ಜನ-ವಿರೋಧಿ, ಪ್ರತಿಗಾಮಿ  ‘ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ-2020’ ನ್ನು ಹಿಂತೆಗೆದುಕೊಳ್ಳಬೇಕು

ಮೋದಿ ಸರಕಾರದ ಪ್ರಸ್ತಾವಿತ ‘ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ-2020’ ವಿದ್ಯುತ್ ವಲಯದ ಸಂಪೂರ್ಣ ಖಾಸಗೀಕರಣಕ್ಕಾಗಿಯೇ ರೂಪಿಸಿರುವ ಮಸೂದೆ, ಇದನ್ನು ವಿರೋಧಿಸುತ್ತೇವೆ  ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.

ಇದು ಅಧಿಕಾರವನ್ನು ಸಂಪೂರ್ಣವಾಗಿ ಕೇಂದ್ರೀಕರಿಸುವ, ನಮ್ಮ ಸಂವಿಧಾನದ ಒಕ್ಕೂಟ ತತ್ವದ ಮೆಲೆ ಮುಖಾಮುಖಿ ದಾಳಿ ಮಾಡಿರುವ ಒಂದು ಪ್ರಸ್ತಾವ. ವಿದ್ಯುಚ್ಛಕ್ತಿ ನಮ್ಮ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದೆ. ಆದ್ದರಿಂದ ವಿದ್ಯುಚ್ಛಕ್ತಿ ಉತ್ಪಾದನೆ, ವಿತರಣೆ ಮತ್ತು ನಿಯಂತ್ರಣದಲ್ಲಿ ಹಾಗೂ ಜನಗಳ ಮೇಲೆ ಅವರ ಆರ್ಥಿಕ ಸ್ಥಾನಮಾನ ಮತ್ತು ವೃತ್ತಿಯ ಆಧಾರದಲ್ಲಿ ಎಷ್ಟು ದರಗಳನ್ನು ನಿರ್ಧರಿಸಬೇಕು ಎಂಬುದರಲ್ಲಿ ರಾಜ್ಯಗಳು ಒಂದು ಸಮಾನ ಜವಾಬ್ದಾರಿ ಮತ್ತು ಪಾತ್ರವನ್ನು ಹೊಂದಿವೆ. ಈ ಮಸೂದೆಯಲ್ಲಿ ರಾಜ್ಯಗಳ ಈ ಹಕ್ಕಿನ ಸಂಪೂರ್ಣ ನಿರಾಕರಣೆಯಾಗಿದೆ.

ರಾಜ್ಯಗಳು ವಿದ್ಯುತ್ ಖರೀದಿ ಮತ್ತು ಮಾರಾಟ ಒಪ್ಪಂದಗಳು ಹಾಗೂ ಕಾಂಟ್ರಾಕ್ಟ್‌ಗಳನ್ನು ಕೊಡುವ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಲ್ಪಡುತ್ತವೆ. ರಾಜ್ಯ ಮತ್ತು ಪ್ರಾದೇಶಿಕ ರವಾನೆ ಕೇಂದ್ರಗಳ ಕೆಲಸದ ಶೆಡ್ಯೂಲ್ ಮತ್ತು ವಿದ್ಯುತ್ ರವಾನೆ ಕೇಂದ್ರೀಯ ಪ್ರಾಧಿಕಾರದ ಹತೊಟಿಗೆ ಬರುತ್ತವೆ. ಇದು ರಾಜ್ಯ ವಿದ್ಯುತ್ ಉತ್ಪಾದನಾ ನಿಗಮಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತವೆ. ರಾಜ್ಯ ವಿದ್ಯುತ್ ಪೂರೈಕೆ ಕಂಪನಿಗಳು ಅನವಶ್ಯಕಗೊಳ್ಳುತ್ತವೆ, ಈ ಕೆಲಸಗಳು ಖಾಸಗಿ ಕಾಂಟ್ರಾಕ್ಟರುಗಳ ಮೂಲಕ ನಡೆಯುತ್ತವೆ. ಈUಗಿರುವಂತೆ, ಶ್ರೀಮಂತರು ಮತ್ತು ಸಂಪತ್ತಿರುವವರಿಂದ ಹೆಚ್ಚಿನ ದರವನ್ನು ವಸೂಲಿ ಮಾಡಿ  ಬಡ ಮತ್ತು ನೆರವಿನ ಅಗತ್ಯವಿರುವವರಿಗೆ ಕಡಿಮೆ ದರಗಳಲ್ಲಿ ಪೂರೈಸುವುದನ್ನು ಸಾಧ್ಯಗೊಳಿಸುವ ಪದ್ಧತಿಯನ್ನು ಕೈಬಿಟ್ಟು ಎಲ್ಲರೂ ತೆರಬೇಕಾದ ದರಪಟ್ಟಿಯನ್ನು ನಿರ್ಧರಿಸುವ ವ್ಯವಸ್ಥೆ ಬರುತ್ತದೆ.

ಸದ್ಯಕ್ಕೆ, ಹಲವು ರಾಜ್ಯಗಳಲ್ಲಿ ರೈತರು ಕೃಷಿ ಕೆಲಸಗಳಿಗೆ ಉಚಿತ ವಿದ್ಯುತ್ ಪಡೆಯುತ್ತಾರೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಮತ್ತು ಸಣ್ಣ ಕೈಗಾರಿಕಾ ಘಟಕಗಳು ಕೂಡ ರಿಯಾಯ್ತಿ ದರಗಳನ್ನು ಪಡೆಯುತ್ತಿವೆ. ಇವೆಲ್ಲವೂ ಹೋಗಿ ಬಿಡುತ್ತವೆ. ಇದರ ಅರ್ಥ ಕರ್ಷಕ ಸಂಕಷ್ಟ ಮತ್ತಷ್ಟು ಆಳಗೊಳ್ಳುತ್ತದೆ. ಮತ್ತು ಅತಿ ಹೆಚ್ಚು ಸಂಖ್ಯೆಯಲ್ಲಿ ಜನಗಳಿಗೆ ಉದ್ಯೋಗ ಒದಗಿಸಿರುವ ಅನೌಪಚಾರಿಕ ವಲಯ ಬದುಕುಳಿಯಲು ಅಸಮರ್ಥಗೊಳ್ಳುವ ಸ್ಥಿತಿಗೆ ತಲುಪುತ್ತದೆ.

ಇಂತಹ ಪ್ರತಿಗಾಮಿ ಮಸೂದೆಯನ್ನು ಕೂಡಲೆ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಭಾರತೀಯ ಅರ್ಥವ್ಯವಸ್ಥೆ ಗಿರಕಿ ಹೊಡೆಯುವ ಸ್ಥಿತಿಯಲ್ಲಿರುವಾಗ ಮತ್ತು ಕೊವಿಡ್ ಮಹಾಮಾರಿಯ ವಿರುದ್ಧ ಸೆಣಸುತ್ತಿರುವಾಗ ಇಂತಹ ಸಂಪತ್ತುಳ್ಳವರ ಪರವಾಗಿರುವ ಮತ್ತು ಬಡವರ ಮೇಲೆ ಹೊರೆಯಾಗುವ ಪ್ರಸ್ತಾವಗಳನ್ನು ಒಪ್ಪಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಹೇಳಿದೆ.

Leave a Reply

Your email address will not be published. Required fields are marked *