ಗಂಭೀರವಾಗಿ ಪರಿಶೀಲಿಸಲು 22 ಸಮಾನ ಮನಸ್ಕ ರಾಜಕೀಯ ಪಕ್ಷಗಳ ವಿಡಿಯೋ ಸಭೆಯ ಆಗ್ರಹ
ಮೇ 22 ರಂದು 22 ಸಮಾನ ಮನಸ್ಕ ರಾಜಕೀಯ ಪಕ್ಷಗಳ ಮುಖಂಡರು ಒಂದು ವಿಡಿಯೋ ಸಭೆಯಲ್ಲಿ ಕೊವಿಡೊ ಮಹಾಮಾರಿಯಿಂದಾಗಿ ದೇಶದಲ್ಲಿ ಎದ್ದು ಬಂದಿರುವ ಅಸಾಧಾರಣ ಪರಿಸ್ಥಿತಿಯ ಬಗ್ಗೆ ವಿಚಾರ ವಿನಿಮಯ ನಡೆಸಿ ಒಂದು ನಿರ್ಣಯವನ್ನು ಅಂಗೀಕರಿಸಿದ್ದಾರೆ. ಇದರಲ್ಲಿ ಪ್ರಸಕ್ತ ಪರಿಸ್ಥಿತಿಯನ್ನು ವಿಮರ್ಶಿಸುತ್ತ 11 ಬೇಡಿಕೆಗಳನ್ನು ಮೋದಿ ಸರಕಾರದ ಮುಂದೆ ಇಡಲಾಗಿದೆ. ಈ ಪಕ್ಷಗಳು ಭಾರತದ 50ಶೇಕಡಾಕ್ಕಿಂತಲೂ ಹೆಚ್ಚು ಜನಗಳನ್ನು ಪ್ರತಿನಿಧಿಸುತ್ತಿದ್ದು, ಕೇಂದ್ರ ಸರಕಾರ ಇವರ ವಿಚಾರಗಳಿಗೆ ಕಿವಿಗೊಟ್ಟು ಇವು ಮುಂದಿಟ್ಟಿರುವ ಬೇಡಿಕೆಗಳನ್ನು ಪರಿಶೀಲಿಸಬೇಕೆಂದು ಮನವಿ ಮಾಡಿಕೊಂಡಿವೆ.
ಅರ್ಥವ್ಯವಸ್ಥೆ ಕುಸಿದಿದೆ. ಜೀವನಾಧಾರಗಳು ಧ್ವಂಸಗೊಂಡಿವೆ. ಬದುಕುಗಳು ಕಳೆದು ಹೋಗಿವೆ ಎಂದು ದುಃಖ ವ್ಯಕ್ತಪಡಿಸಿರುವ ನಿರ್ಣಯ, ಈ ಪರಿಸ್ಥಿತಿಯಲ್ಲಿ ಅಸಾಧಾರಣ ಧೈರ್ಯ ಮತ್ತು ಸಮರ್ಪಣಾ ಭಾವವನ್ನು ತೋರಿಸಿರುವ ಎಲ್ಲ ಸಾರ್ವಜನಿಕ ಆರೋಗ್ಯ ಸಿಬ್ಬಂದಿಗಳ, ನಿರ್ದಿಷ್ಠವಾಗಿ, ಡಾಕ್ಟರುಗಳು, ನರ್ಸ್ಗಳು, ಅರೆ ವೈದ್ಯಕೀಯ ಸಿಬ್ಬಂದಿ, , ಜತೆಗೆ ಪೋಲೀಸರು, ಭದ್ರತಾಪಡೆಗಳ ಸಿಬ್ಬಂದಿ, ಸಫಾಯಿ ಕರ್ಮಚಾರಿಗಳು ಮತ್ತು ದೇಶಾದ್ಯಂತ ಈ ಕಠಿಣ ಸವಾಲೊಡ್ಡಿರುವ ಪರಿಸ್ಥಿತಿಗಳಲ್ಲಿ ನೀರು, ವಿದ್ಯುತ್ ಪೂರೈಕೆ ಮುಂತಾದ ಅಗತ್ಯ ಸೇವೆಗಳನ್ನು ನಿರ್ವಹಿಸುತ್ತಿರುವವರ ವೀರೋಚಿತ ಪ್ರಯತ್ನಗಳ ಬಗ್ಗೆ ಈ 22 ಪಕ್ಷಗಳ ಪ್ರಶಂಸೆಯನ್ನು ವ್ಯಕ್ತಗೊಳಿಸಿದೆ. ಇವರೆಲ್ಲರೂ ತಮ್ಮ ಜೀವಗಳಿಗಿರುವ ಗಂಭೀರ ಅಪಾಯವನ್ನು ಲೆಕ್ಕಿಸದೆ ತಮ್ಮ ಕರ್ತವ್ಯಕ್ಕೆ ಸಮರ್ಪಿಸಿಕೊಂಡಿರುವುದಕ್ಕೆ ನಾವ ತಲೆಭಾಗುತ್ತೇವೆ ಎಂದು ಈ ರಾಜಕೀಯ ಪಕ್ಷಗಳು ಹೇಳಿವೆ.
