ಅಗಲಿದ ಕನ್ನಡದ ಹಿರಿಯ ಕವಿಗೆ ಸಿಪಿಐಎಂ ಪಕ್ಷದ ರಾಜ್ಯ ಸಮಿತಿಯ ಹೃದಯ ಪೂರ್ವಕ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ. ಅದೇ ರೀತಿ, ಅವರನ್ನು ಕಳೆದುಕೊಂಡ ಅವರ ಕುಟುಂಬದ ಸದಸ್ಯರಿಗೂ ಮತ್ತು ಅಪಾರ ಅಭಿಮಾನಿ ವೃಂದಕ್ಕೂ ಮತ್ತು ಮಿತ್ರಗಣಕ್ಕೂ ತನ್ನ ಸಂತಾಪವನ್ನು ಸಲ್ಲಿಸುತ್ತದೆ.
ಕನ್ನಡದಲ್ಲಿ ಪ್ರಜಾಸತ್ತಾತ್ಮಕ ,ಧರ್ಮ ನಿರಪೇಕ್ಷ, ಪ್ರಗತಿಪರ ಮೌಲ್ಯಗಳನ್ನು ನಿರಂತರವಾಗಿ ಪ್ರತಿಪಾದಿಸಿದ ಕವಿ ನಿಸಾರ್ ಅಹಮದ್ರವರು, ನಿತ್ಯೋತ್ಸವ ಮೊದಲಾದ ಸುಗಮ ಗಾಯನದ ಮೂಲಕ ಜನಮನವನ್ನು ತಟ್ಟಿದವರು
ತಮ್ಮ ಭಾವಗೀತೆಗಳ ಮೂಲಕ ಅತ್ಯಂತ ಜನಪ್ರಿಯರಾಗಿದ್ದರೂ ಅವರ ಕಾವ್ಯದಲ್ಲಿ ಹುದುಗಿದ ವ್ಯಂಗ್ಯದ ಮೂಲಕ ಪ್ರಭುತ್ವವನ್ನು ಟೀಕೆಗೊಳಪಡಿಸಿದವರು. ಬಹಳ ಜನ ಯುವಕವಿಗಳನ್ನು ಪ್ರಭಾವಿಸಿದವರು.
ಸ್ವಾತಂತ್ರ್ಯಾನಂತರದ ಕಾಲದಿಂದಲೇ ಅಲ್ಪ ಸಂಖ್ಯಾತರು ಅನುಭವಿಸುತ್ತಾ ಬಂದಿರುವ ಪರಕೀಯತೆಯನ್ನು ಬಹಳ ಸೂಕ್ಷ್ಮವಾಗಿ ಕರುಳು ಮಿಡಿಯುವಂತೆ ಅಭಿವ್ಯಕ್ತಿಸಿದವರು.
ಅವರು ಅನುವಾದಿಸಿದ ನೆರುಡಾನ ಕವಿತೆಗಳು ಮತ್ತು ಆತ್ಮ ಚರಿತ್ರೆಯ ಆಯ್ದ ಭಾಗಗಳು ನೆರುಡಾರವರ ಕ್ರಾಂತಿಕಾರಿ ಜೀವನದ ಜೊತೆಗೆ ಅವರ ಕಾವ್ಯದ ಪ್ರಖರತೆಯನ್ನು ಅರ್ಥ ಮಾಡಿಕೊಳ್ಳಲು ನೆರವಾಯಿತು. ಅವರು ಸ್ವಾತಂತ್ರ್ಯಾನಂತರದ ಮೊದಲ ದಶಕದಲ್ಲಿ ಅಂದು ಕಮ್ಯುನಿಸ್ಟ್ ಪಕ್ಷದ ಮುಖವಾಣಿಯಾಗಿದ್ದ “ಜನಶಕ್ತಿ” ಪತ್ರಿಕೆಗೆ ಬರೆದ ಅಂಕಣ ಕ್ರಾಂತಿಕಾರಿ ಚಳುವಳಿಯ ಬಗ್ಗೆ ಅವರ ಒಲವನ್ನು ಬಿಂಬಿಸುತ್ತಿತ್ತು.
ಅವರು ೨೧ ಕವನ ಸಂಕಲನಗಳು, ೧೪ ವೈಚಾರಿಕೆ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ. ಅವುಗಳಲ್ಲಿ “ಮನಸು ಗಾಂಧಿಬಜಾರು” ಹಾಗು “ನಿತ್ಯೋತ್ಸವ” ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ.
೧೯೭೮ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ ೧೩ ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳ, ಗೀತೆಗಳು ಪ್ರಚುರಗೊಂಡಿವೆ.