ಬೆಂಗಳೂರು, ಮೇ 07: ಅಂತರ ರಾಜ್ಯ ವಲಸೆ ಕಾಮಿ೯ಕರಿಗೆ ರೈಲು ಸೇವೆ ಪುನರಾಂಭಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ), ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಸ್ವಾಗತಿಸಿವೆ.
ಇದು ಕಾರ್ಮಿಕರ ಹೋರಾಟಕ್ಕೆ ಸಂದ ಜಯವಾಗಿದೆ. ಹಲವು ಕಾರ್ಮಿಕಪರ ಮನಸ್ಸುಗಳ ಒತ್ತಾಸೆಯಾಗಿದ್ದ ವಲಸೆ ಕಾರ್ಮಿಕರಿಗೆ ರೈಲು ಸೇವೆ ಪ್ರಾರಂಭಿಸಬೇಕೆಂಬ ಒಕ್ಕೊರಲ ಕೂಗಿಗೆ ಸರಕಾರ ಗೌರವ ನೀಡಿರುವುದು ಉತ್ತಮ ಬೆಳೆವಣಿಗೆಯಾಗಿದೆ.
ಸಿಪಿಐ(ಎಂ) ಸಹಾ ರೈಲು ಸೇವೆ ರದ್ದು ಮಾಡಿ ಕಾರ್ಮಿಕರನ್ನು ಒತ್ತಾಯ ಪೂರಕವಾಗಿ ಅವರ ಕೆಲಸದ ಸ್ಥಳಗಳಿಗೆ ಬಸ್ಸುಗಳಲ್ಲಿ ತುಂಬಿ ಹಿಂತಿರುಗಿಸಿದ ಕ್ರಮ, ಅವರಿಗೆ ಅರ್ಥವಾಗದ ಭಾಷೆಯ ಸೇವಾ ಸಿಂಧು ಮೂಲಕ ಅರ್ಜಿ ಕಡ್ಡಾಯ, ಆನಂತರ ಅದರ ಸರ್ವರ್ ಡೌನ್ ಮಾಡಿದ್ದನ್ನು ಖಂಡಿಸಿತ್ತು. ಕೂಡಲೆ ತವರಿಗೆ ಹೋಗ ಬಯಸುವ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅಗತ್ಯ ರೈಲ್ವೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿತ್ತು.
ಅದೇ ರೀತಿ ಹಲವು ಆಂಗ್ಲ ಮಾಧ್ಯಮ ದಿನಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳು, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಎಲ್ಲರೂ ಕಾರ್ಮಿಕರ ಪರ ನಿಂತ ಫಲವಾಗಿ ರಾಜ್ಯ ಸರಕಾರವು ಕೊನೆಗೂ ತನ್ನ ತಪ್ಪನ್ನು ಅರಿತು ರೈಲು ಸೇವೆ ಪುನರಾರಂಭ ಮಾಡಿದೆ.
ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ನಿರಂತರವಾಗಿ ದೃಢವಾಗಿ ಜನಪರವಾಗಿ ಕ್ರಮವಹಿಸದೆ ಎಡವುತ್ತಲೆ ಬಂದಿದೆ. ಅದಕ್ಕೆ ರಾಜ್ಯ ಸರಕಾರದಲ್ಲಿ ಇರುವ ಎರಡು ಅಧಿಕಾರ ಕೇಂದ್ರಗಳು ಕಾರಣವಾಗಿವೆ. ಒಂದೆಡೆ ಅಧಿಕೃತ ಸಿಎಂ ಯಡಿಯೂರಪ್ಪ ಇನ್ನೊಂದಡೆ ಸೂಪರ್ ಸಿಎಂ ಸಂತೋಷ್ ನಡುವಿನ ಬಣ ರಾಜಕೀಯಕ್ಕೆ ರಾಜ್ಯದ ಜನತೆ, ಲಾಕ್ ಡೌನ್ ಸಂತ್ರಸ್ತರು ಸೂಕ್ತ ಸಮಯಕ್ಕೆ ಸರಿಯಾದ ಪರಿಹಾರವಿಲ್ಲದೆ ಬಲಿಪಶು ಆಗುತ್ತಿದ್ದಾರೆ ಎಂದು ಸಿಪಿಐ(ಎಂ) ಟೀಕಿಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಕೊನೆಗೂ ಕೆಲವು ಅಸಂಘಟಿತರಿಗೆ ಪರಿಹಾರ ಪ್ಯಾಕೆಜ್ ಪ್ರಕಟಿಸಿರುವುದು ಅಸಮರ್ಪಕವಾಗಿದ್ದರು ಸಹಾ ಸ್ವಾಗತಾರ್ಹ ಕ್ರಮವಾಗಿದೆ ಎಂದಿರುವ ಸಿಪಿಐ(ಎಂ), ಉಳಿದ ಅಸಂಘಟಿತ ಕಾರ್ಮಿಕರಾದ ಬೀದಿಬದಿ ವ್ಯಾಪಾರಿಗಳು, ಮನೆ ಕೆಲಸಗಾರರು, ಧರ್ಜಿಗಳು, ಮೆಕ್ಯಾನಿಕ್ ಗಳು, ಹಮಾಲಿಗಳು ಮುಂತಾದವರಿಗೂ ಪರಿಹಾರ ನೀಡಬೇಕು.
ಸಂಘಟಿತ ಕಾರ್ಮಿಕರಿಗೆ ಕೆಲಸದ ಅವಧಿ ಹೆಚ್ಚಳ ಪ್ರಸ್ತಾವನೆ ಕೈಬಿಡಬೇಕು, ಅವರಿಗೆ ವೇತನ ಸಿಗುವಂತೆ, ಯಾರು ಕೆಲಸದಿಂದ ವಂಚಿತರಾಗದಂತೆ ಅಗತ್ಯ ಕ್ರಮಗಳನ್ನು ಅನುಸರಿಸಿ ಕಾಮಿ೯ಕರ ಹಿತ ಕಾಯಬೇಕಾಗಿ ರಾಜ್ಯ ಸರಕಾರವನ್ನು ಸಿಪಿಐ(ಎಂ) ಒತ್ತಾಯಿಸಿದೆ. ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಜೊತೆ ಚರ್ಚಿಸಿ ಸುಸ್ಥಿರ ಪರಿಹಾರ ಕಾರ್ಯಕ್ಕೆ ಸರಕಾರ ಮುಂದಾಗಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.
ಕೆ. ಎನ್.ಉಮೇಶ್, ಕಾಯ೯ದಶಿ೯, ಸಿಪಿಐ(ಎಂ) – ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ
ಎನ್. ಪ್ರತಾಪ್ ಸಿಂಹ, ಕಾಯ೯ದಶಿ೯, ಸಿಪಿಐ(ಎಂ) – ಬೆಂಗಳೂರು ಉತ್ತರ ಜಿಲ್ಲಾ ಸಮಿತಿ