ಈ ಬಿಕ್ಕಟ್ಟಿನ ಪರಿಮಾಣದ ಬಗ್ಗ ಪೂರ್ಣವಾದ ಅರಿವಿನೊಂದಿಗೆ, ಈ ಸಮಾನ ಮನಸ್ಕ ಪಕ್ಷಗಳು, ಎಂದಿನಂತೆ, ಕೇಂದ್ರ ಸರಕಾರಕ್ಕೆ ಸಂಪೂರ್ಣ ಸಹಕಾರವನ್ನು ಕೊಡುತ್ತಿವೆ. ಆದರೆ ಕೇಂದ್ರ ಸರಕಾರ ತನ್ನ ಜವಾಬ್ದಾರಿಗಳನ್ನು ಸಮಯಕ್ಕೆ ಸರಿಯಾಗಿ, ಪರಿಣಾಮಕಾರಿಯಾಗಿ ಮತ್ತು ಸಂವೇದನಾಪೂರ್ಣವಾದ ರೀತಿಯಲ್ಲಿ ನಿರ್ವಹಿಸುವಲ್ಲಿ ಸೋತಿದೆ ಎಂಬುದನ್ನು ಬೇಸರದಿಂದ ಹೇಳಬೇಕಾಗಿದೆ. ಭವ್ಯ ಪ್ರಕಟಣೆಗಳನ್ನು ಮಾಡಲಾಗಿದೆ, ಆದರೆ ಅವು ಜನಗಳ ಸಂಕಟಗಳನ್ನು ನಿವಾರಿಸುವಲ್ಲಿ, ಮತ್ತು ರೈತರು ಮತ್ತು ಕೃಷಿ ಕೂಲಿಕಾರರು, ವಲಸೆ ಮತ್ತು ಇತರ ಕಾರ್ಮಿಕರು, ವ್ಯಾಪಾರ, ವಾಣಿಜ್ಯ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಮತ್ತು ಕೈಗಾರಿಕೆಗಳನ್ನು ಬಾಧಿಸುತ್ತಿರುವ ಆತಂಕಗಳನ್ನು ಪರಿಶೀಲಿಸಲು ಅರ್ಥಪೂರ್ಣವಾದ ಏನನ್ನೂ ಮಾಡಿಲ್ಲ. ನಿಜ ಹೇಳಬೇಕೆಂದರೆ, ಕೇಂದ್ರ ಸರಕಾರ ನಾಚಿಕೆಯಿಲ್ಲದೆ ರಾಜ್ಯ ಸರಕಾರಗಳಿಗೆ ಇರುವ ಅಧಿಕಾರಗಳನ್ನು ಕಸಿದುಕೊಂಡಿದೆ, ಆ ಮೂಲಕ ಸಂವಿಧಾನಿಕ ಗ್ಯಾರಂಟಿ ಇರುವ ಒಕ್ಕೂಟ ಪ್ರಜಾಫ್ರಭೂತ್ವನ್ನು ಶಿಥಿಲಗೊಳಿಸಿದೆ.
