಆರೋಗ್ಯಪಾಲನೆ ವ್ಯವಸ್ಥೆಯಲ್ಲಿನ ತೀವ್ರ ಮಿತಿಗಳನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ಕೇಂದ್ರ ಸರಕಾರ ನಮ್ಮ ಜಿಡಿಪಿಯ ಕನಿಷ್ಟ ೩ಶೇ.ವನ್ನು ವೆಚ್ಚ ಮಾಡಿ ಒಂದು ಸಾರ್ವತ್ರಿಕ ಆರೋಗ್ಯಪಾಲನೆ ವ್ಯವಸ್ಥೆಯನ್ನು ಸ್ಥಾಪಿಸಲು ತುರ್ತು ಪ್ರಯತ್ನಗಳನ್ನು ಮಾಡಬೇಕು. ಈ ಮೊತ್ತಗಳಿಗೆ ರಾಜ್ಯ ಸರಕಾರಗಳೂ ಈ ವ್ಯವಸ್ಥೆಯನ್ನು ನಿರ್ಮಿಸಲು ಸೇರಿಸಬೇಕು. ಔಷಧಿಗಳ ಮೇಲೆ ಸಿಜಿಎಸ್ಟಿ ದರವನ್ನು ಇಳಿಸಬೇಕು. ಮತ್ತು ಔಷಧಿಗಳ ಆಂತರಿಕ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ಸಾರ್ವಜನಿಕ ಮೂಲರಚನೆಯನ್ನು ಬಲಪಡಿಸಬೇಕು. ಇದೇ ಸಮಯದಲ್ಲಿ ಶಿಕ್ಷಣಕ್ಕೆ, ಅದರಲ್ಲೂ ಶಾಲಾಶಿಕ್ಷಣವನ್ನು ಸಾರ್ವತ್ರಿಕಗೊಳಿಸಲು ಸಾಕಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡಬೇಕು. ಇದನ್ನು ಕೇಂದ್ರ ಸರಕಾರ ಕನಿಷ್ಟ ಜಿಡಿಪಿಯ ೬ ಶೇ.ಕ್ಕೆ ಏರಿಸಬೇಕು.
ಭೌತಿಕ ಅಂತರ-ಸಾಮಾಜಿಕ ಸೌಹಾರ್ದತೆ
ಧ್ರುವೀಕರಣ ಮತ್ತು ಸರ್ವಾಧಿಕಾರಶಾಹಿ ದಾಳಿಗಳನ್ನು ತೊರೆಯಬೇಕು
೧೭. ಮಹಾಮಾರಿ ಎಲ್ಲರೂ ಒಂದುಗೂಡಬೇಕಾದ ಒಂದು ಸಮಯ. ಒಂದು ಹೊಸ ರಾಷ್ಟ್ರೀಯ ಐಕ್ಯತೆಯನ್ನು ಬೆಸೆಯುವುದು ಮಹಾಮಾರಿಗೆ ನಿಜವಾದ ಅಂತಿಮ ಸಿದ್ಧೌಷಧ. ಮಹಾಮಾರಿಯನ್ನು ಸರಕಾರದ ಸೂಚ್ಯ ಬೆಂಬಲದಿಂದ ಕೋಮುವಾದೀಕರಿಸುವುದು, ಈ ಸಮಯವನ್ನೇ ನಾಗರಿಕ ಹಕ್ಕುಗಳಿಗೆ ಮತ್ತು ಸಿಎಎ ಮುಂತಾದ ಕ್ರಮಗಳ ವಿರುದ್ಧ ಹೋರಾಡುತ್ತಿರುವವರನ್ನು ಯುಎಪಿಎಯಂತಹ ಕರಾಳ ಕಾಯ್ದೆಗಳ ಅಡಿಯಲ್ಲಿ ಜೈಲಿಗಟ್ಟುವುದು, ಸರಕಾರದ ವಿಮರ್ಶೆ ಮಾಡುವ ಪತ್ರಕರ್ತರ ಮೇಲೆ ಗುರಿಯಿಟ್ಟು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿಯಿಡುವುದು ಇವೆಲ್ಲವೂ ಒಂದು ಸರ್ವಾಧಿಕಾರಶಾಹಿ ಅಜೆಂಡಾದ ಭಾಗ. ಇವು ಈಗ ಅಥವ ಬೇರೆ ಯವುದೇ ಸಮಯದಲ್ಲೂ ಬೇಕಾಗಿರುವುದಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರುವಂತವುಗಳು. ಇದನ್ನು ಬದಲಿಸದಿದ್ದರೆ, ನಮ್ಮ ದೇಶ ಮತ್ತು ಜನತೆ ಮಹಾಮಾರಿಯ ವಿರುದ್ಧ ಹೋರಾಟ ನಡೆಸಲು ಸಾಧ್ಯವಿಲ್ಲ.