ಇದೀಗ ಕೇಂದ್ರದಲ್ಲಿನ ಸರಕಾರ ಪ್ರದರ್ಶನಕೋರತನದಲ್ಲಿ ತೊಡಗುವ ಅಥವ ತಾನೇ ಮೇಲು ಎಂದು ತೋರಿಸಿಕೊಳ್ಳುವ ಸಮಯವಲ್ಲ. ಇದು ಅಗಾಧ ಪ್ರಮಾಣದ ಸಾಮೂಹಿಕ ಪ್ರಯತ್ನಗಳು ಬೇಕಾಗಿರುವ ಸಮಯ. ಭಾರತದ ಜನಗಳಿಗೆ ಬೇಕಾಗಿರುವುದು ಇದು, ಮತ್ತು ಅವರು ಕೇಳುತ್ತಿರುವುದು ಇದನ್ನೇ. ಭಾರತ ಸರಕಾರ ಕೈಚಾಚಿ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ವ್ಯವಸ್ಥಿತವಾಗಿ ಒಂದು ಸಂವಾದದಲ್ಲಿ ತೊಡಗಬೇಕು, ನಮ್ಮ ಸಲಹೆ-ಸೂಚನೆಗಳಿಗೆ ಗಂಭೀರವಾಗಿ ಕಿವಿಗೊಡಬೇಕು, ಸ್ಥಾಯೀ ಸಮಿತಿಗಳು ಮುಂತಾದ ಸಂಸದೀಯ ಸಮಿತಿಗಳನ್ನು ಸಕ್ರಿಯಗೊಳಿಸಬೇಕು ಹಾಗೂ ರಾಜ್ಯಗಳಿಗ ಹಣಕಾಸುಗಳ ಮೂಲಕವೂ ಮತ್ತು ಇತರ ರೀತಿಗಳಲ್ಲೂ ನೈಜರೀತಿಯಲ್ಲಿ ನೆರವಾಗಬೇಕು.
ಈ ಹಿನ್ನೆಲೆಯಲ್ಲಿ ಸರಕಾರ ಈ ರಾಜಕೀಯ ಪಕ್ಷಗಳ ಈ ಕೆಳಗಿನ ಬೇಡಿಕೆಗಳಿಗೆ ಕಿವಿಗೊಡಬೇಕು, ಅವನ್ನು ಪರಿಶೀಲಿಸಬೇಕು ಎಂದು ಇವು ಮನವಿ ಮಾಡಿಕೊಂಡಿವೆ:
- ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲ ಕುಟುಂಬಗಳಿಗೆ ಆರು ತಿಂಗಳ ವರೆಗೆ ತಿಂಗಳಿಗೆ ರೂ.7500 ನೇರ ನಗದು ವರ್ಗಾವಣೆ ಮಾಡಬೇಕು. ತಕ್ಷಣವೇ ರೂ.10,000 ಕೊಡಬೇಕು, ಬಾಕಿ ಹಣವನ್ನು ಉಳಿದ ಐದು ತಿಂಗಳುಗಳಲ್ಲಿ ಸಮನಾಗಿ ಕೊಡಬೇಕು.
- ತಿಂಗಳಿಗೆ 10 ಕೆ.ಜಿ.ಆಹಾರಧಾನ್ಯಗಳನ್ನು ಅಗತ್ಯವಿರುವ ಎಲ್ಲ ವ್ಯಕ್ತಿಗಳಿಗೆ ಮುಂದಿನ ಆರು ತಿಂಗಳು ಉಚಿತವಾಗಿ ಕೊಡಬೇಕು. ಮನರೇಗದ ಅಡಿಯಲ್ಲಿ ಕೆಲಸದ ದಿನಗಳನ್ನು 200 ದಿನಗಳಿಗೆ ಏರಿಸಬೇಕು ಮತ್ತು ಅಗತ್ಯ ಬಜೆಟ್ ಬೆಂಬಲವನ್ನು ಒದಗಿಸಬೇಕು.
- ಎಲ್ಲ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳನ್ನು ತಲುಪಲು ಉಚಿತ ಸಾರಿಗೆ ವ್ಯವಸ್ಥೆ. ವಿದೇಶಗಳಿಂದ ಬರಲಾಗದೆ ಸಿಲುಕಿಕೊಂಡಿರುವ ಎಲ್ಲ ಭಾರತೀಯ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ಕಾಪಾಡಲು ಕೂಡ ತಕ್ಷಣವೇ ಮತ್ತು ವಿಶ್ವಾಸಾರ್ಹ ವ್ಯವಸ್ಥೆಗಳನ್ನು ಮಾಢಬೇಕು.
- ಕೊವಿಡ್-19 ಸೋಂಕುಗಳ ಬಗ್ಗೆ ಮತ್ತು ತಪಾಸಣೆ, ಮೂಲರಚನೆ ಹಾಗೂ ಹರಡಿಕೆ ತಡೆಗಟ್ಟುವ ಕುರಿತಂತಹ ಎಲ್ಲ ಗುರಿಗಳ ಬಗ್ಗೆ ಕರಾರುವಾಕ್ಕಾದ ಮತ್ತು ಪ್ರಸ್ತುತವಾದಂತಹ ಎಲ್ಲ ಮಾಹಿತಿಗಳನ್ನೂ ಒದಗಿಸಬೇಕು.
- ಎಲ್ಲ ಏಕಪಕ್ಷೀಯ ನಿರ್ಧಾರಗಳನ್ನು, ನಿರ್ದಿಷ್ಟವಾಗಿ ಕಾರ್ಮಿಕ ಕಾನೂನುಗಳ ರದ್ಧತಿಯ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು.
- ತಕ್ಷಣವೇ ಹಿಂಗಾರು ಬೆಳೆಗಳನ್ನು ಮತ್ತು ಸಣ್ಣ ಅರಣ್ಯ ಉತ್ಪನ್ನಗಳನ್ನು ಕನಿಷ್ಟ ಬೆಂಬಲ ಬೆಲೆಗಳಲ್ಲಿ ಖರೀದಿಸಬೇಕು ಮತ್ತು ಅವು ಮಾರುಕಟ್ಟೆಯನ್ನು ತಲುಪಲು ನೆರವು ಒದಗಿಸಬೇಕು. ಮುಂಗಾರು ಬೆಳೆಗೆ ಸಿದ್ಧರಾಗುತ್ತಿರುವ ರೈತರಿಗೆ ಬೀಜಗಳು, ರಸಗೊಬ್ಬರ ಮತ್ತಿತರ ಲಾಗುವಾಡುಗಳನ್ನು ಕೂಡ ಒದಗಿಸಬೇಕು.
- ಮಹಾಮಾರಿಯನ್ನು ಎದುರಿಸುವ ಸಮರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಸರಕಾರಗಳಿಗೆ ಗಮನಾರ್ಹ ಪ್ರಮಾಣದಲ್ಲಿ ನಿಧಿಗಳನ್ನು ಬಿಡುಗಡೆ ಮಾಡಬೇಕು.
- ಲಾಕ್ಡೌನಿನಿಂದ ಹೊರಬರುವ ಕೇಂದ್ರ ಸರಕಾರದ ಕಾರ್ಯತಂತ್ರ ಏನಾದರೂ ಇದ್ದರೆ , ಅದನ್ನು ಸ್ಪಷ್ಟ ಪದಗಳಲ್ಲಿ ತಿಳಿಯಪಡಿಸಬೇಕು.
- ತಕ್ಷಣವೇ ಸಂಸದೀಯ ಕಾರ್ಯನಿರ್ವಹಣೆ ಮತ್ತು ಮೇಲುಸ್ತುವಾರಿಯನ್ನು ಮರುಸ್ಥಾಪಿಸಬೇಕು.
- ಪ್ರಚಾರದ ಬದಲು ಪುನಶ್ಚೇತನ ಮತ್ತು ಬಡತನ ನಿವಾರಣೆಯ ಮೇಲೆ ಗಮನ ಕೇಂದ್ರೀಕರಿಸಿರುವ ಒಂದು ಸ್ಪಷ್ಟ ಹಾಗೂ ಅರ್ಥಪೂರ್ಣ ಆರ್ಥಿಕ ಕಾರ್ಯತಂತ್ರವನ್ನು ಪ್ರಸ್ತುತಪಡಿಸಬೇಕು. ರೂ.20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್, ಮತ್ತು ಅದರಲ್ಲಿ ಅಡಕವಾಗಿರುವಂತದ್ದು ಭಾರತದ ಜನತೆಯನ್ನು ದಾರಿ ತಪ್ಪಿಸುತ್ತಿವೆ. ಸರಕಾರ ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯನ್ನು ಉತ್ತೇಜಿಸಲು ಒಂದು ನಿಜವಾದ ಹಣಕಾಸು ಉತ್ತೇಜನೆ ಯಾಗಬಲ್ಲ ಒಂದು ಪರಿಷ್ಕೃತ ಹಾಗೂ ಸಮಗ್ರ ಪ್ಯಾಕೇಜನ್ನು ಪ್ರಸ್ತುತ ಪಡಿಸಬೇಕು.
- ಅಂತರ್ರಾಷ್ಟ್ರೀಯ/ ದೇಶದೊಳಗಣ ವಿಮಾನ ಹಾರಾಟಗಳಿಗೆ ಆಯಾಯ ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿ ಅವಕಾಶ ನೀಡುವಾಗ ರಾಜ್ಯ ಸರಕಾರಗಳೊಡನೆ ಸಮಾಲೋಚನೆ ನಡೆಸಬೇಕು.